Advertisement

ಬಂಡಾಯದ ಬಾವುಟ ಹಾರಿಸಿದ ಬೆಳಮಗಿ

03:48 PM Apr 22, 2018 | Team Udayavani |

ಕಲಬುರಗಿ: ಇಲ್ಲಿನ ಕಲಬುರಗಿ ಗ್ರಾಮೀಣ ಮೀಸಲು ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‌ನಿಂದ ವಂಚಿತರಾಗಿರುವ ಮಾಜಿ ಸಚಿವ ರೇವು ನಾಯಕ ಬೆಳಮಗಿ ಪಕ್ಷದ ವಿರುದ್ಧ ಬಂಡಾಯದ ಬಾವುಟ ಹಾರಿಸಿದ್ದು, ಪಕ್ಷಕ್ಕೆ ಗುಡ್‌ ಬೈ ಹೇಳಿ ಸ್ಪರ್ಧಿಸಲು ಮುಂದಾಗಿದ್ದಾರೆ. 

Advertisement

ಟಿಕೆಟ್‌ ಕೈ ತಪ್ಪಿದ ಹಿನ್ನೆಲೆಯಲ್ಲಿ ಶನಿವಾರ ಮನೆಯಲ್ಲಿ  ಬೆಂಬಲಿಗರ, ನಾಯಕ ಸಮುದಾಯದವರ ಹಾಗೂ ಕಾರ್ಯಕರ್ತರ ಜತೆಗೆ ವಿವಿಧ ಸಮುದಾಯಗಳ ಸಭೆಗಳನ್ನು ಸರಣಿಯಾಗಿ ನಡೆಸಿದ ನಂತರ ಬಿಜೆಪಿ  ತೊರೆದು ಸ್ಪರ್ಧಿಸುವ ಖಚಿತ ನಿರ್ಧಾರಕ್ಕೆ ಬಂದಿದ್ದಾರೆ. ಶನಿವಾರ ರೇವು ನಾಯಕ ಬೆಳಮಗಿ ಮನೆ ಸಾವಿರಾರು ಜನರಿಂದ ತುಂಬಿ ತುಳುಕಿತ್ತು. ಈ ವೇಳೆ ಸಭೆಗಳನ್ನು ನಡೆಸಿ ಎಲ್ಲರೊಂದಿಗೆ ಸಮಾಲೋಚನೆ ನಡೆಸಲಾಯಿತು.

ತದನಂತರ ಗುಪ್ತ ಸ್ಥಳಗಳಲ್ಲಿಯೂ ಸಭೆ ನಡೆಸಿ ಸಮಗ್ರವಾಗಿ  ಚರ್ಚಿಸಲಾಯಿತು. ಈ ನಡುವೆ ಜೆಡಿಎಸ್‌ ಸೇರ್ತಾರೇ, ಇಲ್ಲವೇ ಕಾಂಗ್ರೆಸ್‌ ಪಕ್ಷ ಸೇರ್ತಾರೆ ಎಂಬ ಮಾತುಗಳು ಕೇಳಿ ಬಂದವು. ಸ್ಪರ್ಧೆ ಖಚಿತ  ಎನ್ನುವುದಾದರೂ ಯಾವ ಪಕ್ಷದಿಂದ ಸ್ಪರ್ಧಿಸುತ್ತಾರೆ ಎನ್ನುವುದು ದಿನವಿಡಿ ಚರ್ಚೆ ನಡೆದರೂ ರಾತ್ರಿವರೆಗೂ ಯಾವುದೇ ನಿರ್ಧಾರ ಅಂತಿಮಗೊಳ್ಳಲಿಲ್ಲ.  

ಬಿಎಸ್‌ವೈ ವಿರುದ್ದ ಗುಡುಗು: ಬಿಜೆಪಿ ಟಿಕೆಟ್‌ ವಂಚಿತವಾಗಿದ್ದಕ್ಕೆ ಮಾಜಿ ಸಚಿವ ರೇವುನಾಯಕ ಬೆಳಮಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್‌ ಯಡಿಯೂರಪ್ಪ  ಅವರ ವಿರುದ್ಧ ತೊಡೆ ತಟ್ಟಿದ್ದಾರೆ. ಕಲಬುರ್ಗಿಯಲ್ಲಿ ಬೆಂಬಲಿಗರ ಸಭೆ ನಡೆಸಿದ ನಂತರ ಮಾತನಾಡಿದ ಬೆಳಮಗಿ, ರಾಜ್ಯಾದ್ಯಂತ ಪ್ರವಾಸ ಮಾಡಿ  ಯಡಿಯೂರಪ್ಪ ತಮಗೆ ಮಾಡಿರುವ ದ್ರೋಹವನ್ನು ಜನತೆಗೆ ತಿಳಿಸುತ್ತೇನೆ ಎಂದು ಗುಡುಗಿದರು. 

ಈ ಹಿಂದೆ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವಿದ್ದಾಗ ಕುಮಾರಸ್ವಾಮಿ ಮುಖ್ಯಮಂತ್ರಿ ಸ್ಥಾನ ಬಿಟ್ಟು ಕೊಡಲಿಲ್ಲ ಎನ್ನುವ ಕಾರಣಕ್ಕೆ ಬೆನ್ನಿಗೆ ಚೂರಿ ಹಾಕಿದರೆಂದು ಯಡಿಯೂರಪ್ಪ  ರಾಜ್ಯಾದ್ಯಂತ ಸಂಕಲ್ಪಯಾತ್ರೆ ಮಾಡಿದರು. ಆಗ ಅವರ ಹಿಂದೆ ನಾನಿದ್ದು ರಾಜ್ಯಾದ್ಯಂತ ಪ್ರವಾಸ ಕೈಗೊಂಡಿ¨ªೆ. ಆದರೆ ಈಗ ತಮ್ಮ ಬೆನ್ನಿಗೆ ಚೂರಿ ಹಾಕಿದ್ದಾರೆ. ತಾವು ಸಹ ರಾಜ್ಯಾದ್ಯಂತ ಸಂಕಲ್ಪಯಾತ್ರೆ  ನಡೆಸಿ ಬಿಎಸ್‌ವೈ ವಿರುದ್ಧ ಪ್ರಚಾರ ಮಾಡುವುದಾಗಿ ರೇವುನಾಯಕ ಬೆಳಮಗಿ  ಘೋಷಿಸಿದರು.

Advertisement

ಬೆಂಬಲಿಗರ ಆಸೆಯಂತೆ ಬಿಜೆಪಿ ತೊರೆದು, ಯಾವುದಾದರೂ ಪಕ್ಷ ಸೇರಿ ಅಥವಾ ಪಕ್ಷೇತರವಾಗಿ ಸ್ಪರ್ಧಿಸುವುದು ಖಚಿತ ಎಂದು  ಸ್ಪಷ್ಟಪಡಿಸಿದರು. ಒಂದು ಹಂತದಲ್ಲಿ ಯಡಿಯೂರಪ್ಪರನ್ನು ಏಕವಚನದಲ್ಲಿ ನಿಂದಿಸಿದ ಬೆಳಮಗಿ, ಬಂಜಾರಾ ಸಮುದಾಯದ ತಾಕತ್ತು ಎಷ್ಟು ಅನ್ನೋದನ್ನು  ಅವನಿಗೆ ತೋರಿಸುತ್ತೇನೆ ಎಂದರು. ಜೆಡಿಎಸ್‌ ಅಥವಾ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಹಿತಚಿಂತಕರು ಒತ್ತಡ ಹೇರುತ್ತಿದ್ದಾರೆ. 

ಒಟ್ಟಾರೆ  ಸಭೆಯ ನಂತರ ಸೂಕ್ತ ನಿರ್ಧಾರ ಕೈಗೊಳುತ್ತೇನೆ. ಚುನಾವಣೆಗೆ ನಿಲ್ಲುವುದು ನಿಶ್ಚಿತ. ಜೊತೆಗೆ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಬಿಜೆಪಿ ವಿರುದ್ಧ  ಪ್ರಚಾರ ನಡೆಸಲಿದ್ದೇನೆ ಎಂದು ಹೇಳಿದರು. ಪಕ್ಷದ ರಾಷ್ಟ್ರೀಯ  ನಾಯಕರು ನನ್ನ ಹೆಸರನ್ನೇ ಅಂತಿಮ ಗೊಳಿಸಿದ್ದರೂ ಅದನ್ನು ರಾಜ್ಯ ಘಟಕವು ತೆಗೆದುಹಾಕಿದೆ. ಈ ಕ್ರಮದ ಹಿಂದೆ ಯಡಿಯೂರಪ್ಪ ಅವರ ಕೈವಾಡವಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇಡೀ ರಾಜ್ಯದಲ್ಲಿಯೇ ಬಿಜೆಪಿ ಏನೂ  ಇಲ್ಲದ ಸಂದರ್ಭದಲ್ಲಿ ನಾನು ಶಾಸಕನಾಗಿ ಆಯ್ಕೆಯಾಗಿದ್ದೆ. ಇಲ್ಲಿಯವರೆಗೆ ನಾಲ್ಕು ಬಾರಿ ಬಿಜೆಪಿಯಿಂದಲೇ ಶಾಸಕನಾಗಿ ಜಿಲ್ಲೆಯಲ್ಲಿ ಪಕ್ಷವನ್ನು  ಕಟ್ಟಿ ಬೆಳೆಸಿರುವೆ. ಒಮ್ಮೆ ಸಚಿವನಾಗಿಯೂ ಕಾರ್ಯನಿರ್ವಹಿಸಿರುವೆ. ನಾನು ಯಾವುದೇ ತಪ್ಪು ಮಾಡದೇ ಇದ್ದರೂ ನನಗೆ ಏಕೆ ಟಿಕೆಟ್‌ ಕೊಡಲಿಲ್ಲ?  ಎಂಬುದರ ಕುರಿತು ಸ್ವತಃ ಬಿ.ಎಸ್‌. ಯಡಿಯೂರಪ್ಪ ಅವರೇ ಸ್ಪಷ್ಟನೇ ನೀಡಬೇಕು ಎಂದು ಒತ್ತಾಯಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next