Advertisement

“10ನೇ ತರಗತಿ’ಯ ಜೀವನ ಪಾಠ

09:03 AM Jul 12, 2019 | Lakshmi GovindaRaj |

ಪ್ರತಿಯೊಬ್ಬರ ವಿದ್ಯಾರ್ಥಿ ಜೀವನದಲ್ಲೂ “10ನೇ ತರಗತಿ’ ಎನ್ನುವುದು ಮಹತ್ವದ ಘಟ್ಟವಾಗಿರುತ್ತದೆ. ಹೈಸ್ಕೂಲ್‌ನಿಂದ ಕಾಲೇಜು ಮೆಟ್ಟಿಲು ಹತ್ತುವ ತವಕದಲ್ಲಿರುವ “10ನೇ ತರಗತಿ’ ಯ ಹರೆಯದ ಮನಸ್ಸುಗಳಲ್ಲಿ ಹತ್ತಾರು ಯೋಚನೆಗಳು, ಕನಸುಗಳು ಮನೆ ಮಾಡಿರುತ್ತವೆ. ಈಗ ಇದೇ ವಿಷಯವನ್ನು ಇಟ್ಟುಕೊಂಡು “10ನೇ ತರಗತಿ’ ಎನ್ನುವ ಹೆಸರಿನಲ್ಲೇ ಚಿತ್ರವೊಂದು ತೆರೆಗೆ ಬರುತ್ತಿದೆ.

Advertisement

“10ನೇ ತರಗತಿ’ಯ ಹುಡುಗರಲ್ಲಿ ತಾನು ಡಾಕ್ಟರ್‌ ಆಗಬೇಕು, ಇಂಜಿನಿಯರ್‌ ಆಗಬೇಕು, ಪೊಲೀಸ್‌ ಆಗಬೇಕು ಹೀಗೆ… ಜೀವನದಲ್ಲಿ ಮುಂದೇನಾಗಬೇಕು ಎನ್ನುವ ಬಗ್ಗೆ ಹತ್ತಾರು ಕನಸುಗಳಿರುತ್ತವೆ. ಇದರ ನಡುವೆಯೇ, ಅವರಲ್ಲಿ ಒಂದು ನವಿರಾದ ಪ್ರೀತಿ – ಸ್ನೇಹ ಕೂಡ ಮನಸ್ಸಿನಲ್ಲಿ ಮೂಡಿರುತ್ತದೆ. ಇಂತಹ ವಿಷಯಗಳ ಸುತ್ತ “10ನೇ ತರಗತಿ’ ಚಿತ್ರ ನಡೆಯುತ್ತದೆ. ಯುವ ನಿರ್ದೇಶಕ ಮಹೇಶ್‌ ಸಿಂಧುವಳ್ಳಿ ಇಂಥದ್ದೊಂದು ವಿಷಯವನ್ನು ಚಿತ್ರವಾಗಿಸಿ ತೆರೆಮೇಲೆ ತರುತ್ತಿದ್ದಾರೆ.

ಡಿಪ್ಲೊಮಾ ಇನ್‌ ಫಿಲ್ಮಿ ಕೋರ್ಸ್‌ ಮಾಡಿರುವ ಮತ್ತು ಓಂ ಪ್ರಕಾಶ್‌ ರಾವ್‌ ಮೊದಲಾದ ನಿರ್ದೇಶಕರ ಬಳಿ ಕೆಲಸ ಮಾಡಿದ ಅನುಭವವಿರುವ ಮಹೇಶ್‌, ಮೊದಲ ಬಾರಿ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ತಮ್ಮ ಚೊಚ್ಚಲ ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಮಹೇಶ್‌ ಸಿಂಧುವಳ್ಳಿ, “ಕೆಲ ವರ್ಷಗಳ ಹಿಂದೆ ನಡೆದ, ನಾನು ಕಣ್ಣಾರೆ ಕಂಡ ನೈಜ ಘಟನೆಯೊಂದನ್ನ ಇಟ್ಟುಕೊಂಡು ಅದಕ್ಕೆ ಸೂಕ್ತವೆನಿಸುವ ಹಾಗೆ ಚಿತ್ರಕಥೆ ಬರೆದು ಈ ಚಿತ್ರವನ್ನು ತೆರೆಗೆ ತರುತ್ತಿದ್ದೇವೆ.

ಪೋಷಕರು ಮಕ್ಕಳ ವಿದ್ಯಾಭ್ಯಾಸಕ್ಕೆ ಕಷ್ಟಪಟ್ಟು ದುಡಿದು ಶುಲ್ಕವನ್ನು ಪಾವತಿಸುತ್ತಾರೆ. ಇದನ್ನು ನಾವುಗಳು ಅರ್ಥ ಮಾಡಿಕೊಳ್ಳಬೇಕೆಂಬ ಸಂದೇಶವನ್ನು ಈ ಚಿತ್ರದಲ್ಲಿ ಹಾಸ್ಯದ ಮೂಲಕ ಹೇಳಲಾಗಿದೆ’ ಎಂದು ಚಿತ್ರದ ಬಗ್ಗೆ ವಿವರಣೆ ಕೊಡುತ್ತಾರೆ. “10ನೇ ತರಗತಿ’ ಚಿತ್ರವನ್ನು ಮೈಸೂರು, ಹೆಚ್‌.ಡಿ ಕೋಟೆ, ಚಾಮರಾಜನಗರದ ಸುತ್ತಮುತ್ತಲಿನ ಸುಂದರ ತಾಣಗಳಲ್ಲಿ ಚಿತ್ರೀಕರಿಸಲಾಗಿದೆ. ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು, ರುದ್ರಿರಿಕ್‌ ಹಾಡುಗಳಿಗೆ ಸಾಹಿತ್ಯ ಮತ್ತು ಸಂಗೀತ ನೀಡಿದ್ದಾರೆ.

ತೇಜಸ್‌, ಅಂಜಲಿ, ಶಿವು ಚಾವಡಿ, ರಾಜಶೇಖರ್‌, ಪುಟ್ಟರಾಜು, ಜಗದೀಶ್‌, ಭವ್ಯ ಮುಂತಾದ ನವ ಕಲಾವಿದರು “10ನೇ ತರಗತಿ’ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಉಳಿದಂತೆ ಚಿತ್ರಕ್ಕೆ ಸೆಂದಿಲ್‌ ಕುಮಾರ್‌, ಎಸ್‌. ನಿರೀಕ್ಷಿತ್‌ ಛಾಯಾಗ್ರಹಣ, ರಂಜೀತ್‌ ಸೇತು ಸಂಕಲನ ಕಾರ್ಯ ನಿರ್ವಹಿಸಿದ್ದಾರೆ. ಹೆಚ್‌.ಡಿ ಕೋಟೆಯ ಬೆಟ್ಟದ ಬೀಡು ವಾಸಿ ವೃತ್ತಿಯಲ್ಲಿ ರೈತರಾಗಿರುವ ಬಿ.ಕೆ ಮಂಜುನಾಥ್‌ ಚಿತ್ರರಂಗದ ಮೇಲಿನ ಆಸಕ್ತಿಯಿಂದ ಈ ಚಿತ್ರಕ್ಕೆ ಬಂಡವಾಳ ಹೂಡಿ ನಿರ್ಮಿಸಿದ್ದಾರೆ.

Advertisement

ಇತ್ತೀಚೆಗೆ “10ನೇ ತರಗತಿ’ ಚಿತ್ರದ ಹಾಡುಗಳು ಹೊರಬಂದಿದ್ದು, ಸದ್ಯ ಚಿತ್ರದ ಪ್ರಮೋಶನ್‌ ಕೆಲಸಗಳಲ್ಲಿ ನಿರತವಾಗಿರುವ ಚಿತ್ರತಂಡ, ಇದೇ ಜು. 19ರಂದು “10ನೇ ತರಗತಿ’ ಚಿತ್ರವನ್ನು ಬಿಡುಗಡೆ ಮಾಡುವ ಯೋಜನೆ ಹಾಕಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next