Advertisement

ಮುಂಗಾರು ಮಳೆ ಕೊರತೆ, ಶೇ.8 ಮಾತ್ರ ಬಿತ್ತನೆ

11:41 PM Jun 14, 2019 | Team Udayavani |

ಬೆಂಗಳೂರು: ರಾಜ್ಯದಲ್ಲಿ ಇದುವರೆಗೂ ಮುಂಗಾರು ಹಂಗಾಮಿನಲ್ಲಿ ಶೇ. 6.17 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಒಟ್ಟು ಸಾಗುವಳಿ ಪ್ರದೇಶದ ಶೇ.8ರಷ್ಟು ಮಾತ್ರ ಬಿತ್ತನೆಯಾಗಿದೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೃಷಿ ಸಚಿವ ಶಿವಶಂಕರ ರೆಡ್ಡಿ, ಸಾಮಾನ್ಯ ಮಳೆ ಹಂಗಾಮಿನಲ್ಲಿ ಜೂನ್‌ ಮಧ್ಯ ಭಾಗಕ್ಕೆ 18 ಲಕ್ಷ ಹೆಕ್ಟೇರ್‌ ಅಂದರೆ, ಶೇ. 26.81ರಷ್ಟು ಬಿತ್ತನೆಯಾಗುತ್ತದೆ. ಈ ವರ್ಷ ಪೂರ್ವ ಮುಂಗಾರು ಕೊರತೆ ಹಾಗೂ ಮುಂಗಾರು ಮಳೆ ವಿಳಂಬದಿಂದಾಗ ಬಿತ್ತನೆ ಪ್ರಮಾಣ ಬಹಳ ಕಡಿಮೆಯಾಗಿದೆ ಎಂದು ಹೇಳಿದರು.

Advertisement

ರಾಜ್ಯದಲ್ಲಿ 117.24 ಲಕ್ಷ ಹೆಕ್ಟೇರ್‌ನಲ್ಲಿ ಸಾಗುವಳಿ ಮಾಡಲಾಗುತ್ತಿದ್ದು, 138.67 ಲಕ್ಷ ಟನ್‌ ಆಹಾರ ಉತ್ಪಾದನೆ ಗುರಿ ಹೊಂದಲಾಗಿದೆ. ಮುಂಗಾರು ಹಂಗಾಮಿನಲ್ಲಿ 76.69 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಮುಂಗಾರು ಹಂಗಾಮಿಗೆ 6.29 ಲಕ್ಷ ಕ್ವಿಂಟಾಲ್‌ ಬಿತ್ತನೆ ಬೀಜದ ಬೇಡಿಕೆ ಇದ್ದು, 10.82 ಲಕ್ಷ ಕ್ವಿಂಟಾಲ್‌ ಬಿತ್ತನೆ ಬೀಜ ಲಭ್ಯವಿದೆ.

ಇದುವರೆಗೂ 36,065 ಕ್ವಿಂಟಾಲ್‌ ಬಿತ್ತನೆ ಬೀಜ ವಿತರಿಸಲಾಗಿದ್ದು, ಬಿತ್ತನೆ ಬೀಜದ ಕೊರತೆಯಿಲ್ಲ. ಮುಂಗಾರು ಹಂಗಾಮಿಗೆ 22.45 ಲಕ್ಷ ಮೆಟ್ರಿಕ್‌ ಟನ್‌ ರಸಗೊಬ್ಬರ ಅಗತ್ಯವಿದ್ದು, ಜೂನ್‌ ಅಂತ್ಯದವರೆಗೆ 6.38 ಲಕ್ಷ ಮೆಟ್ರಿಕ್‌ ಟನ್‌ ಗೊಬ್ಬರ ಸರಬರಾಜು ಆಗಲಿದ್ದು, ಇನ್ನೂ 7.94 ಲಕ್ಷ ಮೆ.ಟನ್‌ ರಸಗೊಬ್ಬರ ದಾಸ್ತಾನಿದೆ ಎಂದು ಹೇಳಿದರು.

ಮಳೆ ಕಡಿಮೆ ಬೀಳುವ ಪ್ರದೇಶಗಳಲ್ಲಿ ಸಿರಿ ಧಾನ್ಯಗಳನ್ನು ಬೆಳೆಯಲು ಪ್ರೋತ್ಸಾಹಿಸಲು ರೈತ ಸಿರಿ ಯೋಜನೆ ಜಾರಿಗೆ ತರಲಾಗಿದೆ. ಈ ವರ್ಷ 50 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಯಲು ಗುರಿ ಹೊಂದಲಾಗಿದೆ. ರೈತರಿಗೆ ಪ್ರತಿ ಹೆಕ್ಟೇರ್‌ಗೆ 10 ಸಾವಿರ ರೂ.ಅನುದಾನವನ್ನು ನೇರ ನಗದು ವರ್ಗಾವಣೆ ಮೂಲಕ ಪಾವತಿಸಲಾಗುವುದು.

ಈ ಯೋಜನೆಗೆ 2019-20 ನೇ ಸಾಲಿಗೆ 10 ಕೋಟಿ ಮೀಸಲಿಡಲಾಗಿದೆ. ಕರಾವಳಿ ಜಿಲ್ಲೆಗಳಲ್ಲಿ ಭತ್ತ ಬೆಳೆಯುವ ರೈತರಿಗೆ ಪ್ರೋತ್ಸಾಹಿಸಲು ಹೆಕ್ಟೇರ್‌ಗೆ 7500 ರೂ. ಪ್ರೋತ್ಸಾಹಧನ ನೀಡಲು 5 ಕೋಟಿ ರೂ.ಮೀಸಲಿಡಲಾಗಿದೆ ಎಂದರು.

Advertisement

ಸಾವಯವ ಉತ್ಪನ್ನಗಳ ಮಾರುಕಟ್ಟೆ ಬಲವರ್ಧನೆಗೆ ಪ್ಯಾಕಿಂಗ್‌ ಮತ್ತು ಬ್ರ್ಯಾಂಡಿಂಗ್‌ ಘಟಕಗಳಿಗೆ ಪ್ರೋತ್ಸಾಹ ಧನ ನೀಡಲು ಅರ್ಹ ಉದ್ದಿಮೆದಾರರು ಹಾಗೂ ನವೋದ್ಯಮಗಳಿಗೆ ಶೇ.50ರ ದರದಲ್ಲಿ ಪ್ರೋತ್ಸಾಹಧನ ನೀಡಲು 2 ಕೋಟಿ ರೂ. ನಿಗದಿ ಪಡಿಸಲಾಗಿದೆ. ಶೂನ್ಯ ಬಂಡವಾಳ ಕೃಷಿ ಪ್ರೋತ್ಸಾಹಕ್ಕೆ 40 ಕೋಟಿ ರೂ.ಮೀಸಲಿಡಲಾಗಿದೆ.

ಪ್ರಧಾನ ಮಂತ್ರಿ ಕೃಷಿ ಸಮ್ಮಾನ್‌ ಯೋಜನೆಯಡಿ ರಾಜ್ಯದಲ್ಲಿ 11.81 ಲಕ್ಷ ರೈತರು ನೋಂದಣಿ ಮಾಡಿಕೊಂಡಿದ್ದಾರೆ. ಪ್ರಥಮ ಕಂತಿನ 2 ಸಾವಿರ ರೂ.ಗಳನ್ನು 3.21 ಲಕ್ಷ ರೈತರಿಗೆ ನೀಡಲಾಗಿದೆ. ಎರಡನೇ ಕಂತಿನ ಅನುದಾನವನ್ನು 2.34 ಲಕ್ಷ ರೈತರಿಗೆ ನೀಡಲಾಗುವುದು. ಯೋಜನೆಗೆ ನೋಂದಣಿ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಹೇಳಿದರು.

ಸಾಂಬಾರ ಪದಾರ್ಥಗಳಾದ ಮೆಣಸಿನಕಾಯಿ, ಕಾಳು ಮೆಣಸು, ಗೋಡಂಬಿ, ಕೊತ್ತಂಬರಿ, ಜೀರಿಗೆ ಹಾಗೂ ಮೆಂತ್ಯೆ ಬೆಳೆಗಳನ್ನು ದೀರ್ಘ‌ಕಾಲ ದಾಸ್ತಾನು ಮಾಡಲು ನಿರ್ವಾತ ತಂತ್ರಜ್ಞಾನ ಅಭಿವೃದ್ದಿ ಪಡಿಸಿ, ರೈತರಿಗೆ ತಲುಪಿಸಲು ಧಾರವಾಡ ಕೃಷಿ ವಿವಿಗೆ 3 ಕೋಟಿ ರೂ. ನೀಡಲಾಗಿದೆ.

ರಾಜ್ಯದಲ್ಲಿ ಕೃಷಿ ಭಾಗ್ಯ ಯೋಜನೆ ಯಶಸ್ವಿಯಾಗಿದ್ದು, 2.83 ಲಕ್ಷ ಕೃಷಿ ಹೊಂಡಗಳನ್ನು ತೆರೆಯಲಾಗಿದೆ. 11 ಜಿಲ್ಲೆಗಳಲ್ಲಿ ವಿಶ್ವ ಬ್ಯಾಂಕ್‌ ನೆರವಿನಿಂದ ಆರಂಭವಾಗಿದ್ದ ಯೋಜನೆ ಮುಕ್ತಾಯವಾಗಿದ್ದು, ಯೋಜನೆಯನ್ನು ಮುಂದುವರಿಸಲು ರಾಜ್ಯ ಸರ್ಕಾರವೇ 250 ಕೋಟಿ ರೂ. ಮೀಸಲಿಟ್ಟಿದೆ ಎಂದು ತಿಳಿಸಿದರು.

ರೈತರಿಗೆ ಮಣ್ಣು ಆರೋಗ್ಯ ಪರೀಕ್ಷೆ ನಡೆಸುವ ಕಾರ್ಯ ಮುಂದುವರಿದಿದ್ದು, ಈ ವರ್ಷ14.82 ಕೋಟಿ ಮೀಸಲಿಡಲಾಗಿದೆ. ಕೃಷಿ ಕಾರ್ಮಿಕರ ಕೊರತೆ ನೀಗಿಸಲು ಕೃಷಿ ಯಂತ್ರೋಪಕರಣ ವಿತರಿಸಲು 441.69 ಕೋಟಿ ಅನುದಾನ ಒದಗಿಸಲಾಗಿದೆ. ಬೆಂಗಳೂರಿನ ಹೆಬ್ಟಾಳದಲ್ಲಿ ಸಾವಯವ ಮತ್ತು ಸಿರಿಧಾನ್ಯಗಳ ಹಬ್‌ ಸ್ಥಾಪನೆಗೆ ತೀರ್ಮಾನಿಸಲಾಗಿದೆ ಎಂದು ಹೇಳಿದರು.

ರೈತ ಬೆಳಕು ಸ್ಥಗಿತ: ಸಿದ್ದರಾಮಯ್ಯ ನೇತೃತ್ವದ ಹಿಂದಿನ ಕಾಂಗ್ರೆಸ್‌ ಸರ್ಕಾರ ಒಣ ಬೇಸಾಯ ಮಾಡುತ್ತಿದ್ದ ರೈತರ ಖಾತೆಗಳಿಗೆ ವಾರ್ಷಿಕ 10 ಸಾವಿರ ರೂ. ಪ್ರೋತ್ಸಾಹ ಧನ ನೀಡುವ ರೈತ ಬೆಳಕು ಯೋಜನೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಕೃಷಿ ಸಚಿವ ಶಿವಶಂಕರ ರೆಡ್ಡಿ ಹೇಳಿದರು. ಅದರ ಬದಲು ರೈತ ಸಿರಿ ಯೋಜನೆ ಜಾರಿಗೆ ತರಲಾಗಿದ್ದು, ಸಿರಿ ಧಾನ್ಯ ಬೆಳೆಯುವ ರೈತರ ಪ್ರತಿ ಹೆಕ್ಟೇರ್‌ಗೆ 10 ಸಾವಿರ ರೂ.ಪ್ರೋತ್ಸಾಹ ಧನ ನೀಡಲಾಗುತ್ತಿದೆ ಎಂದು ಹೇಳಿದರು.

ಸಾಲಮನ್ನಾ ಯೋಜನೆಯಡಿ ನಾಲ್ಕು ವರ್ಷಗಳಲ್ಲಿ ಹಂತ ಹಂತವಾಗಿ ಬ್ಯಾಂಕ್‌ಗಳಿಗೆ ಮೊತ್ತ ಪಾವತಿಸುವುದಾಗಿ ತಿಳಿಸಲಾಗಿತ್ತು. ಆದರೆ, ಒಂದೇ ವರ್ಷದೊಳಗೆ ಎಲ್ಲ ಅರ್ಹ ಖಾತೆಗಳಿಗೆ ಸರ್ಕಾರದ ಮಾರ್ಗಸೂಚಿಯನ್ವಯ ಸಂಪೂರ್ಣ ಮೊತ್ತ ಪಾವತಿಸಲಾಗಿದೆ. ಹಾಗಾಗಿ, ರೈತರಿಗೆ ಮತ್ತೆ ಬೆಳೆ ಸಾಲ ಪಡೆಯಲು ಅವಕಾಶ ಕಲ್ಪಿಸಬೇಕು. ಕಳೆದ 15 ವರ್ಷದಲ್ಲಿ ರಾಜ್ಯದಲ್ಲಿ 12 ವರ್ಷ ಬರ ಪರಿಸ್ಥಿತಿ ತಲೆದೋರಿದ್ದು, ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಹಾಗಾಗಿ, ಬ್ಯಾಂಕ್‌ಗಳು ರೈತರ ಬಗ್ಗೆ ತುಸು ಮೃದು ಧೋರಣೆ ಅನುಸರಿಸಬೇಕು.
-ಎಚ್‌.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next