“ಲಂಬೋದರ ಲಕುಮಿಕರ…’ ಎಂಬ ಹಾಡಿನ ಸಾಲು ಬಹುಶಃ ಎಲ್ಲರಿಗೂ ಗೊತ್ತು. ಈ ಹಾಡಿನ ಪೀಠಿಕೆಗೆ ಕಾರಣ, “ಲಂಡನ್‌ನಲ್ಲಿ ಲಂಬೋದರ’ ಚಿತ್ರ. ಹೌದು, ಈ ಚಿತ್ರ ಇದೀಗ ಶೇ.70 ರಷ್ಟು ಚಿತ್ರೀಕರಣ ಪೂರ್ಣಗೊಳಿಸಿ, ಈಗ ಟೀಸರ್ ಕೂಡ ಬಿಡುಗಡೆಯಾಗಿದೆ. ಹಲವು ನಿರ್ದೇಶಕರ ಜೊತೆ ಸಹ ನಿರ್ದೇಶಕನಾಗಿ ಕೆಲಸ ಮಾಡಿ ಅನುಭವವಿರುವ, ಈಗಾಗಲೇ ಕೆಲವು ಕಿರುಚಿತ್ರಗಳನ್ನು ನಿರ್ದೇಶಿಸಿರುವ ರಾಜ್‌ಸೂರ್ಯ ಮೊದಲ ಬಾರಿಗೆ “ಲಂಡನ್‌ನಲ್ಲಿ ಲಂಬೋದರ’ ಚಿತ್ರಕ್ಕೆ ನಿರ್ದೇಶನದ ಸಾರಥ್ಯ ವಹಿಸಿಕೊಂಡಿದ್ದಾರೆ.
ಚಿತ್ರದ ಕಥಾಹಂದರದ ಬಗ್ಗೆ ಮಾತನಾಡುವ ರಾಜ್ ಸೂರ್ಯ, “ದಿನಭವಿಷ್ಯ ನೋಡಿಕೊಂಡು ದಿನಚರಿ ಆರಂಭಿಸುವ ಹುಡುಗನೊಬ್ಬನ ಜೀವನದಲ್ಲಿ ಏನೇನು ಘಟನೆಗಳು ನಡೆಯುತ್ತವೆ. ಕೆಲವೊಂದು ನಂಬಿಕೆಗಳು ಎಂತಹ ಸಂಕಷ್ಟಕ್ಕೆ ಸಿಲುಕಿಸಬಹುದು ಎಂಬುದನ್ನು ಚಿತ್ರದಲ್ಲಿ ಹೇಳಿದ್ದೇವೆ. ಲಂಬೋದರ ಎಂಬ ಪಾತ್ರದ ಮೂಲಕ ಇಡೀ ಚಿತ್ರದ ಕಥೆ ನಡೆಯುತ್ತದೆ. ಒಂದೆಡೆ ಲಂಬೋದರ ಪೇಚಿಗೆ ಸಿಲುಕುತ್ತಿದ್ದರೆ, ಮತ್ತೂಂದೆಡೆ ಅದನ್ನು ನೋಡುತ್ತಿದ್ದವರಿಗೆ ನಗು ಬರುತ್ತಿರುತ್ತದೆ.
ಅಂತಿಮವಾಗಿ ಲಂಬೋದರ ತನ್ನೆಲ್ಲ ಸಂಕಷ್ಟಗಳನ್ನು ಹೇಗೆ ಎದುರಿಸಿ ನಿಲ್ಲುತ್ತಾನೆ ಎಂಬುದೇ ಚಿತ್ರದ ಒಂದು ಎಳೆ. ಇಡೀ ಚಿತ್ರ ನವಿರಾದ ಹಾಸ್ಯದ ಮೂಲಕ ನಡೆಯುತ್ತದೆ’ ಎನ್ನುತ್ತಾರೆ ಅವರು. ಅಂದಹಾಗೆ, ಚಿಕ್ಕ ಮನೆಯೊಂದರಲ್ಲಿ ಶುರುವಾಗುವ ಈ ಚಿತ್ರದ ಕಥೆ, ಕೊನೆಗೆ ಲಂಡನ್‌ಗೆ ಹೋಗಿ ನಿಲ್ಲುತ್ತದೆ. ಆಮೇಲೆ ಏನೆಲ್ಲಾ ಆಗುತ್ತದೆ ಎಂಬುದನ್ನು ಚಿತ್ರದಲ್ಲೇ ನೋಡಬೇಕೆಂಬುದು ಅವರ ಮಾತು. ಚಿತ್ರದಲ್ಲಿ “ಲಂಬೋದರ’ನಾಗಿ ಮೈಸೂರು ಮೂಲದ, ಪ್ರಸ್ತುತ ಯು.ಕೆ ನಿವಾಸಿ ಸಂತೋಷ್ ಕಾಣಿಸಿಕೊಳ್ಳುತ್ತಿದ್ದಾರೆ.
ಬಿಗ್‌ಬಾಸ್ ಖ್ಯಾತಿಯ ಶೃತಿ ಪ್ರಕಾಶ್, ಲಂಬೋದರನಿಗೆ ನಾಯಕಿ. ಉಳಿದಂತೆ ಅಚ್ಯುತ ಕುಮಾರ್, ಸಾಧು ಕೋಕಿಲ, ಸಂಪತ್ ರಾಜ್ ಇತರರು ನಟಿಸಿದ್ದಾರೆ. ಚಿತ್ರದಲ್ಲಿ ಪ್ರಣವ್ ಐದು ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಸಿಂಪಲ್‌ಸುನಿ, ಜಯಂತ್ ಕಾಯ್ಕಣಿ ಗೀತೆ ರಚಿಸಿದ್ದಾರೆ. ಗಣೇಶ್ ಹೈದರಾಬಾದ್ ಛಾಯಗ್ರಹಣವಿದೆ. ಪ್ರಶಾಂತ್ ರಾಜಪ್ಪ ಸಂಭಾಷಣೆ ಬರೆದಿದ್ದಾರೆ. “ಲಂಡನ್ ಸ್ಕ್ರೀನ್ಸ್’ ಬ್ಯಾನರ್ ಮೂಲಕ ತಯಾರಾಗುತ್ತಿರುವ ಈ ಚಿತ್ರಕ್ಕೆ ಲಂಡನ್ ನಿವಾಸಿ ಕನ್ನಡಿಗರಾದ ಕಲ್ಯಾಣ್, ಡಾ.ಕುಮಾರ್, ಡಾ.ಸಚ್ಚಿ, ಡಾ.ವಿಶ್ವನಾಥ್ ಸೇರಿದಂತೆ ಸುಮಾರು ಹದಿನೈದು ಸಮಾನ ಮನಸ್ಕರು ನಿರ್ಮಾಣ ಮಾಡಿದ್ದಾರೆ.