Advertisement

ಮಂಗಳೂರಿನಿಂದ ಉಡುಪಿಗೆ ಲೋಕಲ್‌ ಬಸ್‌ಗಳ ಕೊರತೆ

02:31 PM Nov 04, 2017 | |

ಹಳೆಯಂಗಡಿ: ಮಂಗಳೂರಿನಿಂದ ಹಳೆಯಂಗಡಿ, ಪಕ್ಷಿಕೆರೆ ಮಾರ್ಗವಾಗಿ ಕಿನ್ನಿಗೋಳಿಗೆ ಪ್ರತೀ ಹತ್ತು ನಿಮಿಷಕ್ಕೊಂದು ಖಾಸಗಿ ಲೋಕಲ್‌ ಬಸ್ಸುಗಳು ಇವೆ. ಆದರೆ ಮಂಗಳೂರಿನಿಂದ ಹಳೆಯಂಗಡಿ ಮೂಲಕ ಮೂಲ್ಕಿ, ಹೆಜಮಾಡಿ, ಕಾಪುವಿನ ಮಾರ್ಗವಾಗಿ ಉಡುಪಿಗೆ ತೆರಳಲು ಖಾಸಗಿ ಬಸ್ಸುಗಳ ಕೊರತೆಯಿಂದ ಸಮಸ್ಯೆಯಾಗಿದೆ ಎಂದು ನಿತ್ಯ ಪ್ರಯಾಣಿಕರು ದೂರುತ್ತಿದ್ದಾರೆ.

Advertisement

ಹಳೆಯಂಗಡಿಯಿಂದಲೇ ಸಮಸ್ಯೆ
ಪಡುಪಣಂಬೂರು, ಕಾರ್ನಾಡು, ಕೊಲ್ನಾಡು, ಮೂಲ್ಕಿ, ಹೆಜಮಾಡಿ, ಪಡುಬಿದ್ರಿ, ಕಾಪು ಉಚ್ಚಿಲ ಹೀಗೆ ಉಡುಪಿಯತ್ತ ಸಂಚರಿಸುವ ಪ್ರಯಾಣಿಕರು ಮಂಗಳೂರಿನ ಹೊರವಲಯದ ಬೈಕಂಪಾಡಿ, ಕೂಳೂರು, ಸುರತ್ಕಲ್‌, ಮೂಲ್ಕಿಯ ಆಸುಪಾಸಿನಲ್ಲಿ ವೃತ್ತಿ ನಿರತರಾದವರು, ವಿದ್ಯಾರ್ಥಿಗಳು ಖಾಸಗಿ ಲೋಕಲ್‌ ಬಸ್ಸುಗಳಲ್ಲೇ ಅನಿವಾರ್ಯವಾಗಿ ಪ್ರಯಾಣಿಸುವವರು ನಿತ್ಯ ಈ ಸಮಸ್ಯೆ ಎದುರಿಸುತ್ತಿದ್ದಾರೆ.

ಈ ಭಾಗದಲ್ಲಿ ಕನಿಷ್ಠ 30ರಿಂದ 45 ನಿಮಿಷಗಳ ಅಂತರದ ಸಮಯದಲ್ಲಿ ಲೋಕಲ್‌ ಬಸ್ಸುಗಳು ಇರುವುದರಿಂದ ಬಹಳಷ್ಟು ತೊಂದರೆಯಾಗಿದೆ ಎನ್ನುತ್ತಾರೆ.

ಗಂಟೆಪೂರ್ತಿ ಬಸ್‌ನಿಲ್ದಾಣದಲ್ಲಿ…
ಮಂಗಳೂರಿನಿಂದ ಕಿನ್ನಿಗೋಳಿಯತ್ತ ಹತ್ತು ನಿಮಿಷಕ್ಕೊಂದು ಬಸ್ಸುಗಳು ಸಂಚರಿಸುತ್ತಿವೆ. ಆದರೆ ಅದೇ ಹಳೆಯಂಗಡಿಯಿಂದ ಉಡುಪಿಗೆ ಸಂಚರಿಸುವ ಬಸ್ಸುಗಳ ಕೊರತೆಯಿಂದ ಕೆಲವೊಮ್ಮೆ ಒಂದು ಬಸ್ಸು ಕಾರಣಾಂತರದಿಂದ ಬಾರದೇ ಇದ್ದಲ್ಲಿ ಪ್ರಯಾಣಿಕರು ಗಂಟೆಗಳ ಕಾಲ ಬಸ್‌ ನಿಲ್ದಾಣದಲ್ಲಿಯೇ ಕಳೆಯುವಂತಹ ಪರಿಸ್ಥಿತಿ ಇದೆ. ಇಂತಹ ಪರಿಸ್ಥಿತಿ ರವಿವಾರ ಅಥವಾ ಇತರ ರಜಾ ದಿನಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಈ ದಿನಗಳಲ್ಲಿ ಪ್ರಯಾಣಿಕರಿಲ್ಲ ಎಂದು ಟ್ರಿಪ್‌ ಅನ್ನು ಏಕಾಏಕಿ ಕಟ್‌ ಮಾಡುವುದರಿಂದ ಪ್ರಯಾಣಿಕರಿಗೆ ತೊಂದರೆ.

ಪೀಕ್‌ ಅವರ್‌ನಲ್ಲಾದರೂ ಓಡಿಸಿರಿ
ಕಚೇರಿ ಕೆಲಸ, ಕಾರ್ಖಾನೆಯ ಕಾರ್ಮಿಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಮತ್ತಿತರರು ಹೊರಡುವ ಬೆಳಗ್ಗೆ ಹಾಗೂ ಸಂಜೆ ಹಿಂದಿರುಗುವ ಪೀಕ್‌ ಅವರ್‌ನಲ್ಲಿ (ಒತ್ತಡದ ಸಮಯದಲ್ಲಿ) ಕನಿಷ್ಠ ಹತ್ತು ನಿಮಿಷದ ಅವ ಧಿಯಲ್ಲಿ ಬಸ್ಸುಗಳ ಅಗತ್ಯವಿದೆ. ಈ ಸಮಯದಲ್ಲಿ ಪ್ರಯಾಣಿಕರ ಸಂಖ್ಯೆಯೂ ಸಹ ಹೆಚ್ಚಾಗಿರುವುದರಿಂದ ಬಸ್ಸುಗಳ ಸಂಖ್ಯೆಯನ್ನು ಹೆಚ್ಚಿಸಬೇಕು, ಒಮ್ಮೊಮ್ಮೆ ಬಸ್ಸುಗಳು ತುಂಬಿ ಇತರ ಪ್ರಯಾಣಿಕರನ್ನು ಹತ್ತಿಸಿಕೊಳ್ಳದೇ ಸಂಚರಿಸುವ ಬಸ್ಸುಗಳು ಸಹ ಇವೆ. ಸಂಜೆ 4-30ರ ಅನಂತರ ಇರುವ ಬಸ್ಸುಗಳಲ್ಲಿ ಕಾಲೇಜು ವಿದ್ಯಾರ್ಥಿಗಳು ಬಾಗಿಲಿನಲ್ಲಿಯೇ ನೇತಾಡಿಕೊಂಡು ಸಂಚರಿಸುತ್ತಿರುವುದು ಅಪಾಯಕ್ಕೆ ಆಹ್ವಾನ ನೀಡಿದಂತಾಗುತ್ತದೆ ಎಂದು ಪ್ರಯಾಣಿಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. 

Advertisement

ನರ್ಮ್ ಬಸ್ಸೇ ಸೂಕ್ತ
ಹಳೆಯಂಗಡಿಯಿಂದ ಕಾರ್ನಾಡು ಮಾರ್ಗವಾಗಿ ಹೆಜಮಾಡಿ, ಪಡುಬಿದ್ರಿಗೆ ಸಂಚರಿಸುವ ಪ್ರಯಾಣಿಕರಿಗೆ ನಿಜವಾಗಿಯೂ ತೊಂದರೆ ಆಗುತ್ತಿದೆ. ಇದನ್ನೆಲ್ಲಾ ಸವಿವರವಾಗಿ ನಾವು ಮೂಲ್ಕಿ ನಾಗರಿಕ ಸಮಿತಿಯ ಮೂಲಕ ಕೆ.ಎಸ್‌.ಆರ್‌.ಟಿ.ಸಿಗೆ ನರ್ಮ್ ಬಸ್ಸಿಗಾಗಿ ಮನವಿಯನ್ನು ನೀಡಿದ್ದೇವೆ ಆದರೂ ಇನ್ನೂ ಪುರಸ್ಕರಿಸಿಲ್ಲ. ಕನಿಷ್ಠ ಎನ್‌ಐಟಿಕೆವರೆಗೆ ಇರುವ ಈಗಿನ ನರ್ಮ್ ಬಸ್ಸನ್ನಾದರೂ ಹೆಜಮಾಡಿಯವರೆಗೆ ನೀಡಿದಲ್ಲಿ ಸ್ವಲ್ಪ ಒತ್ತಡವನ್ನು ನಿವಾರಿಸಬಹುದು.
ಮನ್ಸೂರ್‌ ಎಚ್‌, ಮೂಲ್ಕಿ ನಾಗರಿಕ ಸಮಿತಿ

ಪರ್ಮಿಟ್‌ ಕೊರತೆ…
ಈ ಭಾಗದಲ್ಲಿ ಹೆಚ್ಚುವರಿ ಬಸ್ಸುಗಳನ್ನು ಹಾಕಲು ಬಸ್‌ ಮಾಲಕರು ತಯಾರಾಗಿದ್ದಾರೆ. ಆದರೆ ಹೊಸ ಪರ್ಮಿಟ್‌ ಕೊರತೆ ಇರುವುದರಿಂದ ಸದ್ಯಕ್ಕೆ ಇದೇ ವ್ಯವಸ್ಥೆ ಇದೆ. ಹೆಚ್ಚು ಪ್ರಯಾಣಿಕರು ತುಂಬಿದರೆ ಓವರ್‌ಲೋಡ್‌ ಎಂದು ಪೊಲೀಸರು ಕೇಸು ದಾಖಲಿಸುತ್ತಾರೆ. ಇದನ್ನು ಯಾರೂ ಪ್ರಶ್ನಿಸುವುದಿಲ್ಲ.
ಪ್ರವೀಣ್‌, ಖಾಸಗಿ ಬಸ್‌ ನಿರ್ವಾಹಕ

ಬಾಗಿಲಿನಲ್ಲೇ ಪ್ರಯಾಣ
ಅನಿವಾರ್ಯವಾಗಿ ಬಾಗಿಲಿನಲ್ಲಿಯೇ ನೇತಾಡಿಕೊಂಡು ಸಂಚರಿಸಬೇಕಾಗಿದೆ ಇಲ್ಲದಿದ್ದಲ್ಲಿ ಮುಕ್ಕಾಲು ಗಂಟೆ ಕಾಯಬೇಕು, ವೃದ್ಧರು ಮತ್ತು ಹೆಣ್ಣುಮಕ್ಕಳು ಬಾಗಿಲಿನಲ್ಲಿಯೇ ಪ್ರಯಾಣಿಸುವಾಗ ಹೆದರಿಕೆ ಆಗುತ್ತದೆ. ಕನಿಷ್ಠ ಈ ಸಮಯದಲ್ಲಾದರೂ ಹೆಚ್ಚು ಬಸ್ಸುಗಳು ಬರಲಿ.
ಚರಣ್‌ಕುಮಾರ್‌,
  ಕಾಲೇಜು ವಿದ್ಯಾರ್ಥಿ ಪಡುಬಿದ್ರಿ.

  ನರೇಂದ್ರ ಕೆರೆಕಾಡು

Advertisement

Udayavani is now on Telegram. Click here to join our channel and stay updated with the latest news.

Next