Advertisement

ಕುಡಿವ ನೀರಿಗಿಲ್ಲ ಕೊರತೆ, ನಿರ್ವಹಣೆಯದ್ದೇ ಸಮಸ್ಯೆ

10:33 AM May 16, 2019 | Team Udayavani |

ಹಾಸನ: ಬಡವರ ಊಟಿ ಎಂದೇ ಗುರ್ತಿಸುವ ಹಾಸನ ಜಿಲ್ಲೆಯಲ್ಲಿ ಈ ಬಾರಿ ಬಿಸಿಲ ಝಳದಿಂದ ಜನ, ಜಾನುವಾರುಗಳು ತತ್ತರಿಸುವಂತಾಗಿದೆ. ಪೂರ್ವ ಮುಂಗಾರು ಮಳೆ ವಾಡಿಕೆಗಿಂತ ಶೇ.47ರಷ್ಟು ಕೊರತೆಯಾಗಿದ್ದು, ಈ ಪರಿಣಾಮ ತಾಪಮಾನ ದಿನೇ ದಿನೇ ಏರುತ್ತಿದೆ.

Advertisement

ಜಿಲ್ಲೆಯಲ್ಲಿ ಕಾವೇರಿ, ಹೇಮಾವತಿ, ಯಗಚಿ, ವಾಟೆಹೊಳೆ ನದಿಗಳು ಹರಿದರೂ ಗ್ರಾಮೀಣ ಪ್ರದೇಶ ದಲ್ಲಿ ಇದುವರೆಗೂ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆಯಾಗಿಲ್ಲ. ನಗರ ಮತ್ತು ಪಟ್ಟಣ ಪ್ರದೇಶಗಳಿಗೆ ನದಿ ಮೂಲದಿಂದ ಕುಡಿಯುವ ನೀರಿನ ಶಾಶ್ವತ ವ್ಯವಸ್ಥೆಯಾಗಿದೆ. ಆದರೆ ಬೇಸಿಗೆ ದಿನಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ಮಾತ್ರ ಕುಡಿಯುವ ನೀರಿನ ಸಮಸ್ಯೆ ತಲೆ ದೋರುತ್ತಲೇ ಇದೆ.

ಅರಸೀಕೆರೆ ತಾಲೂಕಿನ ಕಣಕಟ್ಟೆ ಹೋಬಳಿಯ 24 ಗ್ರಾಮಗಳು, ಜಾವಗಲ್ ಹೋಬಳಿಯ 2 ಗ್ರಾಮಗಳ ಹೊರತುಪಡಿಸಿದರೆ ಜಿಲ್ಲೆಯಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ಕಂಡು ಬಂದಿಲ್ಲ.

ಟ್ಯಾಂಕರ್‌ ಮೂಲಕ ನೀರು: ಸಮಸ್ಯಾತ್ಮಕ 26 ಗ್ರಾಮಗಳಿಗೆ ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಈ 26 ಗ್ರಾಮಗಳ ಜೊತೆಗೆ 37 ಖಾಸಗಿ ಬೋರ್‌ವೆಲ್ಗಳಿಂದ ಕುಡಿಯುವ ನೀರನ್ನು ಜಿಲ್ಲಾಡಳಿತ ಪಡೆದುಕೊಂಡು ಅರಸೀಕೆರೆ ತಾಲೂಕಿನ 29 ಹಾಗೂ ಬೇಲೂರು ತಾಲೂಕಿನ 8 ಹಳ್ಳಿಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದೆ. ಅರಸೀಕೆರೆ ತಾಲೂ ಕಿನ 532 ಹಳ್ಳಿಗಳಿಗೂ ಹೇಮಾವತಿ ನದಿಯಿಂದ ಶಾಶ್ವತವಾಗಿ ಕುಡಿಯುವ ನೀರು ಪೂರೈಸುವ 520 ಕೋಟಿ ರೂ. ಬಹುಗ್ರಾಮ ಕುಡಿಯುವ ನೀರಿನ 258 ಕೋಟಿ ರೂ. ಯೋಜನಾ ಕಾಮಗಾರಿ ಇನ್ನೆರಡು ತಿಂಗಳಲ್ಲಿ ಪೂರ್ಣಗೊಳ್ಳಲಿದ್ದು, ಅರಸೀಕೆರೆ ತಾಲೂಕಿನ ಕುಡಿವ ನೀರಿನ ಸಮಸ್ಯೆ ಬಹುತೇಕ ಬಗೆಹರಿಯಲಿದೆ.

ಜಿಲ್ಲೆಯ ಎಲ್ಲಾ 8 ತಾಲೂಕುಗಳೂ ಬರಪೀಡಿತ: ಸರ್ಕಾರ ಜಿಲ್ಲೆಯ ಎಲ್ಲಾ 8 ತಾಲೂಕುಗಳನ್ನೂ ಬರ ಪೀಡಿತ ಎಂದು ಘೋಷಣೆ ಮಾಡಿದೆ. ಸರ್ಕಾರ ಕಳೆದ ಡಿಸೆಂಬರ್‌ನಿಂದ ಈ ವರೆಗೆ 24 ಕೋಟಿ ರೂ.ಗಳನ್ನು ತುರ್ತು ಕುಡಿಯುವ ನೀರಿನ ಪೂರೈಕೆಗೆ ಮತ್ತು ಜಾನವಾರು ಸಂರಕ್ಷಣೆಗೆ ವಿವಿಧ ಹಂತಗಳಲ್ಲಿ ಬಿಡುಗಡೆ ಮಾಡಿದ್ದು, ಇದುವರೆಗೂ 5.87 ಕೋಟಿ ರೂ. ಖರ್ಚಾಗಿದೆ. ಕುಡಿಯುವ ನೀರಿನ ಕಾಮಗಾರಿಗಳಿಗೆ 40.6 ಕೋಟಿ ರೂ. ಪಾವತಿಯಾಗಬೇಕಾಗಿದೆ. ಬರಪರಿಹಾರ ಕಾಮಗಾರಿಗಳಿಗೆ 13.39 ಕೋಟಿ ರೂ. ಅನುದಾನ ಜಿಲ್ಲಾಡಳಿತದ ಬಳಿ ಲಭ್ಯವಿದೆ.

Advertisement

ಮತ್ತೆ ಅನುದಾನ ಬಿಡುಗಡೆ: ಸರ್ಕಾರ ಮಾ.18 ರಂದು 8 ಕೋಟಿ ರೂ.ಗಳನ್ನು ಬರಪರಿಹಾರ ಕಾರ್ಯ ಗಳಿಗೆ ಬಿಡುಗಡೆ ಮಾಡಿದ್ದರೆ, 5 ಕೋಟಿ ರೂ.ಗಳನ್ನು ಕುಡಿಯುವ ನೀರಿನ ತುರ್ತು ಕಾಮಗಾರಿಗಳಿಗೆ ಮತ್ತು ಜಾನುವಾರುಗಳ ಸಂರಕ್ಷಣೆಗೆ ಬಿಡುಗಡೆ ಮಾಡಿದೆ. ತಾಲೂಕು ಟಾಸ್ಕ್ಫೋರ್ಸ್‌ ಸಮಿತಿಗಳಿಗೆ ಈ ಅನುದಾನ ಬಿಡುಗಡೆ ಮಾಡಿ ಕುಡಿಯುವ ನೀರಿನ ಅಭಾವ ನೀಗಿಸಲು ಸಿದ್ಧತೆ ಮಾಡಿಕೊಂಡಿದೆ.

ಜಿಲ್ಲೆಯ ಬಹುತೇಕ ನಗರ, ಪಟ್ಟಣ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಯಾಗುವ ಹೇಮಾವತಿ ಜಲಾಶಯದಲ್ಲಿ 4.96 ಟಿಎಂಸಿ ನೀರು, ಬೇಲೂರು, ಆಲೂರು, ಅರಸೀಕೆರೆ ತಾಲೂಕಿನ ಕೆಲವು ಹಳ್ಳಿಗಳಿಗೆ ನೀರು ಪೂರೈಸುವ ಯಗಚಿ ಜಲಾಶಯದಲ್ಲಿ 1.96 ಟಿಎಂಸಿ ನೀರಿದೆ. ಜಿಲ್ಲೆಯಲ್ಲಿ ಸಾಕಷ್ಟು ಜಲ ಮೂಲಗಳಿದ್ದರೂ ನೀರಿನ ಸಮಸ್ಯೆ ಎದುರಾಗಿದ್ದರೆ ಅದು ನಿರ್ವಹಣೆಯ ಲೋಪದಿಂದ ಮಾತ್ರ.

ಕುಡಿವ ನೀರಿನ ಸಮಸ್ಯೆ ನಿವಾರಣೆಗೆ ಕ್ರಮ
ಜಿಲ್ಲೆಯಲ್ಲಿ 2 ಹೋಬಳಿ ಹೊರತುಪಡಿಸಿ ಕುಡಿಯವ ನೀರಿನ ತೀವ್ರ ಸಮಸ್ಯೆಯಿಲ್ಲ ಎಂದು ಗ್ರಾಮೀಣ ಕುಡಿಯುವ ನೀರು ಪೂರೈಕೆ ಇಲಾಖೆಕಾರ್ಯಪಾಲಕ ಎಂಜಿನಿಯರ್‌ಆನಂದ್‌ ತಿಳಿಸಿದ್ದಾರೆ. ನೀರಿನ ಸಮಸ್ಯೆ ಇರುವ ಕಡೆ ಟ್ಯಾಂಕರ್‌ಗಳಲ್ಲಿ ನೀರು ಪೂರೈಕೆಯಾಗುತ್ತಿದೆ. ಇನ್ನುಳಿದಂತೆ ಸಮೀಕ್ಷೆ ನಡೆಸಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದರಿಂದ ಸಮಸ್ಯೆ ಉಲ್ಬಣಿಸಿಲ್ಲ. ದೂರು ಬಂದ ತಕ್ಷಣ ಕುಡಿಯುವ ನೀರಿನ ಪೂರೈಕೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಇದುವರೆಗೂ ಅನುದಾನದ ಕೊರತೆಯೂ ಆಗಿಲ್ಲ ಎಂದು ಹೇಳಿದ್ದಾರೆ.
ಹಾಸನ ಜಿಲ್ಲೆಯಲ್ಲಿ ಜಾನುವಾರು ಮೇವು ಕೊರತೆ ಇಲ್ಲ
ಹಾಸನ: ಜಿಲ್ಲೆಯ ಎಲ್ಲಾ 8 ತಾಲೂಕುಗಳೂ ಬರಪೀಡಿತ ಎಂದು ಘೋಷಣೆಯಾಗಿದೆೆ. ಇದಕ್ಕೆ ಪೂರಕವಾಗಿ ಕಳೆದ ಡಿಸೆಂಬರ್‌ನಿಂದ ಈ ವರೆಗೆ ಬರಪರಿಹಾರ ಕಾರ್ಯಗಳು ಮತ್ತು ಕುಡಿಯುವ ನೀರು ಪೂರೈಕೆಗೆ 45 ಕೋಟಿ ರೂ. ಜಿಲ್ಲೆಗೆ ಬಿಡು ಗಡೆಯಾಗಿದೆ. ಹಾಗಾಗಿ ಜನ – ಜಾನುವಾರು ಗಳಿಗೆ ಕುಡಿಯುವ ನೀರಿನ ಸಮಸ್ಯೆ ತಲೆದೋರಿಲ್ಲ

2012ರ ಗಣತಿ ಪ್ರಕಾರ ಜಿಲ್ಲೆಯಲ್ಲಿ 7,47,724 ಜಾನುವಾರುಗಳಿದ್ದು, ಪ್ರತಿದಿನ ಪ್ರತಿ ಜಾನುವಾರಿಗೆ ಸರಾಸರಿ 5 ಕೇಜಿ ಮೇವು ಅಗತ್ಯವಿದೆ. ಜಿಲ್ಲೆಯಲ್ಲಿ 3,38,303 ಮೆಟ್ರಿಕ್‌ ಟನ್‌ ಮೇವು ಲಭ್ಯವಿದ್ದು, 13 ವಾರಗಳವರೆಗೆ ಮೇವು ನಿಭಾಯಿಸಬಹುದಾಗಿದೆ ಎಂದು ಪಶುಪಾಲನಾ ಇಲಾಖೆ ಮಾಹಿತಿ ನೀಡಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಸೇರಿದಂತೆ ವಿವಿಧ ಯೋಜನೆಗಳಡಿ ಜಾನುವಾರುಗಳಿಗೆ ಕುಡಿಯುವ ನೀರಿನ ತೊಟ್ಟಿಗಳನ್ನು ನಿರ್ಮಾಣ ಮಾಡಲಾಗಿದ್ದು, ಆ ತೊಟ್ಟಿಗಳಿಗೆ ಪ್ರತಿದಿನವೂ ನೀರು ಪೂರೈಕೆ ಯೋಜನೆಗಳಿಂದ ನೀರು ತುಂಬಿಸುವ ಕ್ರಮಕೈಗೊಳ್ಳುತ್ತಿರುವುದರಿಂದ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿಲ್ಲ.

ಚದುರಿದಂತೆ ಪೂರ್ವ ಮುಂಗಾರು ಮಳೆ ಬಿದ್ದಿದೆ. ಈ ಮಳೆಯನ್ನಾಧರಿಸಿ ರೈತರು ಜಾನು ವಾರುಗಳ ಮೇವಿಗಾಗಿ ಜೋಳ ಬಿತ್ತನೆ ಮಾಡಿ ದ್ದಾರೆ. ಮಳೆಯ ಕೊರತೆಯಿಂದ ಮೇವಿನ ಬೆಳೆ ಕುಂಠಿತವಾಗಿದ್ದರೂ ಮಳೆ ಬಂದರೆ ಚೇತರಿಸಿ ಕೊಂಡು ಮೇವು ಬೆಳೆಯುತ್ತದೆ.

ಮುಂಗಾರು ಆರಂಭವಾಗುವ ವೇಳೆಗೆ ಜಾನುವಾರುಗಳಿಗೆ ಹಸಿರು ಮೇವು ಸಿಗುವ ಸಾಧ್ಯತೆ ಇದೆ. ಹಾಗಾಗಿ ಇದುವರೆಗೂ ಜಿಲ್ಲೆಯಲ್ಲಿ ಮೇವು ಬ್ಯಾಂಕ್‌, ಗೋಶಾಲೆಗಳನ್ನು ತೆರೆಯುವ ಪರಿಸ್ಥಿತಿ ನಿರ್ಮಾಣವಾಗಿಲ್ಲ ಎಂದು ಜಿಲ್ಲಾ ಪಶುಪಾಲನಾ ಇಲಾಖೆ ಅಧಿಕಾರಿಗಳು ಸ್ಪಷ್ಪ ಪಡಿಸಿದ್ದಾರೆ.

ಜಾನುವಾರುಗಳಿಗೆ ಮೇವಿನ ಕೊರತೆ ಯಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಬರಪರಿಸ್ಥಿತಿ ಮುಂದು ವರಿದರೆ ಗೋಶಾಲೆಗಳನ್ನು ತೆರೆಯಲು ಇಲಾಖೆ ಸನ್ನದ್ಧವಾಗಿದೆ. ಜಿಲ್ಲೆಯಲ್ಲಿ ಜಾನು ವಾರುಗಳಿಗೆ ಈಗಾಗಲೇ ಒಂದು ಸುತ್ತು ಕಾಲು ಬಾಯಿ ಜ್ವರದ ಚುಚ್ಚುಮದ್ದು ಹಾಕಲಾಗಿದೆ.
● ಡಾ.ವೀರಭದ್ರಯ್ಯ, ಉಪ ನಿರ್ದೇಶಕರು, ಪಶುಪಾಲನೆ ಮತ್ತು ಪಶುಸಂಗೋಪನೆ ಇಲಾಖೆ

ಎನ್‌. ನಂಜುಂಡೇಗೌಡ

Advertisement

Udayavani is now on Telegram. Click here to join our channel and stay updated with the latest news.

Next