Advertisement

ಸಿಂಹ ಮತ್ತು ರಾಜಕುಮಾರಿ

10:42 PM May 25, 2019 | Sriram |

ಒಂದು ರಾಜ್ಯದ ದೊರೆಗೆ ಸುಂದರಿಯರಾದ ಮೂವರು ಕುಮಾರಿಯರಿದ್ದರು. ಒಮ್ಮೆ ದೊರೆ ದೇಶ ಪ್ರವಾಸಕ್ಕೆ ಹೊರಟ. ಮಗಳಂದಿರನ್ನು ಕರೆದು, ”ಮರಳಿ ಬರುವಾಗ ನಿಮಗೆ ಏನು ಉಡುಗೊರೆ ತರಬೇಕು?” ಎಂದು ಕೇಳಿದ. ಹಿರಿಯ ಮಗಳು ವಜ್ರದ ಒಡವೆಗಳಿಗೆ ಆಶೆಪಟ್ಟಳು. ಎರಡನೆಯವಳು ಮುತ್ತಿನ ಕಿರೀಟ ಬಯಸಿದಳು. ಕಿರಿಯ ಮಗಳು, ”ಹಾಡುವ ಜೀವಂತ ಹಕ್ಕಿ ಸಿಕ್ಕಿದರೆ ತಂದುಕೊಡಿ” ಎಂದಳು. ದೊರೆ ಪ್ರವಾಸ ಮುಗಿಸಿ ಹೊರಡುವಾಗ ಇಬ್ಬರು ಮಗಳಂದಿರಿಗೆ ಬೇಕಾಗುವ ವಸ್ತುಗಳು ಸುಲಭವಾಗಿ ಸಿಕ್ಕಿದವು. ಆದರೆ ಕಿರಿಯವಳಿಗೆ ಬೇಕಾದ ಹಾಡುವ ಹಕ್ಕಿ ಎಲ್ಲೂ ಸಿಗಲಿಲ್ಲ. ಅದನ್ನು ಹುಡುಕುತ್ತ ಮುಂದೆ ಬಂದಾಗ ಒಂದು ಭವ್ಯವಾದ ಮಹಲು ಕಾಣಿಸಿತು. ಅದರ ಬಳಿಯಿದ್ದ ಒಂದು ಗಿಡದ ತುಂಬ ಬಣ್ಣಬಣ್ಣದ ಹಕ್ಕಿಗಳಿದ್ದವು. ಅವು ಸುಶ್ರಾವ್ಯವಾಗಿ ಹಾಡುತ್ತಿದ್ದವು. ದೊರೆ ಮನೆಯವರನ್ನು ಕರೆದ. ಯಾರೂ ಹೊರಗೆ ಬರಲಿಲ್ಲ. ಆಗ ಅವನು ಗಿಡದ ಬಳಿಗೆ ಹೋಗಿ ಒಂದು ಹಕ್ಕಿಯನ್ನು ಹಿಡಿದುಕೊಂಡು ಹೊರಡಲು ಮುಂದಾದ.

Advertisement

ಆಗ ಮಹಲಿನ ಒಳಗಿನಿಂದ ಒಂದು ಸಿಂಹವು ಘರ್ಜಿಸುತ್ತ ಹೊರಗೆ ಬಂದಿತು. ”ನನ್ನ ಕೋಟೆಯ ಒಳಗಿದ್ದ ಹಕ್ಕಿಯನ್ನು ನನ್ನಲ್ಲಿ ಕೇಳದೆ ತೆಗೆದುಕೊಂಡು ಹೊರಟಿರುವೆಯಲ್ಲ. ಇದಕ್ಕೆ ದೇಹಾಂತವೇ ದಂಡನೆ ಎಂಬುದು ಗೊತ್ತಿದೆಯೇ?” ಎಂದು ಕೇಳಿತು. ದೊರೆ ಭಯದಿಂದ ನಡುಗಿದ. ”ಕಿರಿಯ ಮಗಳು ಇಷ್ಟಪಟ್ಟಿದ್ದಳು. ಅವಳಿಗಾಗಿ ತಪ್ಪು ಕೆಲಸ ಮಾಡಿದೆ, ಕ್ಷಮಿಸಬೇಕು” ಎಂದು ಪ್ರಾರ್ಥಿಸಿದ. ಸಿಂಹವು, ”ಹಕ್ಕಿಯನ್ನು ತೆಗೆದುಕೊಂಡು ಹೋಗಿ ಮಗಳಿಗೆ ಕೊಡು. ಆದರೆ ಈ ತಪ್ಪಿಗಾಗಿ ನಿನ್ನ ಮಗಳು ನನ್ನ ಹೆಂಡತಿಯಾಗಬೇಕು. ನಾಳೆ ನಿನ್ನ ಮನೆಗೆ ಬರುತ್ತೇನೆ. ನನ್ನ ಕೋರಿಕೆಗೆ ನಿರಾಕರಿಸಿದರೆ ಸೂಕ್ತ ದಂಡನೆ ವಿಧಿಸುತ್ತೇನೆ” ಎಂದು ಷರತ್ತು ವಿಧಿಸಿತು.

ದೊರೆ ಅರಮನೆಗೆ ಬಂದ. ಮಗಳಂದಿರು ಕೋರಿದ ವಸ್ತುಗಳನ್ನು ಅವರಿಗೆ ನೀಡಿದ. ಆದರೆ ಕಿರಿಯ ಮಗಳೊಂದಿಗೆ ನಡೆದ ವಿಷಯವನ್ನು ಹೇಳಿದ. ”ನಾಳೆ ನಿನಗಾಗಿ ಸಿಂಹವು ಬರುತ್ತದೆ. ಅದರಿಂದ ಪಾರಾಗಲು ನೀನು ದೂರ ಎಲ್ಲಾದರೂ ಹೋಗಿಬಿಡು. ನಾನು ಸಿಂಹಕ್ಕೆ ಆಹಾರವಾಗುತ್ತೇನೆ” ಎಂದು ಹೇಳಿದ. ರಾಜಕುಮಾರಿ ಅದಕ್ಕೊಪ್ಪಲಿಲ್ಲ. ”ನನ್ನ ಬಯಕೆ ಈಡೇರಿಸಲು ನೀವು ಹಕ್ಕಿಯನ್ನು ಹಿಡಿದಿರಿ. ಇದಕ್ಕಾಗಿ ನೀವು ಶಿಕ್ಷೆ ಅನುಭವಿಸಬಾರದು. ನಾನು ಸಿಂಹದ ಹೆಂಡತಿಯಾಗಿ ಅದರ ಜೊತೆಗೆ ಹೋಗುತ್ತೇನೆ” ಎಂದು ಧೈರ್ಯದಿಂದ ಹೇಳಿದಳು.

ಸಿಂಹವು ತನ್ನ ಮಹಲಿಗೆ ರಾಜಕುಮಾರಿಯನ್ನು ಕರೆತಂದಿತು. ರಾತ್ರೆಯಾದಾಗ ಅದು ಸುಂದರನಾದ ಒಬ್ಬ ರಾಜಕುಮಾರನ ರೂಪ ತಳೆಯಿತು. ಅಚ್ಚರಿಗೊಂಡ ರಾಜಕುಮಾರಿಯೊಂದಿಗೆ, ”ಒಬ್ಬ ಮಾಂತ್ರಿಕನು ನನಗೆ ಇಂತಹ ದುರವಸ್ಥೆ ತಂದುಹಾಕಿದ. ಕೆಂಪು ಸಮುದ್ರದ ಆಚೆ ದಡದಲ್ಲಿ ಒಂದು ಪೆಡಂಭೂತವಿದೆ. ಅದರೊಂದಿಗೆ ಯಾರಾದರೂ ಹೋರಾಡಿ ಕೊಂದರೆ ನನಗೆ ಈ ಕಷ್ಟ ಪರಿಹಾರವಾಗುತ್ತದೆ. ನಾನು ಹಗಲು ಸಿಂಹವಾಗಿದ್ದು ರಾತ್ರಿ ರಾಜಕುಮಾರನಾಗಿ ನಿನ್ನನ್ನು ಸುಖದಿಂದ ನೋಡಿಕೊಳ್ಳುತ್ತೇನೆ” ಎಂದು ಹೇಳಿದ.

ಹೀಗಿರಲು ರಾಜಕುಮಾರಿಯ ಹಿರಿಯ ಅಕ್ಕನಿಗೆ ವಿವಾಹವಾಗುವ ಸುದ್ದಿ ಬಂದಿತು. ರಾಜಕುಮಾರಿ ಗಂಡನ ಒಪ್ಪಿಗೆ ಪಡೆದು ಮದುವೆಗೆ ಹೋದಳು. ಮನೆಯವರಿಗೆಲ್ಲ ಅಚ್ಚರಿಯಾಯಿತು. ”ನೀನು ಸಿಂಹಕ್ಕೆ ಆಹಾರವಾಗಿರಬಹುದೆಂದು ಭಾವಿಸಿದ್ದೆವು. ಆದರೆ ನೀನು ಸಂತೋಷವಾಗಿರುವುದು ಕಂಡರೆ ಇದರಲ್ಲಿ ಏನೋ ರಹಸ್ಯವಿರುವಂತೆ ಕಾಣುತ್ತದೆಯಲ್ಲ!” ಎಂದರು. ರಾಜಕುಮಾರಿ ತನ್ನ ಪತಿಯ ಗುಟ್ಟನ್ನು ಬಿಟ್ಟುಕೊಡಲಿಲ್ಲ. ”ಅದು ತುಂಬ ಒಳ್ಳೆಯ ಸಿಂಹ. ಹಾಗಾಗಿ ಸುಖವಾಗಿದ್ದೇನೆ” ಎಂದಳು. ಅವಳ ಎರಡನೆಯ ಅಕ್ಕ, ”ಮುಂದಿನ ತಿಂಗಳು ನನಗೂ ಮದುವೆಯಿದೆ. ನಿನ್ನ ಪತಿಯನ್ನು ಕರೆದುಕೊಂಡು ಬರಲೇಬೇಕು” ಎಂದು ಭಾಷೆ ತೆಗೆದುಕೊಂಡಳು.

Advertisement

ಎರಡನೆಯ ಅಕ್ಕನ ಮದುವೆಗೆ ರಾಜಕುಮಾರಿ ಗಂಡನನ್ನು ಕರೆದಾಗ ಸಿಂಹವು, ”ಈ ರೂಪದಲ್ಲಿ ನಾನು ನಿನ್ನೊಂದಿಗೆ ಬಂದರೆ ಮದುವೆಗೆ ಬಂದವರೆಲ್ಲ ಓಡಿಹೋಗಬಹುದು. ಅದರ ಬದಲು ಒಂದು ಉರಿಯುವ ದೀಪವಾಗಿ ನಿನ್ನನ್ನು ನಾನು ಹಿಂಬಾಲಿಸುತ್ತೇನೆ. ಆದರೆ ಒಂದು ಮಾತು. ದೀಪವಾಗಿರುವಾಗ ಯಾವ ಕಾರಣಕ್ಕೂ ನೀನು ನನ್ನನ್ನು ಸ್ಪರ್ಶಿಸಬಾರದು. ಹಾಗೆಲ್ಲಾದರೂ ಮಾಡಿದರೆ ನಾನೊಂದು ಬಿಳಿಯ ಪಾರಿವಾಳವಾಗಿ ನನ್ನ ದೇಹದಿಂದ ರಕ್ತ ಮತ್ತು ಗರಿಗಳನ್ನು ಉದುರಿಸಲಾರಂಭಿಸುತ್ತೇನೆ. ಇದನ್ನು ತಕ್ಷಣ ತಡೆಯದಿದ್ದರೆ ನಾನು ಎಷ್ಟು ಗರಿಗಳನ್ನು ಉದುರಿಸಿದ್ದೇನೋ ಅಷ್ಟು ವರ್ಷಗಳ ಕಾಲ ನಿನ್ನ ಕಣ್ಣಿಗೆ ಬೀಳುವುದಿಲ್ಲ. ನನ್ನನ್ನು ಪಡೆಯಬೇಕಿದ್ದರೆ ಪೆಡಂಭೂತದ ಜೊತೆಗೆ ಹೋರಾಡಿ ಅದನ್ನು ಕೊಲ್ಲಬೇಕಾಗುತ್ತದೆ” ಎಂದು ಎಚ್ಚರಿಸಿತು.

ರಾಜಕುಮಾರಿಯು ದೀಪವಾಗಿ ತನ್ನ ಜೊತೆಗೆ ಗಂಡನನ್ನು ಕರೆದುಕೊಂಡು ಮದುವೆಗೆ ಹೋದಳು. ಅಕಸ್ಮಾತಾಗಿ ರಾಜಕುಮಾರಿಯ ತಲೆಗೂದಲು ದೀಪವಾಗಿದ್ದ ಅವಳ ಪತಿಗೆ ಸೋಕಿತು. ಮರುಕ್ಷಣವೇ ದೀಪವು ಬಿಳಿಯ ಪಾರಿವಾಳವಾಗಿ ರಕ್ತದ ಹನಿ ಮತ್ತು ಗರಿಗಳನ್ನು ದುರಿಸತೊಡಗಿತು. ರಾಜಕುಮಾರಿಯು ಕೂಡಲೇ ಒಂದು ಬಟ್ಟೆಯನ್ನು ತಂದು ಅಡ್ಡವಾಗಿ ಹಿಡಿದು ಹೀಗೆ ಮಾಡದಂತೆ ತಡೆದಳು. ಬಳಿಕ ಪಾರಿವಾಳವು ಹಾರುತ್ತ ಆಕಾಶಕ್ಕೇರಿ ಮಾಯವಾಯಿತು. ರಾಜಕುಮಾರಿ ಎಣಿಸಿ ನೋಡಿದಾಗ ಏಳು ಹನಿ ರಕ್ತ, ಏಳು ಗರಿಗಳಿದ್ದವು. ಹಾಗಿದ್ದರೆ ತನ್ನ ಪತಿಯನ್ನು ಕಾಣಲು ಏಳು ವರ್ಷ ಬೇಕಾಗುತ್ತದೆಂದು ಲೆಕ್ಕ ಹಾಕಿ ಅವಳು ಮನೆಯಿಂದ ಹೊರಟಳು.

ರಾಜಕುಮಾರಿ ಹಲವು ವರ್ಷ ಊರೂರು ಅಲೆದಾಡಿ ದರೂ ಗಂಡನಿರುವ ಜಾಗಕ್ಕೆ ಹೇಗೆ ಹೋಗುವುದೆಂದು ತಿಳಿಯದೆ ಸೋತುಹೋದಳು. ಕಡೆಗೆ ಒಂದು ಬೆಟ್ಟದ ಶಿಖರವೇರಿ ಸೂರ್ಯನೆಡೆಗೆ ನೋಡಿ, ”ಸೂರ್ಯನೇ, ನನ್ನ ಪತಿಯನ್ನು ಹುಡುಕುತ್ತ ಹೊರಟಿದ್ದೇನೆ. ಸಹಾಯ ಮಾಡುತ್ತೀಯಾ?” ಎಂದು ಕೇಳಿದಳು. ಸೂರ್ಯನು, ”ನನಗೆ ಅವನಿರುವ ಜಾಗ ಗೊತ್ತಿಲ್ಲ. ಆದರೆ ನಿನಗೊಂದು ಪೆಟ್ಟಿಗೆ ಕೊಡುತ್ತೇನೆ. ಅಗತ್ಯ ಬಂದಾಗ ಅದರ ಮುಚ್ಚಳ ತೆರೆ. ನಿನಗೆ ಸಹಾಯವಾಗುತ್ತದೆ” ಎಂದು ಹೇಳಿ ಪೆಟ್ಟಿಗೆಯನ್ನು ನೀಡಿದ.

ರಾತ್ರಿಯಾಗುವುದನ್ನೇ ಕಾದುನಿಂತ ರಾಜಕುಮಾರಿ ಚಂದ್ರನು ಉದಯಿಸಿ ಬಂದಾಗ ಅವನಲ್ಲಿಯೂ ಸಹಾಯ ಕೇಳಿದಳು. ಚಂದ್ರನು ಅವಳಿಗೆ ಒಂದು ಮೊಟ್ಟೆಯನ್ನು ನೀಡಿದ. ”ನಿನ್ನ ಗಂಡನಿರುವ ಜಾಗ ತಿಳಿಯದು. ಆದರೆ ಅಗತ್ಯವಿರುವಾಗ ಈ ಮೊಟ್ಟೆಯನ್ನು ಒಡೆದರೆ ಅದರಿಂದ ಸಹಾಯವಾಗುತ್ತದೆ” ಎಂದು ಹೇಳಿದ.

ರಾಜಕುಮಾರಿ ಮಾರುತಗಳ ಬಳಿಗೆ ಹೋಗಿ ಸಹಾಯ ಕೇಳಿದಳು. ಅವು ಅವಳಿಗೆ ಕೆಲವು ಬೀಜಗಳನ್ನು ನೀಡಿದವು. ಇದರಿಂದ ಬೇಕಾದಾಗ ಸಹಾಯ ಪಡೆಯುವಂತೆ ತಿಳಿಸಿದವು. ರಾಜಕುಮಾರಿ ಊರಿಂದೂರು ಹಾರುವ ಗ್ರಿಫಿನ್‌ ಹಕ್ಕಿಯನ್ನು ನೋಡಿದಳು. ಅದರ ಬಳಿಯೂ ನೆರವಾಗಲು ಕೋರಿದಳು. ಹಕ್ಕಿಯು, ”ಕೆಂಪು ಸಮುದ್ರ ದಾಟಿದರೆ ಅಲ್ಲಿ ಪೆಡಂಭೂತದ ಗುಹೆಯಿದೆ. ನಿನ್ನ ಗಂಡ ಅದರೊಳಗೆ ಇದ್ದಾನೆ. ನನ್ನ ಬೆನ್ನ ಮೇಲೇರಿಕೋ, ಅಲ್ಲಿಗೆ ಕರೆದೊಯ್ಯುತ್ತೇನೆ. ಆದರೆ ಪಡಂಭೂತದ ದೇಹದಿಂದ ಹೊರಬೀಳುವ ಬೆಂಕಿಯ ಜ್ವಾಲೆಗೆ ನನ್ನ ಗರಿಗಳು ಸುಡುವ ಕಾರಣ ನಿನ್ನೊಂದಿಗೆ ನಾನಿರಲು ಆಗುವುದಿಲ್ಲ” ಎಂದು ಹೇಳಿತು.

ಹಕ್ಕಿಯ ಬೆನ್ನ ಮೇಲೆ ಕುಳಿತುಕೊಂಡು ರಾಜಕುಮಾರಿ ಪೆಡಂಭೂತದ ಗುಹೆಯನ್ನು ತಲುಪಿದಳು. ಆಗ ಭೂತ

ಗುಹೆಯಿಂದ ಹೊರಗೆ ಬಂದಿತು. ಅದರ ಮೈಯಿಂದ ಹೊರಸೂಸುವ ಬೆಂಕಿಯಿಂದ ತಾನು ಸುಟ್ಟು ಹೋಗುತ್ತಿರು ವಂತೆ ಅವಳಿಗೆ ತೋರಿತು. ಅವಳು ಸೂರ್ಯನು ಕೊಟ್ಟ ಪೆಟ್ಟಿಗೆಯನ್ನು ತೆರೆದಳು. ಅದರೊಳಗೊಂದು ಬೆಳ್ಳಿಯ ನಿಲುವಂಗಿ ಇತ್ತು. ಅದನ್ನು ತೊಟ್ಟುಕೊಂಡಾಗ ಅವಳಿಗೆ ಬೆಂಕಿಯಿಂದ ಏನೂ ತೊಂದರೆಯಾಗಲಿಲ್ಲ.

ಅದರ ಕ್ರೋಧದಿಂದ ಕುದಿಯುತ್ತ ರಾಜಕುಮಾರಿ ಯನ್ನು ನುಂಗಲು ಮುಂದೆ ಬಂದಿತು. ರಾಜಕುಮಾರಿ ಕೂಡಲೇ ಚಂದ್ರನು ನೀಡಿದ ಮೊಟ್ಟೆಯನ್ನು ಒಡೆದಳು. ಅದರಿಂದ ಲೋಳೆಯ ಸಮುದ್ರವೇ ಸೃಷ್ಟಿಯಾಗಿ ಪೆಡಂಭೂತ ಅದರೊಳಗೆ ಸಿಲುಕಿಕೊಂಡಿತು. ಹೊರಗೆ ಬರಲಾಗದೆ ಉಸಿರುಗಟ್ಟಿ ಜೀವ ತ್ಯಜಿಸಿತು. ಅವಳು ಗುಹೆಯ ಒಳಗೆ ಹೋಗಿ ಬಂಧನದಲ್ಲಿದ್ದ ಗಂಡನನ್ನು ಬಿಡಿಸಿದಳು. ಅವನ ಕೈ ಹಿಡಿದುಕೊಂಡು ಸಮುದ್ರದ ದಡಕ್ಕೆ ಓಡಿದಳು. ಅಷ್ಟರಲ್ಲಿ ಪೆಡಂಭೂತದ ದೊಡ್ಡ ಸೈನ್ಯ ಅವಳನ್ನು ಹಿಂಬಾಲಿಸಿ ಬಂದಿತು. ರಾಜಕುಮಾರಿ ಮಾರುತಗಳು ನೀಡಿದ್ದ ಬೀಜಗಳನ್ನು ಸಮುದ್ರಕ್ಕೆಸೆದಳು. ಅದರಿಂದಾಗಿ ಸಮುದ್ರದಲ್ಲಿ ಹುಲ್ಲಿನ ಸೇತುವೆಯೊಂದು ಕಾಣಿಸಿತು. ಸೇತುವೆಯಲ್ಲಿ ನಡೆಯುತ್ತ ಸಮುದ್ರವನ್ನು ಸಲೀಸಾಗಿ ದಾಟಿದಳು. ಪೆಡಂಭೂತಗಳು ಸೇತುವೆಯಲ್ಲಿ ದಾಟಲು ಮುಂದಾದಾಗ ಅವುಗಳೊಂದಿಗೇ ಸೇತುವೆ ಕುಸಿದು ನೀರಿನಲ್ಲಿ ಮುಳುಗಿಹೋಯಿತು.

ರಾಜಕುಮಾರನು, ”ನಾನು ಪಾರಿವಾಳದ ರೂಪದಲ್ಲಿ ನಿನ್ನನ್ನು ಬಿಟ್ಟುಹೋಗಿ ಇಂದಿಗೆ ಏಳು ವರ್ಷಗಳಾದವು. ಆದರೂ ಸಾಹಸದಿಂದ ನನ್ನನ್ನು ರಕ್ಷಣೆ ಮಾಡಿದ್ದೀ. ಇನ್ನು ಮುಂದೆ ಮಾಂತ್ರಿಕನ ಭಯವೂ ಇಲ್ಲ. ಸತ್ತುಹೋಗಿರುವ ಪೆಡಂಭೂತದ ಕಾಟವೂ ತೊಲಗಿತು. ನಾವಿಬ್ಬರೂ ಸುಖವಾಗಿ ನನ್ನ ಅರಮನೆಯಲ್ಲಿ ಇರಬಹುದು” ಎಂದು ಹೇಳಿದ.

-ಪ.ರಾಮಕೃಷ್ಣ ಶಾಸ್ತ್ರಿ

Advertisement

Udayavani is now on Telegram. Click here to join our channel and stay updated with the latest news.

Next