Advertisement

ಉಪ ಚುನಾವಣೆಯಲ್ಲಿ ಪಕ್ಷ ದ್ರೋಹಿಗಳಿಗೆ ತಕ್ಕಪಾಠ: ಸಿದ್ದು

09:24 PM Oct 19, 2019 | Lakshmi GovindaRaju |

ಮೈಸೂರು: ಪಕ್ಷ ದ್ರೋಹ ಮಾಡಿ ಬಿಜೆಪಿಗೆ ಹೋಗಿರುವ ಅನರ್ಹ ಶಾಸಕರಿಗೆ ಉಪ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲು ಕಾರ್ಯಕರ್ತರು ತುದಿಗಾಲಲ್ಲಿ ನಿಂತಿದ್ದು, ಉಪ ಚುನಾವಣೆ ನಡೆಯುವ 15 ಕ್ಷೇತ್ರಗಳ ಪೈಕಿ ಬಹುತೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಪಕ್ಷ ಗೆಲ್ಲಲಿದೆ ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

Advertisement

ಸುಪ್ರೀಂಕೋರ್ಟ್‌ನಲ್ಲಿ ಅ.22ರಂದು ಅನರ್ಹ ಶಾಸಕರ ವಿಚಾರ ಏನಾಗುತ್ತೋ ಗೊತ್ತಿಲ್ಲ. ಆದರೆ, ಶಾಸಕ ಸ್ಥಾನದಿಂದ ಅನರ್ಹಗೊಂಡಿರುವವರ 17 ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳಿಗೆ ಚುನಾವಣಾ ಆಯೋಗ ಡಿ.5ಕ್ಕೆ ಉಪ ಚುನಾವಣೆ ನಿಗದಿ ಮಾಡಿದೆ. ಎಲ್ಲಾ ಕ್ಷೇತ್ರಗಳನ್ನೂ ಗೆದ್ದರೂ ಆಶ್ಚರ್ಯವಿಲ್ಲ ಎಂದರು.

ಕಾಂಗ್ರೆಸ್‌ ಟಾರ್ಗೆಟ್‌: ಬಿಜೆಪಿಯವರು ಕಾಂಗ್ರೆಸ್‌ ನವರನ್ನೇ ಟಾರ್ಗೆಟ್‌ ಮಾಡುತ್ತಿದ್ದಾರೆ. ಬಿಜೆಪಿ ವಿರೋಧಿಗಳನ್ನು ಐಟಿ, ಇಡಿ, ಸಿಬಿಐ ಬಿಟ್ಟು ಹೆದರಿಸುತ್ತಿದ್ದಾರೆ. 60 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್‌ ಇಂಥ ನೀಚ ರಾಜಕಾರಣ ಮಾಡಲಿಲ್ಲ. ಇದು ಪ್ರಜಾಪ್ರಭುತ್ವಕ್ಕೆ ಮಾರಕ, ಹಾಗಿದ್ದರೆ ಬಿಜೆಪಿಯವರೆಲ್ಲ ಪ್ರಾಮಾಣಿಕರಾ? ಅವರ ಮನೆಮೇಲೆಕೇ ದಾಳಿಗಳಾಗುತ್ತಿಲ್ಲ ಎಂದು ಪ್ರಶ್ನಿಸಿದರು.

ಪ್ರಧಾನಿ ಮೋದಿ ದೇಶದ ಆರ್ಥಿಕ ಪರಿಸ್ಥಿತಿ ಬಗ್ಗೆ ಮಾತನಾಡದೆ, ಭಾವನಾತ್ಮಕ ವಿಷಯಗಳನ್ನು ಹೇಳಿ ಜನರನ್ನು ಕೆರಳಿಸುತ್ತಿದ್ದಾರೆ. ದೇಶದ ಜಿಡಿಪಿ ಶೇ. 6.9 ಇರಬೇಕಿತ್ತು. ಆದರೆ, ಶೇ.5ಕ್ಕೆ ಇಳಿದಿದೆ ಎಂದು ಸರ್ಕಾರವೇ ಹೇಳುತ್ತೆ. ವಾಸ್ತವವಾಗಿ ಜಿಡಿಪಿ ಶೇ.3.5 ಮಾತ್ರ ಇದೆ. ದೇಶದಲ್ಲಿ ಹಸಿವಿನ ಸಂಖ್ಯೆ ಹೆಚ್ಚುತ್ತಿದೆ.

ನಿರುದ್ಯೋಗ ತಾಂಡವವಾಡುತ್ತಿದೆ. ಇವೆಲ್ಲ ಮೋದಿ ಕೊಡುಗೆಗಳು. ಈ ಸತ್ಯವನ್ನು ಹೇಳಿದರೆ ಸಿದ್ದರಾಮಯ್ಯನನ್ನು ನೋಡಿಕೊಳ್ಳುತ್ತೇವೆ ಎನ್ನುತ್ತಾರೆ. ನೋಟು ನಿಷೇಧ ಶೇ.28 ಜಿಎಸ್‌ಟಿ ಹೇರಿಕೆಯಿಂದ ಉದ್ಯಮಗಳು ಹಾಳಾಗುತ್ತಿವೆ. ಆದರೆ, ಉದ್ಯಮಿಗಳು ಈ ಬಗ್ಗೆ ಮಾತನಾಡಿದರೆ ಐಟಿ ದಾಳಿ ಮಾಡಿಸುತ್ತಾರೆ ಎಂದು ಹೆದರಿದ್ದಾರೆ ಎಂದು ಹೇಳಿದರು.

Advertisement

ಹುಣಸೂರಿನಲ್ಲಿ ಮಂಜುನಾಥ್‌ ಅಭ್ಯರ್ಥಿ: ಹುಣಸೂರು ಕ್ಷೇತ್ರದಲ್ಲಿ ಎಚ್‌.ಪಿ.ಮಂಜುನಾಥ್‌ ನಮ್ಮ ಅಭ್ಯರ್ಥಿ. ಕಳೆದ ಚುನಾವಣೆಯಲ್ಲಿ ಕಡಿಮೆ ಅಂತರದಿಂದ ಸೋತಿದ್ದರು. ಲೋಕಸಭಾ ಚುನಾವಣೆಯಲ್ಲಿ ಹುಣಸೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಹೆಚ್ಚು ಮತಗಳು ಬಂದಿದೆ.

ಹೀಗಾಗಿ ಮೈಸೂರು ಜಿಲ್ಲೆಯ ಪಕ್ಷದ ಎಲ್ಲ ಮುಖಂಡರು, ಕಾರ್ಯಕರ್ತರು ಹುಣಸೂರು ಕ್ಷೇತ್ರಕ್ಕೆ ತೆರಳಿ ಪಕ್ಷದ ಗೆಲುವಿಗೆ ಶ್ರಮಿಸಬೇಕು. 2006ರ ಚಾಮುಂಡೇಶ್ವರಿ ಕ್ಷೇತ್ರದ ಉಪ ಚುನಾವಣೆಯಂತೆ ಹುಣಸೂರು ಉಪ ಚುನಾವಣೆ ನಡೆಯಬೇಕು ಎಂದು ಸಿದ್ದರಾಮಯ್ಯ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next