Advertisement

ಕೆರೆ-ಕಟ್ಟೆ-ಕೊಳ್ಳ ಖಾಲಿ ಖಾಲಿ

04:19 PM May 10, 2019 | Suhan S |

ಹಳಿಯಾಳ: ಸದಾ ನೀರಿನಿಂದ ತುಂಬಿರುತ್ತಿದ್ದ ಹಳಿಯಾಳದ ಬಾವಿ, ಕೆರೆ-ಕಟ್ಟೆ, ಹಳ್ಳ-ಕೊಳ್ಳಗಳು ಈಗ ಖಾಲಿ ಖಾಲಿಯಾಗಿವೆ. ತಂಪಾದ ತಣ್ಣನೆಯ ವಾತಾವರಣ ಹೊಂದಿದ್ದ ಈ ಭಾಗವೀಗ ಬೆಂಕಿಯ ಒಲೆಯಾಗಿ ಸುಡುತ್ತಿದೆ. ಜನ-ಜಾನುವಾರುಗಳು ಹಿಂದೆಂದು ಕಂಡರಿಯದ ಬರಗಾಲದಿಂದ ಪರಿತಪಿಸುತ್ತಿದ್ದಾರೆ.

Advertisement

ಬೇಸಿಗೆ ಮುಗಿಯುತ್ತ ಬಂದರೂ ಬಿಸಿಲಿನ ಝಳ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. 2017ರಲ್ಲಿ ಹಳಿಯಾಳಿಗರು ಅತಿ ಹೆಚ್ಚು ಬಿಸಿಲಿನ ತಾಪ ಅನುಭವಿಸಿದ್ದರು. ಈ ಬಾರಿ ಅದಕ್ಕೂ ಅಧಿಕವಾಗಿದೆ. ಪ್ರತಿನಿತ್ಯ 34ರಿಂದ 36 ಸೆಲ್ಸಿಯಸ್‌ನಷ್ಟು ಉಷ್ಣಾಂಶ ದಾಖಲಾಗುತ್ತಿದೆ. ಹೀಗಾಗಿ ಇಲ್ಲಿನ ಶಿವಪುರ, ಕಾಳಗಿನಕೊಪ್ಪ, ನಿರಲಗಾ, ಕಾಮಡೊಳ್ಳಿ, ಹೊಸಹಡಗಲಿ ಸೇರಿದಂತೆ ಸುಮಾರು 20ಕ್ಕೂ ಅಧಿಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ.

ಜಿಲ್ಲೆಯ ಗಡಿ ತಾಲೂಕಾಗಿರುವ ಹಳಿಯಾಳವು ಅಳ್ನಾವರ-ಧಾರವಾಡ-ಕಲಘಟಗಿಯ ಗಡಿಗಳನ್ನು ಹೊಂದಿಕೊಂಡಿರುವ ವಿಶಾಲ ಪ್ರದೇಶವಾಗಿದ್ದು, ಇಲ್ಲಿ ಕೃಷಿ ಪ್ರಧಾನವಾಗಿದೆ. ಇಲ್ಲಿ ಕಬ್ಬು-ಭತ್ತ-ಗೋವಿನಜೊಳ-ಹತ್ತಿ ಪ್ರಮುಖ ಬಿತ್ತನೆ ಬೆಳೆಗಳಾಗಿವೆ. ನಗರಕ್ಕೆ ನೀರಿನ ಕೊರತೆ ಬಾಧಿಸುವುದಿಲ್ಲ. ಆದರೆ ಗ್ರಾಮಾಂತರ ಭಾಗದ ಹಲವು ಹಳ್ಳಿಗಳು ನೀರಿಗಾಗಿ ಪರಿತಪಿಸಬೇಕಾಗುತ್ತದೆ.

ತಾಲೂಕಿನಲ್ಲಿ ಒಟ್ಟೂ ಸಣ್ಣ-ದೊಡ್ಡ ಸೇರಿ 36 ಕೆರೆಗಳಿದ್ದು, 71 ಬಾಂದಾರಗಳನ್ನು ಹೊಂದಿದೆ. ಸದ್ಯ ಬಾಂದಾರಗಳಲ್ಲಿ ನೀರಿಲ್ಲ. ಆದರೇ ಕೆಲವೇ ಕೆಲವು ಕೆರೆಗಳಲ್ಲಿ ಸ್ವಲ್ಪ ಪ್ರಮಾಣದ ನೀರಿನ ಸಂಗ್ರಹ ಕಾಣಸಿಗುತ್ತಿರುವುದು ಸಮಾಧಾನ ವಿಷಯವಾಗಿದೆ.

ಕೃಷಿ ಇಲಾಖೆ ಮಾಹಿತಿಯಂತೆ 2017ರಲ್ಲಿ 1820 ಮಿ.ಮೀ ವಾಡಿಕೆ ಮಳೆಯಾಗಬೇಕಿತ್ತು. ಆದರೆ 949.07ಮಿಮೀ ಆಗಿ ಪ್ರತಿಶತ 47.62 ಕಡಿಮೆ ಮಳೆಯಾಗಿತ್ತು. 2018ರಲ್ಲಿ 1222.73 ಮಿಮೀ ಮಳೆಯಾಗಿ ಶೇ. 32.80 ಮಳೆಯಾಗಿದ್ದು, 2017ಕ್ಕಿಂತ ಶೇ.15 ಉತ್ತಮ ಮಳೆಯಾಗಿದೆ. ಆದರೆ ಸದ್ಯ ಕೆರೆಗಳಲ್ಲಿ ನೀರಿನ ಸಂಗ್ರಹ ಪಾತಾಳ ಮುಟ್ಟುವ ಹಂತದಲ್ಲಿದೆ. ದಾಂಡೇಲಿಯ ಕಾಳಿನದಿಯಿಂದ ಹಳಿಯಾಳ ಪಟ್ಟಣಕ್ಕೆ ನೀರು ಸರಬರಾಜು ಆಗುತ್ತಿದೆ. ಕೆಲವೊಮ್ಮೆ ಪುರಸಭೆಯ ಕಾರ್ಯವೈಖರಿಯಿಂದ ಮಾತ್ರ ಜನ ನೀರಿನ ಸಮಸ್ಯೆ ಎದುರಿಸುತ್ತಾರೆ.

Advertisement

130 ಹಳ್ಳಿಗಳನ್ನು ಹೊಂದಿರುವ ದೊಡ್ಡ ತಾಲೂಕಾಗಿರುವ ಹಳಿಯಾಳ 24 ಗ್ರಾಮ ಪಂಚಾಯತಗಳನ್ನು ಹೊಂದಿದ್ದು, ತಾಲೂಕಿನಲ್ಲಿ 93 ಶುದ್ಧ ಕುಡಿಯುವ ನೀರಿನ ಘಟಕಗಳಿವೆ. ಇದರಲ್ಲಿ ಸಾರ್ವಜನಿಕರು-ಜನಪ್ರತಿನಿಧಿಗಳ-ಗ್ರಾಮಸ್ಥರ ಮಾಹಿತಿಯಂತೆ 32ಕ್ಕೂ ಅಧಿಕ ಘಟಕಗಳು ನಿರ್ವಹಣೆ ಇಲ್ಲದೇ ಕಾರ್ಯನಿರ್ವಹಿಸುತ್ತಿಲ್ಲ ಎನ್ನುತ್ತಾರೆ.

ಇನ್ನೂ ತಾಪಂ, ತಾಲೂಕಾಡಳಿತದವರು ಬೊರವೆಲ್ಗಳ ಸ್ಥಿತಿಗತಿಗಳನ್ನು ಮೇಲಿಂದ ಮೇಲೆ ಪರಿಶೀಲನೆ ಮಾಡುವ ಮೂಲಕ ನಿಗಾವಹಿಸಿದ್ದಾರೆ. ಆದರೆ ಸುಡು ಬಿಸಿಲಿನ ತಾಪದಿಂದ ಅಂತರ್ಜಲ ಮಟ್ಟ ಕೂಡ ಪಾತಾಳ ಮುಟ್ಟಿದ್ದೇ ಈ ಬಾರಿ ನೀರಿನ ಸಮಸ್ಯೆ ಹೆಚ್ಚಾಗಿ ತಲೆದೋರಲು ಕಾರಣವಾಗಿದೆ.

ಒಟ್ಟಾರೆ ಬೇಸಿಗೆ ಕಾಲದಲ್ಲಿ ಹಳಿಯಾಳ ಭಾಗದಲ್ಲಿ ಪಟ್ಟಣಕ್ಕೆ ಮಾತ್ರ ಕುಡಿಯುವ ನೀರಿನ ಸಮಸ್ಯೆ ಬಾಧಿಸುವುದಿಲ್ಲ. ಆದರೇ ಗ್ರಾಮೀಣ ಭಾಗದಲ್ಲಿ ಈಗಾಗಲೇ ಹಲವು ಕಡೆಗಳಲ್ಲಿ ಕೆರೆಗಳು ಬತ್ತಿವೆ. ಅಂತರ್ಜಲವು ಪಾತಾಳ ತಲುಪಿ ಬೊರವೆಲ್ಗಳು ನೀರು ನೀಡದ ಸ್ಥಿತಿಗೆ ತಲುಪಿವೆ. ಬಿಸಿಲಿನ ಝಳವು ನೀರಿನ ಮೂಲಗಳನ್ನು ಬರಿದಾಗಿಸುತ್ತಿದ್ದು, ಹಲವು ಹಳ್ಳಿಗಳು ಮಾತ್ರ ನೀರಿನ ಸಮಸ್ಯೆ ಎದುರಿಸುವಂತಾಗಿದೆ. ಆದರೆ ಯಾರಿಗೂ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಾಲೂಕಾಡಳಿತ ಹೇಳುತ್ತಿರುವುದು ಗ್ರಾಮೀಣ ಜನರಿಗೆ ಸಮಾಧಾನದ ಸಂಗತಿಯಾಗಿದೆ.

•ಯೋಗರಾಜ ಎಸ್‌.ಕೆ.

Advertisement

Udayavani is now on Telegram. Click here to join our channel and stay updated with the latest news.

Next