Advertisement

ನಿರ್ಜೀವವಾಗುತ್ತಿದೆ ಉಡುಪಿಯ ಜೀವನದಿ ಇಂದ್ರಾಣಿ

08:25 PM Nov 29, 2019 | mahesh |

ಉಡುಪಿ: ಉಡುಪಿ ನಗರದ ಜೀವನದಿ ಯಾದ ಇಂದ್ರಾಣಿ ದಿನೇ ದಿನೇ ಕಲುಷಿತಗೊಳ್ಳು ತ್ತಿದೆ. ನಗರ ಅಭಿವೃದ್ಧಿ ಹೊಂದಿದಂತೆ ಮೂಲ ಸೌಕರ್ಯಗಳು ಅಭಿವೃದ್ಧಿಯಾಗದಿದ್ದರೆ ಯಾವೆಲ್ಲ ಸಮಸ್ಯೆ ಎದುರಾಗಬಹುದು ಎಂಬುವುದಕ್ಕೆ ಈ ನದಿ ಸ್ಪಷ್ಟ ಉದಾಹರಣೆಯಾಗಿದೆ.

Advertisement

ಕಳೆದ ಒಂದು ತಿಂಗಳಿನಿಂದ ರಾತ್ರಿ ಹಗಲು ಒಳಚರಂಡಿ ನೀರು ಇಂದ್ರಾಣಿ ನದಿಯಲ್ಲಿ ಹರಿಯುತ್ತಿದೆ. ನಗರಸಭೆಯ ನಿರ್ಲಕ್ಷ್ಯದಿಂದಾಗಿ ಈ ನದಿಯ ಪಾಡು ಕೇಳದವರಿಲ್ಲದಂತಾಗಿದೆ. ಹೆಚ್ಚುತ್ತಿರುವ ನಾಗರಿಕತೆ ಹಾಗೂ ಕಟ್ಟಡಗಳು ಈ ನದಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿವೆೆ. ನೀರಿಗೆ ಎಸೆಯುವ ಹಾಗೂ ಹರಿಯಬಿಡುವ ತ್ಯಾಜ್ಯದ ಪ್ರಮಾಣ ಕಡಿಮೆಯಿದ್ದದ್ದು ಅಭಿವೃದ್ಧಿಯ ನೆಪದಲ್ಲಿ ಅದೆಷ್ಟೋ ಪಾಲು ಹೆಚ್ಚಾಗಿದೆ. ಆಡಳಿತ ವ್ಯವಸ್ಥೆ ಹಾಗೂ ಜನರು ತಮಗೆ ಎಷ್ಟು ಸಾಧ್ಯವೋ ಅಷ್ಟು ಕೊಳೆಯನ್ನು ಎಸೆಯುವ ಮೂಲಕ, ಕೊಳಚೆ ನೀರನ್ನು ಹರಿಸುವ ಮೂಲಕ ಇಂದ್ರಾಣಿಯನ್ನು ಅಸಹನೀಯಗೊಳಿಸಿದ್ದಾರೆ. ಇದರಿಂದಾಗಿ ಒಳಚರಂಡಿಯ ನೀರು ಶುದ್ಧೀಕರಣ ಘಟಕಕ್ಕೆ ತೆರಳುವ ಮೊದಲೇ ತೋಡು ಪಾಲಾಗಿ ನೂರಾರು ಕುಟುಂಬಗಳು ನಿತ್ಯ ದುರ್ವಾಸನೆಯ ನಡುವೆ ಬದುಕಬೇಕಾಗಿದೆ.

ಶುದ್ಧೀಕರಣ ಇಲ್ಲ
ಮನೆಗಳು, ಫ್ಲ್ಯಾಟ್‌ಗಳು, ಅಂಗಡಿ, ಹೊಟೇಲ್‌ಗ‌ಳ ಕೊಳಚೆ ನೀರು, ಶೌಚದ ನೀರು ಅಲ್ಲಲ್ಲಿ ಮ್ಯಾನ್‌ಹೋಲ್‌ಗ‌ಳ ಮೂಲಕ ಒಳಚರಂಡಿ ಸೇರುತ್ತವೆ. ಅಲ್ಲಿಂದ ನಿಟ್ಟೂರಿನಲ್ಲಿರುವ ಶುದ್ಧೀಕರಣ ಘಟಕಕ್ಕೆ ಈ ಹರಿಯುತ್ತದೆ. ಅಲ್ಲಿ ಶುದ್ಧಗೊಂಡ ಬಳಿಕವಷ್ಟೆ ನೀರು ಹೊರಗೆ ಬಿಡಬೇಕು. ಆದರೆ ಇಲ್ಲಿ ಅದಕ್ಕೆ ವ್ಯತಿರಿಕ್ತವಾಗಿ ನಡೆಯುತ್ತಿದೆ. ಕರಾವಳಿ ಬೈಪಾಸ್‌ನಿಂದ ನಿಟ್ಟೂರು ಶುದ್ಧೀಕರಣ ಘಟಕಕ್ಕೆ ಅಳವಡಿಸಲಾದ ಪೈಪ್‌ನಲ್ಲಿ ಒಳಚರಂಡಿ ಕೊಳಚೆ ನಿಟ್ಟೂರಿಗೆ ತಲುಪುವ ಮೊದಲೇ ಅಲ್ಲಲ್ಲಿ ಮ್ಯಾನ್‌ಹೋಲ್‌ಗ‌ಳಿಂದ ಹರಿದು ತೋಡು ಸೇರುತ್ತಿದೆ. ತೋಡು ಈ ಕೊಳಚೆಯನ್ನು ಉಡುಪಿಯಿಂದ ಮಲ್ಪೆಯ ಸಮುದ್ರದ ಬದಿಯವರೆಗೂ ಹರಿಯುತ್ತಿದೆ.

ನೂರಾರು ಕುಟುಂಬಗಳಿಗೆ ಸಂಕಷ್ಟ
ನಿಟ್ಟೂರು ಸುತ್ತಮುತ್ತ ಸುಮಾರು 300 ಮನೆಗಳಿದ್ದು, ಇವರಿಗೆ ನಿತ್ಯ ಕೊಳಚೆ ನೀರಿನ ದರ್ಶನವಾಗುತ್ತಿದೆ. ಅಲ್ಲದೆ ನಿಟ್ಟೂರಿನ 5 ಕಿ.ಮೀ. ದೂರದ ಕೊಡಂಕೂರು, ಮೂಡಬೆಟ್ಟು, ಕೊಡವೂರು, ಕಲ್ಮಾಡಿ ಮತ್ತಿತರ ಪ್ರದೇಶದ ತೋಡಿಗೆ ಹತ್ತಿರವಾಗಿ ಬದುಕುತ್ತಿರುವ ನೂರಾರು ಕುಟುಂಬಗಳೂ ಇದರಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ.

ಮಳೆಗಾಲ, ಬೇಸಗೆಯಲ್ಲಿ ನಿಜ ದರ್ಶನ
ಇರುವ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಂಡರೆ ಉಡುಪಿ ನಗರಕ್ಕೆ ನೀರಿಗೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಆದರೆ ಇಲ್ಲಿ ಆಗುತ್ತಿರುವುದೇ ಬೇರೆ. ಬೇಸಗೆಯಲ್ಲಿ ನೀರಿದ್ದರೂ ಕುಡಿಯುವಂತಿಲ್ಲ. ಮಳೆಗಾಲದಲ್ಲಿ ಮಳೆನೀರು ಹರಿಯುವ ತೋಡಿನಲ್ಲಿ ಚರಂಡಿ ನೀರು ಹರಿದು ಎಲ್ಲ ರೀತಿಯ ತ್ಯಾಜ್ಯಗಳು ಮನೆಬಾಗಿಲಿಗೆ ಬಂದು ಬೀಳುತ್ತಿವೆ. ಬಾವಿಗಳ ನೀರು ಸಂಪೂರ್ಣವಾಗಿ ಕಲುಷಿತಗೊಂಡಿದ್ದು, ಈ ಕಾರಣಕ್ಕಾಗಿ ನಗರಸಭೆಯ ನೀರನ್ನೇ ಅವಲಂಭಿಸಬೇಕಾದ ಅನಿವಾರ್ಯತೆಯನ್ನು ನಾಗರಿಕರು ಎದುರಿಸುತ್ತಿದ್ದಾರೆ. ಕಾಲಕಾಲಕ್ಕೆ ಒಳಚರಂಡಿ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸದೆ ನಿರ್ಲಕ್ಷ್ಯ ವಹಿಸಿದ ಪರಿಣಾಮ ಇಂದ್ರಾಣಿ ನದಿ ಈ ದುಃಸ್ಥಿತಿಗೆ ತಲುಪಿದೆ. ಒಳಚರಂಡಿ ವ್ಯವಸ್ಥೆ ಸಮರ್ಪಕವಾಗಬೇಕಾದರೆ ಮೂಲಸೌಕರ್ಯಗಳನ್ನು ಮಾಡುವುದು ಅತೀ ಅಗತ್ಯವಾಗಿದೆ.

Advertisement

ಪರಿಶೀಲಿಸಿ ಕ್ರಮ
ಇಂದ್ರಾಣಿ ನದಿಗೆ ತ್ಯಾಜ್ಯ ನೀರು ಸೇರುತ್ತಿರುವ ಬಗ್ಗೆ ಗಮನಕ್ಕೆ ಬಂದಿದೆ. ಇದನ್ನು ತಡೆಯುವ ಸಾಧ್ಯತೆಗಳ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಒಳಚರಂಡಿ ವ್ಯವಸ್ಥೆಗಳ ಅಭಿವೃದ್ಧಿಗೆ ಕ್ರಮ ಕೈಗೊಂಡು ನದಿ ನೀರು ಮಾಲಿನ್ಯ ತಡೆಗೆ ಕ್ರಮ ಜರಗಿಸಲಾಗುವುದು.
-ಆನಂದ ಕಲ್ಲೋಳಿಕರ್‌, ಪೌರಾಯುಕ್ತರು, ಉಡುಪಿ ನಗರಸಭೆ

-ಪುನೀತ್‌ ಸಾಲ್ಯಾನ್‌

Advertisement

Udayavani is now on Telegram. Click here to join our channel and stay updated with the latest news.

Next