ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ಎಸ್.ಯಡಿಯೂರಪ್ಪ ಅವರು ತಾವು ಶರಣಗೌಡ ಅವರನ್ನು ಭೇಟಿಯಾಗಿದ್ದು ಹಾಗೂ ಮಾತನಾಡಿದ್ದು ನಿಜ ಎಂದು ಒಪ್ಪಿಕೊಂಡಿದ್ದಾರೆ. ಆದರೆ ಆಡಿಯೋದಲ್ಲಿರುವುದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ಸುಳ್ಳು ಹಾಗೂ ಕಟ್ಟುಕಥೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಯೂ ಆದ ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಹೇಳಿದ್ದಾರೆ.
ಭಾನುವಾರ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಮಧ್ಯರಾತ್ರಿ ಶರಣಗೌಡ ಅವರನ್ನು ಯಡಿಯೂರಪ್ಪ ಅವರ ಬಳಿ ಕಳಿಸುವ ಸಂಚು ರೂಪಿಸಿದವರೇ ಮುಖ್ಯಮಂತ್ರಿ ಕುಮಾರಸ್ವಾಮಿ. ಹಾಗಿದ್ದರೂ ಮಧ್ಯರಾತ್ರಿ ಭೇಟಿಯಾಗುವ ಅವಶ್ಯಕತೆ ಏನಿತ್ತು ಎಂದು ಪ್ರಶ್ನಿಸುವ ಮೂಲಕ ತಮ್ಮದೇನೂ ಪಾತ್ರವಿಲ್ಲ ಎನ್ನುವ ಮಹಾನ್ ನಾಟಕ ಮಾಡಿರುವ ಎಚ್‌ಡಿಕೆ, ಎಷ್ಟು ಸಾಚಾ ಎನ್ನುವುದು ಅನೇಕ ಪ್ರಕರಣಗಳಲ್ಲಿ ಸಾಬೀತಾಗಿದೆ ಎಂದು ಕಿಡಿ ಕಾರಿದ್ದಾರೆ.
ತಮ್ಮ ರಾಜಕೀಯ ವಿರೋಧಿಯನ್ನು ಬ್ಲಾಕ್‌ವೆುಲ್ ಮಾಡಲು ರಾಜ್ಯದ ಮುಖ್ಯಮಂತ್ರಿಯೊಬ್ಬರು ಈ ರೀತಿ ಸಂಚು ರೂಪಿಸಿದ ನಿದರ್ಶನ ದೇಶದ ರಾಜಕೀಯ ಇತಿಹಾಸದಲ್ಲೇ ಮತ್ತೂಂದಿಲ್ಲ. ಅನಾಯಾಸವಾಗಿ ದೊರೆತ ಮುಖ್ಯಮಂತ್ರಿ ಹುದ್ದೆಯನ್ನು ಜನ ಸೇವೆಗೆ ಬಳಸುವ ಬದಲು ಇಂತಹ ಹೀನಕೃತ್ಯಕ್ಕೆ ಬಳಸಿರುವುದು ದುರಂತ ಎಂದಿದ್ದಾರೆ.
ಈ ಹಿಂದೆ ರಾಜ್ಯಸಭಾ ಚುನವಣೆಯಲ್ಲಿ ಗೆಲ್ಲಲು ತಮ್ಮ ಪಕ್ಷದ ಪ್ರತಿ ಶಾಸಕರು ತಲಾ ಒಂದು ಕೋಟಿ ರೂ. ಬೇಡಿಕೆ ಇಟ್ಟಿದ್ದರು ಎಂಬುದಾಗಿ ಸ್ವತಃ ಕುಮಾರಸ್ವಾಮಿಯವರೇ ಒಪ್ಪಿಕೊಂಡಿದ್ದಾರೆ. ಇವು ಜೆಡಿಎಸ್‌ನ ಹಣಕಾಸು ವ್ಯವಹಾರಕ್ಕೆ ಹಿಡಿದ ಕನ್ನಡಿ ಎಂದು ಹೇಳಿದ್ದಾರೆ.
ಕುಮಾರಸ್ವಾಮಿ ಹಾಗೂ ಡಿ.ಕೆ.ಶಿವಕುಮಾರ್ ಜೋಡಿ ರಾಮನಗರ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯೇ ಇಲ್ಲದಂತೆ ಮಾಡಲು ಷಡ್ಯಂತ್ರ ರೂಪಿಸಿತ್ತು. ಚಂದ್ರಶೇಖರ್ ಅವರನ್ನು ಬಿಜೆಪಿಗೆ ಕಳುಹಿಸಿ ನಂತರ ಕಣದಿಂದ ಸರಿಯುವಂತೆ ಮಾಡಲಾಗಿತ್ತು. ಇದನ್ನು ಗಮನಿಸಿದರೆ ಅಧಿಕಾರಕ್ಕಾಗಿ ಈ ಜೋಡಿ ಯಾವ ಮಟ್ಟಕ್ಕಾದರೂ ಇಳಿಯಬಲ್ಲದು ಎಂಬುದು ಸ್ಪಷ್ಟವಾಗುತ್ತದೆ ಎಂದು ತಿಳಿಸಿದ್ದಾರೆ.
ರವಿಕುಮಾರ್ ಕೇಳಿರುವ ಮೂರು ಪ್ರಶ್ನೆಗಳು
* ವಿಧಾನ ಪರಿಷತ್‌ಗೆ ನಾಮಕರಣ ಮಾಡಲು ವಿಜುಗೌಡ ಅವರ ಬಳಿ 25 ಕೋಟಿ ರೂ. ಕೇಳಿದ್ದ ಕುಮಾರಸ್ವಾಮಿ ಬಗ್ಗೆ ಕಾಂಗ್ರೆಸ್ ನಾಯಕರ ಮೌನವೇಕೆ?
* ಜೆಡಿಎಸ್‌ನಲ್ಲಿ ಸೂಟ್‌ಕೇಸ್ ಇಲ್ಲದೆ ಯಾವುದೇ ಕೆಲಸವಾಗುವುದಿಲ್ಲ ಎಂದು ಪ್ರಜ್ವಲ್ ರೇವಣ್ಣ ಹೇಳಿದ್ದನ್ನು ಮುಖ್ಯಮಂತ್ರಿಗಳೇಕೆ ಗಂಭೀರವಾಗಿ ಪರಿಗಣಿಸಿಲ್ಲ?
* ಸಚಿವ ಪುಟ್ಟರಂಗ ಶೆಟ್ಟಿ ಅವರಿಗೆ ಸೇರಿದ್ದು ಎನ್ನಲಾದ 25 ಲಕ್ಷ ರೂ. ವಿಧಾನಸೌಧದ ಸಚಿವರ ಕೊಠಡಿಯಲ್ಲೇ ಪತ್ತೆಯಾದರೂ ಈವರೆಗೆ ತನಿಖೆ ಪ್ರಗತಿಯಾಗದಿರಲು ಕಾರಣವೇನು?