Advertisement

ಕಾನೂನು ಯಾರ ಪೌರತ್ವ ಕಿತ್ತುಕೊಳ್ಳುವುದಿಲ್ಲ

09:35 PM Jan 01, 2020 | Lakshmi GovindaRaj |

ಚಿಕ್ಕಬಳ್ಳಾಪುರ: ದೇಶದಲ್ಲಿರುವ ಅಲ್ಪಸಂಖ್ಯಾತರಿಗೆ ರಕ್ಷಣೆ ಕೊಡುವ ದೃಷ್ಟಿಯಿಂದಲೇ ಕೇಂದ್ರ ಸರ್ಕಾರ ಪೌರತ್ವ ಕಾನೂನನ್ನು ಅನುಷ್ಠಾನಗೊಳಿಸಿದ್ದು, ತಿದ್ದುಪಡಿ ಕಾನೂನು ಯಾರ ಪೌರತ್ವವನ್ನು ಕಿತ್ತುಕೊಳ್ಳುವುದಿಲ್ಲ. ಆದರೆ ಪೌರತ್ವ ವಿರೋಧಿಸಿ ನಡೆಯುತ್ತಿರುವ ಗಲಾಟೆ, ಗಲಭೆಗಳ ಹಿಂದೆ ಕಾಂಗ್ರೆಸ್‌ ಪಿತೂರಿ ಇದೆ ಎಂದು ಬಿಜೆಪಿ ರಾಜ್ಯ ವಕ್ತಾರ ಛಲವಾದಿ ನಾರಾಯಣಸ್ವಾಮಿ ಟೀಕಿಸಿದರು.

Advertisement

ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಪೌರತ್ವ ಕಾನೂನಯಡಿ ಯಾರನ್ನು ದೇಶ ಬಿಟ್ಟು ಕಳುಹಿಸುವುದಿಲ್ಲ. ಇದರ ಬಗ್ಗೆ ಕಾಂಗ್ರೆಸ್‌, ಇಲ್ಲಸಲ್ಲದ ಗೊಂದಲಗಳನ್ನು ಸೃಷ್ಟಿಸುತ್ತಿದ್ದು, ಕಾಂಗ್ರೆಸ್‌ ನಾಯಕರ ಮಾತಿಗೆ ಯಾರು ಕಿವಿಗೂಡಬಾರದೆಂದು ಮನವಿ ಮಾಡಿದರು.

ಕಾಂಗ್ರೆಸ್‌ ಕೊಡುಗೆ ಏನು?: ಪೌರತ್ವದ ವಿಷಯ ನಿನ್ನೆ ಮೊನ್ನೆಯದ್ದಲ್ಲ. ದೇಶಕ್ಕೆ ಸ್ವಾತಂತ್ರ್ಯ ಬಂದಾಗನಿಂದಲೂ ಪೌರತ್ವದ ಬಗ್ಗೆ ಚರ್ಚೆ ಆಗುತ್ತಿದೆ. ದೇಶದಲ್ಲಿ ಎಲ್ಲ ಧರ್ಮಗಳು ಇದ್ದು, ಎಲ್ಲರಿಗೂ ಸಮಾನವಾದ ಹಕ್ಕು ಹಾಗೂ ಅವಕಾಶಗಳನ್ನು ನೀಡಲಾಗುತ್ತಿದೆ. ದೇಶವನ್ನು ಆಳಿದ ಕಾಂಗ್ರೆಸ್‌ ಪಕ್ಷ ಅಲ್ಪಸಂಖ್ಯಾತರನ್ನು ಹಾಗೂ ದಲಿತರನ್ನು ಕೇವಲ ಮತ ಬ್ಯಾಂಕ್‌ ಮಾಡಿಕೊಂಡು ಅವರನ್ನು ಕತ್ತಲಿನಲ್ಲಿಟ್ಟು ರಾಜಕೀಯ ಅಧಿಕಾರ ಪಡೆದಿದ್ದು ಬಿಟ್ಟರೆ ಅವರಿಗೆ ಯಾವುದೇ ಕೊಡುಗೆ ಕೊಟ್ಟಿಲ್ಲ ಎಂದರು.

ಯಾರ ಪೌರತ್ವಕ್ಕೂ ಧಕ್ಕೆ ಬರುವುದಿಲ್ಲ: ಅಲ್ಪಸಂಖ್ಯಾತರ ಹಾಗೂ ದಲಿತರು ಇಲ್ಲದೇ ಹೋಗಿದ್ದರೆ ದೇಶದಲ್ಲಿ ಕಾಂಗ್ರೆಸ್‌ ಹೆಸರು ಹೇಳುವವರೇ ಇರುತ್ತಿರಲಿಲ್ಲ ಎಂದು ವ್ಯಂಗ್ಯವಾಡಿದರು. ಪ್ರಧಾನಿ ನರೇಂದ್ರ ಮೋದಿ ಅಲ್ಪಸಂಖ್ಯಾತರಿಗೆ ರಕ್ಷಣೆ ಕೊಡುವ ಉದ್ದೇಶಿಸಿ ದಶಕಗಳಿಂದ ಸಮಸ್ಯೆಗೆ ಪರಿಹಾರ ಕಾಣದೇ ಇರುವ ಪೌರತ್ವ ಕಾನೂನುಗೆ ತಿದ್ದುಪಡಿ ತಂದಿದ್ದಾರೆ. ಇದರಿಂದ ಯಾರ ಪೌರತ್ವಕ್ಕೂ ಧಕ್ಕೆ ಬರುವುದಿಲ್ಲ. ಯಾರ ಪೌರತ್ವವನ್ನು ಕಿತ್ತುಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಗಲಭೆ ಸೃಷ್ಟಿಸದಿರಿ: ಬಿಜೆಪಿ ಪಕ್ಷಕ್ಕೆ ದೇಶ ಮೊದಲು. ಆನಂತರ ಪಕ್ಷ, ಆದರೆ ಕಾಂಗ್ರೆಸ್‌ಗೆ ದೇಶಕ್ಕಿಂತ ಮೊದಲು ಅಧಿಕಾರ ಬೇಕು. ಆ ಕಾರಣಕ್ಕಾಗಿ ದೇಶದ ಭದ್ರತೆ ಹಾಗೂ ಅಲ್ಪಸಂಖ್ಯಾತರಿಗೆ ರಕ್ಷಣೆ ಕೊಡಲು ರೂಪಿಸಿರುವ ಸಿಎಎ ವಿರುದ್ಧ ಜನರನ್ನು ಎತ್ತಿಕಟ್ಟಿ ಹೋರಾಟಕ್ಕೆ ಇಳಿಸುವ ಮೂಲಕ ದೇಶದಲ್ಲಿ ಗಲಭೆಗಳನ್ನು ಸೃಷ್ಟಿಸಿ ಆಶಾಂತಿ ಮೂಡಿಸುತ್ತಿದೆ ಎಂದರು.

Advertisement

ಮಾಜಿ ಶಾಸಕ ಎಂ.ಶಿವನಾಂದ್‌, ಬಿಜೆಪಿ ತಾಲೂಕು ಅಧ್ಯಕ್ಷ ಅಗಲಗುರ್ಕಿ ಚಂದ್ರಶೇಖರ್‌, ಕಾರ್ಯದರ್ಶಿ ಕೇತೇನಹಳ್ಳಿ ಕೃಷ್ಣಾರೆಡ್ಡಿ, ನಗರ ಘಟಕ ಅಧ್ಯಕ್ಷ ಮಂಜುನಾಥ, ಮುಖಂಡರಾದ ಎ.ವಿ.ಬೈರೇಗೌಡ, ಲಕ್ಷ್ಮೀಪತಿ, ಹನುಮಂತಪ್ಪ, ಆರ್‌.ಶ್ರೀನಿವಾಸ್‌, ರಾಮಣ್ಣ, ಕಳವಾರ ಶ್ರೀಧರ್‌ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಕಾಂಗ್ರೆಸ್‌ ನಾಯಕರ ತಲೆಯಲ್ಲಿ ಜ್ಞಾನ ಇಲ್ಲ. ಏನೇ ಹೇಳಿದರೂ ಅವರ ತಲೆಗೆ ಹತ್ತಲ್ಲ. ಆ ಕಾರಣಕ್ಕಾಗಿ ಅವರಿಗೆ ಎನ್‌ಆರ್‌ಸಿ, ಸಿಇಇ ಬಗ್ಗೆ ಅರ್ಥ ಆಗುತ್ತಿಲ್ಲ. ದೇಶದ ಅಲ್ಪಸಂಖ್ಯಾತರನ್ನು ಒಕ್ಕಲೆಬ್ಬಿಸುವ ಕೆಲಸವನ್ನು ಎಂದಿಗೂ ಬಿಜೆಪಿ ಮಾಡುವುದಿಲ್ಲ. ಪಾಕಿಸ್ತಾನ, ಬಾಂಗ್ಲದೇಶ ಹೊಸದಾಗಿ ರಚನೆಯಾದಾಗ ದೇಶದಿಂದ ಹೋಗದ ಮುಸ್ಲಿಂರನ್ನು ನಾವು ಈಗ ಹೊರ ಕಳುಹಿಸಲು ಸಾಧ್ಯವೇ? ಅಲ್ಪಸಂಖ್ಯಾತರ ರಕ್ಷಣೆಗಾಗಿಯೆ ಕೇಂದ್ರ ಸರ್ಕಾರ ಪೌರತ್ವ ಕಾನೂನು ತಂದಿದೆ.
-ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ರಾಜ್ಯ ವಕ್ತಾರ

Advertisement

Udayavani is now on Telegram. Click here to join our channel and stay updated with the latest news.

Next