Advertisement

ಬೇರೆ ರಾಜ್ಯಗಳಲ್ಲಿ ಹೇಗಿದೆ ಮತಾಂತರ ನಿಷೇಧ ಕಾನೂನು?

01:49 PM Sep 23, 2021 | Team Udayavani |
ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್‌ ಅವರು, ಮಂಗಳವಾರ ವಿಧಾನಮಂಡಲ ಅಧಿವೇಶನದಲ್ಲಿ ಕ್ರೈಸ್ತ ಮಿಷನರಿಗಳ ಬಲವಂತದ ಮತಾಂತರದ  ವಿಚಾರವೆತ್ತಿದ್ದರು. ತಮ್ಮ ತಾಯಿಯನ್ನೇ  ಮತಾಂತರ ಮಾಡಲಾಗಿದೆ. ಅಲ್ಲದೇ, ಚಿತ್ರದುರ್ಗ ಜಿಲ್ಲೆಯಲ್ಲಿ ಕ್ರಿಶ್ಚಿಯನ್‌ ಮಿಷನರಿಗಳು ಮತ್ತು ಸಂಘಟನೆಗಳು ಮುಗ್ಧ ಜನರನ್ನು ಬಲವಂತವಾಗಿ ಮತಾಂತರ ಮಾಡುತ್ತಿವೆ. ಉಡುಪಿಯಲ್ಲೂ ಇಂಥ ಘಟನೆ ಕಂಡುಬಂದಿವೆ. ಹೀಗಾಗಿ ಸರಕಾರ ಕಠಿನ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ, ರಾಜ್ಯದಲ್ಲಿ ಬಲವಂತದ ಮತಾಂತರಕ್ಕೆ ಅವಕಾಶವಿಲ್ಲ. ಆಮಿಷವೊಡ್ಡಿ ಮತಾಂತರ ಮಾಡುವುದು ಕಾನೂನಿನ ಪ್ರಕಾರ ಅಪರಾಧ. ಹೀಗಾಗಿ ಮತಾಂತರ ನಿಷೇಧಕ್ಕಾಗಿ ಉತ್ತರ ಪ್ರದೇಶ ಮಾದರಿಯಲ್ಲೇ ಕಾನೂನು ಜಾರಿಗೆ ತರುವುದಾಗಿ ಹೇಳಿದ್ದರು...
Now pay only for what you want!
This is Premium Content
Click to unlock
Pay with

ಕರ್ನಾಟಕದಲ್ಲೀಗ ಮತಾಂತರ ನಿಷೇಧ ಕಾನೂನಿನದ್ದೇ ಸದ್ದು. ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್‌ ಅವರು ತಮ್ಮ ಕುಟುಂಬದಲ್ಲಿನ ಮತಾಂತರ ವಿಚಾರ ಬಹಿರಂಗಗೊಳಿಸಿದ ಮೇಲೆ ಇದರ ಗಾಂಭೀರ್ಯತೆ ಅರ್ಥವಾಗಿದೆ. ಹೀಗಾಗಿ ಮತಾಂತರ ನಿಷೇಧ ಮಾಡುವ ಕಾನೂನು ಜಾರಿ ಮಾಡುವ ಸಂಬಂಧ ರಾಜ್ಯ ಸರಕಾರ ಚಿಂತನೆ ನಡೆಸಿದೆ. ಉತ್ತರ ಪ್ರದೇಶ ಮಾದರಿಯಲ್ಲಿ ಕಾನೂನು ತರುವುದಾಗಿ ಹೇಳಿದೆ. ಹಾಗಾದರೆ ಸದ್ಯ ದೇಶದಲ್ಲಿ ಯಾವ ಯಾವ ರಾಜ್ಯಗಳಲ್ಲಿ ಮತಾಂತರ ನಿಷೇಧ ಕಾನೂನು ಜಾರಿಯಲ್ಲಿದೆ? ಶಿಕ್ಷೆ ಎಷ್ಟು ಎಂಬುದರ ಮೇಲೊಂದು ನೋಟ ಇಲ್ಲಿದೆ.

Advertisement

ರಾಜ್ಯದಲ್ಲೇನು ವಿವಾದ?:

ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್‌ ಅವರು, ಮಂಗಳವಾರ ವಿಧಾನಮಂಡಲ ಅಧಿವೇಶನದಲ್ಲಿ ಕ್ರೈಸ್ತ ಮಿಷನರಿಗಳ ಬಲವಂತದ ಮತಾಂತರದ  ವಿಚಾರವೆತ್ತಿದ್ದರು. ತಮ್ಮ ತಾಯಿಯನ್ನೇ  ಮತಾಂತರ ಮಾಡಲಾಗಿದೆ. ಅಲ್ಲದೇ, ಚಿತ್ರದುರ್ಗ ಜಿಲ್ಲೆಯಲ್ಲಿ ಕ್ರಿಶ್ಚಿಯನ್‌ ಮಿಷನರಿಗಳು ಮತ್ತು ಸಂಘಟನೆಗಳು ಮುಗ್ಧ ಜನರನ್ನು ಬಲವಂತವಾಗಿ ಮತಾಂತರ ಮಾಡುತ್ತಿವೆ. ಉಡುಪಿಯಲ್ಲೂ ಇಂಥ ಘಟನೆ ಕಂಡುಬಂದಿವೆ. ಹೀಗಾಗಿ ಸರಕಾರ ಕಠಿನ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ, ರಾಜ್ಯದಲ್ಲಿ ಬಲವಂತದ ಮತಾಂತರಕ್ಕೆ ಅವಕಾಶವಿಲ್ಲ. ಆಮಿಷವೊಡ್ಡಿ ಮತಾಂತರ ಮಾಡುವುದು ಕಾನೂನಿನ ಪ್ರಕಾರ ಅಪರಾಧ. ಹೀಗಾಗಿ ಮತಾಂತರ ನಿಷೇಧಕ್ಕಾಗಿ ಉತ್ತರ ಪ್ರದೇಶ ಮಾದರಿಯಲ್ಲೇ ಕಾನೂನು ಜಾರಿಗೆ ತರುವುದಾಗಿ ಹೇಳಿದ್ದರು.

ಏನಿದು ಉತ್ತರ ಪ್ರದೇಶ ಮಾದರಿ? :

ವ್ಯಕ್ತಿಯೊಬ್ಬನನ್ನು ಮತಾಂತರಿಸಲು ತಪ್ಪು ವ್ಯಾಖ್ಯಾನ, ಬಲಪ್ರಯೋಗ, ಅನಗತ್ಯ ಪ್ರಭಾವ, ಆಕರ್ಷಣೆ, ಮದುವೆ ಅಥವಾ ಯಾವುದೇ ಮೋಸದ ವಿಧಾನಗಳನ್ನು ಬಳಸುವಂತಿಲ್ಲ. ಒಂದು ವೇಳೆ ಈ ವಿಧಾನಗಳನ್ನು ಬಳಸಿ ಮತಾಂತರ ಮಾಡಿದರೆ, ಅಂಥವರಿಗೆ ಕನಿಷ್ಠ ಒಂದು ವರ್ಷ ಜೈಲು ಅಥವಾ ಐದು ವರ್ಷದ ವರೆಗೆ ಜೈಲು ಶಿಕ್ಷೆ, ಅಪ್ರಾಪ್ತರು, ಮಹಿಳೆ ಅಥವಾ ಎಸ್‌ಸಿ-ಎಸ್‌ಟಿಗೆ ಸೇರಿದವರನ್ನು ಬಲವಂತವಾಗಿ ಮತಾಂತರ ಮಾಡಿದರೆ, ಅಂಥವರಿಗೆ ಕನಿಷ್ಠ 2 ವರ್ಷ, ಗರಿಷ್ಠ 10 ವರ್ಷಗಳ ವರೆಗೆ ಜೈಲು ಶಿಕ್ಷೆ, ಸಾಮೂಹಿಕವಾಗಿ ಮತಾಂತರ ಮಾಡಿದರೆ, ಕನಿಷ್ಠ 3 ವರ್ಷ, ಗರಿಷ್ಠ 10 ವರ್ಷಗಳ ವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಹಾಗೆಯೇ 15 ಸಾವಿರದಿಂದ ಗರಿಷ್ಠ 50 ಸಾವಿರ ರೂ.ವರೆಗೆ ದಂಡ ಮತ್ತು ಬಲವಂತವಾಗಿ ಮತಾಂತರವಾದವರಿಗೆ ಪರಿಹಾರ ರೂಪದಲ್ಲಿ 5 ಲಕ್ಷ ರೂ. ನೀಡಬೇಕಾಗುತ್ತದೆ. ವಿಶೇಷವಾಗಿ ಮದುವೆ ಉದ್ದೇಶಕ್ಕಾಗಿ ಮತಾಂತರ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

Advertisement

ಮತಾಂತರ ನಿಷೇಧ ಜಾರಿಯಲ್ಲಿರುವ ರಾಜ್ಯಗಳು :

 

ಹಿಮಾಚಲ ಪ್ರದೇಶ :

2019ರಲ್ಲಿ ಮತಾಂತರ ನಿಷೇಧ ಕಾನೂನು ಜಾರಿಗೆ ಬಂದಿದ್ದು, ಮೋಸ, ಒತ್ತಾಯ, ಆಮಿಷದ ಮೂಲಕ ಮತಾಂತರ ಮಾಡುವಂತಿಲ್ಲ. ಹಾಗೆಯೇ ಮದುವೆಯ ಉದ್ದೇಶಕ್ಕಾಗಿ ಮತಾಂತರ ಮಾಡುವುದೂ ತಪ್ಪು. ವ್ಯಕ್ತಿಯೊಬ್ಬ ಸ್ವಇಚ್ಛೆಯಿಂದ ಅಥವಾ ಧಾರ್ಮಿಕ ನಾಯಕನ ಮುಂದೆ ಮತಾಂತರವಾಗುವುದಾದರೆ, ಒಂದು ತಿಂಗಳು ಮೊದಲು ಮಾಹಿತಿ ನೀಡಬೇಕು. ಇಲ್ಲಿ ಒಂದರಿಂದ ಏಳು ವರ್ಷಗಳ ವರೆಗೆ ಜೈಲು ಶಿಕ್ಷೆ ಇದೆ. ಆದರೆ ದಂಡದ ಬಗ್ಗೆ ಪ್ರಸ್ತಾವಿಸಿಲ್ಲ.

ಗುಜರಾತ್‌ :

2003ರಲ್ಲಿ ಈ ಕಾನೂನು ಜಾರಿಗೆ ಬಂದಿದ್ದು, ಬಲವಂತವಾಗಿ, ಮೋಸ ಮತ್ತು ಆಮಿಷದ ಮೂಲಕ ಮತಾಂತರ ಮಾಡುವಂತಿಲ್ಲ. ಸ್ವಇಚ್ಛೆಯಿಂದ ಮತಾಂತರವಾದರೆ, 10 ದಿನಗಳ ಬಳಿಕ, ಧಾರ್ಮಿಕ ನಾಯಕನ ಕಡೆಯಿಂದ ಮತಾಂತರ ಪ್ರಕ್ರಿಯೆ ನಡೆದರೆ ಮೊದಲೇ ಮಾಹಿತಿ ನೀಡಬೇಕು. ಇಲ್ಲಿ ಬಲವಂತದ ಮತಾಂತರಕ್ಕೆ 3ರಿಂದ 4 ವರ್ಷ ಜೈಲು, 50 ಸಾವಿರದಿಂದ 1 ಲಕ್ಷ ರೂ.ಗಳ ವರೆಗೆ ದಂಡ ವಿಧಿಸಲಾಗುತ್ತದೆ.

ಮಧ್ಯ ಪ್ರದೇಶ :

ಇಲ್ಲಿ ಬಲವಂತದ ಮತಾಂತರ ನಿಷೇಧ ಕಾಯ್ದೆ 1968ರಲ್ಲಿಯೇ ಜಾರಿಗೆ ಬಂದಿದೆ. ಸ್ವಇಚ್ಛೆಯಿಂದ ಮತಾಂತರವಾದ ಮೇಲೆ ಏಳು ದಿನಗಳ ಒಳಗೆ ಮಾಹಿತಿ ನೀಡಬೇಕು. ಬಲವಂತವಾಗಿ ಮತಾಂತರ ಮಾಡಿದರೆ ಒಂದರಿಂದ ಎರಡು ವರ್ಷ ಜೈಲು ಹಾಗೂ ಐದರಿಂದ 10 ಸಾವಿರ ರೂ. ವರೆಗೆ ದಂಡ ವಿಧಿಸಲಾಗುತ್ತದೆ. ಹಾಗೆಯೇ ಮತಾಂತರ ಪ್ರಕ್ರಿಯೆಯಲ್ಲಿ ಲೋಪಗಳಾದರೆ ಇಲ್ಲೂ ಜೈಲು ಮತ್ತು ದಂಡ ವಿಧಿಸಲಾಗುತ್ತದೆ.

ಉತ್ತರಾಖಂಡ :

2018ರಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ಬಂದಿದ್ದು, ಮೋಸ, ಬಲವಂತ, ಆಮೀಷ ಹಾಗೂ ವಿವಾಹದ ಉದ್ದೇಶಕ್ಕಾಗಿ ಮತಾಂತರ ಮಾಡುವಂತಿಲ್ಲ. ಮತಾಂತರವಾಗುವ ಒಂದು ತಿಂಗಳು ಮುನ್ನ ಸಂಬಂಧಪಟ್ಟವರಿಗೆ ಮಾಹಿತಿ ನೀಡಬೇಕು. ಒಂದರಿಂದ ಏಳು ವರ್ಷ ಜೈಲು ಶಿಕ್ಷೆ ಬಗ್ಗೆ ಪ್ರಸ್ತಾವಿಸಲಾಗಿದೆ. ಆದರೆ, ದಂಡದ ಬಗ್ಗೆ ಯಾವುದೇ ಉಲ್ಲೇಖವಿಲ್ಲ.

ಝಾರ್ಖಂಡ್‌ :

2017ರಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ಬಂದಿದ್ದು, ಇಲ್ಲೂ ಬಲವಂತವಾಗಿ ಮತಾಂತರ ಮಾಡುವಂತಿಲ್ಲ. ಮತಾಂತರಕ್ಕೆ ಏಳು ದಿನಗಳಿಗೆ ಮುನ್ನ ವ್ಯಕ್ತಿಯೊಬ್ಬ ಸಂಬಂಧಪಟ್ಟ ಅಧಿಕಾರಿಗೆ ಮಾಹಿತಿ ನೀಡಬೇಕು. ಹಾಗೆಯೇ ಧಾರ್ಮಿಕ ನಾಯಕ ಮತಾಂತರ ಮಾಡುವುದಾದರೆ 15 ದಿನ ಮುನ್ನ ಮಾಹಿತಿ ಕೊಡಬೇಕು. ಇಲ್ಲೂ 3ರಿಂದ 7 ವರ್ಷ ಜೈಲು, 50 ಸಾವಿರದಿಂದ 1 ಲಕ್ಷ ರೂ.ಗಳ ವರೆಗೆ ದಂಡ ವಿಧಿಸಲಾಗುತ್ತದೆ.

ಛತ್ತೀಸ್‌ಗಢ:

2006ರಿಂದ ಮತಾಂತರ ನಿಷೇಧ ಜಾರಿಯಲ್ಲಿದ್ದು, ಸ್ವಇಚ್ಛೆಯಿಂದ ಮತಾಂತರವಾದರೆ, ಒಂದು ತಿಂಗಳ ಒಳಗೆ ಮಾಹಿತಿ ನೀಡಬೇಕು. ಧಾರ್ಮಿಕ ನಾಯಕ ಮತಾಂತರ ಮಾಡುವುದಾದರೆ, ಒಂದು ತಿಂಗಳು ಮೊದಲೇ ಮಾಹಿತಿ ನೀಡಬೇಕು. ಇಲ್ಲಿ ಬಲವಂತವಾಗಿ ಮತಾಂತರ ಮಾಡಿದರೆ 3ರಿಂದ 4 ವರ್ಷಗಳ ವರೆಗೆ ಜೈಲು, 20 ಸಾವಿರ ರೂ.ಗಳ ವರೆಗೆ ದಂಡ ವಿಧಿಸಲಾಗುತ್ತದೆ.

ಅರುಣಾಚಲ ಪ್ರದೇಶ :

1978ರಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ಬಂದಿದೆ. ಮೋಸದ ಮೂಲಕ, ಬಲವಂತವಾಗಿ, ಆಮೀಷವೊಡ್ಡಿ ಮತಾಂತರ ಮಾಡಿದರೆ, ಎರಡು ವರ್ಷಗಳ ವರೆಗೆ ಜೈಲು ಮತ್ತು 10 ಸಾವಿರ ರೂ.ಗಳ ದಂಡ ವಿಧಿಸಲಾಗುತ್ತದೆ. ಸ್ವಇಚ್ಛೆಯಿಂದ ಮತಾಂತರವಾದ ಮೇಲೆ ಮಾಹಿತಿ ನೀಡಬಹುದು.

ಒಡಿಶಾ :

1967ರಲ್ಲೇ ಮತಾಂತರ ನಿಷೇಧ ಕಾನೂನು ಜಾರಿಗೆ ಬಂದಿದೆ. ಇಲ್ಲೂ ಕೂಡ ಬಲವಂತದ ಮತಾಂತರ ನಿಷೇಧಿಸಲಾಗಿದ್ದು, ಒಂದು ವೇಳೆ ಸ್ವಇಚ್ಚೆಯಿಂದ ಮತಾಂತರಗೊಳ್ಳುವುದಾದರೆ, ಮತಾಂತರ ಮಾಡುವವರು 15 ದಿನ ಮೊದಲೇ ಜಿಲ್ಲಾಧಿಕಾರಿಗೆ ಅಥವಾ ಸಂಬಂಧಪಟ್ಟ ಅಧಿಕಾರಿಗೆ ನೋಟಿಸ್‌ ನೀಡಬೇಕು. ಒಂದು ವೇಳೆ ಬಲವಂತವಾಗಿ ಮತಾಂತರ ಮಾಡಿದರೆ, ಒಂದರಿಂದ ಎರಡು ವರ್ಷಗಳ ವರೆಗೆ ಜೈಲು, ಐದರಿಂದ 10 ಸಾವಿರ ರೂ.ಗಳ ವರೆಗೆ ದಂಡ ವಿಧಿಸಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.