Advertisement

ವಿಚಾರಣೆಯಿಂದ ಹಿಂದೆ ಸರಿಯಲು ನ್ಯಾಯಮೂರ್ತಿಗೇ ಅಪರಿಚಿತನ ಪತ್ರ

12:42 PM Jun 06, 2017 | Team Udayavani |

ಬೆಂಗಳೂರು: ರಾಜಕೀಯ ಸಂತ್ರಸ್ಥರ ಅನುಕಂಪದ ಆಧಾರದಲ್ಲಿ ಸುಂದರೇಶ್‌ ಎಂಬುವವರಿಗೆ ಶ್ರೀಗಂಧ ಕಾವಲ್‌ನ ಬಳಿ ಮಂಜೂರಾಗಿರುವ 4 ಎಕರೆ ಜಮೀನು ವಿವಾದದ ಅರ್ಜಿ ವಿಚಾರಣೆಯಿಂದ ಹಿಂದೆ ಸರಿಯುವಂತೆ ನ್ಯಾಯಮೂರ್ತಿ ಎ.ಎನ್‌ ವೇಣುಗೋಪಾಲಗೌಡ ಅವರಿಗೆ ಅಪರಿಚಿತ ವ್ಯಕ್ತಿಯಿಂದ ಪತ್ರವೊಂದು ಬಂದಿದೆ.

Advertisement

ಜಮೀನು ವಾಪಾಸ್‌ ಪಡೆಯುವ ಸಂಬಂಧ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಶೋಕಾಸ್‌ ನೋಟೀಸ್‌ ರದ್ದುಗೊಳಿಸುವಂತೆ ಕೋರಿ ಸುಂದರೇಶ್‌ ಸಲ್ಲಿಸಿರುವ ಅರ್ಜಿ ವಿಚಾರಣೆ ವೇಳೆ ಸೋಮವಾರ ನ್ಯಾ. ಎ.ಎನ್‌ ವೇಣುಗೋಪಾಲಗೌಡ ಈ ವಿಚಾರ ಬಹಿರಂಗಪಡಿಸಿದರು. “ಈ ರೀತಿ ಪತ್ರವೊಂದು ಮುಖ್ಯನ್ಯಾಯಮೂರ್ತಿ ಹಾಗೂ ನನಗೆ ಬಂದಿದೆ. ನನ್ನ ಸೇವಾ ಅವಧಿಯಲ್ಲಿ ಈ ರೀತಿಯ ಬೆಳವಣಿಗೆ ಎಂದಿಗೂ ನಡೆದಿರಲಿಲ್ಲ,’ ಎಂದು ಅವರು ಬೇಸರವ್ಯಕ್ತಪಡಿಸಿದರು.

ಮಲ್ಲೇಶ್ವರ 13ನೇಕ್ರಾಸ್‌ನ ವಿಳಾಸದಿಂದ ಸ್ವಾಮಿನಾಥನ್‌ ಎಂಬುವವರಿಂದ ಬಂದಿರುವ ಪತ್ರದಲ್ಲಿ, “ಈ ಷೋಕಾಸ್‌ ನೋಟೀಸ್‌ ರದ್ದುಪಡಿಸುವ ವಿಚಾರವಾಗಿ ಈಗಾಗಲೇ ಸುಧೀರ್ಘ‌ ವಾದ -ಪ್ರತಿವಾದ ಆಲಿಸಿದರೂ ಸೂಕ್ತ ಆದೇಶ ನೀಡುವ ಹಂತಕ್ಕೆ ಬಂದಿರುವುದಿಲ್ಲ. ಅಲ್ಲದೆ, ತಮಗೆ ನ್ಯಾಯಯುತವಾದ ತೀರ್ಪು ಸಿಗುವ ಭರವಸೆಯಿಲ್ಲ. ಹೀಗಾಗಿ ಈ ಅರ್ಜಿ ವಿಚಾರಣೆಯಿಂದ ತಾವು ಹಿಂದೆ ಸರಿಯಬೇಕು ಎಂಬ ಒತ್ತಾಯ ಪತ್ರದಲ್ಲಿದೆ,’ ಎನ್ನಲಾಗಿದೆ.

ಈ ವಿಚಾರವನ್ನು ರಾಜ್ಯಸರ್ಕಾರದ ಪರ ಹಾಜರಿದ್ದ ಅಡ್ವೋಕೇಟ್‌ ಜನರಲ್‌ ಮಧುಸೂಧನ್‌ ಆರ್‌. ನಾಯಕ್‌ ಹಾಗೂ ಪ್ರತಿವಾದಿಗಳ ಪರ ವಕೀಲರ ಗಮನಕ್ಕೆ ತಂದ ನ್ಯಾಯಮೂರ್ತಿಗಳು, “ನನ್ನ ಸೇವಾ ಅವಧಿಯಲ್ಲಿ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ 55 ಸಾವಿರ ಅರ್ಜಿಗಳ ವಿಚಾರಣೆ ನಡೆಸಿದ್ದೇನೆ.

ಪ್ರಾಮಾಣಿಕವಾಗಿ, ನಿಸ್ಪಕ್ಷಪಾತವಾಗಿ ಆದೇಶ ನೀಡಿದ್ದೇನೆ. ನಿವೃತ್ತಿಯ ಅಂಚಿನಲ್ಲಿರುವ ನನಗೆ ಬಂದಿರುವ ಪತ್ರ ಬೇಸರ ತರಿಸಿದೆ,’ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ಅಡ್ವೋಕೇಟ್‌ ಜನರಲ್‌, “ಇಂಥ ಕ್ಷುಲ್ಲಕ ತಂತ್ರಗಳನ್ನು ಕೆಲವರು ಅನುಸರಿಸುತ್ತಾರೆ. ಈ ಪತ್ರದ ವಿಚಾರವನ್ನು ಮರೆತುಬಿಡಿ,’ ಎಂದು ನ್ಯಾಯಮೂರ್ತಿಗಳಿಗೆ ಮನವಿ ಮಾಡಿದರು.

Advertisement

ಷೋಕಾಸ್‌ ನೋಟೀಸ್‌ ಬಗ್ಗೆ ಸುಧೀರ್ಘ‌ ವಾದ ಮಂಡಿಸಿದ ಅಡ್ವೊಕೇಟ್‌ ಜನರಲ್‌, ಸುಂದರೇಶ್‌ಗೆ ಭೂಮಿ ಮಂಜೂರಾತಿಯಲ್ಲಿ ನಡೆದ ಕೆಲವು ಲೋಪಗಳು, ಹಾಗೂ ಸರ್ಕಾರಕ್ಕೆ ವಂಚಿಸಿ ಭೂಮಿ ಪಡೆದುಕೊಂಡಿರುವ ವಿಚಾರಗಳನ್ನು ನ್ಯಾಯಪೀಠದ ಗಮನಕ್ಕೆ ತಂದರು. ವಾದ ಆಲಿಸಿದ ನ್ಯಾಯಪೀಠ ವಿಚಾರಣೆಯನ್ನು ಜೂನ್‌ 8ಕ್ಕೆ ಮುಂದೂಡಿತು.

ಏನಿದು “ಭೂ” ವಿವಾದ?: ರಾಜಕೀಯ ಸಂತ್ರಸ್ಥರ ಕೋಟಾದಲ್ಲಿ ದಿವಂಗತ ಸೂರ್ಯನಾರಾಯಣ ರಾವ್‌ ಅವರ ವಾರಸುದಾರಿಕೆ ಆಧಾರದಲ್ಲಿ ಅವರ ಪುತ್ರ  ಸುಂದರೇಶ್‌ಗೆ  ಸಚಿವ ಸಂಪುಟದ ನಿರ್ಣಯದಂತೆ ರಾಜ್ಯಸರ್ಕಾರ, ಏಪ್ರಿಲ್‌ 22  2013ರಲ್ಲಿ  ಶ್ರೀಗಂಧ ಕಾವಲ್‌ನ ಸರ್ವೇ ನಂ 129 ರಲ್ಲಿ 4 ಎಕರೆ ವ್ಯವಸಾಯ ಭೂಮಿ ಮಂಜೂರು ಮಾಡಿತ್ತು. 

ಬಿಬಿಎಂಪಿ ವ್ಯಾಪ್ತಿಯಲ್ಲಿಯೇ ಬರುವ ಈ 4 ಎಕರೆ ಜಮೀನಿಗೆ ಸಂಬಂಧಿಸಿದಂತೆ ಕಳೆದ ಫೆಬ್ರವರಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಣಯ ಕೈಗೊಳ್ಳಲಾಗಿತ್ತು. ಅಲ್ಲದೆ, ಶ್ರೀ ಗಂಧಕಾವಲ್‌ನಲ್ಲಿ ನೀಡಿರುವ ಜಮೀನು ವಾಪಾಸ್‌ ಪಡೆದು, ನಗರದ ಹೊರಹೊಲಯದಲ್ಲಿ ಜಮೀನು ಮಂಜೂರು ಮಾಡುವ ಬಗ್ಗೆ ಅಭಿಪ್ರಾಯ ತಿಳಿಸುವಂತೆ ಅಡ್ವೋಕೇಟ್‌ ಜನರಲ್‌ ಬಳಿ ರಾಜ್ಯಸರ್ಕಾರ ಸಲಹೆ ಕೇಳಿತ್ತು. ಅಡ್ವೋಕೇಟ್‌ ಜನರಲ್‌ ಅವರ ಅಭಿಪ್ರಾಯ ಆಧರಿಸಿ ಸುಂದರೇಶ್‌ ಅವರಿಗೆ 2013ರಲ್ಲಿ ಭೂಮಿ ಮಂಜೂರು ಮಾಡಿದ ಆದೇಶವನ್ನು ಹಿಂದಕ್ಕೆ ಪಡೆಯುವ ಬಗ್ಗೆ ಕಂದಾಯ ಇಲಾಖೆ ಮಾರ್ಚ್‌ 21ರಂದು ಶೋಕಾಸ್‌ ನೋಟೀಸ್‌ ಜಾರಿಗೊಳಿಸಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next