Advertisement

ಕುಂಟೋಜಿ ಗ್ರಂಥಾಲಯಕ್ಕಿಲ್ಲ ಕನಿಷ್ಟ ಸೌಲಭ್ಯ

12:32 PM Nov 24, 2019 | Team Udayavani |

ಗಜೇಂದ್ರಗಡ: ಕುಂಟೋಜಿ ಗ್ರಾಮದ ಗ್ರಂಥಾಲಯಕ್ಕೆ ಕನಿಷ್ಠ ಸೌಲಭ್ಯವೂ ಇಲ್ಲವಾಗಿದ್ದು, ಓದುಗರು ನಿತ್ಯ ಪರದಾಡುವಂತಾಗಿದೆ. ತಾಲೂಕಿನ ಕುಂಟೋಜಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಳಿಯ ಗ್ರಾಪಂನ ಕಟ್ಟಡವೊಂದರಲ್ಲಿ ಇದ್ದು ಇಲ್ಲದಂತೆ ಕಾರ್ಯ ನಿರ್ವಹಿಸುತ್ತಿರುವ ಗ್ರಂಥಾಲಯಕ್ಕೆ ಮೇಜು, ಕುಡಿಯುವ ನೀರು ಸೇರಿ ಕನಿಷ್ಠ ಸೌಲಭ್ಯಗಳಿಲ್ಲ. ಸರಕಾರ ಸಾವಿರಾರು ರೂಪಾಯಿ ಮೌಲ್ಯದ ಪುಸ್ತಕ, ಗ್ರಂಥ ಒದಗಿಸುತ್ತಿದ್ದರೂ ಓದಲು ಸೂಕ್ತ ವ್ಯವಸ್ಥೆ ಇಲ್ಲದಾಗಿದೆ.

Advertisement

ಗ್ರಂಥಾಲಯದ ಸ್ವಂತ ಕಟ್ಟಡದ ಮೇಲ್ಛಾವಣಿ ಕುಸಿದ ಪರಿಣಾಮ ಕಳೆದ ಎರಡು ವರ್ಷಗಳಿಂದ ಗ್ರಾಪಂನ ತೀರಾ ಕಿರಿದಾದ ಹಳೆಯ ಕಟ್ಟವನ್ನು ಗ್ರಂಥಾಲಯಕ್ಕೆ ನೀಡಲಾಗಿದೆ. ಆದರೆ ಈ ಸ್ಥಳದಲ್ಲಿ ಓದುಗರಿಗೆ ಕುಳಿತುಕೊಳ್ಳಲು ಸ್ಥಾಳಾವಕಾಶವಿಲ್ಲ. ಪುಸ್ತಕ ಹೊಂದಿಸಲು ರ್ಯಾಕ್‌ ಇಲ್ಲ. ಎಲ್ಲ ಇಲ್ಲಗಳ ಮಧ್ಯೆ ನರಳುತ್ತಿರುವ ಗ್ರಂಥಾಲಯಕ್ಕೆ ಪ್ರಥಮ ಚಿಕಿತ್ಸೆ ನೀಡಲು ಗ್ರಾಪಂ ಆಡಳಿತ ಮುಂದಾಗಬೇಕು ಎನ್ನುವುದು ಗ್ರಾಮಸ್ಥರ ಆಗ್ರಹವಾಗಿದೆ. ಗ್ರಂಥಾಲಯದಲ್ಲಿ 3,475 ಪುಸ್ತಕಗಳಿದ್ದು, 63 ಸದಸ್ಯರಿದ್ದಾರೆ, ನಿತ್ಯ ಅನೇಕ ಓದುಗರು ಬಂದು ಹೋಗುತ್ತಾರೆ. ಆದರೆ ಇರುವ ಮೂರು ಪತ್ರಿಕೆಗಳನ್ನು ಓದಲು ಗಂಟೆಗಟ್ಟಲೆ ಕಾಯಬೇಕಾಗುತ್ತದೆ.

ವಿದ್ಯಾರ್ಥಿಗಳಿಗೆ ಬೇಕಾದ ಪುಸ್ತಕಗಳಂತೂ ಒಂದೂ ಇಲ್ಲ. ಪಠ್ಯ ಮತ್ತು ಸ್ಪರ್ಧಾತ್ಮಕ ಪರೀಕ್ಷೆ ಪುಸ್ತಕಗಳಿಗೆ ವಿದ್ಯಾರ್ಥಿಗಳು ಮನವಿ ಮಾಡಿದರೂ ಪ್ರಯೋಜನವಿಲ್ಲ. ಗ್ರಂಥಾಲಯದಲ್ಲಿ ಹಾಡಹಗಲೇ ಇಲಿ, ಹೆಗ್ಗಣಗಳ ಕಾಟ ಮಿತಿಮೀರಿದ್ದು, ಇದರಿಂದಾಗಿ ಅಮೂಲ್ಯ ಪುಸ್ತಕಗಳು ಸಂಪೂರ್ಣ ನಾಶವಾಗುತ್ತಿವೆ. ಇನ್ನು ಗ್ರಂಥಾಲಯ ನೆಲವಂತೂ ತೆಗ್ಗು ದಿನ್ನೆಯಿಂದ ಕೂಡಿದ್ದು, ಕುರ್ಚಿ, ಟೇಬಲ್‌ ಸರಿಯಾಗಿ ಇಡಲೂ ಆಗುತ್ತಿಲ್ಲ. ಸಾರ್ವಜನಿಕರು ಕುಳಿತು ಓದಲು ತೀರಾ ಇಕ್ಕಟ್ಟಾಗಿದೆ. ಕುಳಿತುಕೊಳ್ಳಲು ಸಮರ್ಪಕ ಕುರ್ಚಿಗಳಿಲ್ಲ.

ಟೇಬಲ್‌ ಸಂಪೂರ್ಣ ಕಿತ್ತು ಹೋಗಿವೆ  ಗ್ರಾಪಂನ ಚಿಕ್ಕ ಕೊಠಡಿಲ್ಲಿ ಗ್ರಂಥಾಲಯ ನಡೆಯುತ್ತಿದ್ದು, ಕಪಾಟು ಮತ್ತು ಪುಸ್ತಕ ಇಡಲೂ ಸ್ಥಳವಿಲ್ಲದೆ ಮೂಟೆ ಕಟ್ಟಿ ಎತ್ತಿಡಲಾಗಿದೆ. ಇನ್ನು ಗ್ರಂಥಾಲಯದ ಕಪಾಟು ಗ್ರಾಮ ದೇವಸ್ಥಾನದಲ್ಲಿಯೇ ಇಡಲಾಗಿದೆ. ಪುಸ್ತಕಗಳ ಸ್ಥಿತಿ ಇದಕ್ಕಿಂತ ಹೊರತಾಗೇನೂ ಇಲ್ಲ. ಹಳ್ಳಿಯ ವಿದ್ಯಾರ್ಥಿಗಳು, ಹಿರಿಯ ನಾಗರಿಕರು ನಿತ್ಯ ದಿನಪತ್ರಿಕೆ, ವಾರಪತ್ರಿಕೆ, ಉದ್ಯೊಗ ಮಾಹಿತಿಗಾಗಿ ಗ್ರಂಥಾಲಯಕ್ಕೆ ಆಗಮಿಸುತ್ತಾರೆ. ಆದರೆ, ಅಲ್ಲಿ ಅವರಿಗೆ ಸದಾ ನಿರಾಸೆಯೇ ಕಾದಿರುತ್ತದೆ. ಸ್ಥಳಾವಕಾಶವಿಲ್ಲದೆ ಬೇಸರದಿಂದ ಹಿಂತಿರುಗುವುದು ಸಾಮಾನ್ಯವಾಗಿದೆ.

ಗಾಳಿ-ಬೆಳಕು-ವಿದ್ಯುತ್‌ ಸಮಸ್ಯೆ: ಗ್ರಂಥಾಲಯಲ್ಲಿ ಶುದ್ಧ ಗಾಳಿ, ಬೆಳಕು ಹಾಗೂ ವಿದ್ಯುತ್‌ ಸೌಲಭ್ಯವಿಲ್ಲ. ಇತರೆ ಪ್ರಮುಖ ಮೂಲ ಸೌಕರ್ಯಗಳಾದ ಶೌಚಾಲಯ, ಕುಡಿಯುವ ನೀರಿನ ಸೌಲಭ್ಯವಂತೂ ಕೇಳಲೇಬಾರದು. ಈ ಬಗ್ಗೆ ಪ್ರಶ್ನಿಸಿದರೆ ಸರಕಾರ ಸಾರ್ವಜನಿಕ ಗ್ರಂಥಾಲಯಕ್ಕೆ ತಿಂಗಳಿಗೆ ಕೇವಲ 400 ರೂ. ನೀಡುತ್ತಿದೆ. ಇದರಿಂದ ಗ್ರಂಥಪಾಲಕರಿಗೆ ಯಾವ ಪತ್ರಿಕೆ ಕೊಳ್ಳಬೇಕು, ಯಾವುದು ಬಿಡಬೇಕು ಎಂಬ ಗೊಂದಲ ಸೃಷ್ಟಿಯಾಗಿದೆ ಎನ್ನುವ ಮಾತು ಕೇಳಿಬರುತ್ತಿದೆ.

Advertisement

ಮೇಲ್ಛಾವಣಿ ಕುಸಿದಿರುವ ಗ್ರಂಥಾಲಯದ ಕಟ್ಟಡವನ್ನು ದುರಸ್ತಿಗೊಳಿಸಿ, ಅದೇ ಸ್ಥಳದಲ್ಲಿ ಗ್ರಂಥಾಲಯ ನಡೆಸುವಂತೆಮಾಡಲು ಕಟ್ಟಡ ದುರಸ್ತಿ ಮಾಡಿ ಎಂದು ಗ್ರಾಪಂ ಆಡಳಿತಕ್ಕೆ ಮನವಿ ಮಾಡಿದರೂ ಈವರೆಗೂ ಪ್ರಯೋಜನವಾಗಿಲ್ಲ. ಗ್ರಾಪಂನಿಂದ ಗ್ರಂಥಾಲಯ ಸಂಪೂರ್ಣವಾಗಿ ಕಡೆಗಣಿಸಲ್ಪಟ್ಟಂತಾಗಿದೆ.  -ಶಂಕ್ರವ್ವ ಅಬ್ಬಿಗೇರಿ, ಗ್ರಂಥಾಲಯ ನಿರ್ವಾಹಕಿ

 

-ಡಿ.ಜಿ. ಮೋಮಿನ್

Advertisement

Udayavani is now on Telegram. Click here to join our channel and stay updated with the latest news.

Next