ಬೆಂಗಳೂರು: ತುಮಕೂರು ರಸ್ತೆಯಲ್ಲಿ ಬರುವ ಬಿಐಇಸಿ ಮೆಟ್ರೋ ನಿಲ್ದಾಣ ನಿರ್ಮಾಣಕ್ಕೆ ಅಗತ್ಯವಿರುವ ಹೆಚ್ಚುವರಿ ಭೂಸ್ವಾಧೀನ ಪ್ರಕ್ರಿಯೆಗೆ ಹಾದಿ ಈಗ ಸುಗಮವಾಗಿದೆ. ನಾಗಸಂದ್ರದಿಂದ ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದವರೆಗಿನ (ಬಿಐಇಸಿ) ವಿಸ್ತರಿತ ಮಾರ್ಗಕ್ಕೆ ಅಗತ್ಯ ಇರುವ 1,813 ಚ.ಮೀ. ಹೆಚ್ಚುವರಿ ಭೂಮಿಯನ್ನು ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್) ಸ್ವಾಧೀನಪಡಿಸಿಕೊಳ್ಳುವ ಸಂಬಂಧ ರಾಜ್ಯ ಸರ್ಕಾರ ಶನಿವಾರ ಅಧಿಸೂಚನೆ ಹೊರಡಿಸಿದೆ.
ಈ ಭೂಮಿಗೆ ಸಂಬಂಧಿಸಿದಂತೆ ನೈಸ್ ಮತ್ತು ಬಿಎಂಆರ್‌ಸಿಎಲ್ ನಡುವೆ ವಿವಾದ ಏರ್ಪಟ್ಟಿತ್ತು. ಈಚೆಗೆ ನ್ಯಾಯಾಲಯದಲ್ಲಿಇತ್ಯರ್ಥವಾಗಿದ್ದು, ಸರ್ಕಾರ 1,813 ಚ.ಮೀ. ಭೂಸ್ವಾಧೀನಕ್ಕಾಗಿ 28 (4) ಅಧಿಸೂಚನೆ ಹೊರಡಿಸಲು ಅನುಮತಿ ನೀಡಿದೆ. ನಾಗಸಂದ್ರದಿಂದ ಬಿಐ ಇಸಿವರೆಗೆ ವಿಸ್ತರಣೆಗೆ ಅನುಮೋದನೆ ದೊರಕಿದ್ದು, 3.77 ಕಿ.ಮೀ. ಉದ್ದದವರೆಗೆ ಮೆಟ್ರೋ ರೈಲು ಮಾರ್ಗ ಇಲ್ಲಿ ನಿರ್ಮಾಣವಾಗುತ್ತದೆ.
ಒಟ್ಟಾರೆ ಈ ಮಾರ್ಗದಲ್ಲಿ ಸುಮಾರು 24,000 ಚ.ಮೀ. ಭೂಸ್ವಾಧೀನ ಪ್ರಕ್ರಿಯೆ ಈಗಾಗಲೇ ಪೂರ್ಣಗೊಂಡಿ ದೆ. ಬಿಐಇಸಿ ನಿಲ್ದಾಣ ನಿರ್ಮಾಣಕ್ಕೂ 6,000 ಚ.ಮೀ. ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಆದರೆ ಈ ಪೈಕಿ 1,813 ಚ.ಮೀ. ಭೂಸ್ವಾಧೀನ ಕಾರ್ಯ ಕಗ್ಗಂಟಾಗಿತ್ತು. ಈ ಕುರಿತು ‘ಉದಯವಾಣಿ’ಗೆ ಪ್ರತಿಕ್ರಿಯಿಸಿದ ಬಿಎಂಆರ್‌ಸಿಎಲ್‌ನ ಭೂಸ್ವಾಧೀನ ವಿಭಾಗದ ಪ್ರಧಾನ ವ್ಯವಸಾ §ಪಕ ಚನ್ನಪ್ಪಗೌಡರ, “ತುಮಕೂರು ರಸ್ತೆಯ ಬಿಐಇಸಿ ನಿಲ್ದಾಣ ನಿರ್ಮಾಣಕ್ಕೆ ಅಗತ್ಯ ಭೂಸ್ವಾಧೀನ ಪ್ರಕ್ರಿಯೆ ಕಗ್ಗಂಟಾಗಿತ್ತು. ಈಗ ಹಾದಿ ಸುಗಮವಾದಂತಾಗಿದೆ.
ಈ ಮೊದಲು ಭೂಸ್ವಾಧೀನಕ್ಕೆ ಮುಂದಾದಾಗ, ನೈಸ್ ಸಂಸ್ಥೆಯು ಈ ಕುರಿತು ಯಾವುದೇ ನೋಟಿಸ್ ನೀಡಿಲ್ಲ, ಸಮಯಾವಕಾಶವನ್ನೂ ನೀಡಿಲ್ಲ ಎಂದು ದೂರಿ ನ್ಯಾಯಾಲಯದ ಮೊರೆಹೋಗಿತ್ತು. ಈಗ ಸರ್ಕಾರ ಭೂಸ್ವಾಧೀನಕ್ಕೆ ಅನುಮತಿ ನೀಡಿದೆ’ ಎಂದರು. ಅಲ್ಲದೆ, ನ್ಯಾಯಾಲಯದ ಆದೇಶ ದಂತೆ ಹೊಸದಾಗಿ ಅಧಿಸೂಚನೆ ಹೊರಡಿಸಲಾಗುವುದು. ಈ ಸಂಬಂಧ ನೈಸ್ ಸಂಸ್ಥೆಗೆ ನೋಟಿಸ್ ನೀಡಲಾಗುವುದು. ಉತ್ತರಿಸಲು ಸಮಯಾವಕಾಶವನ್ನು ನೀಡಲಾಗುವುದು ಎಂದರು.