Advertisement

ಹಳ್ಳ ಹಿಡಿದ ಫ‌ಸಲು ವಿಮೆಯ ಅಸಲಿ ಕಥೆ

01:17 PM Sep 25, 2017 | |

ರೈತರಿಗೆ ನರವಾಗಬೇಕು. ಬೆಳೆ ನಷ್ಟದಿಂದ ಅವರು ಕಂಗಾಲಾಗದಂತೆ ನೋಡಿಕೊಳ್ಳಬೇಕು ಎಂಬ ಉದ್ದೇಶದಿಂದ ಪ್ರಧಾನಮಂತ್ರಿ ಫ‌ಸಲು ವಿಮಾ ಯೋಜನೆಯನ್ನು ಜಾರಿಗೆ ತರಲಾಯಿತು. ಆದರೆ, ಬ್ಯಾಂಕ್‌ ಅಧಿಕಾರಿಗಳು ಬೇಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ ಇಡೀ ಯೋಜನೆಯೇ ಹಳ್ಳ ಹಿಡಿಯುವಂತೆ ಮಾಡಿಬಿಟ್ಟರು..
        
ಪ್ರಧಾನ ಮಂತ್ರಿ ಫ‌ಸಲು ವಿಮಾ ಯೋಜನೆ ಜಾರಿಯಾದದ್ದು ಮುಂಗಾರು 2016ರಲ್ಲಿ. ಈಗ, ಒಂದು ವರ್ಷದ ನಂತರ ಏನಾಗಿದೆ? ಆ ಹಂಗಾಮಿನಲ್ಲಿ ಫ‌ಸಲು ವಿಮಾ ಕಂತು ಪಾವತಿಸಿದ್ದ ಹಾಗೂ ಫ‌ಸಲು ನಷ್ಟವಾದ ಹಲವಾರು ರೈತರು ತಮಗೆ ಸಿಗಬೇಕಾದ ಪರಿಹಾರದ ಹಣಕ್ಕಾಗಿ ಇನ್ನೂ ಕಾಯುತ್ತಿದ್ದಾರೆ.

Advertisement

ಉದಾಹರಣೆಗೆ, ಹರಿಯಾಣದ ಸೋನಿಪತ್‌ ಜಿಲ್ಲೆಯ ಕೊಹ್ಲಾ ಗ್ರಾಮದ ರಾಂನಿವಾಸರ ಪ್ರಕರಣ ಕಣ್ಣೆದುರಿಗಿದೆ.  ಏಪ್ರಿಲ್ 2016ರ ಅಕಾಲಿಕ ಮಳೆಯಿಂದಾಗಿ ಹೊಲದಲ್ಲಿ ಬೆಳೆದು ನಿಂತಿದ್ದ ಗೋಧಿ ಫ‌ಸಲನ್ನೆಲ್ಲ ಕಳೆದುಕೊಂಡು ಕಂಗಾಲಾಗಿದ್ದರು ರಾಂನಿವಾಸ್‌. ಮುಂದಿನ ಬೆಳೆಯಿಂದಾದರೂ ಆದಾಯ ಗಳಿಸುವ ನಿರೀಕ್ಷೆ ಅವರದು. ಅದಕ್ಕಾಗಿ ಬ್ಯಾಂಕಿಗೆ ಹೋಗಿ, 2016ರ ಮುಂಗಾರು ಹಂಗಾಮಿನಲ್ಲಿ ನಾಲ್ಕು ಹೆಕ್ಟೇರ್‌ ಹೊಲದಲ್ಲಿ ಭತ್ತ ಬೆಳೆಯಲು ಸಾಲ ಪಡೆದು, ಫ‌ಸಲು ವಿಮೆಗೆ ಕಂತು ಕಟ್ಟಿದರು. ಆ ಹಂಗಾಮಿನಲ್ಲಿಯೂ ಮತ್ತೆ ಅಕಾಲಿಕ ಮಳೆ. “ಆ ಭತ್ತದ ಬೆಳೆಯಲ್ಲಿಯೂ ಶೇ.75ರಷ್ಟು ಫ‌ಸಲು ಕಳೆದುಕೊಂಡೆ. ಆದರೆ ವಿಮಾ ಪರಿಹಾರ ಸಿಗುತ್ತದೆಂಬ ವಿಶ್ವಾಸದಲ್ಲಿದ್ದೆ. ಇದೀಗ 2017ರ ಮುಂಗಾರು ಮುಗಿಯುತ್ತಿದೆ. ಆದರೆ, ನನ್ನ ವಿಮಾ ಪರಿಹಾರದ ಹಣ ಯಾವಾಗ ಸಿಗುತ್ತದೆಂದೇ ಗೊತ್ತಿಲ್ಲ’ ಎಂಬುದು ರಾಂನಿವಾಸರ ಹತಾಶೆಯ ಮಾತು.

ರಾಂನಿವಾಸರಂತೆ ಈ ಹೊಸ ಫ‌ಸಲು ವಿಮಾ ಯೋಜನೆ ನಂಬಿ ಭ್ರಮನಿರಸನಕ್ಕೆ ಒಳಗಾದ ರೈತರ ಸಂಖ್ಯೆ ಸಾವಿರಾರು. ಮುಂಚೆ ಚಾಲ್ತಿಯಲ್ಲಿದ್ದ ಈ ಎರಡು ಬೆಳೆವಿಮಾ ಯೋಜನೆಗಳ ಬದಲಾಗಿ ಪ್ರಧಾನಮಂತ್ರಿ ಫ‌ಸಲು ವಿಮಾ ಯೋಜನೆ ಜಾರಿಯಾಗಿತ್ತು: ರಾಷ್ಟ್ರೀಯ ಕೃಷಿ ವಿಮಾ ಯೋಜನೆ ಮತ್ತು ಪರಿಷ್ಕೃತ ರಾಷ್ಟ್ರೀಯ ಕೃಷಿ ವಿಮಾ ಯೋಜನೆ. ರಾಂನಿವಾಸರ ಹಳ್ಳಿಯಲ್ಲಿ ಯಾವ ರೈತನಿಗೂ ಫ‌ಸಲು ವಿಮೆಯ ಪರಿಹಾರದ ಹಣ ಸಿಕ್ಕಿಲ್ಲ. ನಮ್ಮಿಂದಾದ ಎಲ್ಲ ಪ್ರಯತ್ನ ಮಾಡಿದ್ದೇವೆ. ಬ್ಯಾಂಕಿಗೆ ಹೋಗಿ ದೂರು ಕೊಟ್ಟಿದ್ದೇವೆ; ಕೃಷಿ ಇಲಾಖೆಗೂ ದೂರು ನೀಡಿದ್ದೇವೆ; ಪ್ರತಿಭಟನೆ ಮಾಡಿದ್ದೇವೆ. ಆದರೂ ಫ‌ಸಲು ವಿಮೆಯ ಪರಿಹಾರ ಸಿಕ್ಕಿಲ್ಲ ಎಂದು ಹತಾಶೆಯಿಂದ ಹೇಳುತ್ತಾರೆ ರೈತರು. 

ಪ್ರಧಾನ ಮಂತ್ರಿ ಫ‌ಸಲು ವಿಮಾ ಯೋಜನೆಯ ಮುಖ್ಯ ಅಂಶಗಳೇನು? ಇದರಲ್ಲಿ ಒಂದು ಹಳ್ಳಿ ವಿಮಾ ಯೋಜನೆಯ ಮೂಲ ಘಟಕ. ಪ್ರತಿಯೊಂದು ಹಂಗಾಮಿನ ಆರಂಭದಲ್ಲಿ ಆಯಾ ರಾಜ್ಯ ಸರಕಾರವು ಒಂದು ಅಧಿಕೃತ ಪ್ರಕಟಣೆ ಹೊರಡಿಸಬೇಕು: ಪ್ರತಿಯೊಂದು ಮೂಲ ಘಟಕದ ಮುಖ್ಯ ಬೆಳೆಗಳ ಕನಿಷ್ಠ ಫ‌ಸಲಿನ ಮಟ್ಟ ಘೋಷಿಸಬೇಕು.  ಕಳೆದ ಏಳು ವರ್ಷಗಳಲ್ಲಿ ಆ ಬೆಳೆಗಳ ಸರಾಸರಿ ಫ‌ಸಲಿನ ಆಧಾರದಿಂದ.  ಆ ಬೆಳೆಗಳ ಎಕರೆವಾರು ಫ‌ಸಲಿನ ವಿಮಾ ರಕ್ಷಣೆಯ ಮೊತ್ತವನ್ನೂ (ಸಮ್‌ ಇನ್ಷೊರ್ಡ್‌) ಪ್ರಕಟಿಸಬೇಕು. ರೈತರ ಎಷ್ಟು ಫ‌ಸಲು ನಷ್ಟವಾಗಿದೆ ಎಂದು ಅಂದಾಜು ಮಾಡಲಿಕ್ಕಾಗಿ, ರಾಜ್ಯದ ಕೃಷಿ ಇಲಾಖೆಯ ಅಧಿಕಾರಿಗಳು ಮತ್ತು ಬೆಳೆ ವಿಮಾ ಕಂಪೆನಿಯ ಸ್ಥಳೀಯ ಕಚೇರಿಯ ಅಧಿಕಾರಿಗಳು ಸದಸ್ಯರಾಗಿರುವ ಅಧಿಕೃತ ತಂಡವು ಪ್ರತಿ ಹಳ್ಳಿಯಲ್ಲಿ ಕನಿಷ್ಠ ನಾಲ್ಕು ಹೊಲಗಳಿಗೆ ಭೇಟಿ ನೀಡಬೇಕು ಮತ್ತು ಅಲ್ಲಿ ಸಣ್ಣ ಜಾಗದಲ್ಲಿ ಬೆಳೆ ಕಟಾವು ಪ್ರಯೋಗ (ಕ್ರಾಪ್‌ ಕಟ್ಟಿಂಗ್‌ ಎಕ್ಸೆಪರಿಮೆಂಟ್‌) ನಡೆಸಬೇಕು. ಇದರ ಆಧಾರದಿಂದ, ಆ ಮೂಲ ಘಟಕದಲ್ಲಿ ಫ‌ಸಲು ವಿಮಾ ಯೋಜನೆಗೆ ನೋಂದಾಯಿಸಿದ ರೈತರಿಗೆ ಪರಿಹಾರ ನೀಡಬೇಕೇ ಬೇಡವೇ ಎಂದು ನಿರ್ಧರಿಸಲಾಗುತ್ತದೆ. ಯಾವ ಪ್ರಮಾಣದಲ್ಲಿ (ಅಂದರೆ ಶೇಕಡಾ 70, 80 ಅಥವಾ 90) ಪರಿಹಾರ ನೀಡಬೇಕೆಂಬುದಕ್ಕೆ ಅಲ್ಲಿ ದಾಖಲಿಸಿದ ಫ‌ಸಲಿನ ನಷ್ಟವೇ ಆಧಾರ.

ಯಾವ್ಯಾವ ರೈತರ ಹೊಲದಲ್ಲಿ ಬೆಳೆ ಕಟಾವು ಪ್ರಯೋಗ ನಡೆಸಲಾಯಿತು ಎಂಬ ಪಟ್ಟಿ ನೀಡುತ್ತದೆ ಸರಕಾರ. ಆದರೆ, ಅದರ ಸತ್ಯಾಸತ್ಯತೆ ಪರೀಕ್ಷಿಸಿದಾಗ ಬೆಳಕಿಗೆ ಬಂದ ವಿಷಯ: ಸರಕಾರದ ಅಧಿಕಾರಿಗಳು ಆ ಹೊಲಗಳಿಗೆ ಬೆಳೆ ಹಂಗಾಮಿನಲ್ಲಿ ಭೇಟಿ ನೀಡಿ, ಅಂದಾಜು ಫ‌ಸಲು ಎಷ್ಟು ಬಂದೀತೆಂದು ವಿಚಾರಿಸಿದ್ದು ನಿಜ; ಆದರೆ, ಕಟಾವಿನ ಸಮಯದಲ್ಲಿ ಅಲ್ಲಿಗೆ ಭೇಟಿ ನೀಡಿರಲೂ ಇಲ್ಲ, ಕಡ್ಡಾಯ ಬೆಳೆ ಕಟಾವು ಪ್ರಯೋಗ ನಡೆಸಿರಲೂ ಇಲ್ಲ. ನಿದರ್ಶನಕ್ಕೆ, ಆ ಪಟ್ಟಿಯಲ್ಲಿ ಕೊಹ್ಲಾ ಗ್ರಾಮದ ಸಂದೀಪ್‌ ಸಿಂಗ್‌ರ ಹೆಸರಿದೆ. ಯಾವ ಅಧಿಕಾರಿಯೂ ಬೆಳೆ ಕಟಾವಿನ ಸಮಯದಲ್ಲಿ ನನ್ನ ಹೊಲಕ್ಕೆ ಬಂದಿಲ್ಲ. ಹಾಗಾಗಿ ನನಗೆ ಒಂದು ರೂಪಾಯಿ ಪರಿಹಾರವೂ ಸಿಗೋದಿಲ್ಲ ಎಂಬುದು ಮೂರು ಲಕ್ಷ ರೂಪಾಯಿ ಭತ್ತದ ಫ‌ಸಲು ನಷ್ಟ ಅನುಭವಿಸಿರುವ ಸಂದೀಪ್‌ ಸಿಂಗ್‌ರ ಅಳಲು. 

Advertisement

ಹರಿಯಾಣದ ಗೋಹನ ಗ್ರಾಮದಲ್ಲಿಯೂ ಇದೇ ಕತೆ. ಇದನ್ನು ಹರಿಯಾಣ ಕೃಷಿ ಇಲಾಖೆಯ ಅಧಿಕಾರಿಗಳೂ ಖಚಿತ ಪಡಿಸುತ್ತಾರೆ. ಎಲ್ಲ ಕಡೆಯೂ ಬೆಳೆ ಕಟಾವು ನಡೆಯುತ್ತಿರುತ್ತದೆ. ಆ 10- 12 ದಿನಗಳಲ್ಲಿ ಪ್ರತೀ ಜಿÇÉೆಯಲ್ಲಿ ದಿನಕ್ಕೆ 200 -300 ಬೆಳೆ ಕಟಾವು ಪ್ರಯೋಗ ಮಾಡಬೇಕು. ಅದಕ್ಕೆ ಬೇಕಾದ ಸಿಬ್ಬಂದಿ ನಮ್ಮಲ್ಲಿಲ್ಲ ಎನ್ನುತ್ತಾರೆ ವಿಮಾ ಕಂಪೆನಿಯ ಅಧಿಕಾರಿ. ಹರಿಯಾಣ ಕೃಷಿ ಇಲಾಖೆಯ ಅಧಿಕಾರಿಗಳು ಸೆಪ್ಟೆಂಬರ್‌ 2016ರಲ್ಲಿ ಸಾವಿರಾರು ಬೆಳೆ ಕಟಾವು ಪ್ರಯೋಗ ನಡೆಸಬೇಕಾದ ಕೆಲಸದ ಒತ್ತಡದ ವಿರುದ್ಧ ಮುಷ್ಕರ ನಡೆಸಿದ್ದರು!

ಅಧಿಕಾರಿಗಳು ಮಾಡಿರುವ ಅವಾಂತರಗಳು ಒಂದೆರಡಲ್ಲ. ರೈತರು ಬೆಳೆದಿರೋದು ಒಂದು ಬೆಳೆ. ಆದರೆ ಬ್ಯಾಂಕ್‌ ಅಧಿಕಾರಿಗಳು ಫ‌ಸಲು ವಿಮಾ ಕಂತು ಪಾವತಿಸಿರೋದು ಇನ್ನೊಂದು ಬೆಳೆಗೆ! ಸೋನಿಪತ್‌ ಜಿಲ್ಲೆಯ ಚಿಚªನ ಗ್ರಾಮದ ಸರಪಂಚ ಸಂದೀಪ್‌ ಮಲಿಕ್‌ ನೀಡುವ ಮಾಹಿತಿ ಹೀಗಿದೆ- ನಮ್ಮ ಗ್ರಾಮದಲ್ಲಿ ಬಹುಪಾಲು ರೈತರು ಬೆಳೆದಿರೋದು ಕಬ್ಬು. ಆದರೆ, ಬ್ಯಾಂಕಿನವರು ಫ‌ಸಲು ವಿಮಾ ಕಂತು ಪಾವತಿಸಿರೋದು ಬೇರೆ ಯಾವುದೋ ಬೆಳೆಗೆ. ಹರಿಯಾಣದ ಬಧೇರಿ ಗ್ರಾಮದ ಈಶ್ವರ ಸಿಂಗ್‌ರ ಪಾಡು ನೋಡಿ. 2016ರ ಮುಂಗಾರಿನಲ್ಲಿ ಅವರು ಬೆಳೆಸಿದ್ದು ಹತ್ತಿ ಮತ್ತು ಸಣ್ಣಜೋಳ. ಆದರ ಬ್ಯಾಂಕಿನವರು ಅವರ ಫ‌ಸಲು ವಿಮಾ ಕಂತು ಪಾವತಿಸಿದ್ದು ಭತ್ತದ ಬೆಳೆಗೆ! ಇದ್ಯಾಕೆ ಎಂದು ಈಶ್ವರ್‌ ಬ್ಯಾಂಕ್‌ ಅಧಿಕಾರಿಗಳನ್ನು ಕೇಳಿದಾಗ ಅವರಿತ್ತ ಉತ್ತರ: ಕಿಸಾನ್‌ ಕ್ರೆಡಿಟ್‌ ಕಾರ್ಡಿನಲ್ಲಿ ಹಲವು ವರುಷಗಳ ಮುಂಚೆ ದಾಖಲಿಸಿದ್ದ ಮಾಹಿತಿಯನ್ನೇ ಈಗಲೂ ಫ‌ಸಲು ವಿಮಾ ಅರ್ಜಿಯಲ್ಲಿ ಬರೆಯಲಾಯಿತು.  ರೈತರಿಗೆ ಫ‌ಸಲು ವಿಮಾ ಕಂತು ಪಾವತಿ ಬಗ್ಗೆ ರಶೀದಿ ಅಥವಾ ವಿಮಾ ಪಾಲಿಸಿ ನೀಡುವುದೇ ಇಲ್ಲ. ಆದ್ದರಿಂದ, ಇಂತಹ ಅವಾಂತರಗಳು ಮತ್ತೆಮತ್ತೆ ನಡೆಯುತ್ತಲೇ ಇರುತ್ತವೆ. ರೈತ ಬೆಳೆಸಿದ ಬೆಳೆಗೆ ವಿಮಾ ಕಂತು ಪಾವತಿಸದಿದ್ದರೆ ಆತನಿಗೆ ವಿಮಾ ಪರಿಹಾರ ಸಿಗುವುದೇ ಇಲ್ಲ.

ಪ್ರಧಾನ ಮಂತ್ರಿ ಫ‌ಸಲು ವಿಮಾ ಯೋಜನೆಯನ್ನು ಗ್ರಾಮೀಣ ಪ್ರದೇಶಗಳಲ್ಲಿ ಪರಿಣಾಮಕಾರಿಯಾಗಿ ಜಾರಿ ಮಾಡಲು ಅಗತ್ಯವಾದ ಸಿಬ್ಬಂದಿ ವಿಮಾ ಕಂಪೆನಿಗಳಲ್ಲಿ ಇಲ್ಲ. ದೇಶದ ಉದ್ದಗಲದಲ್ಲಿ ವಿಮಾ ಕಂಪೆನಿಗಳು ತನಿಖೆ ನಡೆಸದ ಕಾರಣ ಫ‌ಸಲು ವಿಮಾ ಪರಿಹಾರ ಪಾವತಿಸದಿರುವ ಸಾವಿರಾರು ಪ್ರಕರಣಗಳಿವೆ. ಗಮನಿಸಿ: 2016ರ ಮುಂಗಾರು ಹಂಗಾಮಿನ ಎಲ್ಲ ಫ‌ಸಲು ವಿಮಾ ಕ್ಲೈಮುಗಳನ್ನು ಫೆಬ್ರವರಿ 2017ರ ಮೂರನೇ ವಾರದ ಮುನ್ನ ಇತ್ಯರ್ಥ ಪಡಿಸಬೇಕಾಗಿತ್ತು. ಆದರೆ, ಏಪ್ರಿಲ… 2017ರಲ್ಲಿ ಪರಿಶೀಲಿಸಿದಾಗ, (ಒಟ್ಟು 21 ರಾಜ್ಯಗಳಲ್ಲಿ) 14 ರಾಜ್ಯಗಳಲ್ಲಿ ಸಾವಿರಾರು ಫ‌ಸಲು ವಿಮಾ ಕ್ಲೈಮುಗಳು ಇತ್ಯರ್ಥವಾಗದೆ ಬಾಕಿಯಿದ್ದವು. ನಿಜ ಹೇಳಬೇಕೆಂದರೆ, ಏಪ್ರಿಲ… 2017ರಲ್ಲಿ ಹಾಗೆ ಬಾಕಿಯಿದ್ದ ಫ‌ಸಲು ವಿಮಾ ಕ್ಲೈಮುಗಳ ಪ್ರಮಾಣ ಶೇಕಡಾ 68ಕ್ಕಿಂತ ಅಧಿಕ!

ಒಟ್ಟಾರೆಯಾಗಿ, ರೈತರ ಹಿತ ಕಾಪಾಡಬೇಕಾಗಿದ್ದ ಪ್ರಧಾನಮಂತ್ರಿ ಫ‌ಸಲು ವಿಮಾ ಯೋಜನೆಯು ಸರಿಯಾಗಿ ಜಾರಿಯಾಗದೆ ರೈತರಿಗೆ ಅನ್ಯಾಯವಾಗುತ್ತಿದೆ. ರೈತರು ಈ ಬಗ್ಗೆ ದೂರು ಕೊಡೋಣವೆಂದರೆ ದೂರು ನಿರ್ವಹಣಾ ವ್ಯವಸ್ಥೆಯೂ ಸರಿಯಾಗಿ ಜಾರಿಯಾಗಿಲ್ಲ! 

ಅಡ್ಡೂರು ಕೃಷ್ಣ ರಾವ್‌

Advertisement

Udayavani is now on Telegram. Click here to join our channel and stay updated with the latest news.

Next