ಅಮೆರಿಕ ಮತ್ತು ಉತ್ತರ ಕೊರಿಯಾದ ಯುದ್ದೋನ್ಮಾದ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಎರಡೂ ದೇಶಗಳ ಸೇನೆ ಬಹುತೇಕ ಯುದ್ಧ ಸನ್ನದ್ಧವಾಗಿ ನಿಂತಿದ್ದು, ಯಾವುದೇ ಕ್ಷಣದಲ್ಲಿ ಯುದ್ಧ ನಡೆದು ಬಿಡಬಹುದು ಎಂಬ ಸ್ಥಿತಿ ನಿರ್ಮಾಣವಾಗಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾನ್ ಉನ್ ನಡುವಿನ ಮಾತಿನ ಸಮರವೂ ತಾರಕಕ್ಕೇರಿದೆ. ಅಮೆರಿಕದ ನೆಲದಲ್ಲಿ ನಿಂತುಕೊಂಡು ಟ್ರಂಪ್‌ಗೆ ಬೆದರಿಕ ಒಡ್ಡುವ ಉದ್ಧಟತನವನ್ನೂ ಉತ್ತರ ಕೊರಿಯಾ ತೋರಿಸಿದೆ. ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಭಾಗವಹಿಸುತ್ತಿರುವ ಉತ್ತರ ಕೊರಿಯಾದ ವಿದೇಶಾಂಗ ಸಚಿವ ನಮ್ಮ ರಾಕೆಟ್ ಅಮೆರಿಕಕ್ಕೆ ಬಂದರೆ ಸರ್ವನಾಶವಾಗುತ್ತೀರಿ ಎಂದು ಎಚ್ಚರಿಸಿದ್ದಾರೆ.ಟ್ರಂಪ್ ಕೂಡ ಇದಕ್ಕೆ ತಿರುಗೇಟು ನೀಡಿದ್ದು, ಸದ್ಯದಲ್ಲೇ ಮಾತಿನ ಜಗಳ ಯುದ್ಧವಾಗಿ ಬದಲಾಗಬಹುದು ಎಂಬ ಭೀತಿ ತಲೆದೋರಿದೆ. ಉತ್ತರ ಕೊರಿಯಾ ಹೈಡ್ರೋಜನ್ ಬಾಂಬ್ ಮತ್ತು ಅಮೆರಿಕ ತಲುಪುವ ಕ್ಷಿಪಣಿಗಳ ಪರೀಕ್ಷೆ ನಡೆಸಿ ಬೆದರಿಕೆಯೊಡ್ಡಿದರೆ ಅಮೆರಿಕ ತನ್ನ ಯುದ್ಧ ವಿಮಾನಗಳನ್ನು ಉತ್ತರ ಕೊರಿಯಾದ ಗಡಿಯ ಮೇಲೆಯೇ ಹಾರಿಸಿ ಸಡ್ಡು ಹೊಡೆದಿದೆ. ಈಗಾಗಲೇ ಅಮೆರಿಕ ಸುಮಾರು 1 ಲಕ್ಷ ಯೋಧರನ್ನು ಆಯಕಟ್ಟಿನ ಜಾಗದಲ್ಲಿ ನಿಲ್ಲಿಸಿ ಸಮರದ ತಯಾರಿ ನಡೆಸುತ್ತಿದೆ.
ಅಮೆರಿಕ ಹಾಗೂ ಇತರ ದೇಶಗಳು ನೀಡುತ್ತಿರುವ ಎಚ್ಚರಿಕೆಗಳಿಗೆ ಕಿಮ್ ಕ್ಯಾರೇ ಎನ್ನುತ್ತಿಲ್ಲ. ವಿಶ್ವಸಂಸ್ಥೆ ಹೇರಿರುವ ಆರ್ಥಿಕ ನಿರ್ಬಂಧವನ್ನು ಕೂಡ ಉತ್ತರ ಕೊರಿಯಾ ಲೆಕ್ಕಿಸಿಲ್ಲ. ಅಸ್ತ್ರಶಸ್ತ್ರಗಳನ್ನು ತೋರಿಸಿ ಉತ್ತರ ಕೊರಿಯಾವನ್ನು ಹೆದರಿಸಿ ಸುಮ್ಮನಾಗಿಸಬಹುದು ಎಂದು ಭಾವಿಸಿದ್ದ ಟ್ರಂಪ್ ಲೆಕ್ಕಾಚಾರ ತಪ್ಪಾಗಿರುವುದು ಮಾತ್ರವಲ್ಲದೆ ತಿರುಗುಬಾಣವಾಗಿ ಪರಿಣಮಿಸುವ ಸಾಧ್ಯತೆಗಳು ಗೋಚರಿಸಿವೆ. ಅಮೆರಿಕದವರು ಸಾಕು ಪ್ರಾಣಿಗಳಿಗಾಗಿ ಮಾಡುವ ಖರ್ಚಿನಷ್ಟು ಉತ್ತರ ಕೊರಿಯಾದ ಜಿಡಿಪಿಯಿಲ್ಲ ಎನ್ನುವುದು ವ್ಯಂಗ್ಯವಾಗಿದ್ದರೂ ವಾಸ್ತವಕ್ಕೆ ಹತ್ತಿರವಾಗಿದೆ. ಆದರೆ ಎರಡೂ ದೇಶಗಳು ಅಪಾಯಕಾರಿ ಅಣ್ವಸ್ತ್ರಗಳನ್ನು ಹೊಂದಿವೆ ಮತ್ತು ಎರಡೂ ದೇಶಗಳ ಮುಖ್ಯಸ್ಥರು ದುಡುಕು ಬುದ್ಧಿಯವರು ಮತ್ತು ವಿವೇಚನಾ ರಹಿತರು ಎನ್ನುವುದೇ ಆತಂಕಕ್ಕೆ ಕಾರಣ. ಯುದ್ಧ ನಡೆದರೆ ಅದು ಅಣ್ವಸ್ತ್ರ ಯುದ್ಧವೇ ಆಗಿರುತ್ತದೆ. ಇದರ ಪರಿಣಾಮ ಊಹಿಸಲೂ ಸಾಧ್ಯವಿಲ್ಲ. ಹಿರೋಶಿಮಾ-ನಾಗಸಾಕಿಯ ಮೇಲೆ ಹಾಕಿದ ಬಾಂಬಿನ ನೂರು ಪಟ್ಟು ಅಧಿಕ ಸಾಮರ್ಥ್ಯದ ಬಾಂಬ್ ಎರಡೂ ದೇಶಗಳ ಬತ್ತಳಿಕೆಯಲ್ಲಿವೆ. ಇಂತಹ ಒಂದು ಬಾಂಬ್ ಸಿಡಿದರೂ ಸರ್ವನಾಶ ಖಂಡಿತ. ಉತ್ತರ ಕೊರಿಯಾ ಮಾತ್ರವಲ್ಲದೆ ಅದರ ಅಕ್ಕಪಕ್ಕದಲ್ಲಿರುವ ದಕ್ಷಿಣ ಕೊರಿಯಾ, ಜಪಾನ್, ಚೀನ ಕೂಡ ಇದರ ಪರಿಣಾಮವನ್ನು ಅನುಭವಿಸಬೇಕಾಗುತ್ತದೆ.
ಉತ್ತರ ಕೊರಿಯಾ ಇಷ್ಟು ಹಾರಾಡುತ್ತಿರುವುದು ಪಕ್ಕದಲ್ಲಿರುವ ಚೀನದ ಮೇಲೆ ಭರವಸೆಯಿರಿಸಿ. ಉತ್ತರ ಕೊರಿಯಾದ ಯುದೊœàನ್ಮಾದವನ್ನು ಚೀನ ನೆಪ ಮಾತ್ರಕ್ಕೆ ಖಂಡಿಸುತ್ತಿದೆಯೇ ಹೊರತು ಯುದ್ಧ ತಪ್ಪಿಸಬೇಕೆಂಬ ಕಳಕಳಿ ಆ ದೇಶಕ್ಕಿಲ್ಲ. ಉತ್ತರ ಕೊರಿಯಾ ಆಹಾರ ಮತ್ತು ಇಂಧನಕ್ಕೆ ಶೇ.80ರಷ್ಟು ಅವಲಂಬಿಸಿರುವುದು ಚೀನವನ್ನು. ಒಳಗಿಂದೊಳಗೆ ಚೀನ ಯುದ್ಧ ನಡೆಯಲಿ ಎಂದು ಅಪೇಕ್ಷಿಸುತ್ತಿದೆ ಎಂಬ ಅನುಮಾನ ಅಮೆರಿಕ ಮತ್ತು ಮಿತ್ರ ದೇಶಗಳಿಗಿದೆ. ಯುದ್ಧವಾದರೆ ತುಸು ಹಾನಿ ಸಂಭವಿಸಿದರೂ ಅದಕ್ಕಿಂತಲೂ ಹೆಚ್ಚು ಪರೋಕ್ಷ ಲಾಭವಾಗಬಹುದು ಎನ್ನುವುದು ಚೀನದ ಲೆಕ್ಕಾಚಾರ. ಹಾಗೆ ನೋಡಿದರೆ ಉತ್ತರ ಕೊರಿಯಾಕ್ಕೆ ಬುದ್ಧಿಮಾತು ಹೇಳುವ ನಿಜವಾದ ಅವಕಾಶ ಇರುವುದು ಚೀನಕ್ಕೆ ಮಾತ್ರ. ಎರಡು ದೇಶಗಳ ನಡುವೆ ವಾಣಿಜ್ಯ ಸಂಬಂಧವೂ ಇದೆ. ಈ ಸಂಬಂಧ ಬಳಸಿ ಉತ್ತರ ಕೊರಿಯಾವನ್ನು ಮಾತುಕತೆಯ ಮೇಜಿಗೆ ಕರೆತರಬಹುದಿತ್ತು. ಇನ್ನು ನಿಜವಾದ ಆತಂಕ ಇರುವುದು ಜಪಾನ್‌ಗೆ. ಅಣ್ವಸ್ತ್ರದ ಭೀಕರ ಪರಿಣಾಮಗಳನ್ನು ಅನುಭವಿಸಿರುವ ಅದು ಇನ್ನೊಂದು ದುರಂತಕ್ಕೆ ತಯಾರಿಲ್ಲ. ಆದರೆ ಅಣ್ವಸ್ತ್ರ ಝಳಪಿಸುತ್ತಿರುವ ದೇಶ ಪಕ್ಕದಲ್ಲೇ ಇರುವುದರಿಂದ ಜಪಾನ್ ಅಮೆರಿಕದ ಜತೆಗೆ ನಿಲ್ಲಬೇಕಾಗಿದೆ.
ಈ ಪರಿಸ್ಥಿತಿಯಲ್ಲಿ ವಿಶ್ವಸಂಸ್ಥೆ ಎರಡೂ ದೇಶಗಳಿಗೆ ಬುದ್ಧಿಮಾತು ಹೇಳಿ ಯುದ್ಧ ತಪ್ಪಿಸಲು ಪ್ರಯತ್ನ ಮಾಡಬೇಕಿತ್ತು. ಆದರೆ ಅದು ಯುದ್ದೋನ್ಮಾದವನ್ನು ನೋಡಿಯೂ ಮೌನ ವಹಿಸಿರುವುದು ಆಶ್ಚರ್ಯವಾಗುತ್ತದೆ. ಟ್ರಂಪ್ ಮತ್ತು ಕಿಮ್ ಅಣ್ವಸ್ತ್ರ ಪ್ರಯೋಗದಿಂದಾಗುವ ವಿನಾಶವನ್ನು ಅರ್ಥ ಮಾಡಿಕೊಂಡು ತಮ್ಮ ಸಮರ ವ್ಯಾಮೋಹವನ್ನು ತೊರೆದು ಮಾತುಕತೆಯ ಮೂಲಕ ವಿವಾದಗಳನ್ನು ಬಗೆಹರಿಸಿಕೊಂಡರೆ ಅವರಿಗೆ ಮಾತ್ರವಲ್ಲದೆ ಇಡೀ ಜಗತ್ತಿಗೆ ಒಳಿತಿದೆ.