ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರು ಇತಿಹಾಸದ ಪುಟಗಳಲ್ಲಿ “ಕಾಂಗ್ರೆಸ್‌ನ ಕಟ್ಟಡ ಕಡೆಯ ಮುಖ್ಯಮಂತ್ರಿ’ ಎಂದು ದಾಖಲಾಗಲಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ.ರವಿ ವ್ಯಂಗ್ಯವಾಡಿದ್ದಾರೆ.
ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹಮ್ಮಿಕೊಂಡಿರುವ ಬೆಂಗಳೂರು ರಕ್ಷಿಸಿ ಪಾದಯಾತ್ರೆಯ 11ನೇ ದಿನವಾದ ಮಂಗಳವಾರ ರಾಜರಾಜೇಶ್ವರಿ ನಗರದಲ್ಲಿ ನಡೆದ ಪಾದಯಾತ್ರೆ ವೇಳೆ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.
ರಾಜ್ಯ ಕಾಂಗ್ರೆಸ್ ಸರ್ಕಾರದ ಗೂಂಡಾಗಿರಿ ಆಡಳಿತ ಬೆಂಗಳೂರು ನಗರವನ್ನು ಬೆಚ್ಚಿ ಬೀಳಿಸಿದೆ. ರಾಜ್ಯದ ಜನ ಸಂಕಷ್ಠದಲ್ಲಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ನಿದ್ದೆ ಮಾಡುತ್ತಿರುತ್ತಾರೆ. ಸಿದ್ದರಾಮಯ್ಯನವರೇ ನಿಮ್ಮ ಅಧಿಕಾರ ಕೊನೆಗೊಳ್ಳುತ್ತಿದೆ. ನಿಮ್ಮ ಹೆಸರು ಕಾಂಗ್ರೆಸ್‌ನ ಕಟ್ಟ ಕಡೆಯ ಮುಖ್ಯಮಂತ್ರಿ ಎಂದರು.
ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಮಾತನಾಡಿ, ಮೈಸೂರು ಅಭಿವೃದ್ಧಿ ಮಾಡಿದ್ದೇನೆ ಎಂದು ಹೇಳಿಕೊಂಡು ಸಿಎಂ ಸಿದ್ದರಾಮಯ್ಯ ತಮ್ಮನ್ನು ಮೈಸೂರು ರಾಜರಿಗೆ ಹೋಲಿಸಿಕೊಂಡಿದ್ದಾರೆ. ಮೈಸೂರು ಮಹಾರಾಜರು ಜನರ ಪಾಲಿಗೆ ದೇವರಾದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿವೃದ್ಧಿಯ ಹೆಸರಿನಲ್ಲಿ ಕಮಿಷನ್ ಹೊಡೆದಿರುವುದೇ ಅವರ ಸಾಧನೆ ಎಂದರು.
ರಾಜರಾಜೇಶ್ವರಿನಗರದ ಚನ್ನಸಂದ್ರದಿಂದ ರಾಜರಾಜೇಶ್ವರಿ ದೇವಸ್ಥಾನದವರೆಗೆ ನಡೆದ ಪಾದಯಾತ್ರೆಯಲ್ಲಿ ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಉಪಾಧ್ಯಕ್ಷೆ ಶಿಲ್ಪಾ ಗಣೇಶ್ ಸೇರಿದಂತೆ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.
ಅಡ್ಡಬಂದ ಕಾಂಗ್ರೆಸ್ ವಾಹನ: ಬಿಜೆಪಿ ಬೆಂಗಳೂರು ರಕ್ಷಿಸಿ ಪಾದಯಾತ್ರೆಯ ಸಾರ್ವಜನಿಕ ಸಭೆಯ ವೇಳೆ ಬಿಜೆಪಿ ನಾಯಕರು ಭಾಷಣ ಮಾಡುತ್ತಿದ್ದ ಸ್ಥಳದಲ್ಲಿ ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ಸಾಧನೆಗಳ ಪ್ರಚಾರದ ವಾಹನ ಬಂದಿದ್ದರಿಂದ ಸ್ವಲ್ಪ ಗೊಂದಲ ಸೃಷ್ಟಿಯಾಯಿತು.
ಆರ್.ಅಶೋಕ್ ಭಾಷಣ ಮಾಡುತ್ತಿದ್ದ ವೇಳೆ ಶಾಸಕ ಮುನಿರತ್ನ ಪರ ಮೈಕ್‌ನಲ್ಲಿ ಜೋರಾಗಿ ಪ್ರಚಾರ ಮಾಡುತ್ತಾ ಕಾಂಗ್ರೆಸ್ ವಾಹನ ಬಂದಾಗ ನೆರೆದಿದ್ದ ಬಿಜೆಪಿ ಕಾರ್ಯಕರ್ತರು ಜೋರಾಗಿ ಘೋಷಣೆ ಕೂಗಿದರು ಅಷ್ಟರಲ್ಲಿ ವಾಹನ ಮುಂದೆ ಸಾಗಿತು.