ತರೀಕೆರೆ: ಗ್ರಾಮಸ್ಥರೇ ಇರಿಸಿದ್ದ ಬೋನಿನಲ್ಲಿ ಚಿರತೆಯೊಂದು ಶನಿವಾರ ತಡರಾತ್ರಿ ಬಂಧಿಯಾದ ಘಟನೆ ಅಜ್ಜಂಪುರ ಬಳಿಯ
ಗರಗದಹಳ್ಳಿ ಗ್ರಾಮದಲ್ಲಿ ನಡೆದಿದೆ. ಕೆಲ ದಿನಗಳ ಹಿಂದಷ್ಟೇ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಒಂದು ಚಿರತೆ ಬಿದ್ದಿತ್ತು.
ಈಗ ಮತ್ತೂಂದು ಚಿರತೆ ಸೆರೆ ಸಿಕ್ಕಿದೆ.
ಗ್ರಾಮದ ಸುತ್ತಮುತ್ತ ಸುಮಾರು ನಾಲ್ಕೈದು ಚಿರತೆಗಳು ಓಡಾಡುತ್ತಿದ್ದವು.ಕಾಡಿನಿಂದ ಆಗಾಗ ಸುತ್ತಮುತ್ತಲಿನ
ಗ್ರಾಮಗಳ ಹತ್ತಿರ ಇವು ಬರುತ್ತಿದ್ದವು. ಇದರಿಂದ ಗ್ರಾಮಸ್ಥರು ಕಂಗಾಲಾಗಿದ್ದರು.
ಗ್ರಾಮಕ್ಕೆ ಹತ್ತಿರವಿರುವ ಕಾಡಿನಲ್ಲಿ ಹಾಗೂ ಊರಿನ ಸಮೀಪವೇ ಚಿರತೆ ಸಂಚರಿ ಸುತ್ತಿರುವುದನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದ ಕೆಲವರು ಇದನ್ನು ಸೆರೆ ಹಿಡಿ ಯುವಂತೆ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದ್ದರು. ಆದರೆ ಅರಣ್ಯ ಇಲಾಖೆ ಯವರು ಯಾವುದೇ ಕ್ರಮಕ್ಕೆ ಮುಂದಾಗಿರಲಿಲ್ಲ. ಗ್ರಾಮಸ್ಥರು ಚಿರತೆ ಸೆರೆ ಹಿಡಿಯುವಂತೆ ಪದೇಪದೆ ಮನವಿ ಮಾಡಿದರೂ ಅಧಿಕಾರಿಗಳು ಸ್ಪಂದಿಸಿರಲಿಲ್ಲ ಎನ್ನಲಾಗಿದೆ. ಇದರಿಂದ ಬೇಸತ್ತ ಗರಗದ ಹಳ್ಳಿ ಗ್ರಾಮಸ್ಥರು ಅಜ್ಜಂಪುರಲ್ಲಿರುವ ಅರಣ್ಯ ಇಲಾಖೆ ಕಚೇರಿಗೆ ತೆರಳಿ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿ ಬೋನು ಪಡೆದು ಊರಿಗೆ ತಂದಿದ್ದರು. ನಂತರ ಅದನ್ನು ಚಿರತೆಗಳು ಓಡಾಡುವ ಅರಣ್ಯ ಪ್ರದೇಶದಲ್ಲಿ ಇರಿಸಿದ್ದರು.