Advertisement

ಅಸಲಿ ಚುನಾವಣೆ ಇಂದಿನಿಂದ ಶುರು

12:06 PM Apr 17, 2018 | Team Udayavani |

ಬೆಂಗಳೂರು: ಚುನಾವಣಾ ಪ್ರಕ್ರಿಯೆ ಮಂಗಳವಾರದಿಂದ (ಏ.16) ಆರಂಭವಾಗಲಿದೆ. ಭಾನುವಾರ ಹಾಗೂ ರಜೆ ದಿನಗಳನ್ನು ಹೊರತುಪಡಿಸಿ ಬೆಳಗ್ಗೆ 11ರಿಂದ ಮಧ್ಯಾಹ್ನ 3 ಗಂಟೆಯವರೆಗೆ ನಾಮಪತ್ರ ಸಲ್ಲಿಸಬಹುದು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಹೇಳಿದ್ದಾರೆ.

Advertisement

ವಿವಿಧ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಸೋಮವಾರ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದ 28 ವಿಧಾನಸಭಾ ಕ್ಷೇತ್ರಗಳ ಚುನಾವಣಾಧಿಕಾರಿಗಳು ನಾಮಪತ್ರ ಸಲ್ಲಿಕೆ ಕುರಿತು ಅಧಿಸೂಚನೆ ಜಾರಿಗೊಳಿಸಿದ ನಂತರ ಅಭ್ಯರ್ಥಿಗಳು ಏ.24ರವರೆಗೆ ನಾಮಪತ್ರ ಸಲ್ಲಿಸಬಹುದು ಎಂದರು.

ನಾಮಪತ್ರಗಳನ್ನು ಭಾನುವಾರ ಹಾಗೂ ಸರ್ಕಾರಿ ರಜೆ ದಿನ ಹೊರತುಪಡಿಸಿ ಉಳಿದ ಎಲ್ಲ ಕಚೇರಿ ದಿನಗಳಲ್ಲಿ ಬೆಳಗ್ಗೆ 11ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಸಲ್ಲಿಸಬಹುದಾಗಿದೆ. ಅಕ್ಷಯ ತೃತೀಯ (ಏ.18) ದಿನ ಸರ್ಕಾರಿ ರಜೆಯಿರುವ ಕಾರಣ ನಾಮಪತ್ರ ಸ್ವೀಕರಿಸುವುದಿಲ್ಲ. ಪ್ರತಿ ದಿನ ಅಭ್ಯರ್ಥಿಗಳು ಸಲ್ಲಿಸುವ ನಾಮಪತ್ರಗಳನ್ನು ಮಧ್ಯಾಹ್ನ 3ರ ನಂತರ ಕಚೇರಿಯ ಸೂಚನ ಫ‌ಲಕದಲ್ಲಿ ಪ್ರಕಟಿಸಲಾಗುವುದು ಎಂದು ಹೇಳಿದರು.

ನಾಮಪತ್ರ ಸಲ್ಲಿಸುವ ಕಚೇರಿಗಳಿಂದ 100 ಮೀ. ವ್ಯಾಪ್ತಿಯಲ್ಲಿ 3 ವಾಹನಗಳಿಗೆ ಮಾತ್ರ ಅವಕಾಶವಿದ್ದು, ನಾಮಪತ್ರ ಸಲ್ಲಿಸುವ ವೇಳೆ ಅಭ್ಯರ್ಥಿಯೊಂದಿಗೆ 4 ಜನರು ಮಾತ್ರ ಇರಬೇಕು. ಪ್ರತಿಯೊಂದು ಕಚೇರಿಯಲ್ಲಿಯೂ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದ್ದು, ನಿಯಮ ಉಲ್ಲಂ ಸುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕಾಲಂ ಖಾಲಿ ಬಿಟ್ಟರೆ ನಾಮಪತ್ರ ತಿರಸ್ಕೃತ: ಯಾವುದೇ ಒಂದು ಕಾಲಂ ಖಾಲಿ ಬಿಟ್ಟರೂ ಅಂತಹ ನಾಮಪತ್ರಗಳನ್ನು ತಿರಸ್ಕರಿಸಲಾಗುವುದು. ಉಳಿದಂತೆ ಸಣ್ಣಪುಟ್ಟ ದೋಷಗಳಿದ್ದರೆ ಸರಿಪಡಿಸಿಕೊಳ್ಳಲಾಗವುದು. ನಾಮಪತ್ರದಲ್ಲಿ ಕೇಳಲಾಗಿರುವ ಪ್ರತಿಯೊಂದು ಮಾಹಿತಿಯನ್ನು ಅಭ್ಯರ್ಥಿಗಳು ಭರ್ತಿ ಮಾಡಬೇಕು. ಜತೆಗೆ ನಾಮಪತ್ರ ಸಲ್ಲಿಕೆ ವೇಳೆ ಪ್ರತಿಜ್ಞಾವಿಧಿ ಸ್ವೀಕರಿಸಿ ಸಹಿ ಮಾಡಿಕೊಡಬೇಕು ಎಂದರು.

Advertisement

ನಾಮಪತ್ರ ಸಲ್ಲಿಕೆ ವೇಳೆ ಯಾವೆಲ್ಲಾ ದಾಖಲೆಗಳನ್ನು ಸಲ್ಲಿಕೆ ಮಾಡಲಾಗಿದೆ ಹಾಗೂ ಯಾವ ದಾಖಲೆಗಳು ಸಲ್ಲಿಕೆ ಮಾಡುವುದು ಬಾಕಿಯಿದೆ ಎಂಬ ದೃಢೀಕರಣ ಪ್ರಮಾಣ ಪತ್ರವನ್ನು ಅಭ್ಯರ್ಥಿಗಳಿಗೆ ನೀಡಲಾಗುತ್ತದೆ. ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ 3 ಗಂಟೆಯೊಳಗೆ ಅಭ್ಯರ್ಥಿಗಳು ಬಾಕಿ ದಾಖಲೆಗಳನ್ನು ಸಲ್ಲಿಸದಿದ್ದರೆ ಮಾತ್ರ ನಾಮಪತ್ರಗಳನ್ನು ಅಂಗೀಕರಿಸಲಾಗುತ್ತದೆ ಎಂದು ಹೇಳಿದರು. 

ಸಿಬ್ಬಂದಿಗೆ ಅಗತ್ಯ ವ್ಯವಸ್ಥೆ: ಈವರೆಗೆ ಮತಗಟ್ಟೆ ಅಧಿಕಾರಿಗಳಿಗೆ ಮತದಾನದ ವೇಳೆ ಸರಿಯಾದ ವ್ಯವಸ್ಥೆ ಮಾಡಲಾಗುವುದಿಲ್ಲ ಎಂಬ ಆರೋಪವಿತ್ತು. ಆದರೆ, ಈ ಬಾರಿ ಮತಗಟ್ಟೆ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಮತದಾನದ ಹಿಂದಿನ ದಿನ ರಾತ್ರಿಯಿಂದ ಮರುದಿನ ಮಧ್ಯಾಹ್ನದವರೆಗೆ ಊಟ ಹಾಗೂ ತಿಂಡಿಯನ್ನು ಚುನಾವಣಾ ಆಯೋಗದಿಂದಲೇ ನೀಡಲಾಗುವುದು. ಜತೆಗೆ ಆನ್‌ಲೈನ್‌ ಮೂಲಕವೇ ಅವರಿಗೆ ಭತ್ಯೆ ನೀಡಲಾಗುವುದು ಎಂದು ವಿವರಿಸಿದರು. 

ಮೊಬೈಲ್‌ ಅಪ್ಲಿಕೇಷನ್‌ಗೆ ಸ್ಪಂದನೆಯಿಲ್ಲ: ನೀತಿ ಸಂಹಿತೆ ಉಲ್ಲಂಘನೆ, ಮಾಹಿತಿ ಹಾಗೂ ದೂರು ನೀಡಲು ಪಾಲಿಕೆಯಿಂದ ಮೂರು ಮೊಬೈಲ್‌ ಅಪ್ಲಿಕೇಷನ್‌ಗಳನ್ನು ಅಭಿವೃದ್ಧಿಪಡಿಸಲಾಗಿದೆ. ಆದರೆ, ಸರಿಯಾದ ಮಾಹಿತಿಯಿಲ್ಲದೆ ಸಾರ್ವಜನಿಕರು ಅದನ್ನು ಬಳಸಲು ಮುಂದಾಗಿಲ್ಲ. ಆ್ಯಪ್‌ ಮೂಲಕ ಕೇವಲ 6 ದೂರುಗಳು ಮಾತ್ರ ದಾಖಲಾಗಿದ್ದು, ಜನರು ಆ್ಯಪ್‌ಗ್ಳ ಬಳಕೆಗೆ ಮುಂದಾಗಬೇಕು ಎಂದು ಮನವಿ ಮಾಡಿದರು. 

ಹಬ್ಬವಾಗಿ ಆಚರಣೆ: ಪಶ್ಚಿಮ ಬಂಗಾಳದಲ್ಲಿ 10 ವರ್ಷ ಸೇವೆ ಸಲ್ಲಿಸಿದ ಸಂದರ್ಭದಲ್ಲಿ ಅನೇಕ ಚುನಾವಣೆಯಲ್ಲಿ ಕೆಲಸ ಮಾಡಿದ್ದು, ಅಲ್ಲಿ ಚುನಾವಣೆಯನ್ನು ಹಬ್ಬದ ರೀತಿ ಆಚರಿಸುತ್ತಾರೆ. ಹೊಸ ಬಟ್ಟೆ ಧರಿಸಿ ಮತದಾನ ಮಾಡಲು ಬರುತ್ತಾರೆ. ಅದೇ ಮಾದರಿಯಲ್ಲಿ ಬೆಂಗಳೂರಿನ ಜನರು ಸಹ ಚುನಾವಣೆಯನ್ನು ಹಬ್ಬದ ರೀತಿಯಲ್ಲಿ ಆಚರಿಸಲು ಮುಂದಾಗಬೇಕು ಎಂದು ಮಂಜುನಾಥ ಪ್ರಸಾದ್‌ ಕೋರಿದರು. 

ವೆಚ್ಚದ ಮೇಲೆ ಐಟಿ ಅಧಿಕಾರಿಗಳ ನಿಗಾ: ಮಂಗಳವಾರದಿಂದಲೇ ಚುನಾವಣಾ ವೀಕ್ಷಕರು ಕಾರ್ಯನಿರ್ವಹಿಸಲಿದ್ದು, ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಖರ್ಚಿನ ಮೇಲೆ ನಿಗಾವಹಿಸಲು ಖರ್ಚು ವೀಕ್ಷಕರಾಗಿ 19 ತೆರಿಗೆ ಇಲಾಖೆ ಅಧಿಕಾರಿಗಳನ್ನು ನೇಮಿಸಲಾಗಿದೆ. ಜತೆಗೆ ನೀತಿ ಸಂಹಿತೆ ಉಲ್ಲಂಘನೆ ಬಗ್ಗೆ ನಿಗಾವಹಿಸಲು ಮೂವರು ಐಪಿಎಸ್‌ ಅಧಿಕಾರಿಗಳು ಹಾಗೂ ಉಳಿದ ಪ್ರಕ್ರಿಯೆಗಳ ಮೇಲ್ವಿಚಾರಣೆಗಾಗಿ 14 ಐಎಎಸ್‌ ಅಧಿಕಾರಿಗಳನ್ನು ಸಾಮಾನ್ಯ ವೀಕ್ಷಕರಾಗಿ ನೇಮಿಸಲಾಗಿದೆ ಎಂದರು. 

622 ಪ್ರಕರಣಗಳು ದಾಖಲು: ಅಬಕಾರಿ ಇಲಾಖೆಯಿಂದ 903 ದಾಳಿಗಳನ್ನು ನಡೆಸಿದ್ದು, 622 ಪ್ರಕರಣಗಳನ್ನು ದಾಖಲಿಸಲಾಗಿದೆ. ಪೊಲೀಸ್‌ ಇಲಾಖೆಯಿಂದ 42 ಮೊಕದ್ದಮೆ ದಾಖಲಿಸಿದ್ದು, ಎರಡೂ ಇಲಾಖೆಯಿಂದ 238 ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಇನ್ನು ದಾಳಿಯ ವೇಳೆ 7,630 ಲೀಟರ್‌ ಮದ್ಯ, 6,687 ಲೀಟರ್‌ ಬಿಯರ್‌ ಹಾಗೂ 179 ಲೀ. ವೈನ್‌ ಜತೆಗೆ, 17.25 ಎಂ.ಜಿ. ಕೊಕೇನ್‌ ವಶಪಡಿಸಿಕೊಳ್ಳಲಾಗಿದೆ. ಒಟ್ಟಾರೆಯಾಗಿ 6,19,37,894 ರೂ. ಮೌಲ್ಯದ ನಗದು ಮತ್ತು ಇತರೆ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. 

“ಡಿ’ ಗ್ರೂಪ್‌ ನೌಕರರ ನೇಮಕ: 28 ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣಾ ಕೆಲಸಕ್ಕಾಗಿ 54,558 ಸಿಬ್ಬಂದಿ ಅಗತ್ಯವಿದೆ. ಸದ್ಯ ಸರ್ಕಾರಿ ನೌಕರರು 23,170 ಹಾಗೂ ನಿಗಮ ಮಂಡಳಿಗಳಿಂದ 20,53 ನೌಕರರು ಚುನಾವಣಾ ಕೆಲಸಕ್ಕೆ ನೇಮಿಸಿಕೊಳ್ಳಲಾಗುವುದು. ಉಳಿದಂತೆ ಚುನಾವಣಾ ಕೆಲಸಕ್ಕಾಗಿ 7,777 ಡಿ ಗ್ರೂ ಪ್‌ ಹಾಗೂ 3,150 ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರನ್ನು ವಿವಿಪ್ಯಾಟ್‌ ಮೇಲೆ ನಿಗಾವಹಿಸಲು ಬಳಸಿಕೊಳ್ಳಲಾಗುತ್ತಿದ್ದು, ಏ.28ರಂದು ಅವರಿಗೆ ತರಬೇತಿ ನಿಡಲಾಗುವುದು ಎಂದು ತಿಳಿಸಿದರು. 

ಎಸ್‌ಎಂಎಸ್‌ ಮೂಲಕ ಮತಗಟ್ಟೆ ತಿಳಿಯಿರಿ: ಮತಗಟ್ಟೆ ಬಗ್ಗೆ ಗೊಂದಲವಿರುವ ಮತದಾರರು ತಮ್ಮ ಮತಗಟ್ಟೆ ಮಾಹಿತಿ ತಿಳಿಯಲು kaepic ಎಂದು ಟೈಪ್‌ ಮಾಡಿ ಒಂದು ಸ್ಪೇಸ್‌ ಬಿಟ್ಟು ಮತದಾರರ ಗುರುತಿನ ಚೀಟಿ ಸಂಖ್ಯೆಯನ್ನು ಬರೆದು 9731979899ಗೆ ಎಸ್‌ಎಂಎಸ್‌ ಕಳುಹಿಸಿದರೆ ಮತಗಟ್ಟೆ ಮಾಹಿತಿಯನ್ನು ಎಸ್‌ಎಂಎಸ್‌ ಮೂಲಕವೇ ಕಳಿಸಿಕೊಡಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next