ಮೈಸೂರು: ಇತ್ತೀಚೆಗೆ ನಿಧನರಾದ ಖ್ಯಾತ ಹಿನ್ನೆಲೆ ಗಾಯಕ ಎಲ್.ಎನ್. ಶಾಸ್ತ್ರಿ ಅವರ ಜೀವಮಾನದ ಸಾಧನೆಯನ್ನು ಸ್ಮರಿಸುವ ನಿಟ್ಟಿನಲ್ಲಿ ಕನ್ನಡ ಚಿತ್ರರಂಗ ಮತ್ತು ರಾಜ್ಯಸರ್ಕಾರ ಯೋಜನೆ ರೂಪಿಸಬೇಕಿದೆ ಎಂದು ಬಿಜೆಪಿ ಮುಖಂಡ ಕೆ.ಆರ್.ಮೋಹನ್‌ಕುಮಾರ್ ಒತ್ತಾಯಿಸಿದರು.
ಮೈಸೂರು ಜಿಲ್ಲಾ ಬ್ರಾಹ್ಮಣ ಸಂಘದ ವತಿಯಿಂದ ನಗರದ ಕೃಷ್ಣಮೂರ್ತಿಪುರಂ ರಾಮಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ಹಿನ್ನಲೆಗಾಯಕ ಎಲ್.ಎನ್. ಶಾಸ್ತ್ರಿ ಅವರ ಸಂತಾಪ ಸಭೆಯಲ್ಲಿ ಮಾತನಾಡಿದ ಅವರು, ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಂಸ್ಕಾರದ ಜತೆಗೆ ಶ್ರಮದ ಅಗತ್ಯವಿದ್ದು, ಲಕ್ಷ್ಮೀನರಸಿಂಹ ಶಾಸ್ತ್ರಿ(ಎಲ್.ಎನ್.ಶಾಸ್ತ್ರಿ) ಇದಕ್ಕೆ ಸಾಕ್ಷಿಯಾಗಿದ್ದರು. ಕನ್ನಡಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಶಾಸ್ತ್ರೀ ಅವರು ಸಾವಿರಾರು ಗೀತೆಗಳನ್ನು ಹಾಡುವ ಮೂಲಕ ಮನೆಮಾತಾಗಿದ್ದರು.
ಅಜಗಜಾಂತರ ಚಿತ್ರದ ಮೂಲಕ ಹಿನ್ನೆಲೆಗಾಯಕರಾಗಿ ವೃತ್ತಿ ಬದುಕು ಆರಂಭಿಸಿದ ಅವರ ಶ್ರಮದ ಸಾರ್ಥಕತೆ ಇತರೆ ಕಲಾವಿದರಿಗೆ ಸ್ಫೂರ್ತಿಯಾಗಿದೆ. ಈ ಹಿನ್ನೆಲೆಯಲ್ಲಿ ಕನ್ನಡ ಚಿತ್ರರಂಗ ಮತ್ತು ರಾಜ್ಯ ಸರ್ಕಾರ ಎಲ್.ಎನ್.ಶಾಸ್ತ್ರಿ ಅವರ ಸಾಧನೆಯನ್ನು ಸ್ಮರಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಬೇಕಿದೆ ಎಂದರು.
ಕನ್ನಡಿಗರ ಗಮನ ಸೆಳೆದ ಗಾಯಕ: ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ. ಪ್ರಕಾಶ್ ಮಾತನಾಡಿ, ಸಂಗೀತ ನಿರ್ದೇಶಕರಾಗಿ, ಹಿನ್ನಲೆಗಾಯಕರಾಗಿ ಎಲ್.ಎನ್. ಶಾಸ್ತ್ರಿ ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಮೂರು ಸಾವಿರಕ್ಕೂ ಹೆಚ್ಚು ಗೀತೆಗಳನ್ನು ಹಾಡಿರುವ ಅವರು ಹಂಸಲೇಖ, ವಿ.ಮನೋಹರ್ ಸೇರಿದಂತೆ ಅನೇಕ ಸಂಗೀತ ನಿರ್ದೇಶಕರೊಂದಿಗೆ ಕೆಲಸ ಮಾಡುವ ಮೂಲಕ ಕನ್ನಡಿಗರ ಗಮನಸೆಳೆದಿದ್ದರು.
ಅಲ್ಲದೆ ಸಾವಿರಾರು ಯುವ ಗಾಯಕರುಗಳಿಗೆ ಸೂಕ್ತ ಪ್ರೋತ್ಸಾಹ ನೀಡಿ, ಮುಖ್ಯವಾಹಿನಿಗೆ ತರುವಲ್ಲಿ ಶ್ರಮಿಸಿದ್ದರು. ಕನ್ನಡ ಚಿತ್ರರಂಗದಲ್ಲಿ ತಮ್ಮ ಗಾಯನದ ಮೂಲಕ ಉನ್ನತಸ್ಥಾನಕ್ಕೇರಿದ್ದರೂ ಎಂದಿಗೂ ಆಡಂಬರವಿಲ್ಲದ ಸರಳಜೀವನ ನಡೆಸುತ್ತಿದ್ದ ಶಾಸ್ತ್ರೀ ಅವರು, ಇಂದಿನ ಯುವಪೀಳಿಗೆಯ ಕಲಾವಿದರಿಗೆ ಮಾದರಿಯಾಗಿದ್ದಾರೆ ಎಂದು ಬಣ್ಣಿಸಿದರು.
ಸಂತಾಪ ಸೂಚಕ ಸಭೆಯಲ್ಲಿ ಬಿಜೆಪಿ ಮುಖಂಡರಾದ ಎಚ್.ವಿ ರಾಜೀವ್, ಪಣೀಶ್, ಪಾಲಿಕೆ ಸದಸ್ಯ ಮ.ವಿ.ರಾಂಪ್ರಸಾದ್, ಮಾಜಿ ಸದಸ್ಯ ಎಂ.ಡಿ.ಪಾರ್ಥಸಾರಥಿ, ಮೈಕ್ ಚಂದ್ರು, ಬ್ರಾಹ್ಮಣ ಯುವ ವೇದಿಕೆ ಅಧ್ಯಕ್ಷ ಮುಳ್ಳೂರು ಗುರುಪ್ರಸಾದ್, ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ಅಜ¿… ಶಾಸ್ತ್ರಿ, ಕಡಕೊಳ ಜಗದೀಶ್, ಶ್ರೀಕಾಂತ್ ಕಶ್ಯಪ್, ವಿನಯ್ ಕಣಗಾಲ್ ಮತ್ತಿತರರು ಭಾಗವಹಿಸಿದ್ದರು.