Advertisement

ವಿಧಾನಸಭೆಯಲ್ಲಿ ಸಜ್ಜನಿಕೆ ರಾಜಕಾರಣಿ ಬಣಕಾರ ಗುಣಗಾನ

06:15 AM Feb 09, 2018 | |

ಬೆಂಗಳೂರು : ಹಿರಿಯ ಮುತ್ಸದ್ದಿ ರಾಜಕಾರಣಿ, ಗಾಂಧಿವಾದಿ, ವಿಧಾನಸಭೆಯ ಮಾಜಿ ಅಧ್ಯಕ್ಷ ಬಿ.ಜಿ.ಬಣಕಾರ ಅಗಲಿಕೆಗೆ ಸಂತಾಪ ಸೂಚಕ ನಿರ್ಣಯ ಅಂಗೀಕರಿಸಿ ಸಜ್ಜನ ರಾಜಕಾರಣಿಯಾಗಿ ಅವರು ನಾಡಿಗೆ ಸಲ್ಲಿಸಿದ ಸೇವೆ ಸ್ಮರಿಸಲಾಯಿತು.

Advertisement

ಕಲಾಪದ ಆರಂಭದಲ್ಲಿ ಸ್ಪೀಕರ್‌ ಕೋಳಿವಾಡ ಅವರು ಸಂತಾಪ ಸೂಚಕ ನಿರ್ಣಯ ಮಂಡಿಸಿ, ಹಿರೇಕೆರೂರು ಕ್ಷೇತ್ರದ ಶಾಸಕರಾಗಿ, ಸಚಿವರಾಗಿ,ವಿಧಾನಸಭೆಯ ಅಧ್ಯಕ್ಷರಾಗಿ ಸಲ್ಲಿಸಿದ ಸೇವೆ ಬಗ್ಗೆ ಮಾಹಿತಿ ನೀಡಿದರು.

ಪ್ರತಿಪಕ್ಷ ನಾಯಕ ಜಗದೀಶ್‌ ಶೆಟ್ಟರ್‌ ಸಂತಾಪ ಸೂಚಕ ನಿರ್ಣಯ ಪರವಾಗಿ ಮಾತನಾಡಿ ಅವರೊಬ್ಬ ಆದರ್ಶ ಶಾಸಕರಾಗಿದ್ದರು.ಉತ್ತಮ ಸಭಾಧ್ಯಕ್ಷರೂ ಆಗಿದ್ದರು.ಈಗಿನ ಎಲ್ಲಾ ಶಾಸಕರಿಗೂ ಅವರು ಮಾದರಿಯಾಗಿದ್ದಾರೆ. ಶಾಸಕರಲ್ಲದ ವೇಳೆಯಲ್ಲಿಯೂ ಸದನದಲ್ಲಿನ ಪ್ರಶ್ನೋತ್ತರ ಕಲಾಪದ ಮಾಹಿತಿ,ಚುಕ್ಕೆ ಗುರುತಿನ ಪ್ರಶ್ನೆ, ಚುಕ್ಕೆ ಗುರುತಿಲ್ಲದ ಪ್ರಶ್ನೆಗಳ ಉತ್ತರ ಪ್ರತಿಗಳನ್ನು ತರಿಸಿಕೊಂಡು ಲೇಖನ ಬರೆಯುತ್ತಿದ್ದರು.ಸಾಕಷ್ಟು ಅಧ್ಯಯನಶೀಲರಾಗಿದ್ದರು ಹಿರೇಕೆರೂರಿನಲ್ಲಿ ತಮ್ಮದೇ ಆದ ವೋಟ್‌ ಬ್ಯಾಂಕನ್ನು ಹೊಂದಿದ್ದರೆಂದು ತಿಳಿಸಿದರು.

ತಾವು ಮೊದಲ ಬಾರಿಗೆ ಪ್ರತಿಪಕ್ಷದ ನಾಯಕರಾಗಿದ್ದಾಗ, ಅದು ಬಹಳ ಜವಾಬ್ದಾರಿಯುತ ಸ್ಥಾನವಾಗಿದೆ. ಆ ಹುದ್ದೆ ಶಾಡೊ ಸಿಎಂ ಇದ್ದಹಾಗೆ ಎಂದು ತಿಳಿಸಿ ಪ್ರತಿ  ಹಂತದಲ್ಲಿಯೂ ತಮಗೆ ಸಲಹೆ ನೀಡುತ್ತಿದ್ದರು ಅಧಿಕಾರಕ್ಕಾಗಿ ಎಂದೂ ಅವರು ಇಂದಿನ ರಾಜಕಾರಣಿಗಳ ತರಹ ಹಾತೊರಿಯಲಿಲ್ಲವೆಂದು ತಿಳಿಸಿದರು.ಅವರ ಅಗಲಿಕೆ ರಾಜಕಾರಣಕ್ಕೆ, ಸಮಾಜಕ್ಕೆ ನಷ್ಟವಾಗಿದೆ ಆವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಪುತ್ರರಾದ ಶಾಸಕ ಯು.ಬಿ.ಬಣಕಾರ ಸೇರಿದಂತೆ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ದೊರೆಯಲಿ ಎಂದು ಆಶಿಸಿದರು.

ಸಮಾಜಕಲ್ಯಾಣ ಸಚಿವ ಆಂಜನೇಯ ಅವರು ಸರ್ಕಾರದ ಪರವಾಗಿ ಮಾತನಾಡಿ ಬಣಕಾರ್‌ಅವರು ಶ್ರೇಷ್ಠ ರಾಜಕಾರಣಿಯಾಗಿದ್ದರೆಂದು ಗುಣಗಾನ ಮಾಡಿದರು. ಸರಳತೆ ಮೈಗೂಡಿಸಿಕೊಂಡ ಅಪರೂಪದ ವ್ಯಕ್ತಿ.ಗಾಂಧಿವಾದಿಯಾಗಿ ಕಾಂಗ್ರೆಸ್‌ ಪಕ್ಷದಿಂದ ಮೊದಲ ಬಾರಿ 1972 ರಲ್ಲಿ ಶಾಸಕರಾಗಿದ್ದರು.ಸಾಮಾಜಿಕ ನ್ಯಾಯದ ಪರವಾಗಿದ್ದ ಅವರು ದೇವರಾಜ್‌ ಅರಸ್‌ ಸಂಪುಟದಲ್ಲಿ ಪಶುಸಂಗೋಪನೆ ಸಚಿವರಾಗಿದ್ದರು.ನಂತರ ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಯಾದಾಗ ಸ್ಪೀಕರ್‌ ಆಗಿದ್ದರು. ಆ ಸಂದರ್ಭದಲ್ಲಿ ನಾನು ಗ್ಯಾಲರಿಯಲ್ಲಿ ಕುಳಿತು ಸದನದ ಕಲಾಪ ವೀಕ್ಷಿಸುತ್ತಿದ್ದಾಗ ಪ್ರತಿಪಕ್ಷ ನಾಯಕರಾಗಿದ್ದ ವೀರಪ್ಪ ಮೊಯಿಲಿಯವರಿಗೆ ಬಣಕಾರ್‌ ಅವರು ಮೊಯಲಿ ವೀರಪ್ಪ , ಮೊಯಲಿ ವೀರಪ್ಪ ಎಂದು ಕರೆದ ಕ್ಷಣಕ್ಕೆ ನಾನು ಸಾಕ್ಷಿಯಾಗಿದ್ದೆ ಎಂದರು. ಶಾಸನ ಸಭೆ, ಸಹಕಾರ ಸಂಘಗಳು, ಪಂಚಾಯತ್‌ ರಾಜ್‌ ಕುರಿತು ಅವರು ಬಹಳಷ್ಟು ಲೇಖನ ಬರೆದಿದ್ದಾರೆ.ಅವರದು ಬಹಳ ವಿರಳವಾದ ವ್ಯಕ್ತಿತ್ವವಾಗಿದೆ. ನಾಡಿಗೆ ಅವರ ಕೊಡುಗೆ ಅವಿಸ್ಮರಣೀಯವೆಂದು ಬಣ್ಣಿಸಿದರು.

Advertisement

ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಅಪರೂಪದ ವ್ಯಕಿತ್ವ ಅವರದಾಗಿತ್ತು.ರಾಜಕೀಯದಲ್ಲಿ ಹಿರಿತನವಿತ್ತು.ಅವರನ್ನ ನಾನು ಬಹಳ ಹತ್ತಿರದಿಂದ ನೋಡಿದ್ದೇನೆ.ಮಾಜಿ ಶಾಸಕರಾಗಿದ್ದಾಗ ಬೆಂಗಳೂರಿಗೆ ಆಗಮಿಸಿದ್ದಾಗ  ಶಾಸಕ ಭವನದ ತಮ್ಮ ಕೊಠಡಿಯಲ್ಲೇ ವಾಸವಾಗಿರುತ್ತಿದ್ದರು. ಆ ಸಂದರ್ಭದಲ್ಲಿ  ಪ್ರಶ್ನೋತ್ತರ ಪ್ರತಿಗಳನ್ನು ತರಿಸಿಕೊಂಡು ಅದ್ಯಯನ ನಡೆಸಿ ಪತ್ರಿಕೆಗಳಿಗೆ ಲೇಖನ ಬರೆಯುತ್ತಿದ್ದರು.ನಮಗೆಲ್ಲಾ ಬಣಕಾರ್‌ ಅವರು ಸ್ಫೂರ್ತಿ ನೀಡುವ ವ್ಯಕ್ತಿತ್ವ ಹೊಂದಿದ್ದರೆಂದು ಹೇಳಿದರು.

ಶಾಸಕರಾದ ಸಿಟಿ ರವಿ,ಕೆಎನ್‌ ರಾಜಣ್ಣ,ವಿಯಕುಮಾರ್‌ ಸೊರಕೆ,ಜಿಟಿ ಪಾಟೀಲ್‌ ಮಾತನಾಡಿ ಬಿ.ಜಿ. ಬಣಕಾರ್‌ ಅವರ ವ್ಯಕ್ತಿತ್ವದ ಗುಣಗಾನ ಮಾಡಿದರು.

ಸ್ಪೀಕರ್‌ ಕೋಳಿವಾಡ ಅವರು ಮತನಾಡಿ ಬಣಕಾರ್‌ ಅವರು ಒಟ್ಟು 3800 ಲೇಖನ ಬರೆದಿದ್ದಾರೆ.ತುಂಗಾ ಮೇಲ್ದಂಡೆ ಯೋಜನೆ ಅನುಷ್ಟಾನದಲ್ಲಿ ಅವರ ಕೊಡುಗೆ ಮಹತ್ತರವಾಗಿದೆ. ನಾನು ಶಾಸಕನಾಗಿದ್ದಾಗ ಪಕ್ಕದ ಕ್ಷೇತ್ರದವರೇ ಆಗಿದ್ದ ಬಣಕಾರ್‌ ಅವರು ತುಂಗಾ ಮೇಲ್ದಂಡೆ ಯೋಜನೆ ಕುರಿತು ಸದನದಲ್ಲಿ ಮಾತನಾಡಲು ಪ್ರೇರೇಪಿಸುತ್ತಿದ್ದರೆಂದು ಸ್ಮರಿಸಿದರು.ಹಾವೇರಿ ಸಹಕಾರಿ ಸಕ್ಕರೆ ಕಾರ್ಖಾನೆ ಪ್ರಾರಂಭಿಸುವಲ್ಲಿಯೂ ಬಹಳಷ್ಟು ಹೋರಾಟವನ್ನ ಮಾಡಿದ್ದರೆಂದು ತಿಳಿಸಿದರು. ಬಣಕಾರ್‌ ಅವರ  ಗೌರವಾರ್ಥ ಸದನದ ಸದಸ್ಯರೆಲ್ಲಾ ಎದ್ದು ನಿಂತು ಮೌನಾಚರಣೆ ಮಾಡಿ ಆತ್ಮಕ್ಕೆ ಶಾಂತಿ ಕೋರಿದರು.

Advertisement

Udayavani is now on Telegram. Click here to join our channel and stay updated with the latest news.

Next