Advertisement

ಭೂಪರಿವರ್ತನೆ ಪ್ರಕ್ರಿಯೆ; ಆನ್‌ಲೈನ್‌ನಲ್ಲೂ ಮಧ್ಯವರ್ತಿಗಳದ್ದೇ ಆಟ

01:14 AM Nov 27, 2020 | mahesh |

ಉಡುಪಿ: ಭೂಪರಿವರ್ತನೆ ಪ್ರಕ್ರಿಯೆ; ಆನ್‌ಲೈನ್‌ನಲ್ಲೂ ಮಧ್ಯವರ್ತಿಗಳದ್ದೇ ಆಟರಾಜ್ಯಾದ್ಯಂತ ಭೂ ಪರಿವರ್ತನೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರಲು ಜಾರಿಗೊಳಿಸಿದ್ದ ಆನ್‌ಲೈನ್‌ ವ್ಯವಸ್ಥೆ ಸಮರ್ಪಕವಾಗಿ ಜಾರಿಯಾಗದೆ ಕಗ್ಗಂಟಾಗಿಯೇ ಮುಂದುವರಿದಿದೆ. ಇದರಿಂದ ಜನ ಸಾಮಾನ್ಯರು ಭೂಪರಿ ವರ್ತನೆಗೆ ಹರಸಾಹಸ ಪಡುತ್ತಿದ್ದಾರೆ.

Advertisement

ಈ ಹಿಂದೆ ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕೆ ಪರಿವರ್ತಿಸಲು 25ಕ್ಕೂ ಅಧಿಕ ದಾಖಲೆಗಳನ್ನು ಸಲ್ಲಿಸ ಬೇಕಿತ್ತು. ಮಾತ್ರವಲ್ಲದೇ ಪ್ರತಿ ಹಂತ ದಲ್ಲೂ ಲಂಚ ನೀಡದಿದ್ದರೆ ಕಡತ ಮುಂದುವರಿಯುತ್ತಿರಲಿಲ್ಲ. ಇಂತಹ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಕಳೆದ ವರ್ಷ ಭೂ ಪರಿವರ್ತನೆಗೆ ಆನ್‌ಲೈನ್‌ ಸೌಲಭ್ಯ ಕಲ್ಪಿಸಲಾಗಿದೆ. ಆದರೆ ಇಲ್ಲಿಯೂ ದಲ್ಲಾಳಿಗಳು ಕಮಿಷನ್‌ ಗಿಟ್ಟಿಸಿಕೊಳ್ಳುತ್ತಿದ್ದಾರೆ.

ಆದೇಶ ಏನು ಹೇಳುತ್ತದೆ?
ಲ್ಯಾಂಡ್‌ ರೆಕಾರ್ಡ್ಸ್‌ (landrecords.karnataka.gov.in) ವೆಬ್‌ಸೈಟ್‌ನಲ್ಲಿ ಲಾಗ್‌ ಇನ್‌ ಐಡಿ ಸೃಷ್ಟಿಸಿ ಭೂ ಪರಿವರ್ತನೆಗೆ ಅರ್ಜಿ ಸಲ್ಲಿಸಿ ಚಾಲ್ತಿ ವರ್ಷದ ಪಹಣಿ ಪತ್ರಿಕೆ, ಭೂಮಿಯ ಹಕ್ಕು ವರ್ಗಾವಣೆ ದಾಖಲೆ ಪತ್ರ ಅಪ್‌ಲೋಡ್‌ ಮಾಡಬೇಕು. ಇನ್ನು ಸರ್ವೇ ಸಂಖ್ಯೆಯೊಂದರಲ್ಲಿ ಭಾಗಶಃ ಭೂ ಪರಿ ವರ್ತನೆಗೆ ಬಯಸಿದ್ದರೆ 11-ಇ ನಕ್ಷೆಯ ಪ್ರತಿ ಸಲ್ಲಿಸಬೇಕಾಗುತ್ತದೆ. ಮುಂದಿನ ಎಲ್ಲ ಪ್ರಕ್ರಿಯೆ ಆನ್‌ಲೈನ್‌ನಲ್ಲಿ ನಡೆಯುತ್ತದೆ. ಈ ಬಗ್ಗೆ ತಹಶೀಲ್ದಾರ್‌ ಕಚೇರಿ ಸೇರಿ ಸಂಬಂಧಿಸಿದ ಪ್ರಾಧಿ ಕಾರಗಳು 30 ದಿನದೊಳಗೆ ಆನ್‌ಲೈನ್‌ನಲ್ಲಿಯೇ ಅಭಿಪ್ರಾಯ ಹಾಗೂ ಆಕ್ಷೇಪಣೆ ಸಲ್ಲಿಸಬೇಕು. ಈ ಅವಧಿಯಲ್ಲಿ ಅಭಿಪ್ರಾಯ ನೀಡದಿದ್ದರೆ ಮುಂದಾಗುವ ಅನಾಹುತಕ್ಕೆ ಅಧಿಕಾರಿಗಳೇ ಹೊಣೆಗಾರರಾಗುತ್ತಾರೆ. ಒಟ್ಟಾರೆ ಅರ್ಜಿ ಸಲ್ಲಿಕೆಯಾದ 60 ದಿನದೊಳಗೆ ಭೂ ಪರಿವರ್ತನೆ ಪೂರ್ಣಗೊಳಿಸಬೇಕು ಎನ್ನುವುದು ಕಂದಾಯ ಇಲಾಖೆ ಆದೇಶ.

ದಲ್ಲಾಳಿಗಳದ್ದೇ ಕೈ
ರಿಯಲ್‌ ಎಸ್ಟೇಟ್‌ ಕಂಪೆನಿಗಳನ್ನು ಹೊರತು ಪಡಿಸಿದರೆ ಸಾಮಾನ್ಯ ಭೂಮಾಲಕರಿಗೆ ಈ ಆನ್‌ಲೈನ್‌ ವ್ಯವಸ್ಥೆ ಬಗ್ಗೆ ತಿಳುವಳಿಕೆ ಇಲ್ಲ. ಹಾಗಾಗಿ ಇಂಥವರಿಗೆ ನೆರವು ನೀಡಲು ಮಧ್ಯವರ್ತಿಗಳು ಸಂಪರ್ಕಿಸುತ್ತಾರೆ. ಅವರು ನಿಗದಿಪಡಿಸಿದ್ದೇ ಅಂತಿಮ ದರ. ಹಣದಾಸೆಗೆ ಬೀಳುವ ಮಧ್ಯವರ್ತಿಗಳು ಇದರ ಮುಂದಿನ ಪ್ರಕ್ರಿಯೆಗೆ ಕಂದಾಯ ಇಲಾಖೆ ಕೇಸ್‌ ವರ್ಕರ್‌ಗಳು ಹಾಗೂ ಇನ್ನಿತರ ಸಿಬಂದಿಗೆ ಹಣ ನೀಡುವಂತೆ ರೈತರಿಗೆ ಸೂಚಿಸುತ್ತಾರೆ. ಈ ರೀತಿ ಭೂಮಾಲಕರು ಹಾಗೂ ಕಂದಾಯ ಅಧಿಕಾರಿಗಳ ನಡುವೆ ದಲ್ಲಾಳಿಗಳು ಕೊಂಡಿಯಂತೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.

ಅರ್ಜಿ ಸಲ್ಲಿಕೆಯಲ್ಲೂ ಲೋಪ
ಸರ್ವೇ ನಂಬರ್‌ ಒಂದರ ಭಾಗಶಃ ಭೂ ಪರಿವರ್ತನೆ ಆಗಬೇಕಿದ್ದರೆ 11-ಇ ನಕ್ಷೆ ಕಡ್ಡಾಯ. ನಿರ್ದಿಷ್ಟ ಸರ್ವೇ ನಂಬರ್‌ನ ಪೂರ್ತಿ ಜಾಗ ಪರಿವರ್ತನೆಗೆ ಈ ನಕ್ಷೆ ಕೊಡಬೇಕಾಗಿಲ್ಲ. ಆದರೆ ಅರ್ಜಿ ಸಲ್ಲಿಸುವವರು ಭಾಗಶಃ ಭೂ ಪರಿವರ್ತನೆಗೆ ಅರ್ಜಿ ಸಲ್ಲಿಸಿದ್ದರೂ 11-ಇ ನಕ್ಷೆ ಅಪ್‌ಲೋಡ್‌ ಮಾಡಿಸುತ್ತಿಲ್ಲ. ಇದರಿಂದ ಅರ್ಜಿ ತಿರಸ್ಕೃತವಾಗುತ್ತಿದೆ. ಆನ್‌ಲೈನ್‌ನಲ್ಲಿ ಸುಲಭವಾಗಿ ಭೂ ಪರಿವರ್ತನೆ ಆಗುತ್ತದೆ ಎಂದು ಭಾವಿಸಿ ಪೂರಕ ದಾಖಲೆಗಳನ್ನು ಒದಗಿಸದೆ ಅರ್ಜಿ ಸಲ್ಲಿಸುವವರೂ ಇದ್ದಾರೆ ಎನ್ನುತ್ತಾರೆ ಅಧಿಕಾರಿಗಳು.

Advertisement

ಮಧ್ಯವರ್ತಿಗಳ ಸಂಪರ್ಕ ಬೇಡ
ಸಾರ್ವಜನಿಕರ ಕೆಲಸಗಳನ್ನು ಸುಲಭಗೊಳಿಸುವ ಉದ್ದೇಶದಿಂದ ಸರಕಾರ ಭೂಪರಿವರ್ತನೆಗೆ ಆನ್‌ಲೈನ್‌ ಸೌಲಭ್ಯ ಕಲ್ಪಿಸಿದೆ. ಸೇವಾಸಿಂಧು ಕೇಂದ್ರಗಳಲ್ಲಿಯೂ ಇದನ್ನು ಮಾಡಬಹುದು. ಯಾರು ಕೂಡ ಮಧ್ಯವರ್ತಿಗಳನ್ನು ಸಂಪರ್ಕಿಸುವ ಅಗತ್ಯವಿಲ್ಲ. ಅರ್ಜಿ ಸಲ್ಲಿಕೆ ಸಂದರ್ಭ ಪೂರಕ ದಾಖಲೆಗಳನ್ನೆಲ್ಲ ಒದಗಿಸಿದರಾಯಿತು. ಭೂಪರಿವರ್ತನೆಗೆ ದುಬಾರಿ ಶುಲ್ಕ ಕೇಳಿದರೆ ನೇರವಾಗಿ ನನ್ನನ್ನು ಅಥವಾ ಸ್ಥಳೀಯ ತಹಶೀಲ್ದಾರ್‌ಗಳನ್ನು ಸಂಪರ್ಕಿಸಬಹುದು. ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. – ಜಿ. ಜಗದೀಶ್‌, ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next