ಚಿಕ್ಕಮಗಳೂರು: ಚಿಕ್ಕಮಗಳೂರು-ಬೇಲೂರು-ಸಕಲೇಶಪುರ ರೈಲ್ವೆ ಮಾರ್ಗದ ಭೂಸ್ವಾಧೀನ ಪ್ರಕ್ರಿಯೆ ಶೀಘ್ರದಲ್ಲಿಯೇ ಪೂರ್ಣಗೊಳ್ಳುವ ಲಕ್ಷಣಗಳು ಕಂಡು ಬಂದಿದೆ.
ಹಲವು ದಶಕಗಳ ಬೇಡಿಕೆಯಾಗಿದ್ದ ಚಿಕ್ಕಮಗಳೂರಿಗೆ ರೈಲು ಬರುವ ಬೇಡಿಕೆ ಈಡೇರಿ 6 ವರ್ಷಗಳು ಕಳೆಯಿತು. ಬೇಡಿಕೆ ಈಡೇರಿದರೂ ನಗರಕ್ಕೆ ಈಗಲೂ ಪ್ರತಿನಿತ್ಯ ಕೇವಲ 2 ರೈಲುಗಳು ಮಾತ್ರ ಬರುತ್ತಿವೆ. ಚಿಕ್ಕಮಗಳೂರಿನಿಂದ ಸಕಲೇಶಪುರಕ್ಕೆ ರೈಲ್ವೆ ಮಾರ್ಗ ಪೂರ್ಣಗೊಂಡಲ್ಲಿ ಹೆಚ್ಚಿನ ರೈಲುಗಳು ಬರಲು ಸಾಧ್ಯವಾಗುತ್ತದೆ. ಇಲ್ಲಿನ ಜನತೆಗೂ ಸಾಕಷ್ಟು ಅನುಕೂಲವಾಗುತ್ತದೆ ಎಂಬ ಕಾರಣದಿಂದ ಚಿಕ್ಕಮಗಳೂರು-ಬೇಲೂರು-ಸಕಲೇಶಪುರ ರೈಲ್ವೆ ಮಾರ್ಗಕ್ಕೆ ಕಳೆದ ಯುಪಿಎ ಸರ್ಕಾರದ ಅವಧಿಯಲ್ಲಿ ಅಂದಿನ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ 2014ರ ಫೆಬ್ರವರಿ 23 ರಂದು ಶಂಕುಸ್ಥಾಪನೆ ನೆರವೇರಿಸಿದ್ದರು.
131 ಎಕರೆ: ರೈಲ್ವೆ ಕಾಮಗಾರಿಗೆ ಚಿಕ್ಕಮಗಳೂರು ತಾಲೂಕಿನಲ್ಲಿ 6 ಗ್ರಾಮಗಳ 282 ಕುಟುಂಬಗಳಿಗೆ ಸೇರಿದ 131-29 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬೇಕಿದೆ. ಗಂಜಲಗೋಡು ಗ್ರಾಮದಲ್ಲಿ 39 ಕುಟುಂಬಗಳ 17-2 ಎಕರೆ, ಮಳಲೂರು ಗ್ರಾಮದಲ್ಲಿ 108 ಕುಟುಂಬಗಳಿಂದ 37-33 ಎಕರೆ, ಹಾದಿಹಳ್ಳಿ ಗ್ರಾಮದಲ್ಲಿ 93 ಕುಟುಂಬಗಳಿಂದ 59-29 ಎಕರೆ, ಬಾಣಾವಾರ ಗ್ರಾಮದಲ್ಲಿ 12 ಕುಟುಂಬಗಳಿಂದ 9-04 ಎಕರೆ, ಹಳುವಳ್ಳಿ ಗ್ರಾಮದಲ್ಲಿ 6 ಕುಟುಂಬಗಳಿಂದ 1 ಎಕರೆ ಹಾಗೂ ಅಂಬಳೆ ಗ್ರಾಮದಲ್ಲಿ 24 ಕುಟುಂಬಗಳಿಂದ 7 ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಳ್ಳಬೇಕಿದೆ.
ಭೂಸ್ವಾಧೀನ ಪ್ರಕ್ರಿಯೆ ಈಗಾಗಲೇ ಪೂರ್ಣಗೊಂಡಿದ್ದು, ಸ್ವಾಧೀನಪಡಿಸಿಕೊಳ್ಳಲಿರುವ ಜಮೀನಿಗೆ ದರ ನಿಗದಿಪಡಿಸುವ ಕಾರ್ಯ ಈಗ ಆರಂಭಗೊಂಡಿದೆ. ಉಪವಿಭಾಗಾಧಿಕಾರಿ ಶಿವಕುಮಾರ್ ಈ ಕಾರ್ಯವನ್ನು ಆರಂಭಿಸಿದ್ದು, ಈಗಾಗಲೇ ಸಂಬಂಧಪಟ್ಟ ರೈತರೊಂದಿಗೆ ಒಂದು ಬಾರಿ ಸಭೆಯನ್ನೂ ನಡೆಸಿದ್ದಾರೆ.
ನಾಲ್ಕು ಕುಟುಂಬಗಳು: ಹೊಸ ಭೂಸ್ವಾಧೀನ ನೀತಿಯಂತೆ ಯಾವುದೇ ಕಾಮಗಾರಿಗೆ ರೈತರಿಂದ ಸ್ವಾಧೀನಪಡಿಸಿಕೊಳ್ಳುವ ಜಮೀನು ಅವರ ಒಟ್ಟು ಆಸ್ತಿಯ ಶೇ.50ನ್ನು ಮೀರಿದ್ದರೆ, ಅಂತಹ ಕುಟುಂಬಕ್ಕೆ ಸ್ವಾಧೀನಪಡಿಸಿಕೊಂಡಲ್ಲಿ ಅವರ ಸ್ವಾಭಾವಿಕ ಜೀವನಕ್ಕೆ ಧಕ್ಕೆಯುಂಟಾಗುತ್ತದೆ ಎಂಬ ಕಾರಣದಿಂದ ಭೂಮಿಗೆ ಸೂಕ್ತ ಪರಿಹಾರ ನೀಡುವುದು ಮಾತ್ರವಲ್ಲದೆ, 1 ಕುಟುಂಬಕ್ಕೆ 5 ಲಕ್ಷ ರೂ.ಗಳಂತೆ ಹೆಚ್ಚುವರಿ ಹಣವನ್ನೂ ನೀಡಬೇಕಾಗುತ್ತದೆ.
Advertisement
ಶಂಕುಸ್ಥಾಪನೆ ನೆರವೇರಿಸಿದ ನಂತರ ಭೂಸ್ವಾಧೀನ ಪ್ರಕ್ರಿಯೆಗೆಂದು ಆಗ ಸರ್ಕಾರವು 15 ಕೋಟಿ ರೂ. ಬಿಡುಗಡೆ ಮಾಡಿತ್ತು. ಆದರೂ ಸಹ ಭೂಸ್ವಾಧೀನ ಪ್ರಕ್ರಿಯೆ ಕುಂಟುತ್ತಲೇ ಸಾಗಿತ್ತು. ಭೂ ಸ್ವಾಧೀನಪಡಿಸಿಕೊಳ್ಳಬೇಕಿರುವ ಗ್ರಾಮಗಳಲ್ಲಿ ಜಿಲ್ಲಾಡಳಿತದ ವತಿಯಿಂದ ಗ್ರಾಮಸ್ಥರ ಸಭೆಯನ್ನೂ ನಡೆಸಲಾಗಿತ್ತು. ಇಷ್ಟೆಲ್ಲ ಆದರೂ ಸಹ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿರಲಿಲ್ಲ.
Related Articles
Advertisement
ಅದೇ ರೀತಿ ಚಿಕ್ಕಮಗಳೂರು-ಬೇಲೂರು-ಸಕಲೇಶಪುರ ರೈಲ್ವೆ ಮಾರ್ಗಕ್ಕೆ ಭೂಮಿಯನ್ನು ಕಳೆದುಕೊಳ್ಳುತ್ತಿರುವ ಕುಟುಂಬಗಳ ಪೈಕಿ ಅಂಬಳೆ ಹಾಗೂ ಮಳಲೂರು ಗ್ರಾಮದ 2 ಕುಟುಂಬಗಳು ತಮ್ಮ ಒಟ್ಟು ಆಸ್ತಿಯ ಶೇ.50ಕ್ಕಿಂತ ಹೆಚ್ಚು ಭೂಮಿ ಕಳೆದುಕೊಳ್ಳುತ್ತಿದ್ದು, ಈ 4 ಕುಟುಂಬಗಳಿಗೆ ಸೂಕ್ತ ಪರಿಹಾರದೊಂದಿಗೆ ತಲಾ 5 ಲಕ್ಷ ರೂ. ಹೆಚ್ಚುವರಿ ಹಣವೂ ದೊರೆಯಲಿದೆ.
ಚಿಕ್ಕಮಗಳೂರು-ಬೇಲೂರು-ಸಕಲೇಶಪುರ ರೈಲ್ವೆ ಮಾರ್ಗದ ಕಾಮಗಾರಿ ಪೂರ್ಣಗೊಂಡಲ್ಲಿ, ಚಿಕ್ಕಮಗಳೂರಿನಿಂದ ಸಕಲೇಶಪುರ ಮೂಲಕ ಮಂಗಳೂರು, ಮೈಸೂರಿಗೆ ನೇರ ರೈಲ್ವೆ ಸಂಪರ್ಕ ದೊರೆಯಲಿದೆ. ಹೀಗಾದಲ್ಲಿ ಪ್ರವಾಸೋದ್ಯಮಕ್ಕೂ ಅನುಕೂಲಕರವಾಗುವುದಲ್ಲದೆ, ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಗಳಾದ ಕಾಫಿ ಮತ್ತು ಮೆಣಸು ವ್ಯಾಪಾರಸ್ಥರಿಗೂ ಹೆಚ್ಚಿನ ಅನುಕೂಲಕರವಾಗಲಿದೆ.
•ಎಸ್.ಕೆ.ಲಕ್ಷ್ಮೀಪ್ರಸಾದ್