Advertisement

ಭವಿಷ್ಯ ರೂಪಿಸುವ ಶಿಕ್ಷಣ ಇಲಾಖೆಯಲ್ಲೇ ಕೊರತೆ

03:32 PM Apr 27, 2017 | Harsha Rao |

ಬೆಂಗಳೂರು: ರಾಜ್ಯ ಸರ್ಕಾರದ ಒಟ್ಟಾರೆ ಸೃಜಿತವಾಗಿರುವ ಹುದ್ದೆಗಳ ಪೈಕಿ ಶಿಕ್ಷಣ ಇಲಾಖೆಗೇ ಶೇ.42ರಷ್ಟು ಮೀಸಲು! ಇದಕ್ಕೆ ಕಾರಣ, ಇದು ಭವಿಷ್ಯದ ಪ್ರಜೆಗಳನ್ನು ರೂಪಿಸುವ ಶಿಕ್ಷಕ, ಉಪನ್ಯಾಸಕರನ್ನು ಹೊಂದಿರುವಂಥ ಇಲಾಖೆ. ಆದರೆ ಈ ಇಲಾಖೆಯಲ್ಲೇ ಶೇ.21ರಷ್ಟು ಹುದ್ದೆ ಖಾಲಿ ಇವೆ ಎಂದರೆ ನಂಬಲೇಬೇಕು.

Advertisement

ಈ ಇಲಾಖೆಯಲ್ಲಿ ಒಟ್ಟು 3,24,960 ಮಂಜೂರಾದ ಹುದ್ದೆಗಳಿವೆ. ಹಾಗಿದ್ದರೂ ಪೂರ್ವ ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಉನ್ನತ ಶಿಕ್ಷಣದವರೆಗೆ ಎಲ್ಲ ಹಂತಗಳು ಹಾಗೂ ವಿವಿಧ ಕೋರ್ಸ್‌ಗಳಡಿ ವಿದ್ಯಾರ್ಥಿಗಳಿಗೆ ಪಾಠ, ಪ್ರವಚನ ನೀಡಲು ಅಗತ್ಯ ಬೋಧಕ ವರ್ಗವೇ ಇಲ್ಲ. ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಶಾಲೆಗಳಲ್ಲೇ 14,000ಕ್ಕೂ ಹೆಚ್ಚು ಶಿಕ್ಷಕರ
ಕೊರತೆ ಇದೆ. ಪ್ರೌಢಶಾಲೆ ಹಂತದಲ್ಲಿ 5,800 ಶಿಕ್ಷಕರ ಹುದ್ದೆ ಖಾಲಿ ಇದೆ. ಇದರಲ್ಲಿ 1689 ಶಿಕ್ಷಕರ ನೇಮಕ ಪ್ರಕ್ರಿಯೆ ಸಂಬಂಧ ನ್ಯಾಯಾಲಯಲ್ಲಿ ಪ್ರಕರಣ ವಿಚಾರಣೆ ಹಂತದಲ್ಲಿದೆ.

ಶಿಕ್ಷಣದ ಹಕ್ಕು ಜಾರಿಯಾದ ಬಳಿಕ ದೇಶದಲ್ಲಿನ ಪ್ರತಿಯೊಂದು ಮಗುವಿಗೂ ಒಂದರಿಂದ 14 ವರ್ಷದವರೆಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಉಚಿತ ಹಾಗೂ ಕಡ್ಡಾಯಗೊಳಿಸಲಾಗಿದೆ. ಗ್ರಾಮೀಣ ಭಾಗದಲ್ಲಂತೂ ಸರ್ಕಾರಿ ಶಾಲೆಗಳೇ ಕಲಿಕೆಗೆ ಮೂಲವಾಗಿವೆ. ಸರ್ಕಾರವೂ ಪ್ರತಿ ವರ್ಷವೂ ಈ ಇಲಾಖೆಯ ನಾನಾ ಯೋಜನೆಗಳಿಗಾಗಿ ಹಣವನ್ನೂ
ಸುರಿಯುತ್ತಿದೆ. ಆದರೆ ಈ ಪ್ರಮಾಣದ ವೆಚ್ಚ ಮಾಡಿದರೂ ಮಕ್ಕಳ ಕಲಿಕೆಗೆ ಅಗತ್ಯವಿರುವ ಶಿಕ್ಷಕರ ನೇಮಕಕ್ಕೆ ಮಾತ್ರ ಸರ್ಕಾರ ಆಸಕ್ತಿ ತೋರುತ್ತಿಲ್ಲ. ಶಿಕ್ಷಕರ ವರ್ಗಾವಣೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಹೊರತುಪಡಿಸಿ, ಪ್ರೌಢಶಾಲೆಗೆ
ವಿಷಯಾಧಾರಿತವಾಗಿ ವರ್ಗಾವಣೆ ನಡೆಯುತ್ತದೆ. ರಾಜ್ಯದಲ್ಲಿ ವಿಜ್ಞಾನ ಹಾಗೂ ಇಂಗ್ಲಿಷ್‌ ಶಿಕ್ಷಕರ ಕೊರತೆ ತೀವ್ರವಾಗಿದೆ. ಇತ್ತೀಚೆಗೆ ಶಿಕ್ಷಣ ಇಲಾಖೆ ನೇಮಿಸಿಕೊಂಡ ಸುಮಾರು 12 ಸಾವಿರಕ್ಕೂ ಅಧಿಕ ಶಿಕ್ಷಕರಲ್ಲಿ ವಿಜ್ಞಾನ ಶಿಕ್ಷಕರು ಇರಲಿಲ್ಲ. ಹಾಗೆಯೇ ಸರ್ವಶಿಕ್ಷಾ ಅಭಿಯಾನದ ಶಿಕ್ಷಕರನ್ನು ಸಾಮಾನ್ಯ ಶಿಕ್ಷಕರಾಗಿ ವರ್ಗಾವಣೆ ಹೊಂದಲು ಅವಕಾಶ ಇಲ್ಲ. ಹೀಗಾಗಿಯೇ ಪ್ರೌಢಶಾಲೆಯಲ್ಲಿ ವಿಷಯಾಧಾರಿತ ಶಿಕ್ಷಕರ ಕೊರತೆ ಇದೆ.

ದೈಹಿಕ ಶಿಕ್ಷಣ ಶಿಕ್ಷಕರ ಕೊರತೆ: ಪ್ರಾಥಮಿಕ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರೇ ಇಲ್ಲ ಎಂದರೆ ತಪ್ಪಾಗಲಾರದು.
2004ರಿಂದೀಚೆಗೆ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿಯೇ ನಡೆದಿಲ್ಲ. ಇನ್ನು ಪದವಿ ಪೂರ್ವ ಹಂತದಲ್ಲೂ 1,214 ಉಪನ್ಯಾಸಕರ ಹುದ್ದೆ ಖಾಲಿಯಿವೆ. ಹಾಗೆಯೇ ರಾಜ್ಯಾದ್ಯಂತ ಸರ್ಕಾರಿ
ಕಾಲೇಜುಗಳಲ್ಲಿ ಬೋಧಕ, ಬೋಧಕೇತರ ಸಿಬ್ಬಂದಿ ಪೈಕಿ 6033 ಹುದ್ದೆ ಖಾಲಿ ಉಳಿದಿವೆ. ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜುಗಳಲ್ಲಿ 3225 ಬೋಧಕ/ ಬೋಧಕೇತರ ಸಿಬ್ಬಂದಿ ಭರ್ತಿ ಬಾಕಿ ಉಳಿದಿದೆ.

ಶಿಕ್ಷಕರು- ಉಪನ್ಯಾಸಕರ ಕೊರತೆ ಎಫೆಕ್ಟ್:
ಸಾಮಾನ್ಯವಾಗಿ ಭಾಷಾ ಶಿಕ್ಷಕರು, ಉಪನ್ಯಾಸಕರ ಕೊರತೆಯಿದ್ದರೆ ಇತರೆ ಶಿಕ್ಷಕರು, ಉಪನ್ಯಾಸಕರು
ನಿರ್ವಹಣೆ ಮಾಡಿ ವಿದ್ಯಾರ್ಥಿಗಳ ಪಾಠ ಪ್ರವಚನ ನಡೆಸಬಹುದು. ಆದರೆ ವಿಷಯ ಶಿಕ್ಷಕರು, ಉಪನ್ಯಾಸಕರ ಕೊರತೆಯಿದ್ದಾಗ ಇತರೆ ವಿಷಯ ಶಿಕ್ಷಕರು ಬೇರೆ ವಿಷಯಗಳಲ್ಲೂ ಪರಿಣಾಮಕಾರಿಯಾಗಿ ಪಾಠ, ಪ್ರವಚನ ನೀಡುವುದು ಕಷ್ಟಸಾಧ್ಯವಾಗಬಹುದು. ಇದು ಮಕ್ಕಳ ಕಲಿಕೆ ಮೇಲೆ ನೇರವಾಗಿ ಪರಿಣಾಮ ಬೀರಲಿದೆ. ಶಿಕ್ಷಕರು, ಉಪನ್ಯಾಸಕರ ಕೊರತೆ ಕೇವಲ ಪಾಠ- ಪ್ರವಚನ, ಇತರೆ ಕಾರ್ಯಕ್ರಮಗಳ ಜಾರಿಯ ಮೇಲಷ್ಟೇ ಅಲ್ಲ, ಮೌಲ್ಯಮಾಪನದ ಮೇಲೂ
ಪರಿಣಾಮ ಬೀರುತ್ತದೆ. ಅನ್ಯ ವಿಷಯದ ಶಿಕ್ಷಕರು, ಉಪನ್ಯಾಸಕರಿಗೆ ಮಾದರಿ ಉತ್ತರಗಳನ್ನು ನೀಡಿ ಮೌಲ್ಯಮಾಪನ ನಡೆಸಬೇಕಾಗಬಹುದು. ಇದು ಮೌಲ್ಯಮಾಪನ ಗುಣಮಟ್ಟದ ಮೇಲೆ ಪರಿಣಾಮ ಬೀರಲಿದೆ.

Advertisement

2025ರ ವೇಳೆಗೆ ಭಾರತದ ಒಟ್ಟು ಜನಸಂಖ್ಯೆಯಲ್ಲಿ 25 ರಿಂದ 35 ವಯೋಮಾನದವರು ಅತಿ ಹೆಚ್ಚು ಸಂಖ್ಯೆಯಲ್ಲಿರಲಿದ್ದಾರೆ ಎಂಬ ಅಂದಾಜು ಮಾಡಲಾಗಿದೆ. ಹೀಗಿರುವಾಗ ಸಮಸ್ಯೆಗಳು ಏನೇ ಇದ್ದರೂ ಲಕ್ಷಾಂತರ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಜವಾಬ್ದಾರಿ ನಿರ್ವಹಿಸುತ್ತಿರುವ ಶಿಕ್ಷಣ ಇಲಾಖೆಯಲ್ಲಿ ಶೇ.21ರಷ್ಟು ಹುದ್ದೆ ಖಾಲಿಯಿರುವುದು ಸಮರ್ಥನೀಯವಲ್ಲ ಎಂದೇ ಹೇಳಲಾಗುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next