Advertisement
ಗಂಗೊಳ್ಳಿ ಗ್ರಾ.ಪಂ.ನಿಂದ 2018ರಲ್ಲಿ ಆರಂಭವಾದ ಘನ ತ್ಯಾಜ್ಯ ವಿಲೇವಾರಿ ಘಟಕ ಕಳೆದ ಕೆಲ ತಿಂಗಳಿನಿಂದ ಸ್ಥಗಿತಗೊಂಡಿರುವುದರಿಂದ ಈಗ ಗ್ರಾಮದಲ್ಲಿ ಕಸ ವಿಲೇವಾರಿಯೇ ದೊಡ್ಡ ಸಮಸ್ಯೆಯಾಗಿದೆ. ಎಲ್ಲೆಂದರಲ್ಲಿ ಕಸ ಎಸೆಯುವ ಬೆಳವಣಿಗೆ ನಡೆಯುತ್ತಿದೆ. ರಸ್ತೆ ಬದಿ, ಕೆರೆ, ಕಸ ಎಸೆಯುವ ಡಂಪಿಂಗ್ ಯಾರ್ಡ್‌ಗಳಾಗುತ್ತಿದೆ. ಇದಲ್ಲದೆ ಮೀನುಗಾರಿಕಾ ಪ್ರದೇಶ ವಾಗಿರುವುದರಿಂದ ಕಸ ವಿಲೇವಾರಿ ಇಲ್ಲಿನ ಬಹುದೊಡ್ಡ ಸಮಸ್ಯೆಗಳಲ್ಲಿ ಒಂದಾಗಿದೆ.
ಮಡಿವಾಳರ ಕೆರೆಯಂತೂ ಈಗ ಕಸ ಎಸೆಯುವ ಡಂಪಿಂಗ್ ಯಾಡೇì ಆಗಿ ಬಿಟ್ಟಿದೆ. ಕೆರೆಯ ಸುತ್ತಲೂ ತ್ಯಾಜ್ಯ, ಪ್ಲಾಸ್ಟಿಕ್ ತುಂಬಿ ಹೋಗಿವೆ. ಇದು ರಸ್ತೆಯ ಬದಿಯೇ ಇರುವ ಕೆರೆಯಾಗಿರುವುದರಿಂದ ಅಪರಿಚಿತರು ವಾಹನದಲ್ಲಿ ಬಂದು ಕಸ ಎಸೆದು ಹೋಗುತ್ತಿರುವುದು ಕಂಡು ಬರುತ್ತಿದೆ. ಕೆರೆಯ ಸಮೀಪವೇ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿದ್ದು ಪ್ರತಿನಿತ್ಯ ನೂರಾರು ವಿದ್ಯಾರ್ಥಿಗಳು ಇದೇ ಮಾರ್ಗವಾಗಿ ಶಾಲೆಗೆ ಬರುತ್ತಾರೆ. ಇನ್ನು ಗಂಗೊಳ್ಳಿಯ ಕಡಲ ಕಿನಾರೆಯುದ್ದಕ್ಕೂ ಅಲ್ಲಲ್ಲಿ ಅನೇಕ ಕಡೆಗಳಲ್ಲಿ ಕಸದ ರಾಶಿಯೇ ಕಂಡು ಬರುತ್ತಿದೆ. ಇಲ್ಲಿಗೆ ಬರುವ ಪ್ರವಾಸಿಗರು ಅಸಹ್ಯ ವಾಸನೆಯಿಂದ ಮೂಗು ಮುಚ್ಚಿಕೊಂಡೇ ಇರಬೇಕಾದ ಸ್ಥಿತಿ. ಇನ್ನು ಜಾನುವಾರುಗಳು, ನಾಯಿಗಳೆಲ್ಲ ಇಲ್ಲಿ ಎಸೆಯಲಾದ ಆಹಾರ ತಿನ್ನಲು ಬರುತ್ತಿದ್ದು, ಅದರ ಆರೋಗ್ಯವು ಹದಗೆಡುವ ಸಾಧ್ಯತೆಯೂ ಇದೆ.
Related Articles
ಗಂಗೊಳ್ಳಿಯು ಕುಂದಾಪುರ ತಾಲೂಕಿ ನಲ್ಲಿಯೇ ದೊಡ್ಡ ಗ್ರಾಮವಾಗಿದೆ. 1 ಸಾವಿರ ಎಕರೆ ವಿಸ್ತೀರ್ಣದಲ್ಲಿ 3,041 ಮನೆಗಳಿದ್ದು, 13 ಸಾವಿರಕ್ಕೂ ಅಧಿಕ ಜನಸಂಖ್ಯೆಯಿದೆ. ಸುಮಾರು 200 ಕ್ಕೂ ಮಿಕ್ಕಿ ಅಂಗಡಿ ಸೇರಿದಂತೆ ವಾಣಿಜ್ಯ ಮಳಿಗೆಗಳಿವೆ. 850 ಮನೆಗಳಿಂದ ಕಸ ಸಂಗ್ರಹ ಮಾಡುತ್ತಿದ್ದಾಗ ದಿನಕ್ಕೆ 2 ಕ್ವಿಂಟಾಲ್ ಕಸ ಸಂಗ್ರಹವಾಗುತ್ತಿತ್ತು. ಈಗ ಇದನ್ನು ಮತ್ತಷ್ಟು ವಿಸ್ತರಿಸಿದರೆ ಇನ್ನೂ ಹೆಚ್ಚು ಕಸ ಸಂಗ್ರಹವಾಗಬಹುದು.
Advertisement
ಶೀಘ್ರ ವಿಲೇವಾರಿ ಘಟಕ ಆರಂಭಕೆರೆಗಳು, ರಸ್ತೆ ಬದಿ, ಬೀಚ್ ಬಳಿ ಕಸ ಎಸೆಯದಂತೆ ಈಗಾಗಲೇ ಗ್ರಾಮಸ್ಥರಿಗೆ ಮನವಿ ಮಾಡಿಕೊಳ್ಳಲಾಗಿದೆ. ಇದಲ್ಲದೆ ಪಂಚಾಯತ್ ವತಿಯಿಂದಲೇ ಈ ಎಲ್ಲ ಪ್ರದೇಶಗಳಲ್ಲಿ ಎಸೆಯಲಾದ ತ್ಯಾಜ್ಯ ರಾಶಿಯನ್ನು ಕೂಡ ವಿಲೇವಾರಿ ಮಾಡಲಾಗಿದೆ. ಘನ ತ್ಯಾಜ್ಯ ವಿಲೇವಾರಿ ಘಟಕವು ಕಸ ಸಂಗ್ರಹ ವಾಹನ ಹಾಗೂ ಅನುದಾನ ಕೊರತೆಯಿಂದ ಸ್ಥಗಿತಗೊಂಡಿದ್ದು, ಶೀಘ್ರ ಪುನಾರಂಭಗೊಳ್ಳಲಿದೆ. ಪಂಚಾಯತ್ ಹಾಗೂ ಒಬ್ಬರು ದಾನಿಗಳ ನೆರವಿನಿಂದ 4 ಲಕ್ಷ ರೂ. ವೆಚ್ಚದಲ್ಲಿ ವಾಹನವೊಂದನ್ನು ಆದಷ್ಟು ಬೇಗ ಖರೀದಿ ಮಾಡಿ ಕಸ ಸಂಗ್ರಹಿಸಲಾಗುವುದು. ಈ ಬಗ್ಗೆ ಜಿ.ಪಂ. ಸಿಇಒ ಅವರ ಗಮನಕ್ಕೂ ತರಲಾಗಿದೆ. ತ್ಯಾಜ್ಯ ವಿಲೇವಾರಿ ತಡೆಯಲು ಕೂಡಲೇ ಸೂಕ್ತ ಕ್ರಮಕೈಗೊಳ್ಳಲಾಗುವುದು.
– ಶ್ರೀನಿವಾಸ ಖಾರ್ವಿ,
ಅಧ್ಯಕ್ಷರು, ಗಂಗೊಳ್ಳಿ ಗ್ರಾ. ಪಂ. ಸೊಳ್ಳೆ ಉತ್ಪತ್ತಿ ಕೇಂದ್ರ
ಕೆರೆಗಳು, ಕಡಲ ಕಿನಾರೆ, ರಸ್ತೆ ಬದಿಯ ಚರಂಡಿಗಳಲ್ಲಿ ಪ್ಲಾಸ್ಟಿಕ್, ಆಹಾರ, ಕೊಳೆತ ತರಕಾರಿ ಮತ್ತಿತರ ವಸ್ತುಗಳನ್ನು ಎಸೆಯುತ್ತಿರುವುದರಿಂದ ಈ ಪ್ರದೇಶಗಳು ಸೊಳ್ಳೆ ಉತ್ಪಾದನಾ ಕೇಂದ್ರಗಳಾಗಿ ಬಿಟ್ಟಿವೆ. ಇದರಿಂದ ಸಾಂಕ್ರಾಮಿಕ ರೋಗಗಳು ಕೂಡ ಹರಡುವ ಭೀತಿ ಇಲ್ಲಿನ ಗ್ರಾಮಸ್ಥರಲ್ಲಿ ಆವರಿಸಿದೆ.