ಬೆಂಗಳೂರು: ಬಿಡಿಎ ವತಿಯಿಂದ ಕೈಗೆತ್ತಿಕೊಂಡಿರುವ ಹೊಸಕೆರೆಹಳ್ಳಿ ಕೆರೆ ಅಭಿವೃದ್ಧಿ ಕಾಮಗಾರಿ ವಿಳಂಬವಾಗುತ್ತಿದ್ದು, ಇದರಿಂದಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಹೀಗಾಗಿ ಕೆರೆಯನ್ನು ಪಾಲಿಕೆ ವ್ಯಾಪ್ತಿಗೆ ಪಡೆದು ಅಭಿವೃದ್ಧಿಪಡಿಸಲಾಗುವುದು ಎಂದು ಮೇಯರ್ ಗಂಗಾಂಬಿಕೆ ಹೇಳಿದರು.
ಶನಿವಾರ ಹೊಸಕೆರೆಹಳ್ಳಿ ಕೆರೆ ಪರಿಶೀಲನೆ ವೇಳೆ ಸ್ಥಳೀಯರು ಮೇಯರ್‌ರನ್ನು ತರಾಟೆಗೆ ತೆಗೆದುಕೊಂಡರು. ಮೂರು ವರ್ಷಗಳಿಂದ ಕಾಮಗಾರಿ ನಡೆಯುತ್ತಿದ್ದು, ಒಳಚರಂಡಿ ನೀರು ರಸ್ತೆಗೆ ಬರುತ್ತಿದೆ. ಮಳೆ ಬಂದಾಗ ದುರ್ವಾಸನೆಗೆ ವಾಸಿಸಲು ಆಗುತ್ತಿಲ್ಲ ಎಂದು ದೂರುಗಳ ಸುರಿಮಳೆಗೈದರು.
ರಾಜಕಾಲುವೆ ನಿರ್ವಹಣೆ ಮಾಡದ ಕಾರಣ ನೀರು ಸರಾಗವಾಗಿ ಹರಿಯುತ್ತಿಲ್ಲ. ಇದರಿಂದಾಗಿ ಮಳೆ ಬಂದಾಗ ಸುತ್ತಮುತ್ತಲಿನ ಪ್ರದೇಶಗಳಿಗೆ ಕೊಳಚೆ ನೀರು ನುಗ್ಗಿ, ದುರ್ವಾಸನೆ ಹರಡುತ್ತಿದೆ. ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ಕಾಯಿಲೆ ಹರಡುವ ಆತಂಕ ಎದುರಾಗಿದೆ. ಈ ಕುರಿತು ಎಷ್ಟು ದೂರು ನೀಡಿದರೂ ಕ್ರಮಕ್ಕೆ ಮುಂದಾಗುತ್ತಿಲ್ಲ. ಒಂದು ದಿನ ಅವರು ಇಲ್ಲಿ ವಾಸ ಮಾಡಲಿ ನಮ್ಮ ಕಷ್ಟ ತಿಳಿಯುತ್ತದೆ ಎಂದು ನಿವಾಸಿಗಳು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದರಿಂದ ಕೋಪಗೊಂಡ ಮೇಯರ್ ಗಂಗಾಂಬಿಕೆ, ದೂರು ನೀಡಿದರೂ ಕ್ರಮ ಕೈಗೊಳ್ಳುವುದಿಲ್ಲವೇ? ಒಳಚರಂಡಿ ನೀರು ವಸತಿ ಪ್ರದೇಶಗಳಿಗೆ ನುಗ್ಗಿದರೆ ಜನರು ವಾಸ ಮಾಡುವುದು ಹೇಗೆ? ಎಂದು ಜಲಮಂಡಳಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಒಳಚರಂಡಿ ನೀರನ್ನೇಕೆ ರಾಜಕಾಲುವೆಗೆ ಹರಿಸುತ್ತೀರಾ? ಕೂಡಲೇ ಅದಕ್ಕೆ ಪ್ರತ್ಯೇಕ ಕಾಲುವೆ ವ್ಯವಸ್ಥೆ ಮಾಡಿ, ಜನರಿಗೆ ತೊಂದರೆಯಾಗದಂತೆ ಕ್ರಮಕೈಗೊಳ್ಳಿ ಎಂದು ಸೂಚನೆ ನೀಡಿದರು. ಜತೆಗೆ, ಕೆರೆಯನ್ನು ಬಿಡಿಎಯಿಂದ ಬಿಬಿಎಂಪಿಗೆ ಪಡೆದು ಸಮಗ್ರವಾಗಿ ಅಭಿವೃದ್ಧಿಪಡಿಸುವುದಾಗಿ ಸ್ಥಳೀಯರಿಗೆ ಮೇಯರ್ ಭರವಸೆ ನೀಡಿದರು.
ಅಲ್ಲಿಂದ ಕೆಂಪಾಂಬುದಿ ಕೆರೆಗೆ ಭೇಟಿ ನೀಡಿ ಪರಿಶೀಲಿಸಿದ ಗಂಗಾಂಬಿಕೆ ಅವರು, ಈಗಾಗಲೇ ಕೆರೆಯ ಅಭಿವೃದ್ಧಿಯಾಗಿದ್ದು, ಸಮರ್ಪಕವಾಗಿ ನಿರ್ವಹಣೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ವೇಳೆ ಆಡಳಿತ ಪಕ್ಷ ನಾಯಕ ಎಂ.ಶಿವರಾಜು, ಜೆಡಿಎಸ್ ಪಕ್ಷದ ನಾಯಕಿ ನೇತ್ರಾ ನಾರಾಯಣ್ ಸೇರಿದಂತೆ ಪ್ರಮುಖರು ಹಾಜರಿದ್ದರು.