ಇದು ಒಬ್ಬ ಅಪರೂಪದ ಪೊಲೀಸಪ್ಪನ ಕತೆ. ಮಡಿದ ಮೇಲೆ ಕಣ್ಣುಗಳು, ಮಣ್ಣುಪಾಲಾಗದೇ ಇರಲಿಯೆಂಬ ಕಳಕಳಿ ಇಟ್ಟುಕೊಂಡ ಮನುಷ್ಯ. ಈ ಕಾರಣ, ಹೋದಲ್ಲೆಲ್ಲ ನೇತ್ರದಾನದ ಕುರಿತು ಭಾಷಣ ಮಾಡುತ್ತಾ, ಸುಮಾರು 700 ಜನರಿಂದ ದಾನಪತ್ರ ಪಡೆದಿದ್ದಾರೆ. ಅಂಧರ ಪಾಲಿಗೆ ಬೆಳಕು ನೀಡುವ ದೇವರೇ ಆಗಿಹೋಗಿದ್ದಾರೆ.
ಇವರ ಹೆಸರು ಕರಿಬಸಪ್ಪ ಗೊಂದಿ. ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಆಡೂರು ಪೊಲೀಸ್ ಠಾಣೆಯಲ್ಲಿ ಪೇದೆ. ಬಾಲ್ಯದಲ್ಲಿದ್ದಾಗ, ಇವರಿಗೆ ದೃಷ್ಟಿದೋಷವಿತ್ತಂತೆ. ಅದನ್ನು ಲೇಸರ್ ಚಿಕಿತ್ಸೆಯಿಂದ ನಿವಾರಿಸಿಕೊಂಡು, ನಂತರ ಪೊಲೀಸ್ ಆಗಿದ್ದು ಇವರ ಬದುಕಿನ ಸಾಹಸಗಾಥೆಯೇ ಸರಿ.
ಈ ನೆನಪಿನಲ್ಲಿ ಮತ್ತು ತಂದೆಯ 25ನೇ ಮದುವೆಯ ವಾರ್ಷಿಕೋತ್ಸವದಲ್ಲಿ ಇಡೀ ಕುಟುಂಬಕ್ಕೆ ನೇತ್ರದಾನ ಮಾಡುವಂತೆ ಪ್ರೇರೇಪಿಸಿದರು. ಅಲ್ಲಿಂದ ಶುರುವಾಯಿತು ನೋಡಿ, ಅಂಧರ ಬಾಳಿಗೆ ಬೆಳಕಾಗುವ ಕೆಲಸ. ತಮ್ಮ ಮದುವೆ, ಪತ್ನಿಯ ಸೀಮಂತ, ಮಗನ ಹುಟ್ಟುಹಬ್ಬಗಳಲ್ಲಿ ನೇತ್ರದಾನ, ದೇಹದಾನ, ರಕ್ತದಾನದ ಅರಿವು ಮೂಡಿಸುತ್ತಾ, ಅಲ್ಲಿಗೆ ಅತಿಥಿಯಾಗಿ ಬಂದವರ ಬಳಿಯೂ, ದಾನಪತ್ರ ಬರೆಸಿಕೊಂಡ ಹೆಗ್ಗಳಿಕೆ ಇವರದ್ದು.
ಬಸ್‌ಸ್ಟಾಂಡ್, ಬಟ್ಟೆ ಅಂಗಡಿ, ಕ್ಷೌರದಂಗಡಿ… ಹೀಗೆ ಜನರಿರುವ ಯಾವುದೇ ಪ್ರದೇಶಕ್ಕೆ ಹೋದರೆ, ಅಲ್ಲಿ ನೇತ್ರದಾನದ ಕುರಿತು ಉಪನ್ಯಾಸ ಮಾಡಿ, ದಾನ ಪತ್ರ ಬರೆಸಿಕೊಳ್ಳುತ್ತಾರೆ. 217 ಬಾರಿ ತುರ್ತು ಸಂದರ್ಭದಲ್ಲಿ ರಕ್ತದಾನದ ವ್ಯವಸ್ಥೆ ಕಲ್ಪಿಸಿದ, ಮಾನವೀಯ ಹೃದಯಿ ಇವರು. ಫೇಸ್‌ಬುಕ್‌ನಲ್ಲಿ “ಸ್ನೇಹ ಮೈತ್ರಿ’ ಅಂತಲೇ, ದೊಡ್ಡ ಬಳಗವಿದೆ. ಅಂಧತ್ವ ಮುಕ್ತ ಸಮಾಜ ಇವರ ಜೀವಿತ ಗುರಿ.
* ಟಿ. ಶಿವಕುಮಾರ್