ಪಂಚಕುಲ: ಸಾಕ್ಷ್ಯದ ಕೊರತೆಯಿಂದಾಗಿ ಸಂಜೋತಾ ಎಕ್ಸ್‌ಪ್ರೆಸ್ ರೈಲು ಸ್ಫೋಟದಂತಹ ಹೀನ ಕೃತ್ಯಕ್ಕೆ ಶಿಕ್ಷೆಯಾಗುವುದರಿಂದ ಆರೋಪಿಗಳು ತಪ್ಪಿಸಿಕೊಂಡಿದ್ದಾರೆ ಎಂದು ಹರ್ಯಾಣದ ಪಂಚಕುಲ ವಿಶೇಷ ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಮಾರ್ಚ್ 20ರಂದು ಪ್ರಕಟವಾದ ತೀರ್ಪಿನಲ್ಲಿ ಪ್ರಮುಖ ಆರೋಪಿ ಸ್ವಾಮಿ ಅಸೀಮಾನಂದ, ಲೋಕೇಶ್ ಶರ್ಮಾ, ಕಮಲ್ ಚೌಹಾಣ್ ಮತ್ತು ರಾಜಿಂದರ್ ಚೌಧರಿ ಆರೋಪಮುಕ್ತರಾಗಿದ್ದರು. ಉಗ್ರ ಕೃತ್ಯಕ್ಕೆ ಯಾವುದೇ ಧರ್ಮವಿಲ್ಲ. ಆದರೆ ಪ್ರಕರಣದ ತನಿಖೆ ನಡೆಸುವ ಏಜೆನ್ಸಿಗಳು ಇದನ್ನು ಮುಸ್ಲಿಂ ಉಗ್ರವಾದ, ಹಿಂದೂ ಮೂಲಭೂತವಾದ ಎಂಬ ಪದಪುಂಜಗಳನ್ನು ಸೃಷ್ಟಿಸಿವೆ. ಒಂದು ಅಪರಾಧ ಪ್ರಕರಣವು ಒಂದು ನಿರ್ದಿಷ್ಟ ಸಮುದಾಯವನ್ನು ಪ್ರತಿನಿಧಿಸುವುದಿಲ್ಲ. ಒಂದು ಘಟನೆಯನ್ನು ಇಡೀ ಸಮುದಾಯ, ಜಾತಿ ಅಥವಾ ಧರ್ಮಕ್ಕೆ ಅಂಟಿಸುವುದು ನ್ಯಾಯಯುತ ವಿಧಾನವಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಈ ಬಗ್ಗೆ ತಮ್ಮ 160 ಪುಟಗಳ ತೀರ್ಪಿನಲ್ಲಿ ಸಮಗ್ರವಾಗಿ ವಿವರಣೆಯನ್ನು ಎನ್‌ಐಎ ವಿಶೇಷ ನ್ಯಾಯಾಲಯದ ಜಡ್ಜ್ ಜಗದೀಪ್ ಸಿಂಗ್ ನೀಡಿದ್ದಾರೆ.