Advertisement

ನೀರಿನ ದರ ಏರಿಕೆ ಆದೇಶಕ್ಕೆ ಕಾನೂನು ಬಲ

08:03 AM Oct 15, 2018 | |

ಬೆಂಗಳೂರು: ಕೈಗಾರಿಕಾ ಉದ್ದೇಶಕ್ಕೆ ಬಳಸುವ ನೀರಿನ ದರವನ್ನು ಕಳೆದ ಜೂ.1ರಿಂದ ಅನ್ವಯವಾಗುವಂತೆ ಭಾರೀ ಪ್ರಮಾಣದಲ್ಲಿ ಏರಿಸಿ ಆದೇಶ ಹೊರಡಿಸಿದ್ದ ಜಲ ಸಂಪನ್ಮೂಲ ಇಲಾಖೆ, ಇದೀಗ ತನ್ನ ಆದೇಶಕ್ಕೆ ಕಾನೂನು ಬಲ ನೀಡಲು ಮುಂದಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಜಲ ಸಂಪನ್ಮೂಲ (ನೀರಿನ ದರ ನಿಗದಿ) ನಿಯಮಗಳು-2002ಕ್ಕೆ ತಿದ್ದುಪಡಿ ತರುವ ಸಂಬಂಧ ಕರಡು ಅಧಿಸೂಚನೆ ಹೊರಡಿಸಿದೆ. ಇದಕ್ಕೆ ಬರುವ ಆಕ್ಷೇಪಣೆಗಳನ್ನು ಪರಿಶೀಲಿಸಿದ ಬಳಿಕ ನಿಯಮಾವಳಿ ತಿದ್ದುಪಡಿ ಮಾಡಿ ಅಂತಿಮ ಅಧಿಸೂಚನೆ ಹೊರಡಿಸಲಾಗುವುದು ಎಂದು ಜಲ ಸಂಪನ್ಮೂಲ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಕಳೆದ ಮೇ 25ರಂದು ಈ ದರವನ್ನು ಭಾರೀ ಪ್ರಮಾಣದಲ್ಲಿ ಏರಿಸಿ ಸರ್ಕಾರ ಆದೇಶ ಹೊರಡಿಸಿತ್ತು. ಕೈಗಾರಿಕೆಗಳು ಕಾಲುವೆ, ಕೆರೆ, ಜಲಾಶಯಗಳಿಂದ ಪಡೆಯುವ ಪ್ರತಿ ಎಂಸಿಎಫ್ಟಿ ನೀರಿಗೆ 3,200 ರೂ.ನಿಂದ 3 ಲಕ್ಷ ರೂ.ಮತ್ತು ನೈಸರ್ಗಿಕ ಜಲ ಮಾರ್ಗಗಳು, ನದಿ, ಹಳ್ಳಗಳಿಂದ ಪಡೆಯುವ ನೀರಿಗೆ 1,800 ರೂ.ನಿಂದ 1.5 ಲಕ್ಷ ರೂ.ಗೆ ಹೆಚ್ಚಿಸಿತ್ತು. ಆದರೆ, ಗೃಹ ಬಳಕೆ ಉದ್ದೇಶದ ನೀರಿಗೆ ಪ್ರತಿ ಸಿಎಂಎಫ್ಟಿಗೆ 375 ರೂ.ಇದ್ದು, ಇದರಲ್ಲಿ ಯಾವುದೇ ಬದಲಾವಣೆ ಮಾಡಿರಲಿಲ್ಲ. ಕೈಗಾರಿಕಾ ಉದ್ದೇಶಕ್ಕೆ ಬಳಸುವ ನೀರಿನ ದರವನ್ನು ಏಕಾಏಕಿ ಸುಮಾರು 100 ಪಟ್ಟು ಏರಿಸಿದ ಸರ್ಕಾರದ ಕ್ರಮಕ್ಕೆ ಕೈಗಾರಿಕಾ ಸಂಘಟನೆಗಳಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ರಾಜ್ಯದಲ್ಲಿ ಕಬ್ಬಿಣ ಮತ್ತು ಉಕ್ಕು, ವಿದ್ಯುತ್‌ ಉತ್ಪಾದನೆ ಸೇರಿ ಸುಮಾರು 52,545 ಭಾರೀ ಉದ್ದಿಮೆಗಳಿದ್ದು, ದರ ಏರಿಕೆಯಿಂದ ಈ ಕೈಗಾರಿಕೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಆತಂಕವೂ ವ್ಯಕ್ತವಾಗಿತ್ತು.

ದರ ಇಳಿಸಬೇಕೆಂಬ ಒತ್ತಾಯ ಕೈಗಾರಿಕಾ ಸಂಘಟನೆಗಳಿಂದ ಬಂದಿತ್ತು. ಇನ್ನೊಂದೆಡೆ, ದರ ಏರಿಕೆಯನ್ನು ಸಮರ್ಥಿಸಿಕೊಂಡಿದ್ದ ಜಲ ಸಂಪನ್ಮೂಲ ಇಲಾಖೆ, ದರ ಏರಿಕೆ ಮಾಡಿದ್ದರೂ ಇತರ ರಾಜ್ಯಗಳಿಗಿಂತ ಕಡಿಮೆ ಇದೆ. ಅಲ್ಲದೆ, ಗ್ರಾಮೀಣಾಭಿವೃದ್ಧಿ ಮತ್ತು
ಪಂಚಾಯತ್‌ ರಾಜ್‌ ಇಲಾಖೆ ಗ್ರಾಮೀಣ ಭಾಗದಲ್ಲಿ ಒದಗಿಸುವ ಕುಡಿಯುವ ನೀರಿಗೆ ಪ್ರತಿ ಸಾವಿರ ಲೀಟರ್‌ಗೆ 6 ರೂ.ದರ ನಿಗದಿಪಡಿಸಿದೆ. ಕೈಗಾರಿಕಾ ಉದ್ದೇಶಕ್ಕೆ ಬಳಸುವ ನೀರಿನ ದರ ಏರಿಕೆಯಾಗಿದ್ದರೂ ಪ್ರತಿ ಸಾವಿರ ಲೀಟರ್‌ಗೆ 5.30 ರೂ.ನಿಂದ 10.60 ರೂ.ಒಳಗಿದೆ. ಹೀಗಾಗಿ, ದರ ಏರಿಕೆ ಅನಿವಾರ್ಯವಾಗಿತ್ತು ಎಂದು ಹೇಳಿತ್ತು.

ಕಾನೂನು ಬಲ ಏಕೆ?: ಕರ್ನಾಟಕ ಜಲ ಸಂಪನ್ಮೂಲ (ನೀರಿನ ದರ ನಿಗದಿ) ನಿಯಮಗಳು-2002ರ ಅನ್ವಯ ಜಲ ಸಂಪನ್ಮೂಲ ಇಲಾಖೆ ನೀರಿನ ದರ ನಿಗದಿಪಡಿಸುತ್ತದೆ. ಕಳೆದ ಮೇ ತಿಂಗಳಲ್ಲಿ ಕೈಗಾರಿಕಾ ಉದ್ದೇಶಕ್ಕೆ ಬಳಸುವ ನೀರಿನ ದರ ಏರಿಕೆ ಮಾಡಿದ್ದರೂ ನಿಯಮಾವಳಿಗೆ ತಿದ್ದುಪಡಿ ತಂದಿರಲಿಲ್ಲ. ದರ ಏರಿಕೆ ಮಾಡಿದ ಬಳಿಕ ನಿಯಮಾವಳಿಗೆ ತಿದ್ದುಪಡಿ ಮಾಡದೇ ಇದ್ದರೆ ದರ ಏರಿಕೆ ವಿರುದಟಛಿ ಕಾನೂನು ಹೋರಾಟ ನಡೆಸಿದಾಗ ಸರ್ಕಾರಕ್ಕೆ ಹಿನ್ನಡೆಯಾಗುತ್ತದೆ. ದರ ಏರಿಕೆ ಆದೇಶವನ್ನು ನ್ಯಾಯಾಲಯ
ರದ್ದುಗೊಳಿಸುವ ಸಾಧ್ಯತೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಜಲ ಸಂಪನ್ಮೂಲ (ನೀರಿನ ದರ ನಿಗದಿ) ನಿಯಮಗಳು-2002ರ ನಿಯಮ 3-ಸಿ(2)ಕ್ಕೆ ತಿದ್ದುಪಡಿ ತಂದು ಜಲ ಸಂಪನ್ಮೂಲ ಇಲಾಖೆ ವ್ಯಾಪ್ತಿಯ ನೀರನ್ನು ಕೃಷಿಯೇತರ ಉದ್ದೇಶಕ್ಕೆ ಹೊರತುಪಡಿಸಿ ಬೇರೆ ಯಾವುದೇ ಉದ್ದೇಶಕ್ಕೆ ಅನುಮತಿಯೊಂದಿಗೆ ಬಳಸುವುದಿದ್ದರೆ ಪ್ರಸ್ತುತ ಏರಿಕೆ ಮಾಡಿರುವ ದರ ವಸೂಲಿ ಮಾಡಲು ಅವಕಾಶ ಮಾಡಿಕೊಡಲಾಗುತ್ತದೆ. ಈ ತಿದ್ದುಪಡಿ ಅಂಗೀಕಾರವಾದರೆ ದರ ಏರಿಕೆಗೆ ಕಾನೂನು ಬಲ ಬಂದಂತಾಗುತ್ತದೆ. ನಂತರ ನ್ಯಾಯಾಲಯಗಳೂ ಮಧ್ಯಪ್ರವೇಶಿಸಲು ಅವಕಾಶ ಇರುವುದಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ.

ಅನುಮೋದನೆ ಬಳಿಕ ಆದೇಶ
ಜಲ ಸಂಪನ್ಮೂಲ ಇಲಾಖೆ ವ್ಯಾಪ್ತಿಯ ನೀರನ್ನು ಕೈಗಾರಿಕಾ ಉದ್ದೇಶಕ್ಕೆ ಬಳಸಲು ನಿಗದಿಪಡಿಸಿದ್ದ ದರವನ್ನು ಏರಿಕೆ ಮಾಡಲು ಸಚಿವ ಸಂಪುಟ ಅನುಮೋದನೆ ಪಡೆದ ಬಳಿಕ ಆದೇಶ ಹೊರಡಿಸಲಾಗಿತ್ತು. ಆ ಸಂದರ್ಭದಲ್ಲಿ ಕರ್ನಾಟಕ ಜಲ ಸಂಪನ್ಮೂಲ (ನೀರಿನ ದರ 
ನಿಗದಿ) ನಿಯಮಗಳು-2002ಕ್ಕೆ ತಿದ್ದುಪಡಿ ತರುವ ಷರತ್ತಿನೊಂದಿಗೆ ದರ ಏರಿಕೆ ಆದೇಶ ಹೊರಡಿಸಲಾಗಿದೆ. ಹೀಗಾಗಿ, ನಿಯಮಾವಳಿ ತಿದ್ದುಪಡಿಗೆ ಕರಡು ಅಧಿಸೂಚನೆ ಹೊರಡಿಸಲಾಗಿದ್ದು, ಆಕ್ಷೇಪಣೆಗಳನ್ನು ಪರಿಶೀಲಿಸಿ ಅಂತಿಮ ಅಧಿಸೂಚನೆ ಹೊರಡಿಸಲಾಗುವುದು ಎಂದು ಜಲ ಸಂಪನ್ಮೂಲ ಇಲಾಖೆ ಉನ್ನತ ಅಧಿಕಾರಿಗಳು “ಉದಯವಾಣಿ’ಗೆ ತಿಳಿಸಿದ್ದಾರೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next