ಹುಣಸೂರು: ಸಾಕು ನಾಯಿಗಳನ್ನು ಬೇಟೆಯಾಡಲು ಬಂದಿದ್ದ ಚಿರತೆಮರಿಯನ್ನು ಅರಣ್ಯ ಇಲಾಖೆ ಸೆರೆ ಹಿಡಿದಿರುವ ಘಟನೆ ತಾಲೂಕಿನ ಬಿಳಿಕೆರೆ ಹೋಬಳಿಯ ಚಿಕ್ಕಬೀಚನಹಳ್ಳಿಯಲ್ಲಿ ಭಾನುವಾರ ಮುಂಜಾನೆ ನಡೆದಿದೆ. ಗ್ರಾಮದ ಮಹದೇವರಿಗೆ ಸೇರಿದ ಜೋಳದ ಮೆದೆಯಲ್ಲಿ ನಾಯಿ ಮರಿಗಳನ್ನು ಹಾಕಿತ್ತು.
ಶನಿವಾರ ರಾತ್ರಿ ಅದನ್ನು ಹಿಡಿಯಲು ಬಂದ ವೇಳೆ ನಾಯಿಮರಿಗಳು ಬೊಗಳಿದ ಶಬ್ದಕ್ಕೆ ಮನೆಯವರು ನೋಡಲಾಗಿ ಚಿರತೆ ಕಂಡು ಕೂಗಾಡಿದ್ದಾರೆ. ಜನರನ್ನು ಕಂಡ ಚಿರತೆಮರಿ ಅಲ್ಲಿಯೇ ಉಳಿಯಿತು. ತಪ್ಪಿಸಿಕೊಳ್ಳದಂತೆ ಗ್ರಾಮಸ್ಥರು ಸುತ್ತ ಕಲ್ಲುಹಾಕಿ, ಚೀಲ ಮುಚ್ಚಿ ಬಂಧಿಸಿ, ಬೆಳಗ್ಗೆ ವರೆಗೆ ಕಾವಲು ಕಾಯ್ದಿದ್ದಾರೆ. ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಅಷ್ಟರಲ್ಲಾಗಲೇ ನಾಲ್ಕು ನಾಯಿಗಳನ್ನು ಕೊಂದು ಹಾಕಿತ್ತು.
ಭಾನುವಾರ ಮುಂಜಾನೆ ಪ್ರಾದೇಶಿಕ ಅರಣ್ಯ ವಿಭಾಗದ ಎ.ಸಿ.ಎಫ್. ಸೋಮಯ್ಯ, ಆರ್.ಎಫ್.ಓ. ಸಂದೀಪ್, ನಾಗರಹೊಳೆ ವನ್ಯಜೀವಿ ವಿಭಾಗದ ಪಶುವೈದ್ಯ ಡಾ.ಮುಜೀಬ್ ರೆಹಮಾನ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು.
ವೈದ್ಯ ಮುಜೀಬ್ ರೆಹಮಾನ್ ಮೆದೆಯ ಬಳಿ ಮಲಗಿಕೊಂಡೇ ಅರವಳಿಕೆ ಚುಚ್ಚುಮದ್ದು ನೀಡಿ ಜ್ಞಾನ ತಪ್ಪಿಸಿದ ನಂತರ ಗ್ರಾಮಸ್ಥರ ಸಹಕಾರದಲ್ಲಿ ಮೆದೆಯನ್ನು ಕೆಡವಿ ಚಿರತೆಯನ್ನು ಬೋನಿನಲ್ಲಿ ಬಂಧಿಯಾಗಿಸಿದರು. ಅರಣ್ಯ ಸಿಬ್ಬಂದಿ ಚಿರತೆ ಹಿಡಿಯಲು ಗ್ರಾಮಕ್ಕೆ ಬಂದಿರುವ ವಿಷಯ ಹರಡುತ್ತಿದ್ದಂತೆ ಸುತ್ತಮುತ್ತಲ ಗ್ರಾಮಸ್ಥರು ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ್ದರು.
ಮೃಗಾಲಯದಲ್ಲಿ ಆಶ್ರಯ: ಬಲಮುಂಗಾಲು ಗಾಯಗೊಂಡಿದ್ದ ಚಿರತೆಯನ್ನು ಚಿಕಿತ್ಸೆ ನೀಡುವ ಸಲುವಾಗಿ ಮೈಸೂರು ಮೃಗಾಲಯಕ್ಕೆ ಸಾಗಿಸಿ ಆಶ್ರಯ ಕಲ್ಪಿಸಲಾಗಿದೆ ಎಂದು ಆರ್.ಎಫ್.ಓ. ಸಂದೀಪ್ ತಿಳಿಸಿದ್ದಾರೆ.