ಮೈಸೂರು: ತಮ್ಮ ತವರು ಜಿಲ್ಲೆಯಲ್ಲೇ ವರ್ಚಸ್ಸು ಕಳೆದುಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ದೇಶದಲ್ಲಿ ಕಾಂಗ್ರೆಸ್ ಪಕ್ಷದ ಕಟ್ಟಕಡೆಯ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದರು. ನಂಜನಗೂಡು ತಾಲ್ಲೂಕಿನ ದೇಬೂರು ಗ್ರಾಮದಲ್ಲಿ ಬಹಿರಂಗ ಪ್ರಚಾರ ನಡೆಸಿದರು.
ಈ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧದ ಅಲೆಯಿದೆ. ನೀರು, ರಸ್ತೆ, ಮೂಲಸೌಕರ್ಯಗಳನ್ನು ಒದಗಿಸುವಲ್ಲಿ ಕಾಂಗ್ರೆಸ್ ವಿಪಲವಾಗಿದೆ. ಇದು ಜನರಿಗೆ ಮನವರಿಕೆಯಾಗಿರುವುದರಿಂದ ಕಾಂಗ್ರೆಸ್ ಮುಖಂಡರು ಬಹಿರಂಗ ಪ್ರಚಾರ ಮಾಡುವುದನ್ನು ನಿಲ್ಲಿಸಿ ಹೋಟೆಲ್‌ಗಳಲ್ಲಿ ಕುಳಿತು ಹಣ ಹಂಚುವ ಕೆಲಸದಲ್ಲಿ ತೊಡಗಿದ್ದಾರೆ. ಜನರಿಗೆ ಹಣ ಹಂಚಿ ಚುನಾವಣೆ ಗೆಲ್ಲಬಹುದು ಎಂಬ ಅಹಂಕಾರ ಅವರಿಗಿದೆ ಎಂದರು.
ಪ್ರಚಾರದಲ್ಲಿ ಪಾಲ್ಗೊಂಡಿದ್ದ ಚಿತ್ರನಟ ಬುಲೆಟ್ ಪ್ರಕಾಶ್ ಮಾತನಾಡಿ, ಬಿಜೆಪಿಗೆ ಜನಬೆಂಬಲ ಚೆನ್ನಾಗಿದ್ದು ಉಪ ಚುನಾವಣೆಯಲ್ಲಿ ನಂಜನಗೂಡು ಮತ್ತು ಗುಂಡ್ಲುಪೇಟೆ ಕ್ಷೇತ್ರಗಳಲ್ಲಿ ಜಯಬೇರಿ ಬಾರಿಸಲಿದೆ. ಅಲ್ಲದೆ ಮುಂಬರುವ ವಿಧಾನಸಬಾ ಚುನಾವಣೆಯಲ್ಲೂ ಸಹ ಬಿಜೆಪಿ ಬಹುಮತ ಪಡೆಯಲಿದೆ ಎಂದರು.
ಮೋದಿ ಅಲೆ ಜನಮಾನಸದಲ್ಲಿದೆ: ಮೋದಿ ಅಲೆ ಎಲ್ಲಿಯೂ ಇಲ್ಲ ಎನ್ನುತ್ತಿರುವ ಜನ ಪ್ರತಿನಿಧಿಗಳ ಕ್ಷೇತ್ರಗಳ ಜನರ ಮನಸ್ಸಿನಲ್ಲೇ ಮೋದಿ ಅಲೆ ಎದ್ದಿದೆ ಎಂದು ಮಾಜಿ ಸಚಿವ ವಿ.ಸೋಮಣ್ಣ ಹೇಳಿದರು. ನಂಜನಗೂಡು ತಾಲ್ಲೂಕಿನ ಮಾಡ್ರಳ್ಳಿ ಗ್ರಾಮದಲ್ಲಿ ಚುನಾವಣಾ ಪ್ರಚಾರ ನಡೆಸಿದ ಅವರು, ವಿ.ಶ್ರೀನಿವಾಸ ಪ್ರಸಾದ್ ಅವರು ಕಂದಾಯ ಸಚಿವರಾಗಿ ಉತ್ತಮ ಕಾರ್ಯ ಮಾಡಿದ್ದಾರೆ.
ಅದರೆ ಇಂದು ಕಾಂಗ್ರೆಸ್‌ನ ಕೆಲವು ಮುಖಂಡರು ಪ್ರಸಾದ್ ಅವರು ಮಾಡಿಸಿದ್ದ ಕೆಲಸಗಳನ್ನೆಲ್ಲಾ ತಾವೇ ಮಾಡಿಸಿದ್ದೆಂದು ಹೇಳಿಕೊಳ್ಳುತ್ತಿದ್ದಾರೆ. ಜನರಿಗೆ ನಿಜಸಂಗತಿ ಏನೆಂಬುದು ಗೊತ್ತಾಗಿದ್ದು ಅಭಿವೃದ್ಧಿ ಕಾರ್ಯಗಳನ್ನು ಮಾಡದೆ ಅಭಿವೃದ್ಧಿಯ ಹೆಸರಿನಲ್ಲಿ ತಾವು ಹಣ ಮಾಡಿಕೊಂಡವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.