Advertisement
ಪದ್ಮಪುರಾಣದಲ್ಲಿ ಪಾರ್ವತಿ ದೇವಿ ಸಂತತಿ ಪ್ರಾಪ್ತಿಗಾಗಿ ‘ಪುಣ್ಯಕ’ ಎಂಬ ವ್ರತವನ್ನು ಆಚರಿಸಿರುವುದನ್ನು ವೇದವ್ಯಾಸರು ಉಲ್ಲೇಖೀಸುತ್ತಾರೆ. ಇದೊಂದು ನಿಯಮಬದ್ಧವಾಗಿ ಮಾಡುವ ವ್ರತ, ತಪಸ್ಸು. ಇದನ್ನು ಆಚರಿಸುವುದು ವಿಷ್ಣುವಿನ ಕುರಿತು. ವಿಷ್ಣುವಿನ ಬಳಿ ಯೋಗ್ಯ, ಬುದ್ಧಿವಂತನಾದ ಮಗುವನ್ನು ಪಾರ್ವತಿ ಕೇಳುತ್ತಾಳೆ. ಆಗ ಭಗವಂತ ತಾನೇ ಮಗುವಾಗಿ ಬರುತ್ತೇನೆಂದು ಹೇಳುತ್ತಾನೆ. ಇವನೇ ಗಣಪತಿ. ಆದ್ದರಿಂದಲೇ ಗಣಪತಿಗೆ ಮೊದಲ ಪೂಜೆ.
Related Articles
Advertisement
ಮಣ್ಣಿನಿಂದಲೇ ವಿಗ್ರಹ ರಚಿಸುವ ಈ ಕ್ರಮ ಏಕೆ ಬಂದಿರಬಹುದು? ಪಾರ್ವತಿ ದೇವಿಯ ದೇಹದ ಮಣ್ಣಿನಿಂದ ಗಣಪತಿ ಆವಿರ್ಭವಿಸಿದ ಎಂಬ ಪುರಾಣೋಕ್ತ ಉಲ್ಲೇಖವಿದೆ. ಮಣ್ಣಿನಲ್ಲಿ ಜೀವಂತಿಕೆ ಇರುತ್ತದೆ. ಜೀವಸತ್ವ ಇರುವ ಭೂತ (ಪಂಚಭೂತಗಳಲ್ಲಿ ಒಂದು) ವಿಶೇಷವೇ ಮಣ್ಣು. ಯಾವುದರಲ್ಲಿ ಜೀವಂತಿಕೆ ಇರುತ್ತದೋ ಅದರಿಂದ ಮಾತ್ರ ಇನ್ನೊಂದು ವಸ್ತುವಿಗೆ ಜೀವಂತಿಕೆ ಕೊಡಲು ಸಾಧ್ಯ. ಮಣ್ಣಿನಲ್ಲಿ ಸಸ್ಯಗಳು ಬೆಳೆದು ಅದರಲ್ಲಿ ಪುಷ್ಪಗಳುಂಟಾಗಿ, ಪುಷ್ಪವತಿಯಾಗಿ ಫಲೋತ್ಪತ್ತಿಯಾಗುವುದನ್ನು ಇಲ್ಲಿ ಗಮನಿಸಬಹುದು. ಮಣ್ಣಿನಲ್ಲಿ ಜೀವಂತಿಕೆ ಇರುವುದು ಇದರಿಂದ ಖಚಿತವಾಗುತ್ತದೆ. ಲೋಹ ಇತ್ಯಾದಿಗಳಿಂದ ವಿಗ್ರಹ ರಚನೆ ಸಾಧ್ಯವಾದರೂ ಅದರಲ್ಲಿ ದೇವತಾಶಕ್ತಿಗಳನ್ನು ಆವಾಹಿಸುವ ವಿಧಿವಿಧಾನಗಳು ಪರಿಶ್ರಮಪೂರಿತ. ಮಣ್ಣಿನಲ್ಲಿ ಹಾಗಲ್ಲ, ಸುಲಭದಲ್ಲಿ ದೇವರನ್ನು ಆವಾಹಿಸಿ ಪೂಜಿಸಬಹುದು.
ಗಣಪತಿಗೆ ಇಂತಹ ವಿಶಿಷ್ಟ ಸ್ಥಾನವಿರುವುದರಿಂದಲೇ ಗೃಹ ಪ್ರವೇಶವಿರಬಹುದು, ವಿದ್ಯಾರಂಭ ಇರಬಹುದು, ವಿವಾಹಾದಿ ಕಾರ್ಯಕ್ರಮಗಳಿರಬಹುದು, ಅಲ್ಲಿ ಗಣಪತಿಯ ಹವನ ಅಗತ್ಯವಾಗಿ ನಡೆಯಬೇಕು. ಯಾವುದೇ ವಸ್ತುವಿನ ಫಲಪ್ರಾಪ್ತಿಗಾಗಿ ಗಣಪತಿಯ ಪೂಜೆ ಅಗತ್ಯ. ಇದೇ ಮೊದಲ ಪೂಜೆಯ ಹಿಂದಿರುವ ಗುಟ್ಟು.
– ಪಂಜ ಭಾಸ್ಕರ ಭಟ್
***
ಎಲ್ಲವೂ ಇವನೇ, ಎಲ್ಲವೂ ಇವನಲ್ಲಿ, ಎಲ್ಲವೂ ಇವನಿಗಾಗಿ
ಭಾದ್ರಪದ ಶುದ್ಧ ಚೌತಿ ಎಂದರೆ ಎಲ್ಲಿಲ್ಲದ ಸಡಗರ. ಗಣಪತಿ ವಿಘ್ನನಿವಾರಕನಾದ ದೇವ. ಭಕ್ತರಿಗೆ ಬಾಧಕವಾಗುವ ಕಾರ್ಯಗಳನ್ನು ವಿಘ್ನವನೊಡ್ಡಿ ನಿಲ್ಲಿಸುವ ವಿಘ್ನೕಶ್ವರ. ಆದುದರಿಂದ ನಾವು ಮೊದಲು ಇವನಿಗೆ ಪೂಜೆಯನ್ನು ಸಲ್ಲಿಸುತ್ತೇವೆ. ‘ಅವಿಘ್ನಂ ಕುರು ಮೇ ದೇವ ಸರ್ವಕಾರ್ಯೇಷು ಸರ್ವದಾ’ ಎಂದು ಕೈಜೋಡಿಸಿ ಪ್ರಾರ್ಥಿಸುತ್ತೇವೆ. ಈ ವಿಷಯವನ್ನು ತಿಳಿಸುವ ಕಥೆ ಸ್ಕಾಂದ ಪುರಾಣದಲ್ಲಿದೆ.
ವಿನಾಯಕ ಭಕ್ತಾನುಕಂಪಿಯಾದ ದೇವತೆ. ನಂಬಿದವರ ಸಂಕಷ್ಟಗಳನ್ನು ಹರಣ ಮಾಡುತ್ತಾನೆ. ಶೋಕವನ್ನು ನಾಶ ಮಾಡುತ್ತಾನೆ. ಭಕ್ತರಿಗೂ ಇವನೆಂದರೆ ಅಕ್ಕರೆ, ಸಲುಗೆ. ‘ಗಣಪ ಗಣಪ ಏಕದಂತ’ ಎಂದು ಬಾಯಿಪಾಠ ಮಾಡುವ ಮಕ್ಕಳಿಂದ ಮೊದಲುಗೊಂಡು ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುವ ಮಹನೀಯರವರೆಗೂ ಗಣಪತಿ ಸುಪರಿಚಿತ. ಯಾರಿಗೂ ಇವನ ಬಗ್ಗೆ ಭಯವಿಲ್ಲ. ಆದುದರಿಂದಲೇ ಬೀದಿ-ಬೀದಿಯಲ್ಲಿ ಇವನ ಮೂರ್ತಿಯನ್ನು ಇಟ್ಟು ಪೂಜಿಸುತ್ತಾರೆ. ಅಂಗಳದಿಂದ ಒಳಮನೆಯ ದೇವರಗೂಡಿನವರೆಗೂ ಇವನಿಗೆ ಸ್ಥಾನವಿದೆ.
ಭದ್ರಾಕೃತಿಯ ಮಂಗಲಮೂರ್ತಿ: ಮಹಾಗಣಪತಿಯದು ಭದ್ರಾಕೃತಿ. ಇವನದು ಭವ್ಯವಾದ ಮಂಗಲಮೂರ್ತಿ. ಲಕ್ಷ್ಮೀಶ ಕವಿಯೂ ಇದನ್ನು ವರ್ಣಿಸಿದ್ದಾನೆ. ಕೆಂಪು ಚೆಲ್ಲಿದ ಆನೆಯ ಮುಖ. ಚಿಕ್ಕದಾದ ಕಣ್ಣುಗಳು, ಉಬ್ಬಿದ ಹಣೆ, ಸೀಳು ಬಾಯಿ, ವಕ್ರತುಂಡ, ಉದ್ದನೆಯ ಸೊಂಡಿಲು. ಎಡಹಲ್ಲು ಮುರಿದು ಮೊಂಡಾಗಿದೆ. ಬಲಕೋರೆ ಹಲ್ಲು ಮಾತ್ರ ಇಂದ್ರನ ವಜ್ರಾಯುಧದಂತೆ ಹೊಳೆಯುತ್ತಿದೆ. ಏಕದಂತ, ಮೊರದಂತೆ ಅಗಲವಾದ ಕಿವಿಗಳು. ಕಣಜದಂತೆ ಎಲ್ಲವನ್ನೂ ತುಂಬಿಟ್ಟುಕೊಳ್ಳುವ ದೊಡ್ಡದಾದ ಹೊಟ್ಟೆ. ಗಿಡ್ಡವಾದ ಕಂಬದಂಥ ಕಾಲುಗಳು.
ಯೋಗಿಗಳಿಗೂ ಇವನು ಹೀಗೇ ತೋರಿಕೊಂಡವನು. ಗಣೇಶಾಥರ್ವಶೀರ್ಷದಲ್ಲಿ ಹೇಳಿದಂತೆ ಇವನು ಮೂಲಾಧಾರದಲ್ಲಿ ನೆಲೆನಿಂತವನು. ‘ತ್ವಂ ಮೂಲಾಧಾರಸ್ಥಿತೋಸಿ ನಿತ್ಯಂ | ತ್ವಾಂ ಯೋಗಿನೋ ಧ್ಯಾಯಂತಿ ನಿತ್ಯಂ|’ ಆದುದರಿಂದ ಪ್ರಣವ ವಿದ್ಯೆಯೇ ಗಣೇಶ ವಿದ್ಯೆಯ ಮೂಲ. ಗಣಪತಿಯ ಪಾರಮಾರ್ಥಿಕ ಸ್ವರೂಪವನ್ನೂ ಅಧಿದೈವಿಕವಿಸ್ತಾರವನ್ನೂ ಈ ಉಪನಿಷತ್ತು ವಿಶದವಾಗಿ ವರ್ಣಿಸುತ್ತದೆ. ಗಣೇಶ ಸಾಕ್ಷಾತ್ ಬ್ರಹ್ಮ. ಅವನು ಬ್ರಹ್ಮ ವಿಷ್ಣು ಮಹೇಶ್ವರ ಸ್ವರೂಪ. ತ್ರಿಗುಣಾತೀತ. ಕಾಲಾತೀತ. ಪ್ರಕೃತಿ ಸ್ವರೂಪನಾಗಿದ್ದು ಪ್ರಕೃತಿಯನ್ನೇ ವಶಪಡಿಸಿಕೊಂಡವ. ಇವನು ಶಕ್ತಿತ್ರಯಾತ್ಮಕ. ಇವನು ಎಲ್ಲವೂ ಹೌದು. ಎಲ್ಲವೂ ಇವನಲ್ಲಿ, ಎಲ್ಲವೂ ಇವನಿಗಾಗಿ.
ಮಹಾಗಣಪತಿಯ ಆರಾಧನೆಯಲ್ಲಿ ತೊಡಕಿಲ್ಲ. ಇವನ ಪೂಜೆಗೆ ಆಕಾಶ-ಭೂಮಿಗಳನ್ನು ಒಂದು ಮಾಡುವ ಹರಸಾಹಸ ಬೇಕಿಲ್ಲ. ಪದ್ಮಪುರಾಣವು ಗಣೇಶನ ಮಣ್ಣಿನ ಮೂರ್ತಿಯನ್ನು ಮಾಡುವ ವಿಧಾನವನ್ನು ಹೇಳುವುದರ ಜತೆಗೆ ಪೂಜಾವಿಧಾನವನ್ನು ತಿಳಿಸಿಕೊಡುತ್ತದೆ. ಗಣೇಶನ ಮೂರ್ತಿಗೆ ಅಶ್ವತ್ಥಮರದ ತಳಮಣ್ಣಾಗಲಿ, ತುಳಸೀಗಿಡದ ಬುಡದ ಮಣ್ಣಾಗಲೀ, ಶುದ್ಧಮೃತ್ತಿಕೆಯಾಗಲೀ ಶ್ರೇಷ್ಠ. ಈ ಮಣ್ಣನ್ನು ಶೋಧಿಸಿ ಮಂತ್ರಪೂರ್ವಕವಾಗಿ ಸಂಸ್ಕರಿಸಿ, ಚತುರ್ಭುಜ ಏಕದಂತನ ಮೂರ್ತಿ ನಿರ್ಮಿಸಬೇಕು. ಇದು ಸುಂದರವಾಗಿಯೂ ಇರಬೇಕು. ಅದಕ್ಕಾಗಿಯೇ ವಿವಿಧ ವರ್ಣವಿನ್ಯಾಸದ ಹಲವು ಬಗೆಯ ಗಣಪತಿಯ ಮೂರ್ತಿಗಳನ್ನು ಮಣ್ಣಿನಿಂದ ಮಾಡುವ ಪದ್ಧತಿಯು ದೇಶದಲ್ಲಿ ಬೆಳೆದಿದೆ. ಇದು ಶಾಸ್ತ್ರೀಯವೂ ಆಗಿದೆ.
ಗಣಪತಿ ಮೋದಕ ಪ್ರಿಯ. ಇವನು ರಕ್ತಚಂದನವನ್ನು ಲೇಪಿಸಿಕೊಂಡವನು. ಕೆಂಪುಬಟ್ಟೆಯನ್ನು ಉಟ್ಟವನು. ಕೆಂಪು ಹೂವುಗಳೆಂದರೆ ಇವನಿಗೆ ಇಷ್ಟ. ಇವನು ವಿದ್ಯಾವಾರಿಧಿ. ಸಕಲ ವಿದ್ಯೆಗಳೂ ಇವನಲ್ಲಿ ನೆಲೆಗೊಂಡಿವೆ. ಇವನ ಅನುಗ್ರಹದಿಂದಲೇ ಅವು ಲೋಕಮುಖವಾಗಿ ಹರಿದಿವೆ. ಆದುದರಿಂದ ವಿದ್ಯಾಭ್ಯಾಸಕ್ಕೆ ಮೊದಲು ಗಣಪತಿಯ ಪೂಜೆ. ಶಿವಗಣಕ್ಕೆ ನಾಯಕ. ಕುಮಾರವ್ಯಾಸ ‘ತ್ರಿಜಗವಂದಿತ ಗಣಪ ಮಾಳ್ಪುದು ಮತಿಗೆ ಮಂಗಳವ’ ಎಂದು ಹಾಡಿದ್ದಾನೆ.
– ವಿ. ಉಮಾಕಾಂತ ಭಟ್ ಕೆರೆಕೈ ಮೇಲುಕೋಟೆ ಸಂಸ್ಕೃತ ಕಾಲೇಜಿನ ನಿವೃತ್ತ ಪ್ರಾಂಶುಪಾಲರು