Advertisement

ಹೂಳು ತುಂಬಿದ ಬೆಂಗಳೆ ಕೆರೆ: ತಪ್ಪದ ‘ಜಲ’ಕ್ಷಾಮ

02:19 PM May 15, 2019 | Team Udayavani |

ಶಿರಸಿ: ಕೆರೆ ಆ ಊರಿನ ಜಲ ಪಾತ್ರೆ. ಗ್ರಾಮದ ಜೀವಜಲದ ಕೊಂಡಿ, ಅಕ್ಷಯ ಪ್ರಾತ್ರೆ. ಮಳೆ ನೀರನ್ನು ಉಳಿಸಿ, ಇಳಿಸಿ ನಮಗೆ ಬರದ ಬೇಸಿಗೆಯಲ್ಲೂ ಜಲ ಕೊಡುವ, ಕುಡಿಯಲು ನೀರು ಬಾವಿಯಲ್ಲಿ ಇಟ್ಟುಕೊಡುವ ಕೆರೆಗಳು ಆಯಾ ಗ್ರಾಮಗಳ ಜೀವನಾಡಿ.

Advertisement

ಒಂದು ಕಾಲಕ್ಕೆ ಜಲ ಪಾತ್ರೆ ಅಕ್ಷಯ ಪಾತ್ರೆಯಾಗಿದ್ದ ಕೆರೆ ಈಗ ಹೂಳಿನಿಂದಲೇ ತುಂಬಿದೆ. ನೀರಿರಬೇಕಿದ್ದ ಕೆರೆಯಲ್ಲಿ ಮಣ್ಣು ತುಂಬಿದೆ. ಜಾನುವಾರುಗಳು ಅಲ್ಲಲ್ಲಿ ಬೆಳೆದ ಹಸಿರು ಮೇವನ್ನು ಮೇಯುವಂತಾಗಿದೆ. ಉಳಿದೆಡೆ ಬಾಯಾರಿದ ಕೆರೆ ಕೊಸರಾಡುವಂತಾಗಿದೆ. ಗ್ರಾಮದ ಜನರೂ ಈ ಕೆರೆಯ ಕಾಯಕಲ್ಪಕ್ಕಾಗಿ ಕಾಯುತ್ತಿದ್ದಾರೆ.

ಬನವಾಸಿ ಯಾರಿಗೆ ತಾನೆ ಗೊತ್ತಿಲ್ಲ. ಬನವಾಸಿ ಅರಸರು ಕಟ್ಟಿಸಿದ ಕೆರೆಗಳೂ ಒಂದೆರಡೇ ಅಲ್ಲ. ಆ ಪೈಕಿ ಗ್ರಾಮದ ಜೀವನಾಡಿ ಬೆಂಗಳೆ ಗ್ರಾಮದ ಕೆರೆ ತನ್ನೊಳಗಿನ ಹೂಳನ್ನು ಹೊರ ಹಾಕಲು ಕಾಯುತ್ತಿದೆ. ಮಳೆಗಾಲದಲ್ಲಿ ಒಂದೇ ಮಳೆಗೆ ತುಂಬಿದರೂ ಬೇಸಿಗೆಯಲ್ಲಿ ಏಪ್ರಿಲ್ ಒಳಗೇ ಆರಿರುತ್ತವೆ.

ಬೆಂಗಳೆ ಗ್ರಾಮದ ಸರ್ವೆ ನಂಬರ್‌ 151ರ ನೆರೆಕಟ್ಟೆ ಕೆರೆ ಇದು. ಮೂರುವರೆ ಎಕರೆ ವಿಸ್ತೀರ್ಣ ಹೊಂದಿರುವ ವಿಶಾಲ ಕೆರೆ. ಈ ಕೆರೆ ತುಂಬಿದರೆ ಊರೂ ಸಮೃದ್ಧ. ಸುತ್ತಲಿನ ಅಸಂಖ್ಯ ಜನ-ಜಾನುವಾರುಗಳಿಗೆ ನೆಮ್ಮದಿ. ಬೇಸಿಗೆಯಲ್ಲಿ ಜಲ ಭಯವಿಲ್ಲ.

ಕ್ರೀಡಾಂಗಣದಂತಾದ ಕೆರೆ: ಆದರೆ, ಈಗಿನ ಚಿತ್ರಣವೇ ಬೇರೆ. ಕೆರೆಯಿಂದು ಕ್ರಿಕೆಟ್ ಕ್ರೀಡಾಂಗಣದಂತಾಗಿದೆ. ಕೆರೆಯನ್ನು ಹೂಳೆತ್ತಿದೆ, ಅದನ್ನು ಚೆಂದಗೊಳಿಸಿ ಏರಿ ಹಾಕಿದರೆ ಅದರ ಕೆಳಗಿನ ನೂರಾರು ಎಕರೆ ಕೃಷಿ ಭೂಮಿಗಳಿಗೂ ನೆರವಾಗುತ್ತವೆ.

Advertisement

ಈ ಕೆರೆಯಲ್ಲಿ ಜವಳಿದ್ದು, ಒರತೆ ಕೂಡ ಇದೆ. ಆದರೆ, ಹೂಳು ತುಂಬಿದ್ದು 10 ಅಡಿಗೂ ಹೆಚ್ಚು. ಅದನ್ನು ಮೊದಲು ಹೊರಗೆ ಹಾಕಿಕೊಳ್ಳಬೇಕು. ಆಗ ಮಾತ್ರ ನೀರು ಉಳಿಸಿಕೊಳ್ಳಬಹುದು. ಕೆರೆಯ ಕೋಡಿ ಎಲ್ಲ ಬಹುತೇಕ ಸರಿ ಇದೆ. ಮೂರು ಕಡೆ ಪಿಚ್ಚಿಂಗ್‌ ಮಾಡಿದರೆ ಇನ್ನಷ್ಟು ಅಂದವಾಗುತ್ತದೆ. ಕೆರೆ ಅಭವೃದ್ಧಿ ಆದರೆ, ಬೋರ್‌ವೆಲ್ ನೀರಿನ ಬಳಕೆ ತಪ್ಪಿಸಬಹುದು ಎನ್ನುತ್ತಾರೆ ಗ್ರಾಮಸ್ಥರು. ಈ ಕೆರೆಯಿಂದ ಇಲ್ಲಿನ ಜಲ ಸಾಮರ್ಥ್ಯ ಹೆಚ್ಚಳದ ಜೊತೆಗೆ 20 ಎಕರೆ ಅಡಕೆ, 15-20 ಎಕರೆ ಭತ್ತದ ಗದ್ದೆಗಳಿಗೂ ನೆರವಾಗಲಿದೆ ಎಂಬುದು ಅವರ ಇಂಗಿತ.

ಉದ್ಯೋಗ ಖಾತ್ರಿ ಯೋಜನೆಯಲ್ಲಿ ಮಾಡಿಕೊಳ್ಳಿ ಎಂದು ಇಲಾಖೆಗಳು ಹೇಳಿದರೂ ಊರಲ್ಲಿ ಇದು ಸಾಧ್ಯವಿಲ್ಲ. ಮೂರುವರೆ ಎಕರೆ ಹೂಳೆತ್ತಲು ಯಂತ್ರಗಳೇ ಬೇಕು. ಕಳೆದ ಮೂರ್‍ನಾಲ್ಕು ವರ್ಷದಿಂದ ನಿರಂತರವಾಗಿ ಶಾಸಕ ಶಿವರಾಮ ಹೆಬ್ಟಾರರ ಗಮನಕ್ಕೆ ಗ್ರಾಮಸ್ಥರು ತಂದಿದ್ದಾರೆ. ಕಳೆದ ವರ್ಷ ಚುನಾವಣೆ ಬಂತೆಂದು ಮಾಡಲೇ ಇಲ್ಲ. ಈ ವರ್ಷ ಕೂಡ ಲೋಕಸಭಾ ಚುನಾವಣೆ ಕಾರಣದಿಂದ ಆಗಿಲ್ಲ. ಮುಂದಿನ ವರ್ಷ ಆಗಬಹುದೇ ಈ ಕೆರೆಯ ಸಮಗ್ರ ಅಭಿವೃದ್ಧಿ ಎಂದು ಕಾದು ನೋಡುವಂತಾಗಿದೆ.

ಕೆರೆ ಉಳಿಸಲು ಅನೇಕ ಕಾಮಗಾರಿಗಳನ್ನು ಬನವಾಸಿ ಭಾಗಕ್ಕೆ ತಂದ ಶಾಸಕರು ಇದಕ್ಕೂ ಲಕ್ಷ ಹಾಕುತ್ತಾರೆ ಎಂಬುದು ಸ್ಥಳೀಯರ ಅಭಿಮತ. ಈ ಕೆರೆ ಅಭಿವೃದ್ಧಿಯಾದರೆ, ತುಂಬಿದ ಹೂಳು ತೆಗೆಸಿದರೆ ಜಲ ಸಂಗ್ರಹವಾಗುತ್ತದೆ ಎಂಬುದಕ್ಕೆ ಎರಡು ಮಾತಿಲ್ಲ.

•ರಾಘವೇಂದ್ರ ಬೆಟ್ಟಕೊಪ್ಪ

Advertisement

Udayavani is now on Telegram. Click here to join our channel and stay updated with the latest news.

Next