ರಾಮನಗರ: ಮುಂಗಾರು ಹಂಗಾಮು ಮುಗಿಯಲು ಇನ್ನು ಕೆಲವೇ ದಿನ ಬಾಕಿ ಉಳಿದಿದೆ. ಮುಂಗಾರಿನ ಅವಧಿಯಲ್ಲಿ ಜಿಲ್ಲೆಯಲ್ಲಿ ಭರ್ತಿಯಾಗುತ್ತಿದ್ದ ಕೆರೆಗಳು ಖಾಲಿ ಉಳಿದಿರುವುದು ಈ ವರ್ಷವೂ ಬರ ಜಿಲ್ಲೆಯನ್ನು ಕಾಡಲಿದೆಯಾ ಎಂಬ ಸಂದೇಹ ಜಿಲ್ಲೆಯ ಜನತೆಯನ್ನು ಕಾಡುತ್ತಿದೆ.
ಜಿಲ್ಲೆಯಲ್ಲಿ 101 ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಸೇರಿದ ಕೆರೆ, ಪಂಚಾಯತ್ ರಾಜ್ ಇಲಾಖೆ ವ್ಯಾಪಿಯಲ್ಲಿ 392 ಕೆರೆಗಳಿದ್ದು, ಇದರಲ್ಲಿ ಶೇ.50 ಕೆರೆ ಖಾಲಿಯಾಗಿವೆ. ಮುಂಗಾರಿನ ಅವಧಿಯಲ್ಲೇ ಕೆರೆಗಳು ಖಾಲಿಯಾಗಿದ್ದು, ಹಿಂಗಾರು ಕೈಕೊಟ್ಟಿದ್ದೇ ಆದಲ್ಲಿ ಜಿಲ್ಲೆಯಲ್ಲಿ ಮುಂದಿನ ಬೇಸಿಗೆ ದಿನ ಕಳೆದ ವರ್ಷದಷ್ಟೇ ಭೀಕರವಾಗುವ ಸಾಧ್ಯತೆಯಿದೆ.
ಜಿಪಂ ಕೆರೆಗಳು ಬರಿದು: ಜಿಲ್ಲೆಯಲ್ಲಿ ಜಿಪಂ ವ್ಯಾಪ್ತಿಗೆ ಸೇರಿದ 493 ಕೆರೆಗಳಿದ್ದು ಈ ಕೆರೆಗಳು ಬಹುತೇಕ ಖಾಲಿಯಾಗಿವೆ. ಜಿಲ್ಲೆಯಲ್ಲಿ ಶೇ.5ರಷ್ಟು ಜಿಪಂ ಕೆರೆಗಳು ತುಂಬಿವೆ. ಉಳಿದಂತೆ ಶೇ.15 ಕೆರೆಗಳಲ್ಲಿ 50 ನೀರಿದ್ದು, ಶೇ.20 ಕೆರೆಗಳಲ್ಲಿ ಶೇ.30ಕ್ಕಿಂತ ಕಡಿಮೆ ಇದೆ. ಉಳಿದ ಕೆರೆಗಳು ಖಾಲಿಯಾಗಿವೆ. ಜಿಲ್ಲೆಯ ಜಿಪಂ ಕೆರೆಗಳು 2205.24 ಎಂಸಿಎಫ್‌ಟಿಯಷ್ಟು ಶೇಖರಣಾ ಸಾಮರ್ಥ್ಯ ಹೊಂದಿವೆ.
ಅಂತರ್ಜಲ ಮಟ್ಟ ಕುಸಿತ: ಜಿಲ್ಲೆಯಲ್ಲಿ ಕಳೆದ ಸಾಲಿನಲ್ಲಿ ತೀವ್ರ ಬರದಿಂದಾಗಿ 5 ಮೀಟರ್‌ನಷ್ಟು ಅಂತರ್ಜಲ ಮಟ್ಟ ಕುಸಿತವಾಗಿತ್ತು. ಈ ಬಾರಿಯೂ ಕೆರೆಗಳು ತುಂಬದೇ ಹೋದಲ್ಲಿ ಮತ್ತಷ್ಟು ಕುಸಿಯಲಿದೆ. ಜಿಲ್ಲೆಯ ಬಹುತೇಕ ನೀರಾವರಿ ವ್ಯವಸ್ಥೆ ಹಾಗೂ ಗ್ರಾಮೀಣ ಭಾಗದ ಕುಡಿವ ನೀರಿನ ವ್ಯವಸ್ಥೆಗೆ ಅಂತರ್ಜಲವನ್ನೇ ಅವಲಂಬಿಸಿದ್ದು, ಕೆರೆ ತುಂಬದಿದ್ದಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಭವಣೆ ತೀವ್ರಗೊಳ್ಳಲಿದೆ.
ಏತ ನೀರಾವರಿ ಯೋಜನೆ ಪ್ರಯೋಜನ ವಿಲ್ಲ: ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಎಲ್ಲಾ ಸಣ್ಣ ನೀರಾವರಿ ಇಲಾಖೆ ಕೆರೆ ಹಾಗೂ ಜಿಪಂ ಕೆರೆ ತುಂಬಿಸಲು ಕಣ್ವ ಏತ ನೀರಾವರಿ ಯೋಜನೆಯನ್ನು ರೂಪಿಸಲಾಗಿದೆ ಆದರೂ, ಇಗ್ಗಲೂರಿನ ಬಳಿ ಶಿಂಷಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ದೇವೇಗೌಡ ಬ್ಯಾರೇಜ್‌ನಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಕೆಆರ್‌ಎಸ್ ಜಲಾಶಯ ದಿಂದ ವಿಶ್ವೇಶ್ವರಯ್ಯ ನಾಲೆಗೆ ನೀರು ಬಿಡುಗಡೆ ಮಾಡಿದ್ದರೆ ಇಗ್ಗಲೂರು ಬ್ಯಾರೇಜ್‌ಗೆ ನೀರು 200 ರಿಂದ 300 ಕ್ಯುಸೆಕ್ ನೀರು ಹರಿದು ಬರುತ್ತಿತ್ತು. ಆದರೆ, ಈಬಾರಿ ಚಾನಲ್‌ಗೆ ನೀರು ಬಿಟ್ಟಿಲ್ಲದ ಕಾರಣ ಬ್ಯಾರೇಜ್‌ಗೆ ಒಳಹರಿವು ಕಡಿಮೆಯಾಗಿದ್ದು, ಕೆರೆಗಳಿಗೆ ಸಾಕಷ್ಟು ನೀರು ತುಂಬಿಸಲು ಸಾಧ್ಯವಾಗುತ್ತಿಲ್ಲ. ಸತ್ತೇಗಾಲ ಏತನೀರಾವರಿ ಯೋಜನೆ ಪೂರ್ಣ ಗೊಂಡಿದ್ದರೆ ಸಹಕಾರಿಯಾಗುತ್ತಿತ್ತು. ಈ ಯೋಜ ನೆಯೂ ಕುಂಟುತ್ತಾ ಸಾಗುತ್ತಿರುವುದರಿಂದ ಜಿಲ್ಲೆಯ ನೀರಿನ ಸಮಸ್ಯೆ ಹಾಗೆಯೇ ಉಳಿದಿದೆ.
ಜಿಲ್ಲೆಯ 57 ಕೆರೆಗಳಲ್ಲಿ ನೀರಿಲ್ಲ : ಜಿಲ್ಲೆಯ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ 101 ಕೆರೆಗಳಿದ್ದು ಇದರಲ್ಲಿ 57 ಕೆರೆಗಳಲ್ಲಿ ಹನಿ ನೀರಿಲ್ಲ. ಉಳಿದ 20 ಕೆರೆಗಳಲ್ಲಿ ಶೇ.50 ನೀರಿದ್ದರೆ, 24 ಕೆರೆಗಳಲ್ಲಿ ನೀರಿನ ಪ್ರಮಾಣ ಶೇ.30ಕ್ಕಿಂತ ಕಡಿಮೆ ಇದೆ. ಜಿಲ್ಲೆಯ 101 ಕೆರೆಗಳಿಂದ ಒಟ್ಟು 4,911.67 ಎಂಸಿಎಫ್‌ಟಿ ಸಾಮರ್ಥ್ಯ ಹೊಂದಿದ್ದು ಬಹತೇಕ ಕೆರೆ ಖಾಲಿ ಖಾಲಿ ಉಳಿದಿವೆ. ಹಿಂಗಾರು ಮಳೆ ಅಕ್ಟೋಬರ್ ತಿಂಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೀಳಲಿದ್ದು, ಒಂದು ವೇಳೆ ಹಿಂಗಾರು ಕೈಕೊಟ್ಟಿದ್ದೇ ಆದಲ್ಲಿ ಜಿಲ್ಲೆಯ ಶೇ.80ಕ್ಕೂ ಹೆಚ್ಚು ಕೆರೆ ಖಾಲಿ ಖಾಲಿ ಉಳಿಯಲಿವೆ.
– ಸು.ನಾ.ನಂದಕುಮಾರ್