ಅಫ್ಘಾನಿಸ್ತಾನವನ್ನು ತಾಲಿಬಾನ್ ಬಂಡುಕೋರರು ಭಾನುವಾರ (ಆಗಸ್ಟ್ 15) ವಶಪಡಿಸಿಕೊಂಡ ನಂತರ ಅಧ್ಯಕ್ಷ ಅಶ್ರಫ್ ಘನಿ ತಮ್ಮ ಹಿರಿಯ ಅಧಿಕಾರಿಗಳ ಜತೆಗೂಡಿ ಒಮನ್ ದೇಶಕ್ಕೆ ಪಲಾಯನಗೈದಿದ್ದರು. ಕಾಬೂಲ್ ಅನ್ನು ತಾಲಿಬಾನ್ ವಶಪಡಿಸಿಕೊಂಡ ನಂತರ ಭೀತಿಗೊಳಗಾದ ಸಾವಿರಾರು ಮಂದಿ ತಮ್ಮ ಜೀವ ರಕ್ಷಿಸಿಕೊಳ್ಳಲು ಕಂಡು ಕೊಂಡ ಮಾರ್ಗ ದೇಶದಿಂದ ಪಲಾಯನ ಮಾಡುವುದು.
ಅದರ ಪರಿಣಾಮವೇ ಸೋಮವಾರ ಸಾವಿರಾರು ಮಂದಿ ಅಫ್ಘಾನ್ ನಿವಾಸಿಗಳು ಹಮೀದ್ ಕರ್ಜೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಲಗ್ಗೆ ಇಟ್ಟಿದ್ದರು. ಇದ್ದ ಕೆಲವೇ ಕೆಲವು ವಿಮಾನಗಳಲ್ಲಿ ಜನ ತುಂಬಿಕೊಂಡು ಬಿಟ್ಟಿದ್ದರು. ಅದರಲ್ಲೂ ಇಬ್ಬರು ವಿಮಾನದ ಚಕ್ರ ಹಿಡಿದು ನೇತಾಡಿಕೊಂಡು ಮೇಲಿನಿಂದ ಕೆಳಕ್ಕೆ ಬಿದ್ದು ಸಾವನ್ನಪ್ಪಿರುವ ಭೀಕರ ಘಟನೆಯೂ ನಡೆದಿತ್ತು.
ಇಷ್ಟೆಲ್ಲಾ ಜನರು ಜೀವ ಭಯದಿಂದ ರಕ್ಷಿಸಿಕೊಳ್ಳಲು ಪಲಾಯನವಾಗಲು ಯತ್ನಿಸುತ್ತಿದ್ದರೆ, ಕಾಬೂಲ್ ನಲ್ಲಿರುವ ರತ್ತನ್ ನಾಥ್ ದೇವಾಲಯದ ಪುರೋಹಿತ, ಪಂಡಿತ್ ರಾಜೇಶ್ ಕುಮಾರ್ ಮಾತ್ರ ತನ್ನ ಜೀವ ಉಳಿಸಿಕೊಳ್ಳಲು ಕಾಬೂಲ್ ಬಿಟ್ಟು ಪಲಾಯನ ಮಾಡಲ್ಲ ಎಂದು ಪಟ್ಟು ಹಿಡಿದುಬಿಟ್ಟಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ.
ತಾಲಿಬಾನ್ ಕೊಂದರೂ ತೊಂದರೆ ಇಲ್ಲ- ಪಂಡಿತ್ ರಾಜೇಶ್ ಕುಮಾರ್:
ಕಾಬೂಲ್ ನಲ್ಲಿರುವ ಕೆಲವು ಹಿಂದೂಗಳು ನನ್ನ ಬಂದು ಮನವಿ ಮಾಡಿಕೊಂಡಿದ್ದಾರೆ, ನೀವು ಕೂಡಲೇ ಕಾಬೂಲ್ ಬಿಟ್ಟು ತೆರಳಿ, ನಿಮಗೆ ಪ್ರಯಾಣಕ್ಕೆ ಬೇಕಾದ ಅನುಕೂಲ ಮಾಡಿಕೊಡುವುದಾಗಿ ವಿನಂತಿಸಿಕೊಂಡಿದ್ದರು. ಆದರೆ ನನ್ನ ಪೂರ್ವಜರು ರತ್ತನ್ ನಾಥ ಮಂದಿರದಲ್ಲಿ ನೂರಾರು ವರ್ಷಗಳಿಂದ ಸೇವೆ ಸಲ್ಲಿಸಿದ್ದಾರೆ. ನಾನು ಇಲ್ಲಿಂದ ಪಲಾಯನ ಮಾಡಲಾರೆ. ಒಂದು ವೇಳೆ ತಾಲಿಬಾನ್ ಉಗ್ರರು ನನ್ನ ಕೊಂದರೂ …ಇದು ನನ್ನ ಸೇವೆ ಎಂದು ಪರಿಗಣಿಸುವುದಾಗಿ ಪಂಡಿತ್ ರಾಜೇಶ ಕುಮಾರ್ ತಮ್ಮ ಮನದಾಳವನ್ನು ಹೊರಹಾಕಿದ್ದಾರೆ ಎಂದು ವರದಿ ವಿವರಿಸಿದೆ.
ಪಂಡಿತ್ ರಾಜೇಶ್ ಕುಮಾರ್ ಅವರು ಕಾಬೂಲ್ ನಲ್ಲಿ ವಾಸವಾಗಿರುವ ಏಕೈಕ ಹಿಂದೂ ಪುರೋಹಿತರು ಎಂದು ಪರಿಗಣಿಸಲಾಗಿದೆ. ನನ್ನ ಪೂರ್ವಜನರು ವಾಸವಾಗಿದ್ದ, ಈ ನೆಲವನ್ನು ಬಿಟ್ಟು ತೆರಳಲಾರೆ ಎಂಬುದು ರಾಜೇಶ್ ಅವರ ನುಡಿಯಾಗಿದೆ.
ತಾಲಿಬಾನ್ ಉಗ್ರರು ಈಗಾಗಲೇ ಸರ್ಕಾರಿ ಕಚೇರಿ, ಸಂಸತ್ ಅನ್ನು ವಶಪಡಿಸಿಕೊಂಡು ಆಡಳಿತದ ಚುಕ್ಕಾಣಿ ಹಿಡಿದಿದ್ದಾರೆ. ಕಾಬೂಲ್ ನಲ್ಲಿ ಅಫ್ಘಾನ್ ಸೇನೆ, ಪೊಲೀಸರು ಯಾರೂ ಇಲ್ಲದಂತಾಗಿದ್ದು, ತಾಲಿಬಾನ್ ಉಗ್ರರೇ ತುಂಬಿಕೊಂಡಿದ್ದಾರೆ. ಜನರು ಭಯ ಭೀತಿಯಿಂದಲೇ ಕಾಲಕಳೆಯುವಂತಾಗಿದೆ. ಏತನ್ಮಧ್ಯೆ ಅಫ್ಘಾನ್ ಜನತೆ ಯಾವುದೇ ರೀತಿಯಿಂದಲೂ ಭಯ ಪಡುವ ಅಗತ್ಯವಿಲ್ಲ ಎಂದು ತಾಲಿಬಾನ್ ಸಂದೇಶ ರವಾನಿಸಿದೆ ಎಂದು ವರದಿ ತಿಳಿಸಿದೆ.
ಹಿಂದೂ, ಸಿಖ್ ಜನರ ರಕ್ಷಣೆಗೆ ಕ್ರಮ: ಭಾರತ
ಕಾಬೂಲ್ ನಿಂದ ವಾಣಿಜ್ಯಿಕ ವಿಮಾನ ಯಾನ ಆರಂಭವಾದ ಕೂಡಲೇ ಅಫ್ಘಾನ್ ನಲ್ಲಿರುವ ಹಿಂದೂ ಮತ್ತು ಸಿಖ್ ಸಮುದಾಯದವರನ್ನು ಆದ್ಯತೆಯಲ್ಲಿ ಕರೆತರಲಾಗುತ್ತದೆ ಎಂದು ವಿದೇಶಾಂಗ ಇಲಾಖೆ ವಕ್ತಾರ ಅರಿಂದಾಮ್ ಬಗಚಿ ತಿಳಿಸಿದ್ದಾರೆ.
ನವದೆಹಲಿಯಲ್ಲಿ ಮಾತನಾಡಿದ ಅವರು, ಅಫ್ಘಾನಿಸ್ತಾನದಲ್ಲಿ ದಿನದಿಂದ ದಿನಕ್ಕೆ ಪರಿಸ್ಥಿತಿ ಕೈಮೀರುತ್ತಲೇ ಇದೆ. ಹೀಗಾಗಿ ಅಲ್ಲಿರುವ ರಾಜತಾಂತ್ರಿಕ ಸಿಬಂದಿ ಮತ್ತು ಭಾರತದ ನಾಗರಿಕರನ್ನು ಕರೆತರುವ ಸಿದ್ಧತೆ ನಡೆದಿದೆ. ತುರ್ತು ಪರಿಸ್ಥಿತಿಯಲ್ಲಿ ಯಾರನ್ನು ಸಂಪರ್ಕಿಸಬೇಕು ಎಂಬ ಬಗ್ಗೆ ಭಾರತೀಯರಿಗೆ ದೂರವಾಣಿ ಸಂಖ್ಯೆಯನ್ನೂ ನೀಡಲಾಗಿದೆ ಎಂದು ಬಗಚಿ ತಿಳಿಸಿದ್ದರು.