ಕಲಿಕೆಯೇ ರಾಜ ಮಾರ್ಗ.
Advertisement
ಇಂದಿನ ಶಿಕ್ಷಣದ ಪರಿಕಲ್ಪನೆ ಕೇವಲ ಪರೀಕ್ಷೆ, ಅಂಕ, ದರ್ಜೆಗೆ ಸೀಮಿತಗೊಂಡಿದೆ. ಹೊಸದರ ಕಲಿಕೆ, ಮನನ, ಚಿಂತನ ಮೂಲೆಗುಂಪಾಗಿದೆ. ನೋಡಿ, ಈ ಬಾರಿ ನಮ್ಮ ಶಾಲೆ/ಕಾಲೇಜಿಗೆ ನೂರಕ್ಕೆ ನೂರು ಫಲಿತಾಂಶ ಬಂದಿದೆ. ನೀವೂ ನಿಮ್ಮ ಮಕ್ಕಳನ್ನು ಸೇರಿಸಿ ಅವರನ್ನು ಬುದ್ಧಿವಂತರನ್ನಾಗಿಸಿ ಎಂದು ವಿದ್ಯಾಸಂಸ್ಥೆಗಳು ರಾಜಾರೋಷವಾಗಿ ಹೇಳಿಕೊಳ್ಳುತ್ತವೆ.
Related Articles
Advertisement
ಭಾವೀ ಪ್ರಜೆಗಳಾದ ಮಕ್ಕಳಿಗೆ ಬಾಯಿಪಾಠದಿಂದ ಯಾವ ಉಪಯೋಗವೂ ಆಗದು. ಉರು ಹೊಡೆದರೆ ಒಂದಷ್ಟು ಅಧಿಕ ಅಂಕಗಳು ಬರಬಹುದು. ಅಪ್ರಯೋಜಕ ಅಂಕಗಳನ್ನು ಕಟ್ಟಿಕೊಂಡು ಏನು ಮಾಡುವುದು? ಒಂದು ಗ್ರಾಮಾಫೋನ್ ಯಂತ್ರ ಸಹ ಮುದ್ರಿಸಿದ್ದನ್ನು ಪನರುಚ್ಛರಿಸುತ್ತದೆ. ಉರು ಹಚ್ಚುವುದು ನಿಯಮಿತವಾಗಿ ಪಾಠಗಳನ್ನು ಅಭ್ಯಸಿಸುತ್ತಿಲ್ಲ ಎನ್ನುವುದರ ಸಂಕೇತ. ಬಾಯಿಪಾಠದಿಂದ ಪರೀಕ್ಷೆಯಲ್ಲಿ ಉತ್ತಮ ದರ್ಜೆಯ ಫಲಿತಾಂಶ ಗಳಿಸುವುದನ್ನು ‘ಇಲಿಗಳ ಓಟ ಸ್ಪರ್ಧೆ’ಗೆ ಹೋಲಿಸಬಹುದು. ಸ್ಪರ್ಧೆಯಲ್ಲಿ ಗೆದ್ದರೂ ಇಲಿ ಇಲಿಯೇ! ಜ್ಞಾಪಕಶಕ್ತಿಯನ್ನು ಮೇಧಾಶಕ್ತಿಯೆಂದು ವೈಭವೀಕರಿಸದೆ ಅದರ ಬದಲಿಗೆ ಲವಲೇಶದಷ್ಟಾದರೂ ಆಲೋಚಿಸುವುದನ್ನು ಶಿಕ್ಷಕರು ಮಕ್ಕಳಿಗೆ ಕಲಿಸಿದರೆ ವಿದ್ಯಾರ್ಜನೆಯ ದಿಶೆಯೇ ಸುಧಾರಣೆಯತ್ತ ವಾಲುತ್ತದೆ. ಮರು ಓದು, ವಿಮರ್ಶಾತ್ಮಕ ಗುಣಕ್ಕೆ ಎಂಥ ಕಠಿಣ ಪಾಠವೂ ಮಣಿಯುವುದು.
ಪಡೆದ ಅಂಕ ಅರಿವಿನ ಮಾಪನವಾಗಲಿ ಪ್ರತಿಭೆಯಾಗಲಿ ಅಲ್ಲವೆನ್ನುವುದು ತಿಳಿದಿದ್ದರೂ ಅದರ ಆಧಾರದ ಮೇಲೆ ಸಾಮರ್ಥ್ಯವನ್ನು ನಿಷ್ಕರ್ಷಿಸುವುದು ನಡೆದೇ ಇದೆ. ಮತ್ತೂಂದು ಮುಖ್ಯ ಸಂಗತಿಯೆಂದರೆ ಬಾಯಿಪಾಠದಿಂದ ನೇರ ಪ್ರಶ್ನೆಗಳಿಗೆ ಉತ್ತರಿಸಬಹುದು. ಒಂದು ವೇಳೆ ಪ್ರಶ್ನೆಗಳನ್ನು ತಿರುಚಿದರೆ ಎದಿರಿಸಲಾಗದು! ಬಾಯಿಪಾಠ ಅರ್ಥವಾಗದ ಗಡಿಬಿಡಿ ಮಾತು. ಉರು ಹಚ್ಚುವ ಎದ್ದುಕಾಣುವ ನ್ಯೂನತೆ ಗೊತ್ತೇ ಇದೆ. ಒಂದು ಪ್ಯಾರದಲ್ಲಿ ಒಂದು ಪದ, ಪದೋಕ್ತಿ ಮರೆತರೆ ಇಡೀ ಪ್ಯಾರಕ್ಕೆ ಗ್ರಹಣ ಹಿಡಿದಂತೆಯೇ! ಗಣಿತ ಅಥವಾ ಭೌತಶಾಸ್ತ್ರಕ್ಕೆ ಸಂಬಂಧಿಸಿದ ಸೂತ್ರಗಳನ್ನು ಉರು ಹಚ್ಚಬಹುದು. ಆದರೆ ಅವನ್ನು ಎಲ್ಲಿ, ಹೇಗೆ ಅನ್ವಯಿಸಬೇಕೆಂದು ತಿಳಿಯದೆ ತೊಳಲಾಟ ಕಟ್ಟಿಟ್ಟ ಬುತ್ತಿ. ಸೂತ್ರಗಳ ಹಿಂದಿನ ಪರಿಕಲ್ಪನೆಗಳನ್ನು ಗ್ರಹಿಸಿದರೆ ಅವನ್ನು ನೆನಪಿನಲ್ಲಿಡಬೇಕಾದ ಅಗತ್ಯವೇ ಇಲ್ಲದಷ್ಟು ಒಲಿಯುತ್ತವೆ. ವಿವಿಧ ಸೂತ್ರಗಳನ್ನು ಬೆಸೆಯುವ ಕೌಶಲ್ಯ ಸಹ ಲಭಿಸುತ್ತದೆ. ಹೂಜಿಗೆ ಕಲ್ಲುಗಳನ್ನು ಹಾಕಿ ನೀರು ಮೇಲಕ್ಕೆ ದಕ್ಕಿಸಿಕೊಂಡ ಕಾಗೆಯನ್ನು ಇನ್ನೊಂದು ಅನುಕರಿಸುತ್ತದೆ. ನೀರು ಸಿಗದೆ ನಿರಾಶೆಗೊಳ್ಳುತ್ತದೆ. ನನಗೂ ನಿನಗೂ ವ್ಯತ್ಯಾಸವೆಂದರೆ ಹೂಜಿಯ ತಳದಲ್ಲಿ ನೀರಿರುವುದನ್ನು ನಾನು ಖಾತರಿ ಪಡಿಸಿಕೊಂಡೆ. ನೀನೋ ವೃಥಾ ನನ್ನನ್ನು ಹಿಂಬಾಲಿಸಿದೆ ಎಂದಿತಂತೆ ಜಾಣ ಕಾಗೆ ಇನ್ನೊಂದಕ್ಕೆ! ಉರು ಹೊಡೆದಿದ್ದು ಪರೀಕ್ಷೆವರೆಗೆ, ಗ್ರಹಿಸಿದ್ದು ಜೀವನ ಪರ್ಯಂತ. ಎದಿರುಗೊಳ್ಳಬೇಕಾದ ಬದುಕು ಒಬ್ಬೊಬ್ಬರದೂ ಒಂದೊಂದು ಬಗೆ. ಸವಾಲು, ಸಮಸ್ಯೆ, ನೋವು, ರೋಗ ರುಜಿನ, ಹೋರಾಟ. ಅವಕ್ಕೆ ಕಂಡುಕೊಳ್ಳಬಹುದಾದ ಪರಿಹಾರ, ಸಾಂತ್ವನ ಎಲ್ಲವೂ ಭಿನ್ನ ಭಿನ್ನ. ಬದುಕೆಂಬ ಪ್ರಶ್ನೆಪತ್ರಿಕೆಯನ್ನು ಎಲ್ಲರೂ ಏಕಾಂಗಿಯಾಗಿಯೇ ಉತ್ತರಿಸಬೇಕು. ಪ್ರಾಯೋಗಿಕ ಮತ್ತು ಪೂರಕ ಜ್ಞಾನ ಜೊತೆಜೊತೆಯಾಗಿ ಕೈಗೂಡದಿದ್ದರೆ ‘ಭತ್ತದ ಮರ’, ‘ಎತ್ತು ಈತು, ಕೊಟ್ಟಿಗೆಗೆ ಕಟ್ಟು’ ಎನ್ನುವ ಎಡವಟ್ಟುಗಳು!
ನಾಳಿನ ತರಗತಿಗೆ ಚೆನ್ನಾಗಿ ಪೂರ್ವ ತಯಾರಿ ನಡೆಸಿ ಬೋಧನೆಗೆ ಅಣಿಯಾಗುವುದು ಶಿಕ್ಷಕರ ಪಾಲಿಗೆ ಆದರ್ಶಕ್ಕಿಂತಲೂ ಅನಿವಾರ್ಯ ಅಗತ್ಯ. ಸಿದ್ಧತೆ ಅವರಲ್ಲಿ ಆತ್ಮವಿಶ್ವಾಸ ಪುಟಿದೆಬ್ಬಿಸೀತು.
ಬೋಧನೆ ಕಳೆಗುಂದಿದರೆ ಅದು ಯಾವ ಜಾಡು ಹಿಡಿದೀತೆನ್ನಲು ಒಂದು ವೃತ್ತಾಂತ ನೆನಪಾಗುತ್ತದೆ. ತಮ್ಮ ತರಗತಿಯಲ್ಲಿ ನೋಟ್ಸ್ ಬರೆದುಕೊಳ್ಳದ ವಿದ್ಯಾರ್ಥಿಯೊಬ್ಬನನ್ನು ಗಣಿತ ಮಾಸ್ತರು ತರಾಟೆಗೈದರಂತೆ. ಅದಕ್ಕವ ನಮ್ಮ ತಂದೆ ನಿಮ್ಮ ವಿದ್ಯಾರ್ಥಿಯಾಗಿದ್ದರು ಸಾರ್ ಎಂದು ಉತ್ತರಿಸುತ್ತಾನೆ. ಗಳಿಗೆ ನಂತರ ಆತನೇ, ‘ಸಾರ್, ಅದರಲ್ಲಿ ಒಂದೆರಡು ಲೆಕ್ಕ ತಪ್ಪಿದೆ’ ಎನ್ನುವನು. ಮಾಸ್ತರು ಇರಬಹುದು, ನೋಟ್ಸ್ ನನ್ನ ತಂದೆಯವರದಾದ್ದರಿಂದ ಎಂದು ವಾದಕ್ಕೆ ಮಂಗಳ ಹಾಡುತ್ತಾರೆ! ಅಭ್ಯಾಸದ ಉದ್ದೇಶವೇ ಅರ್ಥೈಸಿಕೊಳ್ಳುವುದು. ಹಾಗೆ ಅರ್ಥೈಸಿಕೊಂಡಿದ್ದನ್ನು ಮುಂದೆ ಸಂದರ್ಭಾನುಯುಕ್ತ ಬಳಸುವುದು. ಶೈಕ್ಷಣಿಕ ವರ್ಷದ ಪ್ರಾರಂಭದಿಂದಲೇ ಪಾಠ ಗ್ರಹಿಸುತ್ತಿದ್ದರೆ ರಾತ್ರಿ ನಿದ್ದೆಗೆಟ್ಟು ಓದಬೇಕಿಲ್ಲ, ಮನೆ ಮನೆಗೆ ಒಂದೊಂದು ವಿಷಯದ ಪಾಠಕ್ಕೆ ಅಲೆಯುವಂತಿಲ್ಲ. ನಾಳೆ ಪರೀಕ್ಷೆ ಎನ್ನುವಾಗ ‘ಸಮರ ಸಮಯದ ಶಸ್ತ್ರಾಭ್ಯಾಸ’ವೂ ಬೇಡ.
ಬಿಂಡಿಗನವಿಲೆ ಭಗವಾನ್