Advertisement

ದೇವರೊಡನೆ ಹಳ್ಳಿ ಭಾಷೆ ಮಾತು

12:03 PM Mar 05, 2018 | Team Udayavani |

ಬೆಂಗಳೂರು: ಕನ್ನಡ ಕೀರ್ತನೆಗಳನ್ನು ದೇವಸ್ಥಾನಗಳಲ್ಲಿ ಹಾಡುವ ಪದ್ಧತಿ ವ್ಯಾಸರಾಯರು ತಂದರು. ಬೇಂದ್ರೆ, ಕುವೆಂಪುರಂತಹವರು ಹಳ್ಳಿಗನ್ನಡದಲ್ಲಿ ದೇವರೊಂದಿಗೆ ಮಾತನಾಡಿದರು ಎಂದು ಹಿರಿಯ ಕವಿ ಡಾ. ಎಚ್‌.ಎಸ್‌.ವೆಂಕಟೇಶಮೂರ್ತಿ ಹೇಳಿದರು.

Advertisement

ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್‌ ವರ್ಲ್ಡ್ ಕಲ್ಚರ್‌ನ ವಾಡಿಯಾ ಸಭಾಂಗಣದಲ್ಲಿ ಭಾನುವಾರ ಅಂಕಿತ ಪುಸ್ತಕ ಆಯೋಜಿಸಿದ್ದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲಿ, ಎಲ್‌.ಎಸ್‌.ಶೇಷಗಿರಿ ರಾವ್‌ ಅವರ ಇಂಗ್ಲಿಷ್‌ ಕವನಗಳ “ಕಾವ್ಯೋದ್ಯಾನ,’  ಎಚ್‌.ಡುಂಡಿರಾಜ್‌ ಅವರ ಲಘು ಧಾಟಿಯ ಪ್ರಬಂಧ “ನೊಣಾನುಬಂಧ’, ಡಾ.ವ್ಯಾಸರಾವ್‌ ನಿಂಜೂರ್‌ ಅವರ ಕಾದಂಬರಿ “ಶ್ರೀ ಚಾಮುಂಡೇಶ್ವರಿ ಭವನ’, ಹಿರೇಮಗಳೂರು ಕಣ್ಣನ್‌ ಅವರ “ನುಡಿಪೂಜೆ’ ಬಿಡುಗಡೆಗೊಳಿಸಿ ಮಾತನಾಡಿದರು. 

ಹಿಂದೆ ದೇವರೊಂದಿಗೆ ಸಂಸ್ಕೃತದಲ್ಲಿ ಮಾತನಾಡಬೇಕಿತ್ತು.12ನೇ ಶತಮಾನದಲ್ಲಿ ವಚನಕಾರರು ಧೈರ್ಯದಲ್ಲೇ ದೇವರೊಂದಿಗೆ ಕನ್ನಡದಲ್ಲಿ ಮಾತನಾಡಿದರು.ಕನ್ನಡದಲ್ಲೇ ಹರಿಬರೆಯುವನು ಎಂಬ ಕುವೆಂಪುರವರ ಮಾತಿಗೆ ವಿಶೇಷ ಅರ್ಥವಿದೆ. ಕನ್ನಡ ಕೀರ್ತನೆಗಳನ್ನು ದೇವಸ್ಥಾನಗಳಲ್ಲಿ ಹಾಡುವುದನ್ನು ವ್ಯಾಸರಾಯರು ತಂದರು. ಬೇಂದ್ರೆ, ಕುವೆಂಪುರಂತಹವರು ಹಳ್ಳಿಗನ್ನಡದಲ್ಲಿ ದೇವರೊಂದಿಗೆ ಮಾತನಾಡಿದರು ಎಂದರು.  

ಲೇಖಕ ಎಲ್‌.ಎಸ್‌.ಶೇಷಗಿರಿ ರಾವ್‌ ಅವರ ಸಾಹಿತ್ಯದ ಗುಣಗಾನ ಮಾಡಿದ ಹೆಚ್‌.ಎಸ್‌. ವೆಂಕಟೇಶ ಮಾರ್ತಿ, ಇಂಗ್ಲಿಷ್‌ ಸಾಹಿತ್ಯದ ತಳಸ್ಪರ್ಶಿ ಅನುಭವ ಪಡೆದ ವಿದ್ವಾಂಸ ರಸಿಕರಾಗಿದ್ದಾರೆ ಎಂದು ಬಣ್ಣಸಿದರು. ಡುಂಡಿರಾಜ್‌ಗೆ ಸಮನಾಗಿ ನಿಲ್ಲುವ ಲೇಖಕರು ಇರಬಹುದು. ಆದರೆ ಡುಂಡಿರಾಜ್‌ ಮೀರಿಸುವ ಲೇಖಕರು ಬಹಳ ಕಡಿಮೆ ಎಂದು ನುಡಿದರು. ಹಾಸ್ಯ ಭಾಷಣಕಾರ ವೈ.ವಿ.ಗುಂಡೂರಾವ್‌, ಲೇಖಕ ಜೋಗಿ, ಭಾರತಿ ಶೇಷಗಿರಿ ರಾವ್‌, ಅಂಕಿತ ಪ್ರಕಾಶನದ ಪ್ರಕಾಶ್‌ ಕಂಬತ್ತಳ್ಳಿ ಸೇರಿದಂತೆ ಮತ್ತಿತರರಿದ್ದರು.
  
ಜೀವನದ ಘಟನೆಗಳ “ನೊಣಾನುಬಂಧ’: ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್‌ 8ರ ರಾತ್ರಿ 8ಕ್ಕೆ ಟೀವಿ ಮುಂದೆ “ಮೇರೆ ಪ್ಯಾರೇ ದೇಶ್‌ವಾಸಿಯೋ ಎಂದಾಗಲೇ ಗೊತ್ತಾಗಿದು, ನಾವಿಟ್ಟಿದ್ದೆಲ್ಲಾ ಹೋಯ್ತು ಎಂದು. ಸ್ವಲ್ಪವೂ ಸುಳಿವಿಲ್ಲದೆ ಸಾವಿರ ಮತ್ತು ಐನೂರರ ನೋಟುಗಳನ್ನು ರದ್ದು ಮಾಡಿದರು. ಈ ಗುಟ್ಟು ರಟ್ಟಾಗದಿರಲು ಕಾರಣ, ಅವರ ಮನೆಯಲ್ಲಿ ಇಲ್ಲ ಮಡದಿ’ ಎಂದು ಹೇಳಿ ಹನಿಗವಿ ಡುಂಡಿರಾಜ್‌ ನೆರೆದವರನ್ನು ನಗೆಗಡಲಲ್ಲಿ ತೇಲಿಸಿದರು. ಜೀವನದ ಘಟನೆಗಳನ್ನೇ ಆಧರಿಸಿ “ನೊಣಾನುಬಂಧ’ ಪುಸ್ತಕ ಹೊರಬಂದಿದೆ ಎಂದರು.

ರಾಜಕಾರಣಿಗಳ ಬಾಯಲ್ಲಿಂದು ಕನ್ನಡ ಏಕವಚನದಲ್ಲಿ ಕೆಟ್ಟುಹೋಗುತ್ತಿದೆ. ಇದರ ಬಗ್ಗೆ ಲೇಖಕರು ದನಿ ಎತ್ತಬೇಕು.
-ಹಿರೇಮಗಳೂರು ಕಣ್ಣನ್‌, ಲೇಖಕ

Advertisement
Advertisement

Udayavani is now on Telegram. Click here to join our channel and stay updated with the latest news.

Next