Advertisement

ಕಟ್ಟಕಡೆಯ ವ್ಯಕ್ತಿಗೂ ಆರೋಗ್ಯ ಸೇವೆ ಸಿಗಬೇಕು: ರಾಷ್ಟ್ರಪತಿ

12:28 AM Feb 08, 2021 | Team Udayavani |

ಬೆಂಗಳೂರು: ಭವಿಷ್ಯದಲ್ಲಿ ಎದುರಾಗಬಹುದಾದ ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಭಾರತ ಸಜ್ಜಾಗಬೇಕಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆ ಅಗತ್ಯ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಉತ್ತಮ ಆರೋಗ್ಯ ಸೇವೆ ಸಿಗಬೇಕು ಎಂದು ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಪ್ರತಿಪಾದಿಸಿದರು.

Advertisement

ರಾಜೀವ್‌ ಗಾಂಧಿ ವಿಶ್ವವಿದ್ಯಾನಿಲಯದಿಂದ ರವಿವಾರ ಹೊಸೂರು ರಸ್ತೆಯ ನಿಮ್ಹಾನ್ಸ್‌ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ 23ನೇ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ಕೋವಿಡ್‌-19 ಅನಿರೀಕ್ಷಿತವಾಗಿ ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ದೊಡ್ಡ ತಲ್ಲಣ ಉಂಟುಮಾಡಿದೆ. ಭವಿಷ್ಯದಲ್ಲಿ ಎದುರಾಗಬಹುದಾದ ಇಂಥ ಸವಾಲುಗಳನ್ನು ಎದುರಿಸಲು ಈಗಿಂದಲೇ ಸಿದ್ಧರಾಗಬೇಕು. ಕೋವಿಡ್‌ನಿಂದ ಜಗತ್ತು ಉತ್ತಮ ಪಾಠ ಕಲಿತಿದೆ. ಕೊರೊನೋತ್ತರದಲ್ಲಿ ಜಗತ್ತು ಸಾರ್ವಜನಿಕ ಆರೋಗ್ಯ ವಲಯದ ಮೇಲೆ ಇನ್ನಷ್ಟು ಹೆಚ್ಚಿನ ಗಮನ ಹರಿಸಬೇಕೆಂದು ಹೇಳಿದರು.

ಯುವ ವೈದ್ಯರಿಗೆ ಕಿವಿಮಾತು
ಪದವಿ ಪಡೆದ ಕೂಡಲೇ ಕಲಿಕೆ ಕೊನೆಯಾಗುವುದಿಲ್ಲ. ಕಲಿಕೆಯ ಒಂದು ಹಂತ ಮುಗಿದಿದೆ. ನಿಜವಾದ ಶಿಕ್ಷಣ ವೃತ್ತಿಯಿಂದ ಆರಂಭವಾಗಲಿದೆ ಎಂದು ರಾಷ್ಟ್ರಪತಿ ಹೇಳಿದರು.

ಆರೋಗ್ಯ ಸಚಿವ ಡಾ| ಕೆ. ಸುಧಾಕರ್‌ ಘಟಿಕೋತ್ಸವ ನಡೆಸಿ ಕೊಟ್ಟರು. ಸಿಎಂ ಯಡಿಯೂರಪ್ಪ, ಕುಲಪತಿ ಡಾ| ಎಸ್‌. ಸಚ್ಚಿದಾನಂದ ಉಪಸ್ಥಿತರಿದ್ದರು.

ಡಾಕ್ಟರ್‌ ಆಫ್ ಸೈನ್ಸ್‌ ಗೌರವ ಪ್ರದಾನ
ಆರೋಗ್ಯ ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ನರರೋಗ ತಜ್ಞರಾದ ಡಾ| ಅಲಂಗಾರ್‌ ಸತ್ಯರಂಜನ್‌ದಾಸ್‌ ಹೆಗ್ಡೆ ಅವರಿಗೆ ಡಾಕ್ಟರ್‌ ಆಫ್ ಸೈನ್ಸ್‌ ಗೌರವ ಡಾಕ್ಟರೇಟ್‌ ನೀಡಲಾಯಿತು. ಚಿನ್ನದ ಪದಕ ವಿಜೇತ ಹಾಗೂ ನಗದು ಬಹುಮಾನ ವಿಜೇತ ಪದವೀಧರರಿಗೆ ರಾಷ್ಟ್ರಪತಿಯವರು ಪದವಿ ಪ್ರದಾನ ಮಾಡಿದರು. ಉಳಿದೆಲ್ಲ ಪದವೀಧರರಿಗೆ ಆರೋಗ್ಯ ಸಚಿವ ಡಾ| ಕೆ.ಸುಧಾಕರ್‌ ಪದವಿ ಪ್ರದಾನ ಮಾಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next