ಹಾನಗಲ್ಲ: ಮಹಿಳೆಯರ ರಕ್ಷಣೆಗೆ ಸರಕಾರ ಮಹಿಳಾ ಪರ ಕಾನೂನುಗಳನ್ನು ರೂಪಿಸಿದೆ. ಇದರ ಸದುಪಯೋಗ ಬೇಕೆ ವಿನಃ ದುರುಪಯೋಗವಾಗಬಾರದು ಎಂದು ದಿವಾಣಿ ನ್ಯಾಯಾಧೀಶರು ಮತ್ತು ತಾಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ಎಫ್.ವಿ. ಕೆಳಗೇರಿ ಹೇಳಿದರು.
ಇಲ್ಲಿಯ ಪ್ರಗತಿ ಲೊಯೋಲ ತಾಲೂಕು ಟ್ರಸ್ಟ್, ಲೊಯೋಲ ವಿಕಾಸ ಕೇಂದ್ರ ಹಾಗೂ ಮಹಿಳಾ ಸ್ವಸಹಾಯ ಸಂಘದ ಸಂಯುಕ್ತ ಆಶ್ರಯದಲ್ಲಿ ನಡೆದ ‘ನ್ಯಾಯಯುತ ಸಮಾಜಕ್ಕಾಗಿ ಸಂಘಟಿತ ಮಹಿಳೆ’ ಮಹಿಳಾ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಇಂದು ಮಹಿಳೆ ಎಲ್ಲ ರಂಗಗಳಲ್ಲಿ ಮೇಲುಗೈ ಸಾಧಿಸಿದ್ದಾಳೆ. ಅನೇಕ ಮಹಿಳೆಯರು ಮದುವೆ, ಮಕ್ಕಳಾದ ಮೇಲೂ ಸಾಧನೆ ಮಾಡಿ ಕುಟುಂಬ ಸಾಧನೆಗೆ ಅಡ್ಡಿಯಾಗಲಾರದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕಾನೂನುಗಳ ದುರುಪಯೋಗವಾಗುತ್ತಿದೆ. ಇದಕ್ಕೆ ಅವಕಾಶ ನೀಡಬಾರದು. ರಾಜೀ ಮುಖಾಂತರ ಸಮಸ್ಯೆಗಳನ್ನು ಇತ್ಯರ್ಥಪಡಿಸಿಕೊಳ್ಳುವುದು ಸೂಕ್ತ. ಬಡವರು, ನಿರಾಶ್ರಿತರು, ನಿರ್ಗತಿಕರು ಅನ್ಯಾಯವಾದಾಗ ಕಾನೂನು ಅರಿವಿಲ್ಲದೆ, ಅಥವಾ ಹಣವಿಲ್ಲದೆ ನ್ಯಾಯ ಪಡೆಯಲು ಸಾಧ್ಯವಾಗದೆ ಪರದಾಡುತ್ತಾರೆ. ಅಂಥವರಿಗಾಗಿಯೇ ಕಾನೂನು ಸೇವಾ ಸಮಿತಿ ಇದ್ದು, ಈ ಸಮಿತಿಗೆ ಅರ್ಜಿ ಸಲ್ಲಿಸಿ ಕಾನೂನು ನೆರವು ಪಡೆದು ತಮ್ಮ ಸಮಸ್ಯೆ ಇತ್ಯರ್ಥ ಮಾಡಿಕೊಳ್ಳುವ ಅವಕಾಶವಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಐಡಿಎಆರ್‌ವೈ ಸಂಸ್ಥೆಯ ಅಧ್ಯಕ್ಷೆ ಪರಿಮಳ ಜೈನ ಉಪನ್ಯಾಸ ನೀಡಿ, ಯಾವುದೇ ಆಸ್ತೆ ಇಲ್ಲದ, ಆರ್ಥಿಕ ಬದ್ಧತೆ ಇಲ್ಲದ ಮಹಿಳೆ ಸಂಘಟನಾತ್ಮಕವಾಗಿ ವೇಗವಾಗಿ ಬೆಳೆಯಬಲ್ಲಳು ಎಂಬುದು ಸ್ವಸಹಾಯ ಸಂಘಗಳಿಂದ ತಿಳಿದು ಬಂದಿದೆ. ಸ್ವಸಹಾಯ ಸಂಘದ ಪರಿಕಲ್ಪನೆ ಬಂದದ್ದು ಬಾಗ್ಲಾ ದೇಶದ ಇಸೂಫ್‌ಖಾನ್ ಎಂಬ ನಿರುದ್ಯೋಗಿ ಯುವಕನಿಂದ. ಮನೆಗೆಲಸ ಮುಗಿಸಿ ಮನೆಮುಂದೆ ಹರಟೆಯಲ್ಲಿ ತೊಡಗಿದ ಮಹಿಳೆಯರಿಗೆ ಸ್ವಸಹಾಯ ಸಂಘಗಳ ಪರಿಕಲ್ಪನೆ ನೀಡಿ ಯಶಸ್ಸು ಹೊಂದಿದ ಎಂದರು.
ಮಹಿಳೆ ಪ್ರಗತಿಯತ್ತ ದಾಪುಗಾಲು ಹಾಕುತ್ತಿದ್ದಾಳೆ. ಆದಾಗ್ಯೂ ಮಹಿಳೆಯರ ಶೋಷಣೆ ನಿಂತಿಲ್ಲ. ಲಿಂಗ ಸಮಾನತೆ ಇನ್ನೂ ಜಾರಿಯಾಗಿಲ್ಲ. ಮಹಿಳೆಯನ್ನು ಜಾಹೀರಾತುಗಳಲ್ಲಿ ಅಶ್ಲೀಲವಾಗಿ ಉಪಯೋಗಿಸಿ ತಮ್ಮ ಉತ್ಪಾದನೆ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಸಂವಿಧಾನ ಬದ್ಧ ಲಿಂಗ ಸಮಾನತೆಗೆ, ನ್ಯಾಯಯುತ ಸಮಾಜಕ್ಕೆ ಮಹಿಳೆ ಸಂಘಟಿತ ಹೋರಾಟ ನಡೆಸಬೇಕಿದೆ ಎಂದ ಅವರು, ಸ್ವಸಹಾಯ ಸಂಘಗಳ ಮೂಲಕ ತಾನೂ ಸುಧಾರಿಸುವ ಮೂಲಕ ತನ್ನ ಕುಟುಂಬವನ್ನೂ ಆರ್ಥಿಕವಾಗಿ ಸುಧಾರಣೆಗೆ ಮುಂದಾಗಬೇಕು ಎಂದರು.
ಲೊಯೋಲ ವಿಕಾಸ ಕೇಂದ್ರದ ನಿರ್ದೇಶಕ ಫಾ.ಜೆರಾಲ್ಡ ಡಿಸೋಜಾ ಪ್ರಾಸ್ತಾವಿಕ ಮಾತನಾಡಿ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ರಾಜಕೀಯವಾಗಿ ಮಹಿಳೆಯನ್ನು ಪುರುಷನಿಗೆ ಸಮಾನರಾಗಿ ಬೆಳೆಸುವ ನಿಟ್ಟಿನಲ್ಲಿ ಸ್ವ ಸಹಾಯ ಸಂಘಗಳು ಸಹಕಾರಿಯಾಗಲಿವೆ. ಲೊಯೋಲ ವಿಕಾಸ ಕೇಂದ್ರ 100ಕ್ಕೂ ಅಧಿಕ ಸ್ವಸಹಾಯ ಸಂಘಗಳ ಸ್ಥಾಪಿಸಿ ಮಹಿಳೆಯರನ್ನು ಸ್ವ ಉದ್ಯೋಗದ ಮೂಲಕ ಆರ್ಥಿಕ ಸಬಲರನ್ನಾಗಿಸುತ್ತಿದೆ. ಇದರೊಂದಿಗೆ ನಾಯಕತ್ವ ಗುಣ ಬೆಳೆಸುತ್ತಿದೆ. ಹೈನುಗಾರಿಕೆ, ಕುರಿ ಸಾಕಣೆ ಮುಂತಾದ ಉದ್ಯೋಗದ ಕುರಿತು ಅರಿವು ಮೂಡಿಸಿ ಮಹಿಳೆಯರನ್ನು ಸದೃಢಗೊಳಿಸುತ್ತಿದೆ ಎಂದರು.
ಪ್ರಗತಿ ಲೊಯೋಲ ತಾಲೂಕು ಟ್ರಸ್ಟ್ ಅಧ್ಯಕ್ಷೆ ಭಾರತಿ ಪೂಜಾರ ಅಧ್ಯಕ್ಷತೆ ವಹಿಸಿದ್ದರು. ಪಿಎಸ್‌ಐ ಆರ್.ವೀರೇಶ, ಸಿಂಡಿಕೇಟ್ ಬ್ಯಾಂಕ್ ವ್ಯವಸ್ಥಾಪಕ ಸಂತೋಷ ಗುಡ್ಡಣ್ಣನವರ, ಇಒ ಚನ್ನಬಸಪ್ಪ ಹಾವಣಗಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರೇಣುಕಾ ಬಿದರಗಡ್ಡಿ, ಶಿಲ್ಪಾ ನಿರ್ವನಮಠ, ಖುಸ್ನುದಾ ಬೇಪಾರಿ ಅತಿಥಿಗಳಾಗಿದ್ದರು. ಪೂಜಾ ಯಳ್ಳೂರ ಸ್ವಾಗತಿಸಿದರು. ಸಾವಿತ್ರಿ ಗಡಿಯಂಕನಹಳ್ಳಿ ನಿರೂಪಿಸಿದರು. ಅನ್ನಪೂರ್ಣ ವಂದಿಸಿದರು. ಸ್ವಸಹಾಯ ಸಂಘಗಳ ಮಹಿಳೆಯರಿಗೆ ಏರ್ಪಡಿಸಿದ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ಮಹಿಳೆಯರಿಗೆ ಬಹುಮಾನ ವಿತರಿಸಲಾಯಿತು.