Advertisement

ಲಕ್ಷ ಲಕ್ಷ ಖರ್ಚಾದ್ರೂ ಗ್ರಂಥಾಲಯ ಅಲಕ್ಷ

01:03 PM Sep 30, 2019 | Suhan S |

ನರೇಗಲ್ಲ: ಜ್ಞಾನಾರ್ಜನೆಗೆ ನೆರವಾಗಬೇಕಾದ ಗ್ರಂಥಾಲಯದ ನೂತನ ಕಟ್ಟಡ ಕಾಮಗಾರಿ ಅರ್ಧಕ್ಕೆ ನಿಂತು ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ.

Advertisement

ಸಾರ್ವಜನಿಕರ ಗ್ರಂಥಾಲಯ ಕಟ್ಟಡ ಕಾಮಗಾರಿಗೆ ಮೂರ್‍ನಾಲ್ಕು ವರ್ಷಗಳ ಹಿಂದೆಯೇ ಆಗಿನ ಶಾಸಕರು ಚಾಲನೆ ನೀಡಿದ್ದರು. ಆದರೆ ಇಂದಿಗೂ ಕಟ್ಟಡ ಪೂರ್ಣಗೊಂಡಿಲ್ಲ. ಪಪಂ 2014-15 ಸಾಲಿನ ಎಸ್‌ಎಫ್‌ಸಿ ಅನುದಾನದಲ್ಲಿ ಗ್ರಂಥಾಲಯ ಕಟ್ಟಡ ನಿರ್ಮಾಣಕ್ಕೆ ಅಂದಾಜು 7 ಲಕ್ಷ 21 ಸಾವಿರ ರೂ. ಮತ್ತು 2015-16ನೇ ಸಾಲಿನ ಮುಂದುವರಿದ ಕಾಮಗಾರಿಗೆ 5 ಲಕ್ಷ 13 ಸಾವಿರ ರೂ. ಮಂಜೂರು ಮಾಡಲಾಗಿತ್ತು.

ನಿರೀಕ್ಷೆಯಂತೆ ಎಲ್ಲವೂ ನೆರವೇರಿದ್ದರೆ ಮತ್ತು ಬಿಡುಗಡೆಯಾದ ಅನುದಾನ ಸಮರ್ಪಕವಾಗಿ ಸದ್ಬಳಕೆಯಾಗಿದ್ದರೆ ಪಟ್ಟಣದಲ್ಲಿ ಈ ವೇಳೆಗೆ ಸಕಲ ಸೌಲಭ್ಯವುಳ್ಳ ಉತ್ತಮ ಗ್ರಂಥಾಲಯ ನಿರ್ಮಾಣವಾಗಬೇಕಿತ್ತು. ಆದರೆ, ವರ್ಷಗಳೇ ಕಳೆದರೂ ಗ್ರಂಥಾಲಯ ನಿರ್ಮಾಣಗೊಳ್ಳುವ ಲಕ್ಷಣ ಮಾತ್ರ ಗೋಚರಿಸುತ್ತಿಲ್ಲ. ಗ್ರಂಥಾಲಯವನ್ನು ಈಗಲೂ ಪಪಂ ಪಕ್ಕದಲ್ಲಿರುವ ಬ್ರಿಟಿಷರ ಕಾಲದ ಹಳೆಯ ಕಟ್ಟಡದಲ್ಲಿ ನಡೆಸಲಾಗುತ್ತಿದೆ. ಇಕ್ಕಟ್ಟಾದ ಸ್ಥಳದಲ್ಲೇ ಪುಸ್ತಕ ಮತ್ತು ಪ್ರತಿಕೆಗಳ ರಾಶಿ ಮಧ್ಯೆಯೇ ಓದುಗರು ಪತ್ರಿಕೆಗಳನ್ನು ಓದಬೇಕು. ಪುಸ್ತಕಗಳ ಜೋಡಣೆ ಸಮರ್ಪಕವಾಗಿಲ್ಲ. ಕುಡಿಯುವ ನೀರಿನ ವ್ಯವಸ್ಥೆ, ಆಸನ ವ್ಯವಸ್ಥೆ ಸೇರಿದಂತೆ ಮೂಲ ಸೌಕರ್ಯಗಳ ಕೊರತೆ ಇದೆ.

ಪಪಂ ವ್ಯಾಪ್ತಿಯಲ್ಲಿ 2 ಪದವಿ ಕಾಲೇಜು, 3 ಪಿಯು ಕಾಲೇಜು, 4 ಪ್ರೌಢಶಾಲೆ, 10ಕ್ಕೂ ಹೆಚ್ಚು ಹಿರಿಯ ಪ್ರಾಥಮಿಕ ಶಾಲೆಗಳಿವೆ. ಸುಮಾರು 26 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಪಟ್ಟಣದಲ್ಲಿದೆ. ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುವವರಿಗೆ ಮತ್ತು ಜ್ಞಾನವೃದ್ಧಿಗಾಗಿ ಓದುವ ವಿದ್ಯಾರ್ಥಿಗಳಿಗೆ ಗ್ರಂಥಾಲಯ ತುಂಬಾ ಉಪಯುಕ್ತವಾಗಿದೆ. ಆದರೆ, ಪಟ್ಟಣದಲ್ಲಿ ಸೂಕ್ತ ಗ್ರಂಥಾಲಯ ವ್ಯವಸ್ಥೆ ಇಲ್ಲ. ಗ್ರಂಥಾಲಯ ಕಟ್ಟಡ ನಿರ್ಮಾಣಕ್ಕೆಂದೇ ಒಟ್ಟು 13 ಲಕ್ಷ 34 ಸಾವಿರ ರೂ. ಅನುದಾನ ಬಿಡುಗಡೆಯಾದರೂ ಗ್ರಂಥಾಲಯ ಕಟ್ಟಡ ಕಾಮಗಾರಿ ಮಾತ್ರ ಪೂರ್ಣಗೊಂಡಿಲ್ಲ.

ಅನೈತಿಕ ಚಟುವಟಿಕೆ ತಾಣ: ಪಟ್ಟಣದ ಹೃದಯ ಭಾಗದಲ್ಲಿರುವ ಗಣೇಶ ದೇವಸ್ಥಾನದ ಪಕ್ಕದಲ್ಲಿ ನಿರ್ಮಾಣಗೊಳ್ಳುತ್ತಿರುವ ಗ್ರಂಥಾಲಯ ಕಟ್ಟಡದಲ್ಲಿ ಬೆಳಗ್ಗೆಯಿಂದ ಸಂಜೆ ವರೆಗೆ ಜೂಜಾಟ, ಮದ್ಯಸೇವನೆ ಸೇರಿದಂತೆ ಇತರೆ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ. ಆದರೆ ಪಪಂ ಅ ಧಿಕಾರಿಗಳು ಮಾತ್ರ ಕಣ್ಣು ತೆರೆದು ನೋಡುತ್ತಿಲ್ಲ. ಕಟ್ಟಡದ ಪಕ್ಕದಲ್ಲಿ ಮೂತ್ರಾಲಯ ಇರುವುದರಿಂದ ಕಟ್ಟಡದ ಒಳಗೆ ಹೋದರೆ ವಾಸನೆ ನಾರುತ್ತಿದೆ.

Advertisement

ಸುವ್ಯವಸ್ಥೆಯ ಗ್ರಂಥಾಲಯದ ಸಮಸ್ಯೆಯಿಂದ ಓದುಗರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಕೂಡಲೇ ಜನಪ್ರತಿನಿಧಿಗಳು, ಅಧಿಕಾರಿಗಳು ಗ್ರಂಥಾಲಯಕ್ಕೆ ಹೆಚ್ಚು ಆದ್ಯತೆ ಜತೆಗೆ ಅನುದಾನ ಕಲ್ಪಿಸುವ ಮೂಲಕ ಓದುಗರಿಗೆ ಅನುಕೂಲ ಮಾಡಬೇಕು.- ಎಂ.ಎಸ್‌. ಧಡೇಸೂರಮಠ, ನಿವೃತ್ತ ಶಿಕ್ಷಕ

 ಗ್ರಂಥಾಲಯಕ್ಕೆ ನಿವೇಶನ ಹಾಗೂ ಪಪಂ ವತಿಯಿಂದ ಅನುದಾನ ಬಿಡುಗಡೆ ಮಾಡಿ ಕಟ್ಟಡ ನಿರ್ಮಿಸಲಾಗಿದೆ. ಈ ಹಿಂದೆ ಜಿಲ್ಲಾ ಗ್ರಂಥಾಲಯ ಇಲಾಖೆ ಅ ಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕಟ್ಟಡ ವೀಕ್ಷಣೆ ಮಾಡಿದ್ದಾರೆ. ಆದರೆ, ಮುಂದಿನ ಕಾಮಗಾರಿಗೆ ಹಾಗೂ ಸಣ್ಣ ಪುಟ್ಟ ಕೆಲಸಗಳಿಗೆ ಗ್ರಂಥಾಲಯ ಇಲಾಖೆಯೇ ಅನುದಾನ ಬಿಡುಗಡೆ ಮಾಡಬೇಕು.– ಎಸ್‌.ಎಸ್‌. ಹುಲ್ಲಮ್ಮನವರ, ಪಪಂ ಮುಖ್ಯಾಧಿಕಾರಿ

 

ಸಿಕಂದರ ಎಂ. ಆರಿ

Advertisement

Udayavani is now on Telegram. Click here to join our channel and stay updated with the latest news.

Next