Advertisement

ಗಂಗಜ್ಜಿ ಸಂಗೀತ ಗುರುಕುಲದಲ್ಲಿ ಅನುದಾನ ಕೊರತೆಯ ಅಪಸ್ವರ

11:29 AM Mar 23, 2022 | Team Udayavani |

ಹುಬ್ಬಳ್ಳಿ: ಹಿಂದೂಸ್ಥಾನಿ ಸಂಗೀತ, ಗುರು-ಶಿಷ್ಯ ಪರಂಪರೆ ಮುಂದುವರಿಕೆ ಹಾಗೂ ದೇಶದ ಸಂಗೀತ ಪ್ರತಿಭೆಗಳು ವಿಶ್ವಮಟ್ಟದಲ್ಲಿ ಪ್ರಜ್ವಲಿಸುವಂತೆ ಮಾಡುವ ಉದ್ದೇಶದೊಂದಿಗೆ ನಗರದಲ್ಲಿ ಆರಂಭವಾದ ಡಾ|ಗಂಗೂಬಾಯಿ ಹಾನಗಲ್ಲ ಭಾರತೀಯ ಶಾಸ್ತ್ರೀಯ ಸಂಗೀತ ಗುರುಕುಲ ಮಾದರಿಯ ಶಿಕ್ಷಣ ಕೇಂದ್ರದಲ್ಲಿ ಸಂಗೀತ ನಿನಾದ ಜತೆ ಅನುದಾನ ಕೊರತೆಯ “ಅಪಸ್ವರ’ಮಾರ್ದನಿಸತೊಡಗಿದೆ.

Advertisement

ಆರು ವರ್ಷಗಳಿಂದ ಸರಕಾರಗಳು ಅನುದಾನ ಕಡಿತಗೊಳಿಸುತ್ತಿದ್ದು, ಕಳೆರಡು ವರ್ಷಗಳಿಂದ ಬಿಡಿಗಾಸೂ ಬಂದಿಲ್ಲ. ವರ್ಷದಿಂದ ವರ್ಷಕ್ಕೆ ದರಗಳ ಹೆಚ್ಚಳ ಹಿನ್ನೆಲೆಯಲ್ಲಿ ಅನುದಾನದಲ್ಲೂ ಹೆಚ್ಚಳವಾಗಬೇಕಿತ್ತು. ಆದರೆ ಇಳಿಮುಖವಾಗುತ್ತಿದೆ. ಕಡಿತದ ಮುಂದುವರಿದ ಭಾಗವಾಗಿ ಅನುದಾನ ಸ್ಥಗಿತಗೊಂಡಿದ್ದು, ನಾಡಿನ ಅಪೂರ್ವ ಸಂಪತ್ತಾಗಿರುವ ಸಂಗೀತ-ಕಲೆ ವಿಚಾರದಲ್ಲಿ ಸರಕಾರಗಳ ಆಸಕ್ತಿ-ಕಾಳಜಿ ಸಂಗೀತಪ್ರಿಯರಲ್ಲಿ ಬೇಸರ ತರಿಸಿದೆ.

ಹುಬ್ಬಳ್ಳಿಯವರಾದ ಪದ್ಮವಿಭೂಷಣ ಡಾ| ಗಂಗೂಬಾಯಿ ಹಾನಗಲ್ಲ ಅವರು ಹಿಂದೂಸ್ಥಾನಿ ಸಂಗೀತದಲ್ಲಿ ತಮ್ಮದೇ ಛಾಪು ಮೂಡಿಸಿದವರು. ದೇಶದ ವಿವಿಧೆಡೆ ಅಭಿಮಾನಿ ಬಳಗ-ಶಿಷ್ಯಂದಿರನ್ನು ಹೊಂದಿದ್ದವರು. ಅವರ ನೆನಪು ಸದಾ ಉಳಿಯಬೇಕು, ಸಂಗೀತ ಕ್ಷೇತ್ರದಲ್ಲಿ ಅವರ ಸಾಧನೆ ಸ್ಮರಿಸುವಂತಾಗಬೇಕು. ಯುವ ಸಮೂಹ ಭಾರತೀಯ ಶಾಸ್ತ್ರೀಯ ಸಂಗೀತ ಕ್ಷೇತ್ರದತ್ತ ಆಕರ್ಷಿಸುವಂತಾಗಬೇಕು, ಸಂಗೀತ ಆಸಕ್ತಿ ಪ್ರತಿಭೆಗಳಿಗೆ ಸೂಕ್ತ ಮಾರ್ಗದರ್ಶನ ಹಾಗೂ ತರಬೇತಿಯೊಂದಿಗೆ ವಿಶ್ವಕ್ಕೆ ಉತ್ತಮ ಸಂಗೀತ ಪ್ರತಿಭೆಗಳನ್ನು ಕೊಡುಗೆಯಾಗಿ ನೀಡಬೇಕು ಎಂಬ ಮಹದಾಸೆಯೊಂದಿಗೆ ಆರಂಭಗೊಂಡಿದ್ದೇ ಡಾ|ಗಂಗೂಬಾಯಿ ಹಾನಗಲ್ಲ ಗುರುಕುಲ ಟ್ರಸ್ಟ್‌. ಇದರಡಿ 2011ರಲ್ಲಿ ಭಾರತೀಯ ಶಾಸ್ತ್ರೀಯ ಸಂಗೀತ ಗುರುಕುಲ ಮಾದರಿಯ ಶಿಕ್ಷಣ ಕೇಂದ್ರ ಆರಂಭಿಸಲಾಗಿತ್ತು.

ಹಿಂದೂಸ್ಥಾನಿ ಸಂಗೀತ ಸಾಧನೆ, ಗುರು-ಶಿಷ್ಯ ಪರಂಪರೆ ಮುಂದುವರಿಕೆ ಉದ್ದೇಶದೊಂದಿಗೆ ವಸತಿ ಸಹಿತ ಸಂಗೀತಭ್ಯಾಸಕ್ಕೆ ಡಾ|ಗಂಗೂಬಾಯಿ ಹಾನಗಲ್ಲ ಅವರ ಹೆಸರಲ್ಲಿ ಸಂಗೀತ ಗುರುಕುಲ ಆರಂಭವಾಗಿದ್ದು ದೇಶದ ಗಮನ ಸೆಳೆದಿತ್ತು. ಈ ಗುರುಕುಲದಲ್ಲಿ ಆರು ಜನ ಗುರುಗಳಿದ್ದು, ಪ್ರಸ್ತುತ ಪಂ|ಗಣಪತಿ ಭಟ್‌, ಪಂ|ಕೈವಲ್ಯಕುಮಾರ ಗುರುವ, ಪಂ|ಕೇದಾರ ನಾರಾಯಣ ಬೊದ್ಸರ್‌, ವಿದುಷಿ ವಿಜಯಾ ಜಾಧವ ಗಟ್ಲೆವಾರ್‌ ಅವರು ಸಂಗೀತ ತರಬೇತಿ ನೀಡುತ್ತಿದ್ದಾರೆ. ಇನ್ನಿಬ್ಬರು ಗುರುಗಳ ನೇಮಕ ಪ್ರಕ್ರಿಯೆ ಬಹುತೇಕ ಮುಗಿದಿದ್ದು, ಶೀಘ್ರವೇ ಸೇವೆಗೆ ಹಾಜರಾಗಲಿದ್ದಾರೆ. ರಾಜ್ಯದವರೂ ಸೇರಿದಂತೆ ಮಹಾರಾಷ್ಟ್ರ, ಉತ್ತರ ಪ್ರದೇಶ, ಗೋವಾ ಇನ್ನಿತರೆ ರಾಜ್ಯಗಳ ಸುಮಾರು 36 ಸಂಗೀತ ವಿದ್ಯಾರ್ಥಿಗಳು ತರಬೇತಿಯಲ್ಲಿ ತೊಡಗಿದ್ದಾರೆ.

ಅನುದಾನ ಕೊರತೆ “ಅಪಸ್ವರ’: ಈ ಕೇಂದ್ರ ಆರಂಭದ ಹೊತ್ತಲ್ಲಿ ಆರ್ಥಿಕ ಇಲಾಖೆ ವಾರ್ಷಿಕ 1.25 ಕೋಟಿ ರೂ. ಅನುದಾನ ನೀಡಿಕೆಗೆ ಅನುಮೋದನೆ ನೀಡಿತ್ತು. 2014-15ರವರೆಗೂ ಅನುದಾನ ವಿಚಾರದಲ್ಲಿ ಎಲ್ಲವೂ ಸರಿಯಾಗಿತ್ತು. ಅನಂತರದಲ್ಲಿ ಕಂಡು ಬಂದ ಅನುದಾನ ಕಡಿತ ಹೆಚ್ಚುತ್ತಲೇ ಸಾಗಿ ಕಳೆದೆರಡು ವರ್ಷಗಳಿಂದ ಬಿಡಿಗಾಸೂ ಇಲ್ಲವಾಗಿದೆ.

Advertisement

2011-12ರಿಂದ 2014-15ರವರೆಗೆ ವಾರ್ಷಿಕ 1.25 ಕೋಟಿ ರೂ. ಅನುದಾನ ಬಂದಿದೆ. ವಾಸ್ತವವಾಗಿ ಗುರುಕುಲದ ವೆಚ್ಚ ಗಮನಿಸಿದರೆ ಇದು ಕೂಡ ಕಡಿಮೆಯೇ ಎಂದು ಹೇಳಬಹುದು. ಆದರೂ ಇದ್ದುದರಲ್ಲಿ ಸರಿದೂಗಿಸಿಕೊಂಡು ಹೋಗಬಹುದೆಂಬ ಚಿಂತನೆಯೊಂದಿಗೆ ಗುರುಕುಲ ಸಾಗಿತ್ತು. 2015-16ರಲ್ಲಿ ಸರಕಾರ ಗುರುಕುಲಕ್ಕೆ ನೀಡುವ ಅನುದಾನವನ್ನು 1.25 ಕೋಟಿ ರೂ. ಬದಲು ಏಕಾಏಕಿ 50 ಲಕ್ಷ ರೂ.ಗಳಿಗೆ ಇಳಿಸಿತ್ತು. 2019-20ರ ವೇಳೆಗೆ ಅನುದಾನ 20 ಲಕ್ಷ ರೂ. ಗೆ ಇಳಿದಿತ್ತು. 2020-21ರಲ್ಲಿ ಅದನ್ನು 10 ಲಕ್ಷ ರೂ.ಗೆ ಇಳಿಕೆ ಮಾಡಲಾಗಿತ್ತಾದರೂ, ಅದೂ ಸಹ ಬರಲಿಲ್ಲ.

ಗುರುಕುಲ ಸಂಗೀತ ಕೇಂದ್ರದಲ್ಲಿ ಆರು ಜನ ಗುರುಗಳು, ತಹಶೀಲ್ದಾರ್‌ ದರ್ಜೆಯ ಆಡಳಿತಾಧಿಕಾರಿ, ಉಪ ತಹಶೀಲ್ದಾರ್‌ ದರ್ಜೆಯ ಒಬ್ಬರು ಅಧಿಕಾರಿ, ಪ್ರಥಮ-ದ್ವಿತೀಯ ದರ್ಜೆ ಸಹಾಯಕರು, ಇತರೆ ಸಿಬ್ಬಂದಿ, 12 ಜನ ಹೊರಗುತ್ತಿಗೆ ಸಿಬ್ಬಂದಿ ಇದ್ದು, ಗುರುಗಳ ಗೌರವಧನ, ತಬಲಾ ಸಾಥ್‌ ನೀಡುವವರ ಗೌರವಧನ, ಅಧಿಕಾರಿ-ಸಿಬ್ಬಂದಿ ವೇತನಕ್ಕೆ ವಾರ್ಷಿಕ ಅಂದಾಜು 1.15 ಕೋಟಿ ರೂ.ಗಳು ಬೇಕಾಗುತ್ತದೆ. ಗುರುಗಳು- ವಿದ್ಯಾರ್ಥಿಗಳ ಊಟೋಪಚಾರ, ಸಂಗೀತ ವಾದ್ಯಗಳ ನಿರ್ವಹಣೆ, ವಿದ್ಯುತ್‌-ನೀರಿನ ಬಿಲ್‌ ಇನ್ನಿತರೆ ಕಾರ್ಯಗಳಿಗೆಂದು ವಾರ್ಷಿಕ ಅಂದಾಜು 85.50ಲಕ್ಷ ರೂ. ಬೇಕಾಗುತ್ತದೆ. ಎಲ್ಲ ಸೇರಿದರೆ ಅಂದಾಜು ವಾರ್ಷಿಕ ಎರಡು ಕೋಟಿ ರೂ. ಅನುದಾನ ಅಗತ್ಯವಾಗಿದೆ.

ಈ ಟ್ರಸ್ಟ್‌ನಲ್ಲಿ ಇದುವರೆಗೆ ಸುಮಾರು 11 ಜನ ಆಡಳಿತಾಧಿಕಾರಿಗಳು ಕಾರ್ಯ ನಿರ್ವಹಿಸಿದ್ದು, ಇವರಲ್ಲಿ ಹಾಲಿ ಸೇರಿದಂತೆ ನಾಲ್ವರನ್ನು ಬಿಟ್ಟರೆ ಉಳಿದವರೆಲ್ಲ ಪ್ರಭಾರಿಯಾಗಿದ್ದವರು. ಜತೆಗೆ ಆರು ಜನರ ಪೈಕಿ ನಾಲ್ವರು ಗುರುಗಳಿದಿದ್ದು ಹಾಗೂ ಕೆಲವೊಂದು ಉಳಿತಾಯ ನೆರವಿನಿಂದ 2014-15ವರೆಗೆ ಬಂದ ಒಟ್ಟು ಅನುದಾನದಲ್ಲಿ ಉಳಿದಿದ್ದನ್ನು ಇಲ್ಲಿಯವರೆಗೆ ನಿರ್ವಹಣೆಗೆ ಬಳಸಲಾಗಿದೆ. ಈಗ ಅನುದಾನ ಬಾರದಿರುವುದು ಚಿಂತೆಗೆ ಕಾರಣವಾಗಿದೆ.

ಸಂಗೀತಕ್ಕೆ ಅಪಾರ ಕೊಡುಗೆ

ಹಿಂದೂಸ್ಥಾನಿ ಸಂಗೀತ ಲೋಕಕ್ಕೆ ಅವಿಭಜಿತ ಧಾರವಾಡ ಜಿಲ್ಲೆಯ ಕೊಡುಗೆ ಅಪಾರ-ಅನನ್ಯ. ಪಂಡಿತ ಪಂಚಾಕ್ಷರಿ ಗವಾಯಿ, ಪಂ|ಭೀಮಸೇನ ಜೋಶಿ, ಸವಾಯಿ ಗಂಧರ್ವ, ಡಾ|ಗಂಗೂಬಾಯಿ ಹಾನಗಲ್ಲ, ಬಸವರಾಜ ರಾಜಗುರು, ಮಲ್ಲಿಕಾರ್ಜುನ ಮನಸೂರು ಹೀಗೆ ಸಾಲು ಸಾಲು ಸಾಧಕರನ್ನು ವಿಶ್ವಕ್ಕೆ ನೀಡಿದ ಕೀರ್ತಿ. ಹಿಂದೂಸ್ಥಾನಿ ಸಂಗೀತ ಕಿರಾಣಾ-ಘರಾಣಾ ಮೇರುಪರ್ವತವೆಂದೇ ಖ್ಯಾತಿ ಪಡೆದ ಉಸ್ತಾದ ಅಬ್ದುಲ್‌ ಕರೀಂಖಾನ್‌ ಅವರು ಈ ಜಿಲ್ಲೆಗೆ ಸಾಕಷ್ಟು ಭಾರಿ ಭೇಟಿ ನೀಡಿ, ಹುಬ್ಬಳ್ಳಿ- ಕುಂದಗೋಳದಲ್ಲಿ ಸಂಗೀತ ಕಾರ್ಯಕ್ರಮ ನೀಡಿದ್ದರು. ಸಂಗೀತ ದಿಗ್ಗಜರನ್ನು ಆಕರ್ಷಿಸುವ ತಾಣವಾಗಿ ಅವಿಭಜಿತ ಧಾರವಾಡ ಜಿಲ್ಲೆ ಹೊರಹೊಮ್ಮಿತು.

32 ಲಕ್ಷ ರೂ.ಗಳ ಪ್ರಸ್ತಾವನೆ? ಡಾ|ಗಂಗೂಬಾಯಿ ಹಾನಗಲ್ಲ ಗುರುಕುಲ ಟ್ರಸ್ಟ್‌ನ ಭಾರತೀಯ ಶಾಸ್ತ್ರೀಯ ಸಂಗೀತ ಗುರುಕುಲ ಮಾದರಿಯ ಶಿಕ್ಷಣ ಕೇಂದ್ರ ಆರಂಭವಾಗಿ ದಶಕ ಕಳೆದಿದೆ. ಗುರುಗಳ ನಿವಾಸ, ವಿದ್ಯಾರ್ಥಿಗಳ ಕೊಠಡಿ, ಇನ್ನಿತರೆ ಕಟ್ಟಡಗಳ ದುರಸ್ತಿ, ನಿರ್ವಹಣೆ ಅಗತ್ಯವಾಗಿದ್ದು, ಇದಕ್ಕಾಗಿ ಸರಕಾರಕ್ಕೆ ಅಂದಾಜು 32 ಲಕ್ಷ ರೂ. ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಲಾಗುತ್ತಿದೆ.

-ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next