ಬೆಂಗಳೂರು: ಆನ್‌ಲೈನ್ ಮೂಲಕ ಹಣ ವರ್ಗಾವಣೆ ವ್ಯವಹಾರ ನಡೆಸುವ ವ್ಯಕ್ತಿಯ ಮೇಲೆ ನಾಲ್ವರು ದುಷ್ಕರ್ಮಿಗಳು ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿ, 4.50 ಲಕ್ಷ ರೂ. ಹಾಗೂ ಲ್ಯಾಪ್‌ಟಾಪ್ ಕಿತ್ತುಕೊಂಡು ಪರಾರಿಯಾದ ಘಟನೆ ಸಾದಹಳ್ಳಿ ಸಮೀಪದ ಜೆಡೆ ಗಾರ್ಡ್‌ನ್ ಮುಂಭಾಗದ ರಸ್ತೆಯಲ್ಲಿ ನಡೆದಿದೆ.
ದಾಳಿ ವೇಳೆ ದುಷ್ಕರ್ಮಿಯೊಬ್ಬ ಬೀಸಿದ ಲಾಂಗ್ ಏಟು ವ್ಯಕ್ತಿಯ ಹೆಲ್ಮೆಟ್‌ಗೆ ತಗುಲಿ ಅದೃಷ್ಟವಶಾತ್ ಆತ ಪ್ರಾಣಾಪಾದಿಂದ ಪಾರಾಗಿದ್ದಾನೆ. ಈ ಕುರಿತು ಜಯರಾಮ ಎಂಬುವವರು ನೀಡಿರುವ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ವಿಮಾನಿಲ್ದಾಣ ಠಾಣೆ ಪೊಲೀಸರು, ದುಷ್ಕರ್ಮಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
ಶ್ರೀನಿವಾಸಪುರದ ನಿವಾಸಿ ಜಯರಾಮ, ಸಾದಹಳ್ಳಿಯಲ್ಲಿ “ಸ್ಮಾರ್ಟ್ ಬ್ಯಾಂಕ್’ ಹೆಸರಿನ ಮಳಿಗೆಯಲ್ಲಿ ಆನ್‌ಲೈನ್ ಹಣ ವರ್ಗಾವಣೆ ವ್ಯವಹಾರ ನಡೆಸುತ್ತಿದ್ದಾರೆ. ಜ.29ರಂದು ವ್ಯವಹಾರದಲ್ಲಿ ಸಂಗ್ರಹವಾದ 4.50 ಲಕ್ಷ ರೂ.ಗಳನ್ನು ಬ್ಯಾಗ್‌ನಲ್ಲಿ ಇರಿಸಿಕೊಂಡು ರಾತ್ರಿ 8.20ರ ಸುಮಾರಿಗೆ ಮಳಿಗೆಯಲ್ಲಿ ಕೆಲಸ ಮಾಡುವ ನರಸಿಂಹಮೂರ್ತಿ ಜತೆ ಬೈಕ್‌ನಲ್ಲಿ ಊರಿಗೆ ತೆರಳುತ್ತಿದ್ದರು.
ಮಾರ್ಗ ಮಧ್ಯೆ ಜೆಡೆ ಗಾರ್ಡ್‌ನ್ ಮುಂಭಾಗದ ಸರ್ವಿಸ್ ರಸ್ತೆಯಲ್ಲಿ ಹೋಗುತ್ತಿದ್ದಾಗ ಸ್ವಿಫ್ಟ್ ಕಾರೊಂದು ಬೈಕ್ ಡಿಕ್ಕಿ ಹೊಡೆದಿದೆ. ಪರಿಣಾಮ ಜಯರಾಮ ಹಾಗೂ ನರಸಿಂಹಮೂರ್ತಿ ಕೆಳಗೆ ಬಿದ್ದಿದ್ದಾರೆ. ಕೂಡಲೇ ಕಾರಿನಿಂದ ಇಳಿದ ಒಬ್ಟಾತ, ಲಾಂಗ್ ತೆಗೆದು ಇಬ್ಬರ ಮೇಲೂ ಬೀಸಲು ಮುಂದಾಗಿದ್ದಾನೆ. ಇದನ್ನು ನೋಡಿದ ನರಸಿಂಹಮೂರ್ತಿ ಪ್ರಾಣಭಯದಿಂದ ಓಡಿಹೋಗಿದ್ದಾರೆ.
ದುಷ್ಕರ್ಮಿ ಬೀಸಿದ ಲಾಂಗ್ ಜಯರಾಮ ಅವರು ಧರಿಸಿದ್ದ ಹೆಲ್ಮೆಟ್‌ಗೆ ತಾಗಿದೆ. ಮತ್ತೂಬ್ಬ ರಾಡ್‌ನಿಂದ ಅವರ ಬೆನ್ನಿಗೆ ಹೊಡೆದಿದ್ದು, ಕೆಲವೇ ನಿಮಿಷಗಳಲ್ಲಿ ಜಯರಾಮ ಅವರ ಬಳಿಯಿದ್ದ ಹಣದ ಬ್ಯಾಗ್, ಲ್ಯಾಪ್‌ಟಾಪ್, ಮಳಿಗೆಯ ಕೀ ಕಿತ್ತುಕೊಂಡು ಕಾರಿನಲ್ಲಿ ಪರಾರಿಯಾಗಿದ್ದಾರೆ. ದುಷ್ಕರ್ಮಿಗಳು ಪರಾರಿಯಾದ ಬಳಿಕ ನರಸಿಂಹಮೂರ್ತಿ ಬಂದು ಜಯರಾಮ ಅವರನ್ನು ರಕ್ಷಿಸಿದ್ದಾರೆ.
ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿರುವ ಜಯರಾಮ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಲಾಂಗ್ ಏಟು ಹೆಲ್ಮೆಟ್‌ಗೆ ಬಿದ್ದಿದ್ದರಿಂದ ತಲೆಗೆ ಯಾವುದೇ ಪೆಟ್ಟಾಗಿಲ್ಲ. ಇವರ ವ್ಯಹಾರದ ಬಗ್ಗೆ ಅರಿತಿರುವ ಪರಿಚಿತರೇ ಕೃತ್ಯ ಎಸಗಿರುವ ಸಾಧ್ಯತೆಯಿದೆ ಎಂದು ಜಯರಾಮ ಆರೋಪಿಸಿದ್ದಾರೆ. ಹೀಗಾಗಿ ಹಲವರನ್ನು ವಿಚಾರಣೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.