Advertisement

ಪರಂಪರೆಯಲ್ಲಿ ಮೂಡಿಬಂದ ಲಂಕಿಣಿ ಮೋಕ್ಷ-ಗರುಡ ಗರ್ವಭಂಗ

05:21 PM May 16, 2019 | mahesh |

ಕೊಡಂಕೂರು ಶ್ರೀಸತ್ಯಸಾಯಿ ಮಂದಿರದಲ್ಲಿ ರಾಮ ನವಮಿ ಉತ್ಸವದಂಗವಾಗಿ ಭಗವತಿ ಯಕ್ಷಗಾನ ಬಳಗದ ಹವ್ಯಾಸಿ ಕಲಾವಿದರಿಂದ “ಲಂಕಿಣಿ ಮೋಕ್ಷ’ ಮತ್ತು “ಗರುಡ ಗರ್ವಭಂಗ’ ಎಂಬ ಯಕ್ಷಗಾನ ಪ್ರದರ್ಶನ ನಡೆಯಿತು.

Advertisement

ಪರದೆಯ ಹಿಂದೆ ಮತ್ತು ಮುಂದೆ ಹನುಮಂತನ (ಕು| ವಿಂಧ್ಯಾ ಆಚಾರ್ಯ) ಒಡ್ಡೋಲಗವು ಪರಂಪರೆಯ ಮತ್ತು ಶಾಸ್ತ್ರೀಯ ಹಿನ್ನೆಲೆಯಲ್ಲಿತ್ತು. ನೃತ್ಯದಲ್ಲಿ ವೈವಿಧ್ಯ, ದೃಷ್ಟಿ, ಚಲನೆ, ಅಂಗ ಚೇಷ್ಟೆ, ದಶಾವತಾರದ ನೃತ್ಯವನ್ನು ಅಳವಡಿಸಿದ್ದು ಸ್ವಚ್ಚವಾದ, ಶ್ರುತಿಬದ್ಧವಾದ ಅರ್ಧಗಂಟೆಯ ನೃತ್ಯ ಚಪ್ಪಾಳೆಗಿಟ್ಟಿಸಿಕೊಂಡಿತು.

ರಾಮ (ಮಾ| ಸಮರ್ಥ) ಜಾಂಬವಂತ (ಮಾ| ಶ್ರೀಶ ಕೆದ್ಲಾಯ ) ಲಕ್ಷ್ಮಣ (ಮಾ| ರಘುವೀರ), ಸುಗ್ರೀವ (ಕು| ಹರ್ಷಿತಾ)ರೊಂದಿಗೆ 7 ವಾನರರ ಪ್ರವೇಶವಾಯಿತು. ರಾಮನು ಸೀತಾನ್ವೇಷಣೆಗೆ ಲಂಕೆಗೆ ಕಳುಹಿಸಬೇಕು ಎಂದು ಪೀಠಿಕೆಯ ಹಿನ್ನೆಲೆಯಲ್ಲಿ ವಿವರಿಸಿದ್ದು ಲಕ್ಷ್ಮಣ, ಸುಗ್ರೀವರ ಕುಣಿಕೆ ಹಾಗೂ ಮಾತುಗಾರಿಕೆಯು ಪೂರಕವಾಗಿತ್ತು. ನೀನೇ ಕಲಿ ಹನುಮ ಎಂಬ ಪದಕ್ಕೆ ಹನುಮನ ನೃತ್ಯವೂ ಮನಮೋಹಕವಾಗಿತ್ತು. ಜಾಂಬವಂತರು ಪ್ರಾಯಕ್ಕೆ ತಕ್ಕಂತೆ ಕುಣಿದರು. ಹನುಮನು ಲಂಕೆಯನ್ನು ದಾಟಿ ಮುಂದೆ ಹೋಗಲು ಸೂಚನೆ ನೀಡಿದರು.

ಲಂಕಿಣಿ (ಪ್ರಮೋದ ತಂತ್ರಿ) ವೇಷವು ಭರ್ಜರಿಯಾಗಿತ್ತು ಮತ್ತು ಪಾರಂಪರಿಕ ನೃತ್ಯ ಆಕರ್ಷಣೀಯವಾಗಿತ್ತು. ಮಧ್ಯರಾತ್ರಿ ಕಾಲದಲ್ಲಿ ಪದಕ್ಕೆ ಹನುಮ ಲಂಕಿಣಿಯರ ಸಂಭಾಷಣೆಯು ಅಮೋಘವಾಗಿತ್ತು. ಮಹಾಶಿವನ ಶಾಪಗ್ರಸ್ತ ಲಂಕಿಣಿಯು ರಾಮಭಕ್ತ ಹನುಮನಿಂದ ಮೋಕ್ಷಗೊಳ್ಳುವುದು ಇಲ್ಲಿನ ಕಥಾಭಾಗ.

ಗರುಡ ಗರ್ವಭಂಗದಲ್ಲಿ ಶ್ರೀಕೃಷ್ಣನ (ನಿರುಪಮಾ ತಂತ್ರಿ) ಪೀಠಿಕೆಯಲ್ಲಿ ತನ್ನ ಜನ್ಮ ಮತ್ತು ಮಥುರೆಯಲ್ಲಿ ಕಂಸವಧೆ , ಸಮುದ್ರ ಮಧ್ಯೆ ಮಯನಿಂದ ದ್ವಾರಕೆಯ ನಿರ್ಮಾಣ ಹಾಗೂ ಅಣ್ಣ ಬಲರಾಮನಿಗೆ ಯಜಮಾನಿಕೆಯನ್ನು ಕೊಟ್ಟ ಸನ್ನಿವೇಶ ಹಾಗೂ ಬಲರಾಮನ ಅಹಂಕಾರವನ್ನು ಸೂಕ್ಷ್ಮವಾಗಿ ವಿವರಿಸಿದರು.

Advertisement

ಹನುಮಂತ (ನಾಗರಾಜ) ಉತ್ತಮ ನರ್ತನ ಮತ್ತು ಅಭಿನಯಗಳಿಂದ ಗಮನ ಸೆಳೆದರು. ಬಲರಾಮ (ಡಾ| ಸುನೀಲ್‌ ಮುಂಡ್ಕೂರು) ಪೀಠಿಕೆಯಲ್ಲಿ ಯಯಾತಿಯ ಶಾಪ ಮಾಗಧನಿಗೆ ಹೆದರಿ ದ್ವಾರಕೆಯ ನಿರ್ಮಾಣ ಯಾದವ ಸೇನೆಯನ್ನು ಒಟ್ಟುಗೂಡಿಸಿ, ಹಲಧರ ಎನಿಸಿ ರೇವತಿಯೊಂದಿಗೆ ವಿವಾಹವಾಗಿ ಆಡಳಿತವನ್ನು ನಡೆಸುತ್ತಿದ್ದೇನೆ ಎಂಬ ಪುರಾಣ ಕಥೆಯನ್ನು ಪ್ರಾಸಬದ್ಧವಾಗಿ ರಸವತ್ತಾಗಿ ಹೇಳಿದರು.

ಹನುಮನು ಶ್ರೀರಾಮ ಶ್ರೇಷ್ಠ ಎಂದರೆ ಬಲರಾಮ ತಾನೇ ಶ್ರೇಷ್ಠ ಎಂಬ ಚರ್ಚೆಯು ಯುದ್ಧದಲ್ಲಿ ಅಂತ್ಯಗೊಂಡು ಬಲರಾಮನ ಗರ್ವವನ್ನು, ಅಹಂಕಾರವನ್ನು ಸದೆಬಡಿಯುವಲ್ಲಿ ಪರಿಣಾಮಕಾರಿಯಾಗಿ ಮೂಡಿಬಂತು.

ಎರಡನೇ ಕೃಷ್ಣನಾಗಿ (ಕು| ಪ್ರಣಮ್ಯಾ ತಂತ್ರಿ) ಉತ್ತಮ ವೇಷಭೂಷಣ ಮತ್ತು ನೃತ್ಯ ಸಂಯೋಜನೆಯಿಂದ ಗಮನ ಸೆಳೆದರು. ಬಲರಾಮ ಮತ್ತು ಕೃಷ್ಣನ ಸಂವಾದವು ಹಾಸ್ಯಮಯವಾಗಿತ್ತು. ಬಲರಾಮನು ತನ್ನ ಸೋಲನ್ನು ಒಪ್ಪದೆ ಪರದಾಡುತ್ತಿರುವುದನ್ನು ಕೃಷ್ಣನು ಗಮನಿಸಿ ತನ್ನ ವಾಹನ ಗರುಡನ (ಅಶ್ವಿ‌ತ್‌ ಸರಳಾಯ) ಗರ್ವವನ್ನು ಮುರಿಯಬೇಕೆಂದು ಹನುಮನೆಡೆಗೆ ಕಳುಹಿಸುವನು. ಗರುಡನ ಆರ್ಭಟಯುತ್ತ ನೃತ್ಯ ಮತ್ತು ಅಮೃತ ತಂದ ಪರಾಕ್ರಮ ಇತ್ಯಾದಿಗಳು ಗಂಭೀರವಾಗಿ ಪ್ರಸ್ತುತವಾಯಿತು . ಹನುಮಂತ ಮತ್ತು ಗರುಡರ ನಡುವೆ ಸಂವಾದ ನಡೆದು ಗರುಡ ಗರ್ವಭಂಗವಾಯಿತು. ಈ ಪ್ರಸಂ‌ಗಳ ಬಾಲಕಲಾವಿದರು ಮಾ|ಧೀರಜ್‌, ಸುಧನ್ವ ಮುಂಡ್ಕೂರು, ಸುಮನ್ಯು ಮುಂಡ್ಕೂರು.

ಭಾಗವತರಾಗಿ ದೇವಿಪ್ರಸಾದ ಕಟೀಲು , ಮದ್ದಳೆಗಾರರಾಗಿ ನೆಕ್ಕರೆ ಮೂಲೆ ಗಣೇಶ್‌ ಭಟ್‌, ಚೆಂಡೆಯಲ್ಲಿ ಮುರಾರಿ ಕಡಂಬಳಿತ್ತಾಯ ಮತ್ತು ಚಕ್ರತಾಳದಲ್ಲಿ ರಾಮಕೃಷ್ಣ ನಂದಿಕೂರು ಸಹಕರಿಸಿದರು.

ಡಾ|ಸುನಿಲ್‌ ಸಿ. ಮುಂಡ್ಕೂರು

Advertisement

Udayavani is now on Telegram. Click here to join our channel and stay updated with the latest news.

Next