Advertisement

ಬ್ರಹ್ಮಾವರ ಕ್ರಿಕೆಟ್‌ ಸ್ಟೇಡಿಯಂ: ಹಣಕಾಸು ಕೊರತೆಯಿಂದ ಕಾಮಗಾರಿ ಕುಂಠಿತ

09:50 PM Jul 15, 2019 | Team Udayavani |

ಉಡುಪಿ: ಜಿಲ್ಲೆಯ ಬಹುದಿನಗಳ ಬೇಡಿಕೆ ಬ್ರಹ್ಮಾವರ ಕ್ರಿಕೆಟ್‌ ಸ್ಟೇಡಿಯಂ ಕಾಮಗಾರಿ ಶೇ.20ರಷ್ಟು ಮುಕ್ತಾಯವಾಗಿದ್ದು, ಮುಂದಿನ ಆರು ತಿಂಗಳಲ್ಲಿ ಮುಗಿಯಬೇಕಾದ ಕಾಮಗಾರಿ ಹಣಕಾಸಿನ (ಅನುದಾನದ) ಕೊರತೆಯಿಂದ ಇನ್ನಷ್ಟು ವಿಳಂಬವಾಗಲಿದೆ.

Advertisement

2018ರಲ್ಲಿ ಕ್ರೀಡಾ ಹಾಗೂ ಯುವಜನ ಸಬಲೀಕರಣ ಸಚಿವರಾದ ಪ್ರಮೋದ್‌ ಮಧ್ವರಾಜ್‌ ಅವರು ಬ್ರಹ್ಮಾವರದ ಗಾಂಧಿ ಮೈದಾನದಲ್ಲಿ ಸುಮಾರು 5.5 ಎಕರೆ ಜಾಗದಲ್ಲಿ ಸ್ಟೇಡಿಯಂ ನಿರ್ಮಿಸಲು ಶಂಕು ಸ್ಥಾಪನೆ ನೇರವೇರಿಸಿದರು.

2.75 ಕೋ. ರೂ. ಯೋಜನೆ
ಕ್ರೀಡೆ ಹಾಗೂ ಯುವಜನ ಸಬಲೀಕರಣ ಇಲಾಖೆಯಿಂದ ಗಾಂಧಿ ಮೈದಾನದ 5.5 ಎಕರೆ ಜಾಗದಲ್ಲಿ ಸ್ಟೇಡಿಯಂ ನಿರ್ಮಿಸಲು 2.75 ಕೋ.ರೂ. ವೆಚ್ಚದ ಯೋಜನೆಯನ್ನು ಸಿದ್ಧಪಡಿಸಿದ್ದರು. ಅಂತೆಯೇ ಮೊದಲ ಹಂತವಾಗಿ ಕ್ರೀಡಾ ಇಲಾಖೆಯಿಂದ 70 ಲ.ರೂ. ಬಿಡುಗಡೆಯಾಗಿದೆ.

2.5 ಕೋ. ರೂ. ಬಾಕಿ
ಎರಡನೇ ಹಂತದ ಕಾಮಗಾರಿ ಪ್ರಾರಂಭಿಸಲು ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಆದರೆ ಹಣ ಬಿಡುಗಡೆಯಾಗಿಲ್ಲ.

ಸರಕಾರ ಈ ಬಾರಿ ಬಜೆಟ್‌ನಲ್ಲಿ ಜಿಲ್ಲೆಯ ಹೆಜಮಾಡಿ ಕ್ರಿಕೆಟ್‌ ಸ್ಟೇಡಿಯಂಗೆ 20 ಲ.ರೂ. ಕಾಯ್ದಿರಿಸಿದೆ. ಆದರೆ ಬ್ರಹ್ಮಾವರ ಕ್ರಿಕೆಟ್‌ ಸ್ಟೇಡಿಯಂ ಕಾಮಗಾರಿಗೆ ಅನುದಾನ ಕಾಯ್ದಿರಿಸಿಲ್ಲ. ಇದರಿಂದಾಗಿ ಸ್ಟೇಡಿಯಂ ಕಾಮಗಾರಿ ಇನ್ನಷ್ಟು ದಿನ ವಿಳಂಬವಾಗಲಿದೆ.

Advertisement

ನಿರ್ಮಿತಿ ಕೇಂದ್ರಕ್ಕೆ ಕಾಮಗಾರಿ
ಕ್ರಿಕೆಟ್‌ ಸ್ಟೇಡಿಯಂ ನಿರ್ಮಾಣ ಕಾಮಗಾರಿಯ ಜವಾಬ್ದಾರಿಯನ್ನು ಉಡುಪಿ ನಿರ್ಮಿತಿ ಕೇಂದ್ರ ವಹಿಸಿಕೊಂಡಿದೆ. ಈಗಾಗಲೇ ಸುಮಾರು 5.5 ಎಕರೆ ಜಾಗದಲ್ಲಿ ಸುಮಾರು 7 ಅಡಿ ಎತ್ತರದ ಆವರಣ ಗೋಡೆಯನ್ನು ನಿರ್ಮಿಸಲಾಗಿದೆ. ಎರಡು ಪ್ರವೇಶ ದ್ವಾರ ನಿರ್ಮಿಸಲಾಗಿದೆ. ಆವರಣ ಗೋಡೆಗೆ ಬಿಳಿ ಬಣ್ಣ ಹಾಕಲಾಗಿದೆ.

ಏನೆಲ್ಲ ವ್ಯವಸ್ಥೆ ಇರಲಿದೆ
ಈ ಕ್ರಿಕೆಟ್‌ ಸ್ಟೇಡಿಯಂ ಪೆವಿಲಿಯನ್‌ನಲ್ಲಿ ಸುಮಾರು 500 ಮಂದಿ ಕುಳಿತುಕೊಳ್ಳಲು ಆಸನ ವ್ಯವಸ್ಥೆ, ವಾಣಿಜ್ಯ ಮಳಿಗೆ ಹಾಗೂ ಆಫೀಸ್‌ ರೂಂ, ಗ್ರೀನ್‌ ವ್ಯವಸ್ಥೆ ಇರಲಿದೆ.
ತಾಲೂಕು ಕ್ರೀಡಾಂಗಣವಾಗಿರುವುದರಿಂದ ಕ್ರಿಕೆಟ್‌ ಆಸಕ್ತರು ಅಭ್ಯಾಸ ಮಾಡಲು ಟ್ರ್ಯಾಕ್‌ ಸಹ ನಿರ್ಮಾಣವಾಗಲಿದೆ.

ಕ್ರಿಕೆಟ್‌ ಸ್ಟೇಡಿಯಂ ಉಪಯೋಗ
ಈ ಕ್ರಿಕೆಟ್‌ ಸ್ಟೇಡಿಯಂ ನಗರದ ಮಧ್ಯೆ ಇದೆ. ಈ ಪ್ರದೇಶಕ್ಕೆ ಹೊಂದಿಕೊಂಡು ಸಾಕಷ್ಟು ಶಿಕ್ಷಣ ಸಂಸ್ಥೆಗಳಿವೆ. ಅಲ್ಲಿನ ಕ್ರಿಕೆಟ್‌ ಆಸಕ್ತ ವಿದ್ಯಾರ್ಥಿಗಳಿಗೆ ತರಬೇತಿಗೆ ಈ ಸ್ಟೇಡಿಯಂ ವೇದಿಕೆ ಕಲ್ಪಿಸಲಿದೆ.

ಉಪ್ಪೂರಿನಲ್ಲಿ ಸ್ಟೇಡಿಯಂ ಪ್ರಸ್ತಾವನೆ
ಉಪ್ಪೂರಿನಲ್ಲಿ ಸುಮಾರು 13 ಎಕರೆ ಜಾಗದಲ್ಲಿ ಜಿಲ್ಲೆಯ ಅತಿ ದೊಡ್ಡ ಕ್ರಿಕೆಟ್‌ ಸ್ಟೇಡಿಯಂ ನಿರ್ಮಾಣಕ್ಕೆ ಕ್ರೀಡೆ ಹಾಗೂ ಯುವ ಸಬಲೀಕರಣ ಇಲಾಖೆಯಿಂದ ಪ್ರಸ್ತಾವನೆ ಸಲ್ಲಿಕೆಯಾಗಿದೆ.

ಮೊದಲ ಹಂತದ ಕಾಮಗಾರಿ ಪೂರ್ಣ
ಇಲಾಖೆಯಿಂದ ಬಿಡುಗಡೆಯಾದ 70 ಲ.ರೂ. ದಲ್ಲಿ ಪ್ರಥಮ ಹಂತದ ಕಾಮಗಾರಿ ಪೂರ್ಣಗೊಂಡಿದೆ. ಸರಕಾರದಿಂದ ಎರಡನೇ ಹಂತದ ಹಣ ಬಿಡುಗಡೆಯಾದ ತತ್‌ಕ್ಷಣ ಕಾಮಗಾರಿ ಪ್ರಾರಂಭಿಸಲಾಗುತ್ತದೆ. ಸಂಪೂರ್ಣ ಹಣ ಬಿಡುಗಡೆಯಾದರೆ ಆರು ತಿಂಗಳಲ್ಲಿ ಕಾಮಗಾರಿ ಮುಗಿಯಲಿದೆ.
-ಅರುಣ್‌ ಕುಮಾರ್‌, ನಿರ್ಮಿತಿ ಕೇಂದ್ರದ ಯೋಜನಾಧಿಕಾರಿ

ಜಿಲ್ಲೆಯ ಮೊದಲ ಸ್ಟೇಡಿಯಂ
ಹೆಜಮಾಡಿಯಲ್ಲಿ ಸುಮಾರು 11 ಎಕರೆ ಜಾಗದಲ್ಲಿ ಜಿಲ್ಲೆಯ ಮೊದಲ ಕ್ರಿಕೆಟ್‌ ಸ್ಟೇಡಿಯಂ ನಿರ್ಮಾಣವಾಗುತ್ತಿದೆ. ಈ ಬಾರಿ ಬಜೆಟ್‌ನಲ್ಲಿ ಸರಕಾರ 20 ಲ.ರೂ. ನೀಡಿದ್ದು, ಕಾಮಗಾರಿ ಪ್ರಗತಿಯಲ್ಲಿದೆ.
– ಡಾ| ರೋಶನ್‌ ಕುಮಾರ್‌ ಶೆಟ್ಟಿ, ಕ್ರೀಡೆ ಹಾಗೂ ಯುವ ಸಶಕ್ತೀಕರಣ ಇಲಾಖೆ ಉಪನಿರ್ದೇಶಕ, ಉಡುಪಿ

ಶೀಘ್ರದಲ್ಲಿ ಕಾಮಗಾರಿ ಮುಗಿಸಿ
ಬ್ರಹ್ಮಾವರದಲ್ಲಿ ಕ್ರಿಕೆಟ್‌ ಸ್ಟೇಡಿಯಂ ಹಣಕಾಸಿನ ಕೊರತೆಯಿಂದ ಕಾಮಗಾರಿ ವಿಳಂಬವಾಗುತ್ತಿರುವುದು ಕ್ರೀಡಾ ಪ್ರೇಮಿಗಳಿಗೆ ನೋವಾಗಿದೆ. ಸರಕಾರ ಶೀಘ್ರದಲ್ಲಿ ಎರಡನೇ ಹಂತದ ಕಾಮಗಾರಿ ನಡೆಸಲು ಹಣ ಬಿಡುಗಡೆ ಮಾಡಬೇಕು.
-ನವೀನ್‌, ಕ್ರೀಡಾ ಪ್ರೇಮಿ, ಬ್ರಹ್ಮಾವರ

– ತೃಪ್ತಿ ಕುಮ್ರಗೋಡು

Advertisement

Udayavani is now on Telegram. Click here to join our channel and stay updated with the latest news.

Next