ಬಂಕಾಪುರ: ಅವೈಜ್ಞಾನಿಕ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಿಂದಾಗಿ ಪಟ್ಟಣದ ಟೋಲ್ ನಾಕಾ ಬಳಿಯ ನೂರಾರು ಎಕರೆ ಜಮೀನುಗಳು ಸತತ ಸುರಿಯುತ್ತಿರುವ ಮಳೆಯಿಂದಾಗಿ ಜಲಾವೃತಗೊಂಡಿದ್ದು, ಬಿತ್ತಿದ ಪೈರು ಸಂಪೂರ್ಣ ಹಾಳಾಗಿದೆ. ಇದರಿಂದ ಅನ್ನದಾತರು ತೀವ್ರ ಸಂಕಷ್ಟ ಎದುರಿಸುವಂತಾಗದೆ ಎಂದು ರೈತರು ಆರೋಪಿಸಿದರು.
ಈ ಹಿಂದೆ ಮಳೆ ನೀರು ಕಾಲುವೆ ಮೂಲಕ ಹರಿದು ವರದಾ ನದಿ ಸೇರುತ್ತಿತ್ತು. ಆದರೆ, ಈಗ ಸರ್ಕಾರದಿಂದ ನಿರ್ಮಾಣಗೊಳ್ಳುತ್ತಿರುವ ವೇಬ್ರಿಜ್ ಕಾಮಗಾರಿಯಿಂದಾಗಿ ಕಾಲುವೆಗಳು ಸಂಪೂರ್ಣ ನಾಶವಾಗಿವೆ. ಇದರಿಂದ ಮಳೆ ನೀರು ಹೊಲಗಳಲ್ಲಿಯೇ ನಿಲ್ಲುವಂತಾಗಿದೆ.
ರಿ.ಸ.ನಂ.402 ರಿಂದ 413 ರ ವರೆಗಿನ ಸುಮಾರು 150ಕ್ಕಿಂತಲೂ ಅಧಿಕ ಜಮೀನುಗಳು ಮಳೆ ಬಂದಾಗ ಜಲಾವೃತಗೊಳ್ಳುತ್ತಿವೆ. ಇದರಿಂದ ರೈತರ ಜಮೀನುಗಳು ಜವಳು ಹಿಡಿದು ಸೋಯಾಬಿನ್, ಹತ್ತಿ, ಶೆಂಗಾ ಸೇರಿದಂತೆ ಇತರ ಬೆಳೆಗಳು ಸಂಪೂರ್ಣ ಹಾಳಾಗಿವೆ. ಇಲ್ಲಿನ ರೈತರು ಸುಮಾರು ನಾಲ್ಕೈದು ವರ್ಷಗಳಿಂದ ಬೆಳೆ ಹಾನಿ ಅನುಭವಿಸುತ್ತಿದೆ ಎಂದು ಅಳಲು ತೋಡಿಕೊಂಡರು.
ಇದಕ್ಕೆ ಸಂಬಂಧಿಸಿದಂತೆ ಎನ್‌ಎಚ್‌ಐ ಹಾಗೂ ಕೃಷಿ ಅಧಿಕಾರಿ, ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ತಹಶೀಲ್ದಾರ್ ಸೇರಿದಂತೆ ಮುಖ್ಯಮಂತ್ರಿಗಳವರೆಗೂ ಮನವಿ ಸಲ್ಲಿಸಿದ್ದೇವೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ, ಸದ್ಯದಲ್ಲಿಯೇ ಸಮಸ್ತ ಪಟ್ಟಣದ ರೈತರೆಲ್ಲರೂ ಸೇರಿ ತಮ್ಮ ಬೇಡಿಕೆ ಈಡೇರಿಕೆಗಾಗಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡುವುದಾಗಿ ಎಚ್ಚರಿಸಿದ್ದಾರೆ.
ಈ ವೇಳೆ ರೈತ ಮುಖಂಡ ದೇವಣ್ಣ ಹಳವಳ್ಳಿ, ನಿಂಗಪ್ಪ ಮಾಯಣ್ಣವರ, ಮಾಲತೇಶ ಸಕ್ರಿ, ವೀರಪ್ಪ ಕೊತಂಬ್ರಿ, ನಿಂಗಪ್ಪ ಕಾಡಶೆಟ್ಟಳ್ಳಿ, ಮಾಲತೇಶ ಹಳವಳ್ಳಿ, ಜಮೀರ ಸೊಲ್ಲಾಪುರ, ಕಟ್ಟೆಪ್ಪ ಗಿಡ್ಡಣ್ಣವರ, ಶೋಭಾ ಕೊಟಬಾಗಿ ಇನ್ನಿತರ ರೈತರು ಇದ್ದರು.
ಬೆಳೆ ಹಾನಿಯಾದ ರೈತರಿಗೆ ಸೂಕ್ತ ಪರಿಹಾರ ಕಲ್ಪಿಸಬೇಕು. ಮಳೆ ನೀರು ಯಾವುದೇ ರೈತರ ಹೊಲಗಳಿಗೆ ನುಗ್ಗಿ ಹಾನಿಯಾಗದಂತೆ ಕಾಲುವೆ ನಿರ್ಮಿಸಿ ಈ ಹಿಂದಿನಂತೆ ವರದಾ ನದಿಗೆ ತಲುಪುವಂತೆ ಮಾಡಿ ರೈತರಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು. ಇಲ್ಲದಿದ್ದರೆ ಉಗ್ರ ಪ್ರತಿಭಟನೆ ನಡೆಸಲಾಗುವುದು.
ಶಂಭು ಕುರಗೋಡಿ,
ರೈತ ಸಂಘದ ರಾಜ್ಯ ಕಾರ್ಯದರ್ಶಿ
ಸರ್ವೇ ನಂ. 404 ರ 18 ಎಕರೆ ಜಮೀನಿನಲ್ಲಿ ಐದು ಎಕರೆ ಸೋಯಾಬಿನ್ ಬೆಳೆ ಸಂಪೂರ್ಣ ಮಳೆ ನೀರಿನಿಂದ ಜಲಾವೃತಗೊಂಡಿದ್ದು, ಸುಮಾರು ಒಂದು ಲಕ್ಷಕ್ಕೂ ಅಧಿ ಕ ಹಾನಿಯಾಗಿದೆ. ಸರ್ಕಾರ ಸೂಕ್ತ ಪರಿಹಾರ ನೀಡಬೇಕು.
ಗಿರಿರಾಜ ದೇಸಾಯಿ,
ಜಮೀನು ಮಾಲಿಕರು
ನೀರಾವರಿ ಅಧಿಕಾರಿಗಳ ಸಲಹೆ ಪಡೆದು ರೈತರ ಜಮೀನುಗಳಿಗೆ ನುಗ್ಗುತ್ತಿರುವ ಮಳೆ ನೀರು ಕಾಲುವೆ ಮೂಲಕ ವರದಾ ನದಿಗೆ ಸೇರುವಂತೆ ವ್ಯವಸ್ಥೆ ಮಾಡಲಾಗುವುದು. ಅಲ್ಲಿಯವರೆಗೆ ರೈತರು ಅಧಿಕಾರಿಗಳೊಂದಿಗೆ ಸಹಕರಿಸಬೇಕು.
ಕಿರಣ, ಎನ್‌ಎಚ್‌ಐ ಸೈಟ್
ಎಂಜಿನಿಯರ್