ಲಂಡನ್: ವಿಶ್ವ ಆ್ಯತ್ಲೆಟಿಕ್ ಚಾಂಪಿಯನ್‌ಶಿಪ್‌ನ ಸ್ಟೀಪಲ್‌ಚೇಸ್ ಸ್ಪರ್ಧೆಯಲ್ಲಿ ಕೀನ್ಯ ಆ್ಯತ್ಲೀಟ್‌ಗಳ ಪ್ರಾಬಲ್ಯ ಮುಂದುವರಿದಿದೆ. ಲಂಡನ್‌ನಲ್ಲಿ ಸಾಗುತ್ತಿರುವ ವಿಶ್ವ ಆ್ಯತ್ಲೆಟಿಕ್ಸ್‌ನ 3,000 ಮೀ. ಸ್ಟೀಪಲ್‌ಚೇಸ್‌ನಲ್ಲಿ ಕೀನ್ಯದ ಕಾನ್ಸೆಸ್ಲಸ್ ಕಿಪ್ರೊಟೊ ಚಿನ್ನ ಗೆದ್ದು ಸಂಭ್ರಮಿಸಿದ್ದಾರೆ.
ಎರಡು ವರ್ಷಗಳ ಹಿಂದೆ ಬೀಜಿಂಗ್‌ನಲ್ಲಿ ಬೆಳ್ಳಿ ಜಯಿಸಿದ್ದ ಕಿಪ್ರೊಟೊ 300 ಮೀ. ಇರುವಾಗ ಮುನ್ನಡೆ ಸಾಧಿಸಿ 8 ನಿಮಿಷ 14.12 ಸೆ.ನಲ್ಲಿ ಗುರಿ ತಲುಪಿ ಚಿನ್ನ ಗೆದ್ದರು. ಪೂರ್ವ ಆಫ್ರಿಕನ್ ರಾಷ್ಟ್ರವಾದ ಕೀನ್ಯ ವಿಶ್ವ ಚಾಂಪಿಯನ್‌ಶಿಪ್‌ನ 15 ಆವೃತ್ತಿಗಳಲ್ಲಿ 12 ಬಾರಿ ಚಿನ್ನ ಗೆದ್ದ ಸಾಧನೆ ಮಾಡಿದೆ.
ಬೀಜಿಂಗ್‌ನಲ್ಲಿ ಕೀನ್ಯ ಈ ಸ್ಪರ್ಧೆಯಲ್ಲಿ ಕ್ಲೀನ್‌ಸ್ವೀಪ್ ಸಾಧನೆಗೈದರೆ ಈ ಬಾರಿ ಇದು ಸಾಧ್ಯವಾಗಲಿಲ್ಲ. ಮೊರೊಕ್ಕೋದ ಸೌಫಿಯಾನ್ ಎಲ್ ಬಕ್ಕಾಲಿ ಬೆಳ್ಳಿ ಗೆದ್ದರು. ಇದು ಅವರ ಮೊದಲ ಪ್ರಮುಖ ಕೂಟದ ಪದಕವಾಗಿದೆ. ಕಿಪ್ರೊಟೊ ಅವರಿಗೆ ತೀವ್ರ ಸ್ಪರ್ಧೆ ನೀಡಿದ್ದ ಅಮೆರಿಕದ ಇವಾನ್ ಜಾಗೆರ್ 8:15.23ಸೆ.ನೊಂದಿಗೆ ಕಂಚು ಪಡೆದರು. ವಿಶ್ವ ಚಾಂಪಿಯನ್‌ಶಿಪ್‌ನ ಸ್ಟೀಪಲ್‌ಚೇಸ್‌ನಲ್ಲಿ ಪದಕ ಗೆದ್ದ ಅಮೆರಿಕದ ಮೊದಲ ಆ್ಯತ್ಲೀಟ್ ಎಂಬ ಗೌರವಕ್ಕೆ ಜಾಗೆರ್ ಪಾತ್ರರಾಗಿದ್ದಾರೆ.
400 ಮೀ.: ನೀಕೆರ್ಕ್‌ಗೆ ಚಿನ್ನ
ದಕ್ಷಿಣ ಆಫ್ರಿಕಾದ ವೇಡ್ ವಾನ್ ನೀಕೆರ್ಕ್ ಅವರು 400 ಮೀ. ಸ್ಪರ್ಧೆಯ ಚಿನ್ನವನ್ನು ತನ್ನಲ್ಲಿ ಉಳಿಸಿಕೊಂಡಿದ್ದಾರೆ. ಒಲಿಂಪಿಕ್, ಹಾಲಿ ಮತ್ತು ವಿಶ್ವ ದಾಖಲೆ ಹೊಂದಿರುವ ನೀಕೆರ್ಕ್ 43.98 ಸೆ.ನಲ್ಲಿ ಗುರಿ ತಲುಪಿ ಚಿನ್ನ ಪಡೆದಿದ್ದಾರೆ. ಬಹಮಾಸ್‌ನ ಸ್ಟೀವನ್ ಗಾರ್ಡಿನೆಲ್ ಬೆಳ್ಳಿ ಮತ್ತು 20ರ ಹರೆಯದ ಕತಾರ್‌ನ ಅಬ್ದಲೇಲಾ ಹರೋನ್ ಕಂಚು ಗೆದ್ದಿದ್ದಾರೆ.