ಬೆಂಗಳೂರು: ಪುಸ್ತಕ ಓದು ಪರಿವರ್ತನೆಗೆ ದಾರಿ ದೀಪವಾಗಲಿದ್ದು, ಬಿಡುವಿನ ವೇಳೆ ಪುಸ್ತಕ ಓದುವ ಅಭಿರುಚಿ ರೂಢಿಸಿಕೊಳ್ಳುವಂತೆ ಸಂಸದ ಮತ್ತು ಸಾಹಿತಿ ಡಾ.ಎಲ್.ಹನುಮಂತಯ್ಯ ಸಲಹೆ ನೀಡಿದರು.
ಕನ್ನಡ ಪುಸ್ತಕ ಪ್ರಾಧಿಕಾರ ಭಾನುವಾರ ಅಗ್ರಹಾರ ದಾಸರ ಹಳ್ಳಿಯ ಗುಂಡೂರಾವ್ ಕಟ್ಟಡದಲ್ಲಿ ಹಮ್ಮಿಕೊಂಡಿದ್ದ “ನಿಮ್ಮ ಮನೆಗೆ ನಮ್ಮ ಪುಸ್ತಕ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೊಳಚೆ ಪ್ರದೇಶಗಳ ನಿವಾಸಿಗಳು ಮಕ್ಕಳಿಗೆ ಉತ್ತಮ ರೀತಿಯ ಶಿಕ್ಷಣ ಕೊಡುವುದರತ್ತ ಆಲೋಚನೆ ಮಾಡಬೇಕು ಎಂದು ಹೇಳಿದರು.
ಕನಸು ಕಾಣುವುದು ಒಳ್ಳೆಯದು. ಆದರೆ ಆ ಕನಸ್ಸಿಗೆ ಬೇಕಾಗಿರುವ ಓದು ಇಲ್ಲದಿದ್ದರೆ. ಕನಸು ನೆನಸಾಗಲು ಸಾಧ್ಯವಿಲ್ಲ. ಲೋಕ ಜ್ಞಾನ ಬೆಳೆಸುವುದರ ಜತೆಗೆ ನಮ್ಮ ಬದುಕನ್ನು ರೂಪಿಸಿಕೊಳ್ಳುವ ಉದ್ದೇಶದಿಂದ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು ಎಂದು ತಿಳಿಹೇಳಿದರು.
ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ ಮಾತನಾಡಿ, ಸಾಹಿತ್ಯಸಕ್ತರನ್ನು ಬೆಳೆಸುವ ನಿಟ್ಟಿನಲ್ಲಿ ಪ್ರಾಧಿಕಾರ ಹಲವು ಯೋಜನೆಗಳನ್ನು ರೂಪಿಸಿದೆ. ರಾಜ್ಯದ ಹಲವೆಡೆಗಳಲ್ಲಿ ನಡೆದಿರುವ ಪ್ರಾಧಿಕಾರದ ನಿಮ್ಮ ಮನೆಗೆ ನಮ್ಮ ಪುಸ್ತಕ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ ಎಂದು ನುಡಿದರು.
ಕೈದಿಗಳಲ್ಲೂ ಓದುವ ಅಭಿರುಚಿ ಬೆಳೆಸಬೇಕು ಎಂಬ ಉದ್ದೇಶದಿಂದ ಈಗಾಗಲೇ ಜೈಲಿನಲ್ಲೂ ಕೂಡ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅಲ್ಲಿ ಪ್ರಶಂಸೆ ವ್ಯಕ್ತವಾದ ನಂತರ ಇದೀಗ ಕೊಳಗೇರಿ ಪ್ರದೇಶದಲ್ಲಿ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಪುಸ್ತಕ ಓದು ಹಲವು ರೀತಿಯಲ್ಲಿ ಸಹಾಯಕ್ಕೆ ಬರಲಿದ್ದು, ಬಿಡುವಿನ ವೇಳೆ ಟಿ.ವಿ.ನೋಡುವ ಬದಲು ಪುಸ್ತಕಗಳನ್ನು ಓದಿ ಎಂದು ಕಿವಿಮಾತು ಹೇಳಿದರು. ಹಿರಿಯ ರಂಗ ಕರ್ಮಿ ಕೆ.ವಿ.ನಾಗರಾಜ ಮೂರ್ತಿ, ಹಿರಿಯ ಪತ್ರಕರ್ತ ಗುಡಿಹಳ್ಳಿ ನಾಗರಾಜ ಮತ್ತು ಪ್ರಾಧಿಕಾರದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.