Advertisement

ಬಾರಕೂರು ಪಂಡಿತರಿಗೆ ಗೊತ್ತಿದ್ದ ರೋಗದ ಭಾಷೆ…

03:45 AM Jun 30, 2017 | |

ಉಡುಪಿ: ಹಲವು ದಶಕಗಳ ಹಿಂದಿನ ಮಾತು. ಬಾರಕೂರಿನಲ್ಲಿ ಕೇರಳದಿಂದ ಬಂದ ಆಯುರ್ವೇದ ಪಂಡಿತರೊಬ್ಬರಿದ್ದರು. ಅವರಿಗೆ ರೋಗಿಯ ದೇಹವನ್ನು ಮುಟ್ಟಿದಾಗಲೇ ರೋಗವೇ ಅವರೊಡನೆ ಮಾತನಾಡುತ್ತಿತ್ತು. ಆ ಭಾಷೆ ಅವರಿಗೆ ಮಾತ್ರ ತಿಳಿಯುತ್ತಿತ್ತು…

Advertisement

ಇಂತಹ ಭಾಷೆಗಳನ್ನು ಕಂಪ್ಯೂಟರ್‌ಗೆ ಕಲಿಸಿದರೆ ಅದು ರೋಗಿ ಜತೆ ಮಾತನಾಡಬಹುದೆ? ಈ ಪ್ರಶ್ನೆ ಕಂಪ್ಯೂಟರ್‌ ತಜ್ಞ, ಭಾಷಾತಜ್ಞ ಪ್ರೊ|ಕೆ.ಪಿ.ರಾಯರದ್ದು. ಇತಿಹಾಸತಜ್ಞ ಪ್ರೊ|ಡಿ.ಡಿ.ಕೋಸಾಂಬಿ ಅವರ ಸ್ಮರಣಾರ್ಥ ಮಣಿಪಾಲ ಎಂಐಟಿ ಸಭಾಂಗಣದಲ್ಲಿ ಗುರುವಾರ ಮಣಿಪಾಲ ವಿ.ವಿ.ಯ ಸೆಂಟರ್‌ ಫಾರ್‌ ಗಾಂಧಿಯನ್‌ ಆ್ಯಂಡ್‌ ಪೀಸ್‌ ಸ್ಟಡೀಸ್‌ ಆಯೋಜಿಸಿದ “ಭಾಷೆಗಳ ಸಂವಹನ: ಒಂದು ತಾತ್ವಿಕ ಒಳನೋಟ’ ವಿಷಯ ಕುರಿತು ಮುಂಬಯಿಯಲ್ಲಿ ಹೋಮಿ ಜಹಾಂಗೀರ ಭಾಭಾ ಮತ್ತು ಡಿ.ಡಿ.ಕೋಸಾಂಬಿಯವರ ಜತೆ ಕೆಲಸ ಮಾಡಿದ್ದ ಪ್ರೊ| ರಾವ್‌ ಮಾತನಾಡಿದರು. 

ಬಾರಕೂರು ಪಂಡಿತರ ಆ ಭಾಷೆ ಇನ್ನೊಬ್ಬರಿಗೆ ತಿಳಿಯದೆ ಇದ್ದಿರ ಬಹುದಾದರೂ ಅದನ್ನು ಕಂಪ್ಯೂಟರ್‌ಗೆ ಕಲಿಸಲು ಸಾಧ್ಯವೆ ಎಂಬ ಚಿಂತನೆಯನ್ನು ಪ್ರೊ| ರಾವ್‌ ಹರಿಬಿಟ್ಟರು. ಇಂತಹ ಒಂದು ಭಾಷೆ ತಿಳಿಯ ಬೇಕಾದರೆ ಆದಿದೈವಿಕ (ದೈವದತ್ತ ವಾದ ಗುಣ), ಆದಿಭೌತಿಕ (ಹೇಳಿಕೊಡುವವರು, ಕೇಳುವವರು, ಗ್ರಂಥ, ಕಲಿಕೆಯ ವಾತಾವರಣ), ಆಧ್ಯಾ ತ್ಮಿಕ (ಸ್ವಪ್ರಯತ್ನ) ವಿಚಾರಗಳು ಪಾತ್ರವಹಿಸುತ್ತವೆ. ಆಯುರ್ವೇ ದಾಚಾರ್ಯ ಶುಶ್ರುತರು ರೋಗ ಗುಣಪಡಿಸಲು ಸ್ಪರ್ಶನ (ಮುಟ್ಟು ವುದು), ದರ್ಶನ (ನೋಡುವುದು), ಸಂಭಾಷಣ (ಮಾತನಾಡುವುದು) ಅಗತ್ಯ ಎಂದು ಹೇಳಿದ್ದರು ಎಂದರು. 

2 ಬಳಕೆ, 3 ಹಾಗೇ…
ಜಗತ್ತಿನ ಎಷ್ಟೋ ಕಡೆ ಎಷ್ಟೋ ಭಾಷೆಗಳು ಎಷ್ಟೋ ಸಮಯಗಳಲ್ಲಿ ಹುಟ್ಟಿವೆ, ಸತ್ತಿವೆ, ಕೆಲವು ಬದುಕಿವೆ. ಮೊದಲು ಮೌಖೀಕ (ಮಾತಿನಲ್ಲಿದ್ದ) ಭಾಷೆಗಳು ಕ್ರಮೇಣ ಲಿಪಿ ಅಗತ್ಯ ಕಂಡು ಲಿಖೀತ ರೂಪ ಪಡೆಯಿತು. ಅನಂತರ ನೃತ್ಯದಲ್ಲಿಯೂ ಭಾಷೆಯ ಬಳಕೆಯಾಯಿತು. ಇದುವರೆಗೂ ದೃಶ್ಯ (ಕಾಣುವುದು), ಶ್ರಾವ್ಯದಲ್ಲಿ (ಕೇಳುವುದು) ಮಾತ್ರ ಭಾಷೆಯ ಬಳಕೆಯಾಗಿದೆ ವಿನಾ ಇತರ 3 ಇಂದ್ರಿಯಗಳನ್ನು (ರಸ- ನಾಲಗೆ, ಸ್ಪರ್ಶ-ಚರ್ಮ, ಗಂಧ/ವಾಸನೆ – ಮೂಗು) ಬಳಸಿಕೊಂಡಿಲ್ಲ. ಇದನ್ನೂ ಬಳಸಿಕೊಳ್ಳಲು ಸಾಧ್ಯವೆ? ಉದಾ ಹರಣೆಗೆ ಸಿಟ್ಟು ಬಂದಾಗ ಮೈ ವಾಸನೆ ಬೇರೆಯಾಗಬಹುದು ಎಂದರು. 

ಕೆಲವರಿಗೆ ಬರೆಹದ ಜ್ಞಾನ ಬಾರದೆ ಹೋಗಬಹುದು, ಆತನಿಗೆ ನೃತ್ಯದ ಭಾಷೆ ಚೆನ್ನಾಗಿ ತಿಳಿಯಬಹುದು. ಉದಾಹರಣೆಗೆ ಮುತ್ತುಸ್ವಾಮಿ ದೀಕ್ಷಿತರ ತಮ್ಮ ಬಾಲುಸ್ವಾಮಿ ದೀಕ್ಷಿತರು 1790ರಲ್ಲಿ ಪ್ರಥಮ ಬಾರಿಗೆ ವಯೋಲಿನ್‌ನ್ನು ಕರ್ನಾಟಕ ಸಂಗೀತಕ್ಕೆ ಜಾರಿಗೆ ತಂದರು. ಈಗ ಕಛೇರಿಗಳಿಗೆ ವಯೋಲಿನ್‌ ಅನಿವಾರ್ಯ ಎಂಬ ಸ್ಥಿತಿಗೆ ಬಂದಿದೆ. ಅವರಿಗೆ ವಯೋಲಿನ್‌ಗೆ ಕರ್ನಾಟಕ ಸಂಗೀತವನ್ನು ಕಲಿಸುವ ಭಾಷೆ ಗೊತ್ತಿತ್ತು ಎಂದು ಪ್ರೊ|ರಾವ್‌ ಹೇಳಿದರು. ಪ್ರೊ| ವರದೇಶ್‌ ಹಿರೇಗಂಗೆ ಸ್ವಾಗತಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next